Showing posts with label ಭಯವ್ಯಾಕೆ ನಿನಗೆ ನಿರ್ಭಯ vijaya vittala ankita suladi ಭಯನಿವಾರಣ ಸುಳಾದಿ BHAYAVYAAKE NINAGE NIRBHAYA BHAYANIVAARANA SULADI. Show all posts
Showing posts with label ಭಯವ್ಯಾಕೆ ನಿನಗೆ ನಿರ್ಭಯ vijaya vittala ankita suladi ಭಯನಿವಾರಣ ಸುಳಾದಿ BHAYAVYAAKE NINAGE NIRBHAYA BHAYANIVAARANA SULADI. Show all posts

Sunday 8 December 2019

ಭಯವ್ಯಾಕೆ ನಿನಗೆ ನಿರ್ಭಯ vijaya vittala ankita suladi ಭಯನಿವಾರಣ ಸುಳಾದಿ BHAYAVYAAKE NINAGE NIRBHAYA BHAYANIVAARANA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಭಯನಿವಾರಣ ಸುಳಾದಿ 

 ರಾಗ ತೋಡಿ 

 ಧ್ರುವತಾಳ 

ಭಯವ್ಯಾಕೆ ನಿನಗೆ ನಿರ್ಭಯನಾಗು ಎಲೋ ಪ್ರಾಣಿ ಭವ -
ಭಯದೂರ ಶ್ರೀಹರಿಯ ಕರುಣಾಕಟಾಕ್ಷ
ಸಯವಾಗಿ ಇರಲು ಸಹಾಯಕೆ ಮತ್ತೊಬ್ಬರನ್ನು
ಬಯಸುವದಲ್ಲ ಅಪಜಯಗಳು ಎಂದಿಗಿಲ್ಲ
ಹಯಗಮನನಾಗಿ ಕತ್ತೆಯನ್ನು ಹಾರೈಸುವಂಥ
ಬಯಲಾಶೆ ಬಿಡು ಬಿಡು ಹುಯಲಿಡಾದಿರು ದುರಮ -
ತಿಯಲಿಪ್ಪ ಮತಾಶ್ರಯ ಮಾಡಿ ಪರರಿಗೆ ನೊಯಿಸದಿರು
ತ್ರಯಲೋಕನುತ ವಿಜಯವಿಠ್ಠಲನೆಂಬೊ ಕ -
ರೆಯಮಣಿ ಕಟ್ಟಿರೆ ಭಯವೆತ್ತಣದೋ ಪೇಳು ॥ 1 ॥

 ಮಟ್ಟತಾಳ 

ಆವ ಪಿತನು ಸಾಕಿದನು ಪ್ರಹ್ಲಾದನ್ನ
ಆವ ಜನನಿ ಸಾಕಿದಳು ಧ್ರುವನ್ನ
ಆವ ಅಣ್ಣ ಸಾಕಿದನು ವಿಭೀಷಣನ್ನ
ಆವ ಪುರುಷ ಸಾಕಿದ ಪಾಂಚಾಲಿಯ
ಆವ ಬಂಧು ಸಾಕಿದ ಪರೀಕ್ಷಿತನ್ನ
ಆವ ದೈವ ಸಾಕಿತು ಗಜೇಂದ್ರನ್ನ
ಆವ ಧೀರ ಸಾಕಿದ ಫಲ್ಗುಣನ್ನ
ಆವ ಭಟ ಸಾಕಿದ ಉಗ್ರೇಶನ್ನ
ಆವ ರಾಯ ನಾರಿಯರ ಬಿಡಿಸಿದವನು
ಆವ ಜಾತಿ ಸಾಕಿತು ಅಜಮಿಳನ
ಆವಾವ ನಾವವನೊ ನೋವು ಕಳದು ಭಕು -
ತಾವಳಿಗೆ ವೇಗ ಕೈವಲ್ಯ ಪಾಲಿಪ
ದೇವನೆಂಬವನು ಮತ್ತಾವವ ನಾವವನೊ
ಈ ವಿಚಾರವನ್ನು ಭಾವದಲ್ಲಿ ತಿಳಿದು
ಭಾವಜನ ಪೆತ್ತ ವಿಜಯವಿಠ್ಠಲನಂಘ್ರಿ -
ದಾವರೆ ಯುಗಳದಲಿ ಪಾವನನಾಗುವದು ॥ 2 ॥

 ತ್ರಿವಿಡಿತಾಳ 

ಒಡಲೊಳು ಅಬುಜಭವಾಂಡ ಕೋಟಿಯ ಕೋಟಿ
ಅಡಗಿಸಿಕೊಂಡಿಪ್ಪ ಮಹಾ ಮಹಿಮನ
ಒಡನೆ ತೊಟ್ಟಿಲೊಳು ಪವಳಿಸಿದನೆಂಬ
ನುಡಿ ಎತ್ತಣದೋ ಬಲು ಸೋಜಿಗವೊ
ನುಡಿಗಗೋಚರನಾದ ದೇವಂಗೆ ಜೋಗುಳ
ಬಿಡದೆ ಪಾಡಿದುದೇನೊ ಮೋಹಕವೋ
ಪೊಡವಿ ಸಾಗರ ದ್ವೀಪದಾಧಾರ ಕರ್ತನು
ನಡೆ ನುಡಿ ಕಲಿತನೆಂಬುವದು ಏನೋ
ಎಡಿಯವಲ್ಲದ ನಿತ್ಯತೃಪ್ತನು ಮೊಲೆಪಾಲು
ಕುಡಿದನೆಂಬುವದಿದು ನಿಜವೆನ್ನಿರೋ
ಪೆಡೆಧರ ಗರುಡರಿಗೆ ಬೆಡಗು ತೋರುವ ಹರಿಯ
ಮಡದೆರೆತ್ತಿದರೆಂಬೊ ಘನವಾವದೋ
ಅಡಿಗಳೊಳಗೆ ಕ್ಷೋಣಿ ಅಡಗಿಸಿದ ಧಿಟ್ಟ
ಸಡಗರದ ದೈವ ಒಲಿದಿರಲು
ಬಡದಿರು ದೈನ್ಯವ ಒಬ್ಬರ ಬಳಿಯಲ್ಲಿ
ಕೊಡರು ಮನಸಿನಂತೆ ನೆನೆಸಿದ ಫಲ
ಬಡವರಾಧಾರ ಶ್ರೀವಿಜಯವಿಠ್ಠಲ ಕರುಣಿ
ಬಿಡನು ನಿನ್ನವನೆಂದು ನುಡಿದರೊಮ್ಮ್ಯಾದರು ॥ 3 ॥

 ಅಟ್ಟತಾಳ 

ಜನನದ ಭಯ ಮರಣದ ಭಯ ಬರುತಿಪ್ಪ
ಮನೋ ಇಂದ್ರಿಯಂಗಳು ಎರಗುವ ಭಯ ದು -
ರ್ದಿನ ಭಯ ಬಲು ರೋಗ ತೊಡಕುವ ಭಯ ಕಾ -
ಲನ ಭಯ ತನಗಿಕ್ಕುವ ವಿಷದ ಭಯ ತೀವ್ರವಾದ ತಮ -
ಸಿನ ಭಯ ನಾನಾ ಭಯಗಳು ಬಂದರು
ಗಣನೆ ಮಾಡಲು ಕಾಣೊ ಹರಿಯ ನಂಬಿದ ಜನ -
ರನು ಮಾನ ಸಲ್ಲದು ಸತತ ತಿಳಿದದು
ಜನುಮಾದಿ ಕರ್ತ ವಿಜಯವಿಠಲನ್ನ ಅ -
ರ್ಚನೆ ಮಾಡು ಅನುದಿನ ಭಯಗಳು ನೀಗು ॥ 4 ॥

 ಆದಿತಾಳ 

ದುರಿತ ಗಿರಿಗೆ ವಜ್ರ ಹರಿನಾಮ ಭಕ್ತರಿಗೆ
ನಿರುತ ವಜ್ರದ ಜೋಡು ಭಯವಿಟ್ಟು ನಡಗುವಂಗೆ
ಸುರಿವದು ಮಧುರಪಾನ ಬಿಡದೆ ನೆನೆವಂಗೆ
ನೆರೆ ನಂಬಿದವರಿಗೆ ಸುತ್ತುತ್ತಿರುವ ಪಹರೆ 
ಕರೆಯಲು ವೈಕುಂಠ ಕರತಳದಿ ಇಪ್ಪದು
ಹರಿಯೆಂದು ನೆನೆದವರ ಸಂಗತಿಯಲ್ಲಿ ಕ್ಷಣ -
ವಿರಲು ಮುಕ್ತಿಗೆ ಮಾರ್ಗ ಬಯಲಾಗಿ ತೋರುವುದು
ಹರಿ ಪಾದದಲಿ ಆಸಕ್ತನಾಗಿದ್ದವನಿಗೆ
ಇರಳು ಹಗಲು ಮೃತ್ಯು ಕಾಯ್ದೇನು ಮಾಡುವದು
ಅರಿಭಯಂಕರ ನಮ್ಮ ವಿಜಯವಿಠ್ಠಲೇಶ 
ಸರಿಯದೆ ಸಮೀಪ ಇರಲು ಎತ್ತಣ ಭಯ ॥ 5 ॥

 ಜತೆ 

ಉಂಟುಂಟು ವಿಜಯವಿಠ್ಠಲ ನೆಂದವಗೆ ಭಯದ
ಗಂಟಲನೊದೆದು ವೈಕುಂಠಪುರದ ಗತಿ ॥
************