Showing posts with label ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿ neleyadikeshava. Show all posts
Showing posts with label ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿ neleyadikeshava. Show all posts

Tuesday, 15 October 2019

ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿ ankita neleyadikeshava

ರಾಗ : ಶಂಕರಾಭರಣ ತಾಳ : ಆದಿ

ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ ಜನ್ಮ || ಪ ||
ಸಾರ್ಥಕವಿಲ್ಲದವರೆಲ್ಲ ಭಾಗವತರೆ || ಅ ||

ಮೂಗುಪಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿ
ಭಾಗವತ ಶಾಸ್ತ್ರಗಳನೆಲ್ಲ ಓದಿ
ಬಾಗಿ ಪರಸತಿಯರನು ಬಯಸಿ ಕಣ್ಣಿಡುವಂಥ
ನೀತಿ ತಪ್ಪಿದರೆಲ್ಲ ದೇವ ಬ್ರಾಹ್ಮಣರೆ ? || ೧ ||

ಪಟ್ಟೆನಾಮವ ಬಳಿದು ಪಾತ್ರೆ ಕೈಯಲಿ ಪಿಡಿದು
ಗುಟ್ಟಿನಲಿ ಜಪಿಸುವ ಗುರುತರಿಯದೆ
ಕೆಟ್ಟಕೂಗನು ಕೂಗಿ ಹೊಟ್ಟೆಯನು ಹೊರೆವಂಥ
ಹೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ ? || ೨ ||

ಲಿಂಗಾಂಗದೊಳಗಿರುವ ಚಿನುಮಯವ ತಿಳಿಯದೆ
ಅಂಗಲಿಂಗದ ನೆಲೆಯ ಗುರುತರಿಯದೆ
ಜಂಗಮ ಸ್ಥಾವರದ ಹೊಲಬನರಿಯದ ಇಂಥ
ಭಂಗಿ ಮುಕ್ಕುಗಳೆಲ್ಲ ಲಿಂಗವಂತರು ಅಹುದೆ ? || ೩ ||

ಅಲ್ಲಾ ಖುದಾ ಎಂದ ಅರ್ಥವನು ಅರಿಯದೆ
ಮುಲ್ಲಾ ಶಾಸ್ತ್ರದ ನೆಲೆಯ ಗುರುತರಿಯದೆ
ಕಳ್ಳಕೂಗನೆ ಕೂಗಿ ಬೊಗಳಿ ಬಾಯ್ದೆರೆವಂಥ
ಕಳ್ಳರಿಗೆ ತಾ ವೀರಸ್ವರ್ಗ ದೊರಕುವುದೆ ? || ೪ ||

ವೇಷಭಾಷೆಯ ಕಲಿತು ಗೋಸನಿಯ ಕಡೆಗಿಟ್ಟು
ಆಸೆಯನು ತೊರೆಯದೆ ತಪವ ಮಾಡಿ
ವಾಸನೆಯ ಗುರುತಿನಾ ಹೊಲಬನರಿಯದ ಇಂಥ
ವೇಷಧಾರಿಗಳು ಸನ್ಯಾಸಿಗಳು ಅಹುದೆ ? || ೫ ||

ಆರು ಚಕ್ರದನೆಲೆಯ ಅಷ್ಟಾಂಗ ಯೋಗದೊಳು
ಮೂರು ಮೂರ್ತಿಯ ಮೂರು ಕಡೆ ನಿಲಿಸಿ
ಕಾರುಣ್ಯನಿಧಿ ಕಾಗಿನೆಲೆಯಾದಿಕೇಶವನ
ಸೇರಿ ಭಜಿಸಿದವರಿಗೆ ಯಮನ ಬಾಧೆಯುಂಟೆ || ೬ ||
*****