Showing posts with label ಅರ್ಚಿಸು ಮನವೆ vijaya vittala ankita suladi ಉಪಾಸನಾ ಸುಳಾದಿ ARCHISU MANAVE UPASANA SULADI. Show all posts
Showing posts with label ಅರ್ಚಿಸು ಮನವೆ vijaya vittala ankita suladi ಉಪಾಸನಾ ಸುಳಾದಿ ARCHISU MANAVE UPASANA SULADI. Show all posts

Tuesday, 8 December 2020

ಅರ್ಚಿಸು ಮನವೆ vijaya vittala ankita suladi ಉಪಾಸನಾ ಸುಳಾದಿ ARCHISU MANAVE UPASANA SULADI


Audio by Mrs. Nandini Sripad


ಶ್ರೀ ವಿಜಯದಾಸಾರ್ಯ ವಿರಚಿತ  ಉಪಾಸನಾ ಸುಳಾದಿ 


 ರಾಗ ಹಂಸಾನಂದಿ 


 ಧ್ರುವತಾಳ 


ಅರ್ಚಿಸು ಮನವೆ ನಿತ್ಯ ಅನಾದಿ ಮೂರುತಿಯ

ನಿಚ್ಚಳವಾಗಿ ನಿಸ್ಸಂಗದಲ್ಲಿ

ಅಚ್ಚಾ ಭಕುತಿಯಲ್ಲಿ ಪಂಚ ಭೇದಜ್ಞಾನ

ಎಚ್ಚತ್ತು ದಿವಾರಾತ್ರಿ ದೈನ್ಯ ವೃತ್ತಿ

ಯಾಚಕ ನಾನು ಬೊಮ್ಮಾದ್ಯರ ತಾರತಮ್ಯ ತಿಳಿದು

ಸಚ್ಚಿದಾನಂದಾತ್ಮಕ ಗುಣಗಳಿಂದ

ಅಚ್ಯುತಾನಂತ ಗೋವಿಂದ ಗೋಪಾಲಕೃಷ್ಣ

ಸುಚ್ಚರಿತಸಾರ ಸುಖಸಾಗರ

ನೆಚ್ಚಿದವರ ನೆಂಟಾ ನಿಗಮಾಗೋಚರನೆಂದು

ಮೆಚ್ಚಿಸು ಮುದದಿಂದ ಮುಂದಾಲಿಸಿ

ಬಚ್ಚಿಟ್ಟ ದ್ರವ್ಯದಂತೆ ಅನ್ಯರಿಗೆ ತೋರಿದರು

ಹುಚ್ಚು ಹುಚ್ಚಾಗಿರು ಬಾಹಿರದಲ್ಲಿ

ಹೆಚ್ಚುವದು ನಿನಗೆ ಇದರಿಂದ ಲಾಭ ಪ್ರಾಪ್ತಿ

ಬಿಚ್ಚಿ ಬಿಸಾಟದಿರು ಅಂತರಂಗ

ಸಚ್ಚರಾಚರದಂತೆ ಚರಿಸು ಚನ್ನಾಗಿ ಬಲು

ಚಚ್ಚರದಲಿ ಚಂಚಲ ಬೀರೂತ

ಹೆಚ್ಚಿಕೆ ಜನರನ್ನು ವದದು ಓಡಿಸುವೊಳಗೆ

ಮೆಚ್ಚುಗೊಳಿಸುತಿರು ವೈದೀಕವ

ಯಚ್ಚಾವಾಗದಂಥ ಪುಣ್ಯವೆ ಸಂಪಾದಿಸಿ

ಮುಚ್ಚುಮರೆಯಲ್ಲೆ ಅನುಭವಿಸು

ಅಚ್ಚಟ ವೈರಾಗ್ಯ ಧೃಢವಾಗಿ ತಿಳಿದು ಕೆಂ -

ಗಿಚ್ಚು ಬೀರೂವದು ಪಾಪದ ರಾಶಿಗೆ

ಲಚ್ಚು ಮನುಜನಾಗಿ ಲೋಕಕ್ಕೆ ಕಾಣಿಸು

ರಚ್ಚಿಗೆ ಹಾಕದಿರು ದಿವ್ಯಪ್ರಮೇಯಾ

ಸುಚಿತ್ರನಾದ ನಮ್ಮ ವಿಜಯವಿಟ್ಠಲರೇಯನ 

ಅರ್ಚಾಗುಪ್ತ ಮಾರ್ಗದಲ್ಲಿ ನಿಲಿಸು ಸಂತತ ವೊಲಿಸು ॥ 1 ॥ 


 ಮಟ್ಟತಾಳ 


ಕರ್ಮವ ಕಡೆಮಾಡಿ ನೆಲೆಗೊಂಡವನಾರು

ಧರ್ಮವನೆ ಮಾಡಿ ಕಡೆ ಬಿದ್ದವನಾರು

ಮರ್ಮ ತಿಳಿಯದನಕ ಏನೇನು ಮಾಡಿದರು

ನಿರ್ಮಳ ಪದವಿಗೆ ನಿಶ್ಚಿಂತ ಪಥವಲ್ಲಾ

ನಿರ್ಮತ್ಸರದಿಂದ ಎಳ್ಳನಿತದಾಗೆ

ಪೆರ್ಮೆಯಿಂದಲಿ ಬಹು ಅನುಭವ ಸಿದ್ಧಿಪದು

ಚರ್ಮಾ ಪಾಲಿಸಿಕೊಂಡು ಕಷ್ಟತರದಿಂದ

ದುರ್ಮತಿಯಾದರೆ ಫಲಪ್ರಾಪ್ತಿ ಉಂಟೇ

ಕರ್ಮ ಧರ್ಮದ ಒಡೆಯ ವಿಜಯವಿಟ್ಠಲರೇಯನ 

ಮರ್ಮಗಳನು ತಿಳಿದು ವರ್ಣಿಸು ನಿನ್ನೊಳಗೆ ॥ 2 ॥ 


 ತ್ರಿವಿಡಿತಾಳ 


ಸ್ಥೂಲ ದ್ರವ್ಯಗಳ ಬಾಹಿರದಲಿ ತಂದು

ಕಾಲಕಾಲಕೆ ಆಯಾಸ ಬಡುವದಲ್ಲಾ

ಕೇಳೋದು ಕಿವಿಗೊಟ್ಟು ಅನ್ಯರರಿಯದಂಥ

ಮೇಲು ಉಕ್ತಿಯನ್ನು ಕೇವಲ ಸುಲಭಾ

ಆಳು ಸಾಮಗ್ರಿಗಳು ಬೇಕಾದವಲ್ಲಾ ವಿ -

ಶಾಲ ದೇಶ ಕೋಶ ಅರಸ ಸಲ್ಲಾ

ವ್ಯಾಳೆಗೆ ದೊರೆತದ್ದು ಪೂಜಿಸಲಿಬಹುದು

ಮೂಲ ಮುಟ್ಟದು ಕಾಣೋ ತಿಳಿಯದನಕಾ

ಸಾಲು ಸಾಲಾಗಿ ವೈಯ್ಯಾರ ತೋರುವದಲ್ಲ

ಹೇಳುವೆ ಒಂದೊಂದು ದಿವ್ಯ ಮಾತುಗಳ ಹೀ -

ಯಾಳಿ ಇಂದಲತಿ ನಿತ್ಯ ಮನದಾ

ಆಲೋಚನೆಯೆಲ್ಲಾ ಪೂಜಾವಿಧವೇ ಎಂದು

ವಾಲಯ ಹರಿಯ ಸಂಪ್ರೀತಿ ಬಡಿಸೂ

ಬಾಳುವದನುದಿನ ಲೇಶವಾದರು ನಿನಗೆ

ಕಾಲ ಕರ್ಮದ ಭೀತಿ ಇಲ್ಲವಿಲ್ಲಾ

ಹಾಳು ಹರಟೆಯ ಮಾತು ಪೇಳುತ್ತಲಿದ್ದರೂ

ಓಲ್ಯಾಡು ಅಂತರಂಗದ ಮಧ್ಯದಿ

ವಾಲಗವನೆ ಮಾಡು ಮರೆಯದೆ ಮರೆಯದೆ

ಏಳಾಲವೆನ್ನದಿರು ಎಲ್ಲಿದ್ದರು ನಿನಗೆ

ಕಾಲನ ಉಪದ್ರವಾಗದಿದಕೊ

ಶ್ರೀಲೋಲನಾದ ವಿಜಯವಿಟ್ಠಲರೇಯನ 

ಮಾಲೆಯಿಂದಲಿ ಎಣಿಸುತ ಚರಿಸುವದೂ ॥ 3 ॥ 


 ಅಟ್ಟತಾಳ 


ಸುಲಭವಾಗಿದ್ದ ಪೂಜಿಯ ನೋಡು ನಿನ್ನೊಳು

ಗಲಭೆಯಾಗದಿಪ್ಪದು ಕಾಣೊ ಎಂದಿಗೂ

ಎಲೊ ಎಲೊ ಮನವೆ ಇಂಥ ಯೋಗ ಸಂಪಾದಿಸಿ

ಬಲು ಧನ್ಯನಾಗು ಬಾಹಿರಂಗಡಿ ಬಿಡು

ಕುಳಿತದ್ದು ನಿಂತದ್ದು ತಿರುಗಾಡತಿದ್ದದ್ದು

ಮಲಗಿಕೊಂಡಿದ್ದದ್ದು ಇವು ನಾಲ್ಕರೊಳು

ಹಲವು ಬಗೆ ಉಂಟು ಹೆಜ್ಜಿ ಹೆಜ್ಜಿಗೆ ಕರ -

ತಳದೊಳಗಿದ್ದ ಪದಾರ್ಥ ನೋಡಿದಂತೆ

ತಿಳಿದು ತಿಳಿಯಬೇಕು ಅನುಭವ ರೂಢದಲ್ಲಿ

ಕಲಿಭಂಜನ ನಮ್ಮ ವಿಜಯವಿಟ್ಠಲನಂಘ್ರಿ 

ಜಲಜ ಕಾಂಬುವದಕ್ಕೆ ಇದೆ ಇದೇ ಉಪಾಯಾ ॥ 4 ॥ 


 ಆದಿತಾಳ 


ಏಕಮೇವ ಸರ್ವ ಜಡದ್ರವ್ಯಂಗಳೆಲ್ಲಾ

ಲೋಕದೊಳಗೆ ಹರಿಯ ಆಕಾರವೆಂದು ಅರಿದು ಅ -

ನೇಕ ವಾಕ್ಯಗಳೆಲ್ಲ ಒಡಿಯನಿಗೆ ಉಪಚಾರ ಅ -

ನೇಕ ವಿಧದಿಂದ ನಿಜವೆಂದು ಹಿಗ್ಗುತಾ

ಈ ಕಳೇವರ ಮಿಕ್ಕಾದ ಇಂದ್ರಿಯಂಗಳು ತನ್ನ

ಜೋಕೆ ಮಾಡುವರು ಮಾನಿಸಿಕೊಂಬಾ ಸಕಲ ಜನರು

ಶ್ರೀಕಮಲಾಕ್ಷ ತನ್ನ ಅಧೀನವೆ ಎಂದು

ವ್ಯಾಕುಲ ಪಿಡಿಯದೆ ಚಿಂತಿಸಬೇಕು ನೀನೆ

ಲೌಕಿಕವಾದರು ವ್ಯರ್ಥವಾಗದು ವೈ -

ದೀಕವೆನಿಸುವದು ಎತ್ತಲಾದರೂ ನೋಡೆ

ಏಕೀ ಭೂತ ನಮ್ಮ ವಿಜಯವಿಟ್ಠಲರೇಯಾ 

ಸಾಕುವ ಸಾಕುವ ಇಹ ಪರದಲಿ ಒಲಿದೂ ॥ 5 ॥ 


 ಜತೆ 


ದ್ವಿವಿಧ ಕರ್ಮಗಳು ಹರಿಯಾಧೀನ ಚಿಂತನೆ

ವಿವರಿಸಿ ಮಾಡಲು ವಿಜಯವಿಟ್ಠಲಗೆ ಪ್ರೀತಿ ॥

******