Showing posts with label ತಂದೆ ನಿನ್ನಯ ಪಾದ guruvijaya vittala ankita suladi ಪ್ರಾರ್ಥನಾ ಸುಳಾದಿ TANDE NINNAYA PAADA PRARTHANA SULADI. Show all posts
Showing posts with label ತಂದೆ ನಿನ್ನಯ ಪಾದ guruvijaya vittala ankita suladi ಪ್ರಾರ್ಥನಾ ಸುಳಾದಿ TANDE NINNAYA PAADA PRARTHANA SULADI. Show all posts

Tuesday, 10 August 2021

ತಂದೆ ನಿನ್ನಯ ಪಾದ guruvijaya vittala ankita suladi ಪ್ರಾರ್ಥನಾ ಸುಳಾದಿ TANDE NINNAYA PAADA PRARTHANA SULADI

Audio by Mrs. Nandini Sripad



 ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ 

 (ಗುರುವಿಜಯವಿಟ್ಠಲ ಅಂಕಿತ) 

ಅಪರೋಕ್ಷ ವಿಷಯ ಪ್ರಾರ್ಥನಾ ಸುಳಾದಿ 


(ಭಾರತ ಕಥಾ ದೃಷ್ಟಾಂತ ಐತಿಹಾಸಿಕ ಪೂರ್ವಕ, ಸುರರ ಶಾಪವಿಮೋಚನ ಗೈದು ಎನ್ನಗಲಿದ ನೀನು ಎನ್ನಲ್ಲಿ ಕೃಪೆ ಮಾಡಿ ಪೊಳೆದು ಅನುಗ್ರಹಿಸು ಎಂದು ಅಪರೋಕ್ಷ ವಿಷಯ ಪ್ರಾರ್ಥನಾ.) 


 ರಾಗ ಆರಭಿ 


 ಧ್ರುವತಾಳ 


ತಂದೆ ನಿನ್ನಯ ಪಾದ ಸಂದರುಶನದಿಂದಾ -

ನಂದವಾಯಿತು ಎನಗೆ ಅಮರೇಂದ್ರನೆ

ವೃಂದಾರಕರಂದು ಇತ್ತ ತ್ರಿವಿಧ ಶಾಪದಿ ಈ ವ -

ಸುಂಧರೆ ಎಂಬೊ ಮಹಾ ಕಾರಾಗೃಹ

ಬಂಧನದಲಿ ಸಿಲ್ಕಿ ದೈತ್ಯರ ವಶನಾಗಿ

ಅಂಧಕಾರವೆಂಬೊ ಅಜ್ಞಾನದಿ

ವೃಂದ ದುಃಖಗಳುಂಡು ಬಂಧು ಬಳಗ ಮಿತ್ರ -

ರಿಂದ ಬಾಹಿರನಾಗಿ ಸಕಲ ದೋಷ -

ವೃಂದಗಳಿಗೆ ನಾನು ಮಂದಿರ ಸ್ಥಾನನಾಗಿ

ನಿಂದಿತನಾದೆ ನೈಜ ಜನರಿಂದ

ಮಂದಹಾಸದಿ ಮಾತ ನಡಿಸಿಕೊಳ್ಳದೆ ಮುಖ್ಯ

ಬಂಧುನಾದ ಹರಿಗೆ ವಿಮುಖನಾಗಿ

ಅಂಧಕನಾಗಿ ಈ ಭೂ ಪ್ರದೇಶವೆಂಬೊ

ಅಂಧಂತಮಸ್ಸಿನಲ್ಲಿ ನೊಂದು ದುಃಖ -

ದಿಂದ ದಾಂಟುವುದಕ್ಕೆ ಇನ್ನು ಸಂದೇಹ ಉಂಟೆ

ಕಂದು ಕಂಧಾರನ್ನ ಪ್ರೀತ್ಯಾಸ್ಪದನೆ

ಇಂದ್ರನಾಮಕ ಗುರುವಿಜಯವಿಟ್ಠಲನ್ನ 

ತಂದು ತೋರಿಸು ಎನಗೆ ತಡ ಮಾಡದೆ ॥ 1 ॥ 


 ಮಟ್ಟತಾಳ 


ಅತಿಶಯವಾದಂಥ ಹಿತದಿಂದಲಿ ನೀನು

ದ್ವಿತಿಯ ರೂಪವಾದ ಯತಿ ರೂಪದಿ ಬಂದು

ಆತ್ಮಜನೆ ನೀನು ಅಖಿಳ ಸೌಖ್ಯಗಳಿಂದ

ಕ್ಷಿತಿಯಲಿ ಸುಖವೈದು ಎಂತೆಂತು ನುಡಿದು

ಹಿತ ಮಾಡಿದಿ ನಿನ್ನ ಕರುಣಕ್ಕೆ ನಮೊ ನಮೊ

ಮತಿಯಲಿ ಇದ್ದಂಥ ಮರ್ಮವ ಪ್ರಾರ್ಥಿಸುವೆ

ಸುತರಲಿ ಪಿತ ಮಾಳ್ಪ ಹಿತದ ತೆರದಂತೆ

ಸತಿಯಲಿ ಪತಿ ಮಾಳ್ಪ ಪರಮ ಕರುಣದಂತೆ

ಮಿತಿಯಿಲ್ಲದಲಿಪ್ಪ ಮಿತ್ರತ್ವವ ಮಾಡಿ

ವ್ರತತಿಜಾಸನ ಮುಖ್ಯ ಸುರರ ಸಂತತಿಗಳ

ಚಿತ್ತಕೆ ನಿಲುಕದ ಅಗಣಿತ ಮಹಿಮನ್ನ

ಸಥೆಯಿಂದಲಿ ಎನ್ನ ಸಖನೆಂದು ಬಗೆದ

ಖತಿ ಎಣಿಸಿದೆ ಎನ್ನ ಹಟ ನಡೆಸುತ ಪೊರೆದು

ವೃತತಿಜಾಂಡಕೆ ಮುಖ್ಯ ತಾನೇ ಜೀವನಾಗಿ

ಅತಿಶಯದಲಿ ಎನ್ನ ಪ್ರಾಣನೆಂದು ನುಡಿದು

ದಿತಿಜನ ವಧೆಗಾಗಿ ಆನಿಲ್ಲದಿಪ್ಪ

ಕ್ಷಿತಿ ನೋಡಲು ಒಲ್ಲೆನೆಂದು ನುಡಿದಂಥ

ಮಿತ್ರನಿಂದಲಿ ಅಗಲಿ ಬಹುಕಾಲವ ಕಳದೆ

ವ್ಯರ್ಥ ಬಾಳಿದಂತಪರಾಧವೆಣಿಸದಲೆ

ಕರ್ತೃನೆನಿಪ ಗುರುವಿಜಯವಿಟ್ಠಲನ್ನ 

ಹೃತ್ಕಮಲದಿ ತೋರಿ ಸುಖದಾಯಕನಾಗು ॥ 2 ॥ 


 ತ್ರಿವಿಡಿತಾಳ 


ಕೃಷ್ಣನಿಂದಲಿ ಎನಗೆ ಉತ್ಕೃಷ್ಟ ಸುಖವಯ್ಯಾ

ಕೃಷ್ಣನಿಂದಲಿ ಎನಗೆ ಆನಂದವೊ

ಕೃಷ್ಣನಿಂದಲಿ ನಾನು ಅಸಮ ಬಲಾಢ್ಯನು

ಕೃಷ್ಣನಿಂದಲಿ ಎನಗೆ ಶೌರ್ಯ ಧೈರ್ಯ

ಕೃಷ್ಣನೆ ಎನ್ನ ಪ್ರಾಣ ಕೃಷ್ಣ ಎನ್ನಗೆ ಬಂಧು

ಕೃಷ್ಣನಿಂದಲಿ ಎನಗೆ ಸುಖ ದುಃಖವೊ

ಕೃಷ್ಣನಿಂದಲಿ ಎನಗೆ ನಿತ್ತೈಶ್ವರ್ಯವು ದೇವ

ಕೃಷ್ಣನಿಂದಲಿ ನಾನು ಮಾನ್ಯನಾಹೆ

ಎಷ್ಟು ಮಾತುಗಳ್ಯಾಕೆ ಕೃಷ್ಣನ ವ್ಯತಿರಿಕ್ತ 

ಅಷ್ಟೈಶ್ವರ್ಯವು ಎನಗೆ ಇಷ್ಟವಲ್ಲ

ಜಿಷ್ಣು ಸಖನೆಂಬೊ ವಾಕ್ಯ ಸಫಲ ಮಾಡಿ

ಕೃಷ್ಣನ ತಂದು ತೋರೆ ತಡ ಮಾಡದೆ

ವಿಷ್ಣು ನಾಮಕ ಗುರುವಿಜಯವಿಟ್ಠಲರೇಯ ಸಂ -

ತುಷ್ಟನಾಗುವಂತೆ ಮಾಡುವದೂ ॥ 3 ॥ 


 ಅಟ್ಟತಾಳ 


ದಾರುಮಯವಾದ ಪ್ರತಿಮದಿ ಗುಣದೋಷ

ಧಾರಕ ನಿಂದಲ್ಲೆ ಜನಿಸುವ ತೆರದಂತೆ

ಸರಸಿಜಭವ ಮಿಕ್ಕ ಸುರರಲ್ಲಿ ತನ್ನಾಮ ತತ್ಸ್ಯ(ಚ್ಛ) -

ರೀರವ ಧರಿಸಿ ತತ್ಕ್ರಿಯಗಳ ಮಾಡಿ

ಪರಮ ಸುಖ ಉಣಿಪಿ ಆವಾವ ಕಾಲದಿ

"ನಿತ್ಯೋತ್ಸವ ಭವತ್ಯೇಷಾಂ ನಿತ್ಯ ಶ್ರೀ ನಿತ್ಯಶೋಜಯಃ

ಏಷಾಂ ಹೃದಯಸ್ತು ಭಗವಾನ್ ಮಂಗಳಾಯತನಂ ಹರಿಃ"

ಈ ಪರಿಯಾದ ಸಿರಿಪತಿ ಹೃದಯದಲ್ಲಿ ನಿಲ್ಲೆ

ಕೊರತೆ ಯಾವದು ಎನಗೆ ಮನೋರಥ ಸಿದ್ಧಿಗೆ

ಸುರಧೇನು ಸುರವೃಕ್ಷ ಚಿಂತಾಮಣಿ ಎನಿಪ

ಪರಿಪೂರ್ಣ ಕೃಪಾನಿಧೆ ಗುರುವಿಜಯವಿಟ್ಠಲನ್ನ 

ತ್ವರಿತದಿಂದಲಿ ತೋರೆ ತಡಮಾಡದೆ ದೇವ ॥ 4 ॥ 


 ಆದಿತಾಳ 


ಅಂದಿನ ಕಾಲದಲ್ಲಿ ಅವತಾರ ಕಾರ್ಯವನ್ನು

ಒಂದುಳಿಸದಂತೆ ಮಾಡಿ ಮಂದಮತಿಗಳಿಗೆ

ಕುಂದು ತೋರುವಂತೆ ಅಂದವ ತೋರಿ ನಿಜ -

ಮಂದಿರ ವೈದಿದ ನಂತರದಲಿ ದುಃಖ -

ಸಿಂಧುವಿನೊಳಗೆ ಮುಳುಗಿ ಮಹದೈಶ್ವರ್ಯವನ್ನು

ಒಂದು ತೃಣಕೆ ಬಗೆದು ಯುಗ ಪಂಚ ದಿವಸಕ್ಕೆ

ಬಂಧುಗಳಿಂದ ಕೂಡಿ ಈ ದೇಹ ಪರಿತ್ಯಾಗ

ಅಂದು ಮಾಡಿದದ್ದು ಪ್ರತ್ಯಕ್ಷ ಸಿದ್ಧವಿದೆ

ಇಂದೆನ್ನ ಸೌಖ್ಯಕ್ಕೆ ಸಿರಿ ಕೃಷ್ಣನಲ್ಲದೆ ಇ -

ನ್ನೊಂದು ಮತ್ತುಂಟೆ ಎಂದೆಂದಿಗಾದರಿದೆ

ಕಂದರ್ಪ ಪಿತ ಗುರುವಿಜಯವಿಟ್ಠಲನ್ನ 

ತಂದು ತೋರಿಸು ಮನದಿ ತ್ವರಿತದಿ ಕೃಪೆಯಿಂದ ॥ 5 ॥ 


 ಜತೆ 


ಸುಖವೈದು ಎಂದು ನೀನು ಅನುಗ್ರಹ ಮಾಡಿದದಕೆ

ಸಖನಾದ ಗುರುವಿಜಯವಿಟ್ಠಲನ್ನ ತೋರಿಪದೊ ॥ 

(ಶೋಭನ ಸಂವತ್ಸರ ಆಶ್ವೀಜ ಶುದ್ಧ ದಶಮಿ ಗುರುವಾರ)

****