ಮಾರುತೀ ಕೊಡು ಭಕುತಿ ನುಡಿಸು ಕೀರ್ತಿ ಪ
ತೋರೊ ನಿನ್ನೊಳು ಇಹ ನಿರ್ಮಲ ಮೂರುತಿಯಅ.ಪ
ಶ್ರವಣಮಾಡಲು ಭಕುತಿ ಆವಕಾಲಕು ಇತ್ತು
ತವಪದದಾಸರ ದಾಸ್ಯ ಕೊಡಿಸೋ ದೇವ 1
ಕೀರ್ತನದೊಳು ಹರಿಕೀರ್ತಿ ಕೊಂಡಾಡೆ ಸಂ
ಕೀರ್ತನ ಭಕುತಿಗೆ ಕರ್ತದಾತ ನೀನೆ2
ಸ್ಮರಣೆಯು ಹರಿಯಲ್ಲಿ ನಿರುತವು ನಿನ್ನಲ್ಲಿ
ಕರುಣಿಸಿ ಪೊರೆಯೊ ಗುರುವರ ಸುಂದರ 3
ಪಾದ ಸೇವೆಯ ಕೊಡು ಸಾದರದಿಂದಲಿ
ಶ್ರೀಧರನಾ ಕೃಪಾಪಾತ್ರನೆಂದೆನಿಸಯ್ಯ 4
ಅಚ್ಯುತನಿಗೆ ನೀನಚ್ಚುಮೆಚ್ಚಾಗಿಹೆ
ನಿಚ್ಚದಿ ಹರಿಪಾದರ್ಚನೆ ಮಾಡಿಸಯ್ಯ 5
ವಂದನಾಭಕುತಿ ಎನ್ನಿಂದ ನೀ ಮಾಡಿಸಿ
ನಂದನಂದನಗಾನಂದಪಡಿಸೊ ದೇವ 6
ದಾಸಭಕುತಿ ಭಾಗ್ಯ ಆಶಿಸುವೆನು ನಿನ್ನ
ವಾಸುದೇವನ ನಿಜದಾಸನೆ ಸರ್ವದಾ 7
ಸಖ್ಯಭಕುತಿ ಕೊಡೋ ಮುಖ್ಯಪ್ರಾಣೇಶನೆ
ಮುಖ್ಯಕಾರಣ ಹರಿಯ ಮುಖ್ಯ ಪ್ರೇಮಪಾತ್ರ 8
ಆತ್ಮನಿವೇದನ ಭಕುತಿಯನ್ನು ಪರ
ಮಾತ್ಮನಲ್ಲಿತ್ತು ನಿರ್ಮಲಾತ್ಮನೆಂದೆನಿಸೊ 9
ನವವಿಧ ಭಕುತಿಯ ಕೊಟ್ಟು ಸಲಹೋ ದೇವ
ಅವಕಾಲಕು ಪವಮಾನ ನೀನೆ ಗತಿ 10
ಸಂಕಟ ಹರಿಪ ಶ್ರೀ ವೇಂಕಟೇಶನ ದೂತ
ಭಂಟನೆಂದೆನಿಸೆನ್ನ ಸಂಕಟ ಹರಿಸಯ್ಯ11
****