Showing posts with label ಧನ ಧಾನ್ಯ ಗೃಹಕ್ಷೇತ್ರ prasannavenkata ankita suladi ಧನ್ವಂತರಿ ಸುಳಾದಿ DHANA DHAANYA GRUHA KSHETRA DHANVANTRI SULADI. Show all posts
Showing posts with label ಧನ ಧಾನ್ಯ ಗೃಹಕ್ಷೇತ್ರ prasannavenkata ankita suladi ಧನ್ವಂತರಿ ಸುಳಾದಿ DHANA DHAANYA GRUHA KSHETRA DHANVANTRI SULADI. Show all posts

Sunday, 8 December 2019

ಧನ ಧಾನ್ಯ ಗೃಹಕ್ಷೇತ್ರ prasannavenkata ankita suladi ಧನ್ವಂತರಿ ಸುಳಾದಿ DHANA DHAANYA GRUHA KSHETRA DHANVANTRI SULADI

Audio by Mrs. Nandini Sripad

Audio by Vidwan Sumukh Moudgalya

ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ 

 ಷಡ್ವರ್ಗ ಸುಳಾದಿ 

( ಈ ಸುಳಾದಿ ಹರಿದಾಸ ಸಾಹಿತ್ಯದಲ್ಲಿಯೆ ಒಂದು ಅಪರೂಪದ ಸುಳಾದಿ. ಷಡ್ವರ್ಗ ಸುಳಾದಿ ಎಂದರೆ ಅರಿಷಡ್ವರ್ಗಗಳ ಸುಳಾದಿ. ಇವುಗಳಲ್ಲಿ ಒಂದೊಂದನ್ನೇ ಕುರಿತು ಒಂದೊಂದು ನುಡಿಯಲ್ಲಿ ಚಿಂತನೆ ಮಾಡಿದ್ದಾರೆ. ಈ ಆರೂ ವೈರಿಗಳ ಉಪಶಮನಕ್ಕಾಗಿ ದಿವ್ಯ ಔಷಧವನ್ನು ಕೊಡಬಲ್ಲ ಏಕೈಕ ವೈದ್ಯನೆಂದರೆ ಶ್ರೀ ಪ್ರಸನ್ನ ವೆಂಕಟಾಭಿನ್ನ ಧನ್ವಂತರಿ ಪರಮಾತ್ಮ . )

 ರಾಗ ತೋಡಿ 

 ಝಂಪೆತಾಳ 

ಧನ ಧಾನ್ಯ ಗೃಹಕ್ಷೇತ್ರ ವನಿತೆ ಪುತ್ರಾದಿತರ
ನೆನವಿನಲಿ ಜನುಮಗಳ ತಂದೀವ ಕಾಮ
ಕನಕಗಿರಿ ಕೈಸಾರ್ದಡಂ ಪರಸು ದೊರೆದಡಂ
ಇನಿತು ತೃಪುತಿಯೈದದೆನ್ನ ಮನೋಕಾಮ
ಜನಪರ ಸಿರಿಬಯಕೆ ಜಾಣೆಯರ ಸಂಗತಿಯ
ಕನಸಿನೊಳಗಾದಡಂ ಬಿಡದಿಹುದು ಕಾಮ
ತನಗಲ್ಲದ್ಹವಣದಿಹ ಕಾಮ ಕಾಮಿನಿ ಭೂತ
ಕೆನಿತಶನ ಸಾಲದಾಯಿತೈ ಪೂರ್ಣಕಾಮ
ಮುನಿನಾರಿಯಳ ಕಲ್ಲಮೈಯನೆತ್ತಿದ ಪಾದ -
ವನು ಎನ್ನ ದುರ್ವಿಷಯ ಕಾಮದಲ್ಲಿಟ್ಟು ನಿನ್ನ
ಜ್ಞಾನ ಭಕುತಿ ವೈರಾಗ್ಯ ಕಾಮವನೀಯೊ
ದಿನಕರ ಕುಲೋದ್ದಾಮ ಪ್ರಸನ್ವೆಂಕಟ ರಾಮ ॥ 1 ॥

 ಮಠ್ಯತಾಳ 

ಗುರುಹಿರಿಯರಿಗಂಜದೆ ನಿಕ್ಕರ ನುಡಿಸುವ ಕ್ರೋಧ
ಬರಿಯಹಂಕಾರದಿ ಬೆರತಘರಾಶಿಯ
ನಿರಹಿಸಿ ನಿರಯವನುಣಿಸುವ ಕ್ರೋಧ
ಮರುಳನ ದುರುಳನ ಮಾಡುವ ಕ್ರೋಧ
ಗುರುಹಿರಿಯರಿಗಂಜದೆ ಉರುಕೋಪದಲೆದ್ದ ಕಾ -
ಳುರಗನ ಪೆಡೆದುಳಿದಾ ಸಿರಿಚರಣವ ಕ್ರೋಧಾಹಿ
ಶಿರದ ಮ್ಯಾಲಿಡು ಗಡ ಗರುಡಾದ್ರಿ 
 ಪ್ರಸನ್ವೆಂಕಟ ತಾಂಡವ ಕೃಷ್ಣ ॥ 2 ॥

 ರೂಪಕತಾಳ 

ಹೀನ ಧರ್ಮವ ಮಾಡಿ ಸುರಋಷಿ ಪಿತೃ ಋಣ
ವೇನು ಕಳಿಯಲಿಲ್ಲವೆನ್ನ ಲೋಭ
ಜೇನನೊಣನು ವೋಲು ತಾನುಣ್ಣನೊದಗಿಸಿ
ನಾನಾಲಾಭದಲಿ ತುಂಬದು ಲೋಭ ಭಾಂಡ
ದಾನವ ಬೇಡಿಳೆಯಾಜಾಂಡವನೊಡೆದ
ಶ್ರೀನುತಾಂಘ್ರಿಯಲೊದ್ದು ಲೋಭದ ಕೋಶವನು
ನೀನೆ ಸೂರೆಯ ಮಾಡೊ ಪ್ರಸನ್ವೆಂಕಟ ವಾ -
ಮನ್ನ ಉದಾರಿ ಶಿಖಾಮಣಿ ಭಾರ್ಗ್ವಾ ॥ 3 ॥

 ಪಂಚಘಾತ ಮಠ್ಯ 

ಅನ್ನಕೆ ಉಬ್ಬಿ ಯೌವನವ ರೂಪಕೆ ಕೊಬ್ಬಿ
ಧನ್ನಕೆ ಮೊಬ್ಬೇರಿಸಿತೆನ್ನ ಮದವು
ಎನ್ನ ಸೇವಿಸುವ ಪರಿವಾರ ಭುಜಬಲೆಂ -
ಬುನ್ನತಿಯಿಂದುನ್ಮತ್ತನ ಮಾಳ್ಪ ಮದವು
ದಾನವೇಂದ್ರನ ಮೌಳಿಯನ್ನು ತುಳಿದ ಪದದಿ
ಎನ್ನ ಮದರಾಜನ ಮೆಟ್ಟಿಯಾಳೆಲೆ ದೇವ
ನಿನ್ನ ಧ್ಯಾನವಿರತಿ ಮದದಿಂದ ಕೊಬ್ಬಿಸು ಪ್ರ - 
 ಸನ್ವೆಂಕಟ ಉರುಕ್ರಮ ಧನ್ಯರೊಡೆಯ ॥ 4 ॥

 ತ್ರಿವಿಡಿತಾಳ 

ಉತ್ತಮರ ಅವಗುಣವೆಣಿಸುತ
ಹೊತ್ತು ಯಮಪುರಕೊಯ್ವ ಮತ್ಸರ
ಮತ್ತೆ ಪರಸೌಖ್ಯಕ್ಕೆ ಕುದಿಕುದಿಸಿತಯ ಮತ್ಸರವು
ಚಿತ್ತಜನ ಶರ ಮತ್ಸರಿಸುತಿರೆ
ಮೊತ್ತ ಗೋಪೇರ ಕುಚದ ಪೀಠದಿ ಒತ್ತಿ ಸುಖ -
ವಿತ್ತ ಪದವೆನ್ನೆದೆಲಿಡು ಪ್ರಸನ್ವೆಂಕಟ ಕೃಷ್ಣ ॥ 5 ॥

 ಅಟ್ಟತಾಳ 

ಇಂದುಮುಖಿಯರ ಕಂಡಂದಗೆಡಿಪ ಮೋಹ
ಕಂದಗಳಾಡಿಸಿ ಕರುಣ ಉಕ್ಕಿಪ ಮೋಹ
ತಂದೆ ತಾಯಿ ಬಂಧುವರ್ಗದ ಮೋಹ
ಮುಂದಣಗತಿಗೆ ಮೂರ್ಛೆಯನಿತ್ತ ಮೋಹ
ಕಂದರ್ಪನ ಗೆದ್ದ ಯೋಗಿಜನರ ಹೃದ -
ಯಾಂಧಕಾರವ ಗೆದ್ದು ತವಪಾದನಖಪೂರ್ಣ -
ಚಂದ್ರ ಚಂದ್ರಿಕೆದೋರಿ ಅಭಿಜ್ಞನ ಮಾಡೆನ್ನ ದಯಾ -
ಸಿಂಧು ಪ್ರಸನ್ನವೆಂಕಟ ಮುನಿಜನವಂದ್ಯ ॥ 6 ॥

 ಏಕತಾಳ 

ಎನ್ನ ಕಾಮವೆಂಬ ಗಿರಿಗ್ವಜ್ರಾಂಕಿತ ಪದ
ಎನ್ನ ಕ್ರೋಧವೆಂಬಾಹಿಗೆ ಧ್ವಜದಂಡಾನ್ವಿತ ಪದ
ಎನ್ನ ಮದವೆಂಬ ಗಜಕಂಕುಶಾಂಕಿತ ಪದ
ಎನ್ನ ಮತ್ಸರಾನ್ವಯಕೆ ಗಂಗಾನ್ವಿತ ಪದ
ಎನ್ನ ಲೋಭ ಗೆದ್ದ ಮನೋಳಿಗೆ ಅಬ್ಜಯುತ ಪದ
ಎನ್ನ ಮೋಹಧ್ವಾಂತ ಪೂರ್ಣೇಂದು ನಖದ ಪದ
ಎನ್ನ ಮನೋರಥ ಸಿದ್ಧಿಯನು ಕರೆದೀವ ಪ್ರ - 
 ಸನ್ನವೆಂಕಟನ ದಿವ್ಯ ಪಾದಪಾಂಕಿತ ಪದ ॥ 7 ॥

 ಜತೆ 

ಇಂತು ಬಾಧಿಪ ಷಡ್ವರ್ಗದಂಬನೆ ಕಿತ್ತಿ 
ಸಂತತ ಶ್ರೀಚರಣ ಸ್ಮರಣೆ
ಮುಂತಾದೌಷಧವನಿತ್ತೆನ್ನ ರಕ್ಷಿಸು 
ಧನ್ವಂತರಿ ಪ್ರಸನ್ನವೆಂಕಟ ನರಹರಿಯೆ ॥
*************