ದೇಹಗತ ನಾಡಿ ಪ್ರಕರಣ ಸುಳಾದಿ
ರಾಗ ಕಾಂಬೋಧಿ
ಧ್ರುವತಾಳ
ಎಪ್ಪತ್ತೆರಡು ಸಾವಿರ ನಾಡಿ ಅತೀಂದ್ರಿಯ
ಇಪ್ಪವು ದೇಹದೊಳಗೆ ನಾಭಿ ಮೂಲದಲ್ಲಿ
ಒಪ್ಪುತಿವೆ ಕೇಳಿ ಎರಡು ವಿಧವಾಗಿ
ಅಪ್ಪಸವ್ಯಾಸವ್ಯಾ ಅರ್ಧರ್ಧಾ ಲೆಖ್ಖದಲ್ಲಿ
ಅಪ್ಪಾರ ಮಹಿಮನು ಪುರುಷಾಯುಷ ಪ್ರಮಾಣ
ಸ್ತ್ರೀ ಪುರುಷ ರೂಪದಲ್ಲಿ ಮೆರೆವುತಿಹ
ಇಪ್ಪತ್ತೊಂದು ಸಾವಿರ ಆರುನೂರು ಮಂತ್ರ ಜಪಿಸುವ
ಅಪ್ರತಿಸೂತ್ರವಾಯು ಸತತ ಲಕುಮಿಪತಿಯ
ಅಪ್ಪಣೆಯಿಂದಲಿ ಜೀವನ ಕೈಯಿಂದ
ಸುಪುಣ್ಯ ಮಾಡಿಸುವ ದಾಸೋಹಂ ಎಂದಾ ನುಡಿಗೆ
ಸಫಲವಾಗುವದು ಒಂದು ಕಾಸು ಕೊಟ್ಟರೆ
ಕೊಪ್ಪರಿಗೆ ಧನಮಾಡಿ ಉಣಿಸುವ ಜಗದ್ಗುರು
ಇಪ್ಪತ್ತುನಾಲ್ಕು ನಾಡಿ ಮೊದಲಾದ ನಾಡಿಯೊಳು
ತಾ ಪ್ರಧಾನವಾಗಿ ಇಪ್ಪವು ಇದರೊಳು
ತಪ್ಪದೆ ನಾಲ್ಕು ನಾಡಿ ಬಲಗಡೆ ಪೊಂದಿಪ್ಪವು
ಒಪ್ಪದಿಂದಲಿ ನೋಡಿ ಉಳಿದ ನಾಡಿಗಳು
ಇಪ್ಪತ್ತು ಇವೆ ಊರ್ಧ್ವ ಅಧೋಮುಖವರ್ಧರ್ಧಾ
ಗಪ್ಪನೆ ಮೇಲುಗಡೆ ಹಬ್ಬಿದ ಹತ್ತು ನಾಡಿ -
ಯ ಪೆಸರು ಲಾಲಿಸುವದು ಶ್ರುತಿ ಸ್ಮೃತಿ ಸಮ್ಮತ
ಅಪ್ರಧಾನನಾಡಿ ಸರ್ವವು ಇದರೊಳು
ಇಪ್ಪದು ಸುಷುಮ್ನ ನಾಡಿ ಶ್ರೇಷ್ಠ
ಅಪ್ಪಡಿಯಾಗಿದೆ ಧ್ಯಾನಕ್ಕೆ ಶ್ರೀಹರಿ
ಬಪ್ಪ ಸ್ಥಾನವೆ ತಿಳಿದು ನೋಳ್ಪರಿಗೆ
ಸರ್ಪವೈರಿಕೇತನ ವಿಜಯವಿಠ್ಠಲ ಹರಿಯ
ಆಪನ್ನನಾಗುವನು ತಿಳಿಯದೆ ಗತಿಯಿಲ್ಲ ॥ 1 ॥
ಮಟ್ಟತಾಳ
ಪಿಂಗಳ ಗಾಂಧಾರಿ ಲಂಬುಸ ಪೂಂಸ
ಹಿಂಗದೆ ಹಸ್ತಿನಿ ಕುಹ ಶಂಖಿನಿ ಶಾರದೀ ಇಡಾ
ಗಂಗೆ ಎನಿಸಿಕೊಂಬ ಬ್ರಹ್ಮನಾಡಿ ಸಹಿತ
ಅಂಗವಾಗಿಯಿದ್ದ ಹತ್ತು ನಾಡಿಯು ಕಾಣೊ
ಪಿಂಗಳ ಬಲಭಾಗ ಎಡಭಾಗಕ್ಕೆ ಇಡಾ
ಸಂಗತಿಯಾದಂತೆ ಮೂಗಿನಲಿ ಸಂಚಾರ
ತಿಂಗಳ ಸೂರ್ಯ ಸ್ವರಗಳೆನಿಸುವವು
ಮಂಗಳ ರಮಣನ್ನ ಚರಣ ಕಾಣುವ ಜ -
ನಂಗಳು ಜ್ಞಾನದಲಿ ಸ್ವರಭೇದ ಗ್ರಹಿಸುವದು
ಅಂಗಜಪಿತ ನಮ್ಮ ವಿಜಯವಿಠ್ಠಲ ಅಂತ -
ರಂಗದೊಳಗೆ ಇದ್ದು ತನ್ನ ತೋರಿಸಿಕೊಡುವ ॥ 2 ॥
ತ್ರಿವಿಡಿತಾಳ
ನಾಸಿಕದಲಿ ಇಡಾ ಪಿಂಗಳ ನಾಡಿಗಳು
ಪೂಂಸಾ ಲಂಬು ಶಿಖಾ ಎರಡು ಕಣ್ಣಿನಲಿ
ಲೇಸು ಗಾಂಧಾರಿ ಹಸ್ತಿನಿಯೆಂಬೊ ನಾಡಿ ಪ್ರ -
ಕಾಶವಾಗಿವೆ ನೋಡಿ ಕರ್ಣದಲ್ಲಿ
ಆ ಶಾರದಾ ಜಿಂಹ್ವೆಯಲ್ಲಿಪ್ಪುದು
ಭೂಷಣವಾಗಿದ್ದ ಕುಹವೆ ಗುದದಲ್ಲಿ
ಮೋಸವಿಲ್ಲದೆ ಲಿಂಗದಲ್ಲಿ ಶಂಕಿನಿ ನಾಡಿ
ಈಸು ನಾಡಿಗಳು ಅಲ್ಲಲ್ಲಿಪ್ಪವು
ಸುಷುಮ್ನ ನಾಡಿ ಮೂಲಾಧಾರ ವಿಡಿದು
ಶಾಶಿನಿಯಿಲ್ಲದೆ ಮೂರ್ಧ್ನಿತನಕ
ಶ್ವಾಸ ಅಲ್ಲಿಂದ ಪೋದವಗೆ ಪೂರ್ಣಜ್ಞಾನ
ಮೀಸಲ ಪದವಿಗೆ ಅರ್ಹನಯ್ಯಾ
ಈ ಸಮಸ್ತ ನಾಡಿಗಳಲ್ಲಿ ಶಿವಪುತ್ರರು
ದಾಸ ಪ್ರಾಣರು ಮತ್ತೆ ಮುಖ್ಯಪ್ರಾಣ
ಶ್ರೀಶನ ಸೇವೆಗೋಸುಗಾಧಿಷ್ಠಾನರಾಗಿ
ಈ ಶರೀರದ ಸ್ಥಿತಿ ನಡೆಸುವರು
ದೇಶ ಕಾಲ ಬಿಡದೆ ಆವಾವ ಕರ್ಮಗಳು
ಲೇಶ ತಪ್ಪದಂತೆ ಪ್ರೇರಿಪರೋ
ಲೇಶಿಗೆ ಇವರಯ್ಯಾ ಹೊಲ್ಲಿಗೆ ಇದೆ ನಾಮ
ಆಸುರಿ ಜನರಲ್ಲಿ ಮಾಡಿಸುವರು
ಈ ಶುಂಠರಿಗೆ ಮುಖ್ಯ ಕಲಿ ಪ್ರೇರಕ ನಾಹ
ವಾಸುದೇವನೆ ಅವಗೆ ಶಿಕ್ಷಕನು
ದೇಶ ಕಾಲ ವ್ಯಾಪ್ತ ವಿಜಯವಿಠ್ಠಲ ಹರಿಯ
ದಾಸರೊಳಗೆ ಮುಖ್ಯಪ್ರಾಣನೆ ಬಲ್ಲಿದ ಕಾಣೊ ॥ 3 ॥
ಅಟ್ಟತಾಳ
ಪ್ರಾಣ ಹೃದಯದಿ ಶ್ವಾಸ ಕಾರಣ ಅ -
ಪಾನನು ಮಲ ಮೂತ್ರ ಬಿಡಿಸುವ ಅಧೋದಿಂದ
ವ್ಯಾನ ಕಂಠದಲ್ಲಿ ತೃಷ್ಣೆಯ ಮಾಳ್ಪ ಉ -
ದಾನ ತಾಲು ಸ್ಥಾನದಲ್ಲಿ ಆಹಾರ
ವಾನು ಭುಂಜಿಸುವ ಆಕಳಿಸುವ
ಈ ನಾಭಿಯಲ್ಲಿ ಸಮಾನ ವಾಯು ಕೃ -
ಶಾನುವಿಗೆ ಬೀಸಿ ದೀಪನವ ಮಾಡುವ
ಏನೆಂಬೆ ಸಮಸ್ತ ಸೂಕ್ಷ್ಮ ನಾಡಿಯಲ್ಲಿ
ತಾನಿದ್ದು ಆಹಾರವ ನಾಗನು ಕೊಡುತಿಪ್ಪ
ಏಣಿಸಿ ಗುಣಿಪದು ಇವರಿದ್ದಂಥ
ಸ್ಥಾನಂಗಳು ಅಲ್ಲಿ ಮಾಡುವ ವ್ಯಾಪಾರ
ಜ್ಞಾನಾಂಬುಧಿ ನಮ್ಮ ವಿಜಯವಿಠ್ಠಲ ಬಲು
ಜಾಣನು ಕಾಣೊ ಜಗದೊಳಗಾಡುವ ॥ 4 ॥
ಆದಿತಾಳ
ಕಣ್ಣಿನಲ್ಲಿ ಕೂರ್ಮ ರೆಪ್ಪೆ ಹಾಕಿಸುವ ಮುಚ್ಚಿಸುವ
ಮುನ್ನೆ ಕೃಕಲ ವಾಯು ನಾಶಿಕದಲ್ಲಿ ವಾ -
ಸನ್ನೆ ತೆಗೆದುಕೊಂಬ ನಾನಾ ವಿಚಿತ್ರವಾದ
ಧನ್ನಂಜಯ ಯೆಂಬುದು ಎಂಟು ದಿಕ್ಕಿನ ಶಬ್ಧ
ಕರ್ಣದಲಿ ಶುಭಾಶುಭ ಕೇಳಿಸುವದು ಬಿ -
ನ್ನಣ ದೇವದತ್ತನು ಜಿಂಹ್ವೆಯಲಿ
ಚನ್ನಾಗಿ ವಾಕ್ಯಗಳ ನುಡಿಸುವ ಕೊಡಿಸುವ
ಬನ್ನ ಬಡಿಸುವರು ಇವರೆ ದೈತ್ಯರೊಳಿದ್ದು
ಗುಣ್ಣಿಸೆ ದಶವಾಯು ಪ್ರವರ್ತಿಸುವರು
ಅನ್ನಂತ ಬಗೆಯಲ್ಲಿ ಸಾಧನ ಮಾಡುತ್ತ
ಅನ್ನಂತ ಜೀವರಾಶಿಯೊಳಗೆ ವಾಸವಾಗಿ
ಭಿನ್ನ ಭಿನ್ನ ಚೇಷ್ಟೆ ಮಾಡಿಸುವರು ನಿಂದು
ಇನ್ನು ಇವರಿಗೆ ಅಧಿಷ್ಠಾನ ಮುಖ್ಯಪ್ರಾಣ
ತನ್ನೊಳಗೆ ಸಿರಿ ಹರಿ ಸಹಿತ ಇದ್ದಾ
ಗಣ್ಯವಿಲ್ಲದ ಕರ್ಮ ಮಾಡಿ ಮಾಡಿಸುತಿಪ್ಪನು
ಅನ್ಯ ದೈವವೆ ಇಲ್ಲ ಈತನೆ ಮುಖ್ಯ ಕರ್ತ
ಮನ್ನುಜ ಈ ಪರಿ ತಿಳಿದು ತನ್ನ ಗುರು -
ವಿನ್ನ ಮೊದಲು ಮಾಡಿ ಮುಖ್ಯ ಪ್ರಾಣಾಂತರ್ಯಾಮಿ
ಸನ್ಮತಿಯಿಂದ ಸಮರ್ಪಣೆ ಮಾಡಿದರೆ ಪಾ -
ವನ್ನನಾಗುವ ತನ್ನ ಕುಲ ಕೋಟಿ ಕೂಡಿಕೊಂಡು
ಬೆಣ್ಣೆಗಳ್ಳ ನಮ್ಮ ವಿಜಯವಿಠ್ಠಲನ ಕಾ -
ರುಣ್ಯ ಪಡೆದು ಮಹಾ ಧನ್ಯರೆನಿಸುವರು ॥ 5 ॥
ಜತೆ
ತಿಳಿದು ಈ ಬಗೆಯಿಂದ ಧ್ಯಾನವ ಮಾಡಿರೊ
ಒಲಿವನು ವಿಜಯವಿಠ್ಠಲ ನಾಡಿಯೊಳು ಪೊಳೆವ ॥
**********