ರಾಮ ರಾಮೆನ್ನಿರೊ ಸೀತಾಪತಿ ರಾಮ ರಾಮೆನ್ನಿರೊ ll ಪ ll
ಗಂಗೆಯೊಳ್ ಮುಳುಗಲ್ಯಾಕೆ ನಡೆದು ಬಲು
ಭಂಗವ ಪಡುವುದ್ಯಾಕೆ
ಮಂಗಲದಾತ ನರಸಿಂಗನ ನಾಮವ
ಹಿಂಗದೆ ನೆನೆದರಿಷ್ಟಂಗಳ ಕೊಡುವ ll 1 ll
ಉಪವಾಸ ಮಾಡಲ್ಯಾಕೆ ಕಪಟದೊಳು
ಗುಪಿತದಿ ಕುಳ್ಳಲ್ಯಾಕೆ
ಉಪಮೆರಹಿತ ಶ್ರೀಪತಿ ಕೃಷ್ಣರಾಯನ
ಜಪಿಸಿ ಬಂದರೆ ಜನ್ಮ ಸಫಲವಾಗುವುದಲ್ಲೋ ll 2 ll
ಧ್ರುವನು ಸದ್ಗತಿ ಪಡೆದ ಕರುಣದಿಂದ
ಪವಮಾನಿಗೆ ಒಲಿದ
ಭುವನ ಈರಡಿ ಮಾಡಿ ಬಲಿಯನ್ನು ಸಲಹಿದ
ಬವರದೊಳಗೆ ದಾನವರನ್ನು ಮಡುಹಿದ ll 3 ll
ಯಾತ್ರೆಗೆ ಪೊಗಲ್ಯಾಕೋ ಕಾವಡಿ ಪೊತ್ತು
ತೀರ್ಥಸ್ನಾನಗಳ್ಯಾತಕೋ
ಕರ್ತು ಮಾಧವ ಶತಪತ್ರನಾಭನ ಸಂ-
ಕೀರ್ತನಾದಿಗಳೆ ಪರತ್ರಸಾಧನವಲ್ಲೊ ll 4 ll
ಭೂರಿಯಾಯಾಸವ್ಯಾಕೋ ಬರಿದೆ ಸಂ-
ಸಾರವ ನಂಬಲ್ಯಾಕೋ
ಮಾರಾರಿಸಖ ಲಕ್ಷ್ಮೀನಾರಾಯಣನನ್ನು
ಸೇರಿ ಭಜಿಪರ ಉದ್ಧಾರಮಾಡುವ ಶ್ರೀ
***