Audio by Mrs. Nandini Sripad
ಶ್ರೀವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ
(ದಾಸ್ಯಭಾವವೇ ಸಾಧನಕ್ಕೆ ಮುಖ್ಯವಾದುದು. ಕಾಮಾದಿಗಳ ಮೆಟ್ಟಿ ಹರಿದಾಸನಾಗು. ಲೇಶ ದುಃಖ ಬಾರದು. ಮಹದಾನಂದ ಪ್ರಾಪ್ತಿಯಾಗುವುದು.)
ರಾಗ ಸಾವೇರಿ ಝಂಪಿತಾಳ
ಶ್ರೀಚರಣವರ್ಚಿಸುವೆ ವಾಚಾಮಗೋಚರ ನಿ -
ಶಾಚರ ದಹನ ಖೇಚರೇಶ
ಲೋಚನಾ ಯುಗಳಕೆ ಗೋಚರನಾಗದೆ
ಸೂಚಿಸು ಮನಸಿಗಾಲೋಚನಿಯಾ
ಯಾಚನವಿದೆ ಬೇಕು ಊಚ ಪದವಿಯನೊಲ್ಲೆ
ಯಾಚನಾಗೊಳಿಸದಿರು ನೀಚ ನರನ
ಭೂಚೋರಹರ ವಿಜಯವಿಟ್ಠಲ ಸರಸಿಜ -
ಲೋಚನ ಪಾಪ ವಿಮೋಚನನೆ ॥ 1 ॥
ಮಟ್ಟತಾಳ
ಕಾವಳ ಉಳ್ಳಗಲ ದೀವಿಗೆ ಪಚ್ಚಿಸಿದ
ಈ ವಸುಧಿಯೊಳಗೆ ಆವನಾದರು ಉಂಟೆ
ಆವಾವ ಜನನದ ಆವಾವ ಕರ್ಮದ
ಆವಳಿಗಳು ಇರಲು ಸಾವಿರ ಬಗೆಯಿಂದ
ದೇವ ನಿನ್ನಯ ಚರಣ ಸೇವಿಯನು ಒಮ್ಮೆ
ಸೇವಿಸಲು ಪಾಪ ಉಳಿಯವೊ ಕಾಣೊ
ದೀವಸ್ಪತಿ ನಾಮಾ ವಿಜಯವಿಟ್ಠಲರೇಯ
ದೀವಿಗೆ ಸ್ವಲ್ಪಕ್ಕೆ ಕಾವಳ ನಿಲುವದೇ ॥ 2 ॥
ರೂಪಕತಾಳ
ಒಂದೊಂದು ಜನನದಲಿ ಒಂದೊಂದು ಪಾಪಂಗಳು
ಬಂದು ಪೊಂದಿದವೆಲ್ಲ ಗಣನೆ ಮಾಡೆ
ಎಂದಿಗೆ ಸವಿಯದ ಅಂಧಕ ಮರೆವದೇ -
ನೆಂದು ಪೇಳಲಿ ಎನ್ನ ಕುಂದುಗಳ
ಮಂದಿರದೊಳಗೆಲ್ಲ ಅಂಧಕಾರವೆ ತುಂಬಿ
ಒಂದೊಂದು ಮೂಲಿಗೆ ಒಂದೊಂದು ದೀಪವ
ತಂದಿಡುವರೆ ಮುಕುಂದ ವಿಜಯವಿಟ್ಠಲಾ
ದಂದ್ವ ಪಾಪಕೆ ನಾಮ ಒಂದೆ ಸಾಲದೆ ದೇವಾ ॥ 3 ॥
ಧ್ರುವತಾಳ
ಜನಿಸಬೇಕಾದರೆ ಜನಿಸಬೇಕಯ್ಯಾ ಪಂ -
ಚಾನನ ಗರ್ಭದಲ್ಲಿ ಬಂದು ಜನಿತವಾಗಿ
ವನದೊಳು ತಿರುಗುವ ಘನ ಗಜ ಕುಂಭಸ್ಥಳ -
ವನು ಸೀಳಿ ಎದುರಿಲ್ಲೆನುತ ಚರಿಸಿದಂತೆ
ಮನೊವಾಚಾದಲ್ಲಿ ದಾಸತನ ಪಡೆವೆನೆಂಬುವ
ವನಜನಾಭನೆ ನಿನ್ನ ವೊಲಿಸಿಕೊಂಡು
ಘನ ಮಾಯವನು ಹಿಂದನು ಮಾಡಿ ಕಾಮಕ್ರೋಧ -
ವನು ಸೀಳಿ ಮೃಗನಂತೆ ತನುವಿನೊಳಿರಬೇಕು
ನೆನೆವರ ಪರಿಪಾಲ ವಿಜಯವಿಟ್ಠಲ ನಿನ್ನ
ಅನುಸರಿಸಿ ಜ್ಞಾನ ತನು ಜ್ಯೋತಿ ಪಡಿಯಬೇಕು ॥ 4 ॥
ತ್ರಿವಿಡಿತಾಳ
ದಾಸನಾದರೆ ನಿನ್ನ ದಾಸನಾಗಲಿ ಬೇಕು
ಏಸೇಸು ಜನನ ಸಂಪಾದಿಸಿ ಕೊಂಡಾದರು
ಮೋಸ ಪೋಗದೆ ದುರವಾಸನಿಗೆರಗದೆ
ಸಾಸಿರ ದೈವಗಳ ಸೇರದೆ ಬಯ -
ಲಾಸಿಗೆ ಮನುವುಬ್ಬಿ ಹ್ರಾಸನಾಗದೆ ಪುಣ್ಯ -
ರಾಶಿಗಳಳಿಯದೆ ಲೇಸು ಭಕುತಿಯಲ್ಲಿ
ಈಶ ಗಿರೀಶನೆ ವಿಜಯವಿಟ್ಠಲ ನಿನ್ನ
ದಾಸನಾದರೆ ದುಃಖ ಲೇಶವಾದರು ಇಲ್ಲ ॥ 5 ॥
ಅಟ್ಟತಾಳ
ನಿನ್ನಯ ಮೂರ್ತಿಯ ನೋಡುವದು ಒಂದಾನಂದ
ನಿನ್ನ ಕೀರುತಿ ಕೇಳುವದು ಒಂದಾನಂದ
ನಿನ್ನ ವಾರುತಿ ಕೇಳುವುದು ಒಂದಾನಂದ
ನಿನ್ನ ವಾರುತಿಯ ಪೇಳುವದು ಒಂದಾನಂದ
ನಿನ್ನ ಆರುತಿಯ ಕೊಂಬುವದು ಒಂದಾನಂದ
ನಿನ್ನ ಚರಿತೆಯ ಆಡುವದು ಒಂದಾನಂದ
ನಿನ್ನವನಾಗಿ ಮೆರೆವದು ಒಂದಾನಂದ
ಅನ್ನಂತವತಾರ ವಿಜಯವಿಟ್ಠಲರೇಯ
ನಿನ್ನ ಪಾದದಲಿ ಸೇರುವದು ಒಂದಾನಂದ ॥ 6 ॥
ಆದಿತಾಳ
ಒಳಗೆ ಬಲು ತುಂಬಿದ ಕತ್ತಲೆಯೆಂಬ ಅಜ್ಞಾನ
ಕಳಿಯದಿರು ಕಳಿಯದಿರು ನಿಲವಾಗಿದ್ದರೆ ಇರಲಿ
ಕಲಕಾಲ ನಾನದಕೆ ಆಳುಕಿ ಅಂಜುವನಲ್ಲಾ
ಚಲುವ ದೇವನೆ ನಿನ್ನ ಪೊಳೆವ ಪಾದದ ನಖ
ಬೆಳಗು ಎನ್ನೊಳಗೊಮ್ಮೆ ಪೊಳೆದ ತರುವಾಯ
ಬಲವಂತವಾದ ಕತ್ತಲಿ ಎಂಬೊ ಅಜ್ಞಾನ
ಉಳಿವದೇನಯ್ಯಾ ಲೇಶ ಒಳಗೆ ಇದ್ದು ತೊಲಗದೆ
ಬಲುದೈವಾ ವೃಷಭಾಕ್ಷ ವಿಜಯವಿಟ್ಠಲ ನಿನ್ನ
ಬೆಳಗು ತೋರಿಗೊಡಲು ಕತ್ತಲೆ ತಾನೆ ಓಡುವದೋ ॥ 7 ॥
ಜತೆ
ಕ್ಷಣ ಒಂದು ಬದುಕಿದರು ನಿನ್ನ ದಾಸನೆನಿಸಿ
ತನುವ ಧರಿಸುವೆನು ಭರ್ಗ ವಿಜಯವಿಟ್ಠಲಾ ॥
****