Showing posts with label ಸತ್ಯಬೋಧಾರ್ಯರ satyabodha charitre ಸತ್ಯಬೋಧ ಚರಿತ್ರೆ prasannashreenivasa satyabodha teertha stutih. Show all posts
Showing posts with label ಸತ್ಯಬೋಧಾರ್ಯರ satyabodha charitre ಸತ್ಯಬೋಧ ಚರಿತ್ರೆ prasannashreenivasa satyabodha teertha stutih. Show all posts

Thursday 5 August 2021

ಸತ್ಯಬೋಧಾರ್ಯರ satyabodha charitre ಸತ್ಯಬೋಧ ಚರಿತ್ರೆ ankita prasannashreenivasa satyabodha teertha stutih

 ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಪ್ರಥಮ ಕೀರ್ತನೆ

ಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿ

ಸತತ ಶರಣಾದೆ ನಾಹಿತದಿ ಪಾಲಿಪರು

ಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನ

ವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪ


ಹಂಸನಾಮಕ ವಿಷ್ಣು ವನರುಹಾಸನ ಸನಕ

ದೂರ್ವಾಸ ಮೊದಲಾದ ಗುರು ವಂಶಜಾತ

ದಶಪ್ರಮತಿ ಸರಸಿಜನಾಭ ನರಹರಿತೀರ್ಥ

ಬಿಸಜ ಚರಣಂಗಳಲಿ ಸತತ ನಾ ಶರಣು | 1

ಮಾಧವ ಅಕ್ಷೋಭ್ಯ ಜಯವಿದ್ಯಾಧಿರಾಜ ರಾ -

ಜೇಂದ್ರ ಕವೀಂದ್ರ ವಾಗೀಶ ರಾಮಚಂದ್ರ

ವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವ

ಸತಪೋನಿಧಿ ಯತಿವರ್ಯರಿಗೆ ನಮಿಪೆ 2

ವೇದಾಂತ ಕೋವಿದರು ರಘುನಾಥ ರಘುವರ್ಯ

ಪದವಾಕ್ಯತತ್ವಜ್ಞ ರಘೂತ್ತಮಾರ್ಯರಿಗೆ

ವೇದವ್ಯಾಸ ಯತಿಗಳಿಗೆ ವಿದ್ಯಾಧೀಶರಿಗೆ

ವೇದನಿಧಿಗಳಿಗೆ ನಾ ಬಾಗುವೆ ಶಿರವ 3

ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆ

ಸತ್ಯಭಿನವ ಸತ್ಯ ಪೂರ್ಣರಿಗೆ ನಮಿಪೆ

ಸತ್ಯವಿಜಯರಿಗೆ ಸತ್ಯಪ್ರಿಯ ಸತ್ಯಬೋಧರಿಗೆ

ಭೃತ್ಯ ನಾ ಎನ್ನ ವಂದನೆಗಳರ್ಪಿಸುವೆ 4

ಸತ್ಯಬೋಧರ ಮಹಿಮೆ ಬಹು ಬಹು ಬಹುಳವು

ವೇದ್ಯ ಎನಗೆ ಅತಿ ಸ್ವಲ್ಪ ಮಾತ್ರ

ಆದರಲ್ಲೂ ಬಿಟ್ಟದ್ದು ಬಹು ಇಲ್ಲಿ ಪೇಳಿಹುದು

ಅತಿ ಕಿಂಚಿತ್ ಅಣುಮಾತ್ರ ಸುಜನರು ಲಾಲಿಪುದು 5

ರಾಮಾಚಾರ್ಯರು ಸಣ್ಣ ವಯಸ್ಸಿನವರು

ನೇಮದಿಂದಾಶ್ರಮೋಚಿತ ಕರ್ಮಪರರು

ರಾಮ ಹಯಶೀರ್ಷ ನರಸಿಂಹನ ಗುಣರೂಪ

ಸಮ್ಮುದದಿ ಜ್ಞಾನಭಕ್ತಿಯಲಿ ಧ್ಯಾನಿಪರು 6

ಈ ರಾಯಚೂರು ರಾಮಾಚಾರ್ಯರೇ ಸತ್ಯಪ್ರಿಯ

ಗುರುಗಳ ಸಂಸ್ಥಾನ ಪೀಠಕ್ಕೆ ಬಂದು

ಸೂರಿವರ್ಯರು ಸತ್ಯಬೋಧ ತೀರ್ಥರು ಎಂದು

ಧರೆಯಲ್ಲಿ ಪ್ರಖ್ಯಾತರಾಗಿಹರು ಕರುಣಿ 7

ಬಾದರಾಯಣ ಮಾಧ್ವ ಸಚ್ಛಾಸ್ತ್ರ ಬೋಧಿಸಿ

ಅಧಿಕಾರಿಗಳ ಉದ್ಧರಿಸಿ ಅಲ್ಲಲ್ಲಿ

ವೇದ ವಿರುದ್ದ ದುರ್ವಾದಗಳ ಕತ್ತರಿಸಿ

ಮೇದಿನಿಸಜ್ಜನರ ಪೊರೆದಂಥ ಧೀರ 8

ಪೀಠ ಆರೋಹಿಸಿದ ಪೂರ್ವಗುರುಗಳ ಪೋಲು

ಮಠಕ್ಕೆ ಮಾನ್ಯಗಳ ಅಭರಣಗಳನ್ನ

ಪಟ್ಟಣ ಪ್ರಮುಖರು ಧನಿಕರು ಭೂಪಾಲರು

ಕೊಟ್ಟದ್ದು ಅಲ್ಲಲ್ಲಿ ಸ್ವೀಕರಿಸಿದರು 9

ಸತ್ಯಪ್ರಿಯರಾರಾಧನೆಗಾಗಿ ಬಂದಿದ್ದ

ಸತ್ಯಬೋಧರ ಮಹಿಮೆಯನ್ನು ಲೆಕ್ಕಿಸದೆ

ಬಂಧಿಸಿದ ಶ್ರೀಮಠವ ರಾಮೇಶ್ವರ ರಾಜ

ಬಂತು ಸೈನ್ಯವು ತಿರುಚಿನಾಪಳ್ಳಿಯಿಂದ 10

ತಿರುಚಿನಾಪಳ್ಳಿಯಿಂದ ಜಾನೋಜಿರಾವ್ ನಿಂಬಳ್

ಕಾರನು ಸೈನ್ಯವನು ಕಳುಹಿಸಿದನು

ವಿರೋಧ ಬಿಡುಗಡೆ ಮಾಡಿ ಆ ರಾಜನ್ನ ಶಿಕ್ಷಿಸಿ

ಗುರುಗಳ ಕರೆತಂದ ತಿರುಚಿನಾಪಳ್ಳಿಗೆ 11

ತಿರುಚಿನಾಪಳ್ಳಿಯ ಮ್ಲೇಛ್ಬರಾಜನು ಈ

ಗುರುಗಳ ಪ್ರಭಾವವ ಅರಿಯದೆ ಮೌಢ್ಯದಲಿ

ವರಧನಾಪಹಾರಿಯು ಎಂದು ಆಪಾದಿಸಿ

ನಿರೋಧಿಸಿದ ಶೋಧನೆ ಮಾಡುವ ನೆವದಿ 12

ಪರಿಶೋಧನೆಯಲ್ಲಿ ಮೈಲಿಗೆ ಆಗದಿರೆ

ಗುರುಗಳು ರಾಮದೇವರ ಪೆಟ್ಟಿಗೆಯ

ತಿರುಕಾಟ್ಟು ಪಳ್ಳೀಗೆ ಕಳುಹಿಸಿ ಉಪೋಷಣದಿ

ಹರಿಯ ಮಾನಸ ಪೂಜೆ ಮಾಡುತ ಕುಳಿತರು 13

ಜಾನೋಜಿರಾಯನು ವಾದಿಸೆ ಸುಲ್ತಾನ

ತನ್ನ ಸರ್ಕಾರ ಶೋಧಕರ ಕಳುಹಿಸಿದ

ತನ್ನ ಹಿರಿಯರ ಮತ್ತು ಇತರ ರಾಜರುಗಳ

ಚಿಹ್ನೆ ಮುದ್ರಿತ ಒಡವೆ ಮಾತ್ರವೆ ಕಂಡ 14

ವಿರೋಧ ನೀಗಿಸಿ ನಿಂಬಳ್ಕರನ ಕೈಯಿಂದ

ಹರಿ ಪೂಜೆ ಗುರು ಪೂಜೆ ಮಾಡಿಸಿ ಕಾಣಿಕೆಯು

ಗುರುತರದಿ ಅರ್ಪಿಸಿದ ಆ ಮ್ಲೇಛ್ಭರಾಜನು

ಗುರು ಸತ್ಯಬೋಧರ ಕೀರ್ತಿವರ್ಧಿಸಿತು 15

ತಿರುಕಾಟ್ಟುಪಳ್ಳಿಯಿಂದಲಿ ಪೂಜೆ ಪೆಟ್ಟಿಗೆಯ

ತರಿಸಿ ಹರಿಪೂಜೆಯ ಮಾಡಿ ಮುದದಿಂದ

ಮರ್ಯಾದೆ ಕಾಣಿಕೆಗಳಕೊಂಡು ದಿಗ್ವಿಜಯ

ಚರಿಸಿದರು ಹರಿಗುರು ತೀರ್ಥಸ್ಥಳಗಳಿಗೆ 16

ಮಾರ್ಗದಲಿ ತಂಜಾವೂರಿನ ರಾಜನು

ಶ್ರೀ ಗುರುಗಳಿಗೆ ಸೇವೆಸÀಲ್ಲಿಸಿದ

ನಗರದಲಿ ಪ್ರಮುಖ ಪಂಡಿತ ಗೋಸಾಯಿಯ

ನಿಗಮಾಂತ ವಾದದಲಿ ಸೋಲಿಸಿದರು 17

ಕುಂಭಕೋಣದಿ ಬ್ರಾಹ್ಮಣರ ಬೀದಿಯಲ್ಲಿ

ಗಂಭೀರತರ ದೊಡ್ಡ ಮಂಟಪ ಕಟ್ಟಿ

ಸಂಭ್ರಮದಿ ಹರಿಪೂಜೆಗೈದು ವಿದ್ವಜ್ಜನ

ಸಭೆಯಕೂಡಿ ವಾಕ್ಯಾರ್ಥ ನಡೆಸಿದರು 18

ಶ್ರೀರಂಗ ಕ್ಷೇತ್ರ ತಂಜಾವೂರು ತರುವಾಯ

ಸಾರಂಗಪಾಣಿ ಕುಂಭೇಶ್ವರ ಕ್ಷೇತ್ರ

ಪರಿಕಲ್ಲು ತಿರುಕೋಯಿಲೂರು ಮಾರ್ಗದಿ ಬಂದು

ಸೇರಿದರು ತಿರುಪತಿ ವೇಂಕಟಾಚಲಕ್ಕೆ 19

ಶ್ರೀರಂಗನಾಥನಿಗೆ ಶ್ರೀರಂಗನಾಯಕಿಗೆ

ಕ್ಷೀರಾಬ್ಧಿಯಲಿತೋರ್ದ ಧನ್ವಂತರಿಗೆ

ನೀರುಮಧ್ಯದಿ ಇರುವ ಜಂಬುಕೇಶ್ವರನಿಗೆ

ಭಾರಿ ಪುಣ್ಯದೆ ಕಾವೇರಿಗೆ ನಮಿಪೆ 20

ಶಾಙ್ರ್ಗಧರ ಚಕ್ರಧರ ಕುಂಭೇಶ್ವರ ಅಂಬ

ಮಂಗಳನಾಯಕಿ ವಿಜಯೀಂದ್ರರಿಗೆ

ನಾಗೇಶ್ವರನಿಗೆ ವಿದ್ಯುಪುರಿ ಶ್ರೀಶನಿಗೆ

ಭೃಗುಸುತಪತಿ ಶ್ರೀನಿವಾಸನಿಗೆ ನಮಿಪೆ 21

ಪರಿಕಲ್ಲು ಎಂಬುವ ಗ್ರಾಮದಲಿ ನರಸಿಂಹ

ಶ್ರೀರಮಾಪತಿ ಇಹನು ಸರ್ವೇಷ್ಟದಾತ

ಪರಿಪರಿ ಭಕ್ತರ ಪೀಡೆಗಳ ಪರಿಹರಿಪ

ಶರಣಾದೆ ಶ್ರೀ ಲಕ್ಷ್ಮಿ ನರಸಿಂಹನಲ್ಲಿ 22

ತಿರುಕೋಯಿಲೂರಲ್ಲಿ ಮೂರ್ಲೋಕ ಅಳೆದವನ

ಭಾರಿ ಆಲಯ ಉಂಟು ಶಿವಕುಮಾರರಿಗೂ

ಪಾತ್ರ ವಿಶಾಲವು ದಕ್ಷಿಣ ಪಿನಾಕಿನಿಯ

ತೀರದಲಿ ಶ್ರೀರಘೂತ್ತಮರು ಕುಳಿತಿಹರು 23

ಪಿನಾಕಜಾ ಈ ಪಿನಾಕಿಯಲ್ಲಿಹನು

ಅನಿಮಿತ್ತ ಬಂಧು ಶ್ರೀಕೇಶವ ಸರ್ವೇಶ

ಸ್ನಾನ ಜಪದಾನಗಳು ಪಣ್ಯಪ್ರದತತ್ತೀರ

ವನದಲ್ಲಿ ಶ್ರೀ ರಘೂತ್ತಮರ ವೃಂದಾವನ 24

ಶ್ರೀಯುತ ತ್ರಿವಿಕ್ರಮ ವಿಶ್ವರೂಪಗೆ ನಮೋ

ಕಾತ್ಯಾಯನಿ ಶಿವಗೂ ಸ್ಕಂಧವಲ್ಲಿಗೂ

ಕಾಯವಾಕ್ಕು ಮನದಿ ಟೀಕಾ ಭಾವ ಬೋಧರಿಗೂ

ಕಾಯಮನ ಶುದ್ಧಿಕರ ಪಿನಾಕಿನಿಗೂ ನಮಿಪೆ 25

ತಿರುಕೋಯಿಲೂರಿಗೆ ಕ್ರೋಶತ್ರಯದೊಳಗೇವೆ

ವೀರ ಚೋಳಪುರದಲ್ಲಿ ಶ್ರೀ ಸತ್ಯನಾಥ

ತೀರ್ಥರು ಅಭಿನವ ಚಂದ್ರಿಕಾಕಾರರು

ಇರುತಿಹರು ವೃಂದಾವನದಲ್ಲಿ ವಂದೇ 26

ತಿರುಕೋಯಿಲೂರಿಂದ ತಿರುವಣ್ಣಾಮಲೆಯೆಂಬ

ಅರುಣಾಚಲಕೆ ಪೋಗಿ ಅಲ್ಲಿ ರಾಜಿಸುವ

ಕರುಣಾಬ್ಧಿ ಗಿರಿಜಾರಮಣನ್ನ ವಂದಿಸಿ

ತಿರುಪತಿಗೆ ಹೊರಟರು ಗುರುಸರ್ವಭೌಮ 27

ಹೇಮಗರ್ಭನ ತಾತ ಶ್ರಿಪತಿ ಜಗನ್ನಾಥ

ಆಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸ

ರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆ

ನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 28 

***


kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ದ್ವಿತೀಯ ಕೀರ್ತನೆ

ಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿ

ಸತತ ಶರಣಾದೆ ನಾಹಿತದಿ ಪಾಲಿಪರು

ಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನ

ವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪ


ವೇಲೂರು ಚಿತ್ತೂರು ಚಂದ್ರಗಿರಿ ಮಾರ್ಗದಲಿ

ಅಲ್ಲಲ್ಲಿ ಪ್ರಮುಖ ಭೂಪಾಲರ ಕೈಯಿಂದ

ಬಲು ಭಕ್ತಿಯುತ ಪೂಜೆ ಮರ್ಯಾದೆಕೊಂಡು

ವ್ಯಾಳಗಿರಿ ವೇಂಕಟನ ತಿರುಪತಿ ಸೇರಿದರು 1

ತಿರುಪತಿಯಲಿ ಹನುಮದಾದಿ ಲಕ್ಷ್ಮಣ ಸೇವ್ಯ

ಶ್ರೀರಾಮಸೀತಾ ಸಮೇತನಿಗೆ ನಮಿಪೆ

ಉರುಗೇಶಶಯ್ಯ ಶ್ರೀ ಗೋವಿಂದರಾಜನಿಗು

ಶಿರಬಾಗುವೆ ಶ್ರೀ ಲಕ್ಷ್ಮೀಗೂ ಸತತ 2

ಒಂದು ಗಾವುದ ದೂರದೊಳಗೇವೆ ಇರುತಿಹುದು

ಪದ್ಮ ಸರೋವರವು ತತ್ತೀರದಲ್ಲಿ

ವೇದವಿಗ್ರಹ ಘೃಣಿ ಆದಿತ್ಯ ಸೂರ್ಯನು

ನಿಂತಿಹನು ಸರ್ವೇಷ್ಟ ಶ್ರೀದವೃಷ್ಟಿದನು 3


ಸಮೀಪದಲಿ ದೊಡ್ಡ ಆಲಯವಿಹುದಲ್ಲಿ

ಬೊಮ್ಮದಿ ಸುಮನಸಾರ್ಚಿತ ಕೃಷ್ಣ ಅಣ್ಣ

ರಾಮನ ಸಹಕುಳಿತು ವಂದಿಸುವ ಸಜ್ಜನರ

ಕ್ಷೇಮಲಾಭವ ಸದಾ ಪಾಲಿಸುತಿಹನು 4

ದಕ್ಷಪಾಶ್ರ್ವದ ಗುಡಿಯಲ್ಲಿ ಸುಂದರರಾಜ

ಲಕ್ಷ್ಮೀಸಮೇತನು ಕಾರುಣ್ಯ ಶರಧಿ

ಪಕ್ಷ್ಮಗಳು ಅಕ್ಷಿಗಳ ರಕ್ಷಿಸುವ ತೆರದಲ್ಲಿ

ವಿಷ್ಣು ಭಕ್ತರ ಸದಾಕಾಯುತಿಹನು 5

ಕೃಷ್ಣನಾಲಯ ವಾಮಪಾಶ್ರ್ವ ಮಂದಿರದಲ್ಲಿ

ವನಜ ಆಸನದಲ್ಲಿ ಶ್ರೀ ಪದ್ಮಾವತಿಯು

ದೀನ ಕರುಣಾಕರಿಯು ವರ ಅಭಯ ನೀಡುತ್ತ

ಶ್ರೀನಿವಾಸನ ಬದಿಯಲ್ಲಿ ಕುಳಿತಿಹಳು 6

ದ್ವಾದಶಾಕ್ಷರ ಕಮಲವಾಸಿನಿ ಮಂತ್ರಪ್ರತಿ

ಪಾದ್ಯಳು ಪದ್ಮಾವತಿ ಕಮಲವಾಸಿನಿಯು

ಪದ್ಮಲೋಚನೆ ಸರ್ವಾಲಂಕಾರ ಸಂಪನ್ನೆ

ಸದಾಯೆಮ್ಮ ಪಾಲಿಸುವಳಿಗೆ ನಮೋ ಎಂಬೆ 7

ವೇಂಕಟಾಚಲದ ಅಡಿವಾರದಲಿ ಇರುತಿದೆ

ಅಕಳಂಕ ಸುಪವಿತ್ರ ಕಪಿಲತೀರ್ಥ

ಲಿಂಗ ಆಕಾರದಲಿ ಕಪಿಲೇಶ್ವರ ಇಹನು

ಬಾಗುವೆ ಶಿರ ಶಿವಗು ಉಮಾಮಹೇಶ್ವರಿಗೂ 8

ಕಪಿಲೇಶ್ವರಾನುಗ್ರಹದಿಂದ ಗಿರಿ ಏರಿ

ಗೋಪುರಾಲಯದಲ್ಲಿ ನೃಸಿಂಹನ ನಮಿಸಿ

ಶ್ರೀಪ ವರಾಹ ವೇಂಕಟನ ಕಾಣಿಸುವಂತ

ಆ ಭೇಟಿ ಹನುಮನಿಗೆ ಶರಣು ಶರಣೆಂಬೆ 9

ಸ್ವಾಮಿವೇಂಕಟನ ಆಲಯದ ಗೋಪುರಕಂಡು

ಸ್ಮರಿಸಿದ ಮಾತ್ರದಲೆ ಪಾಪ ನೀಗಿಸುವ

ಸ್ವಾಮಿ ತೀರ್ಥಕು ಭೂರಾಹಕರುಣಾಬ್ಧಿಗೂ

ನಮಿಸುವೆ ಅಶ್ವತ್ಥನಾರಾಯಣಗು 10

ಕಪಿಲೇಶ್ವರಾನುಗ್ರಹದಿ ಹನುಮಂತನ

ಅ ಪವನಜನ ದಯದಿ ಭೂಧರಾ ವರಾಹನ

ಪುಷ್ಪಭವ ಪೂಜಿತ ಶ್ರೀ ಶ್ರೀನಿವಾಸನ

ಶ್ರೀ ಪದ್ಮ ಪದಯುಗದಿ ಶರಣು ಶರಣಾದೆ 11

ಶ್ರೀವಕ್ಷ ವೇಂಕಟೇಶನ್ನ ಧ್ಯಾನಿಸಿ ನಮಿಪೆ

ದೇವ ದೇವ ಶಿಖಾಮಣಿ ಕೃಪಾನಿಧಿ ಸುಹೃದ

ನವರತ್ನ ಖಚಿತ ಆಭರಣ ಕಿರೀಟಿಯು

ಶಿವದ ವರ ಅಭಯ ಕರಕಟಿ ಚಕ್ರಿಶಂಖಿ 12

ಭಕ್ತವತ್ಸಲ ದಯಾನಿಧಿ ಶ್ರೀನಿವಾಸನ್ನ

ಸತ್ಯಬೋಧತೀರ್ಥಾರ್ಯರು ವಂದಿಸಿ ಸುತ್ತಿಸಿ

ಆ ದೇವಸ್ಥಾನದಲಿ ಮಾರ್ಯಾದೆಗಳ್ ಕೊಂಡು

ಪದುಮ ಸರೋವರಾಲಯಗಳ ಐದಿದರು 13

ವೇಂಕಟಗಿರಿಯಿಂದ ಕರ್ನೂಲು ಗದ್ವಾಲ

ಪೋಗಿ ಸತ್ತತ್ವ ಸಿದ್ಧಾಂತವ ಬೋಧಿಸಿ

ಭಕುತರಿಗೆ ದರ್ಶನ ಉಪದೇಶ ಕೊಟ್ಟರು

ಮಾರ್ಗದಲಿ ಹನುಮಂತ ಕ್ಷೇತ್ರ ಇಹುದು 14

ಕ್ಷೇತ್ರಗಂಡಿಗ್ರಾಮ ತತ್ರಸ್ಥ ಹನುಮನಿಗೆ

ಶರಣೆಂಬೆ ಸ್ಮರಿಸಲು ಬುದ್ಧಿರ್ಬಲ ಯಶಸ್ಸು

ಧೈರ್ಯವು ನಿರ್ಭಯತ್ವವು ಆರೋಗ್ಯವು

ದೊರೆಯುವುದು ನಿಶ್ಚಯ ಆಜಾಡ್ಯ ವಾಕ್ಪಟುತ್ವ 15

ಹೇಮಗರ್ಭನ ತಾತ ಶ್ರಿಪತಿ ಜಗನ್ನಾಥ

ಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸ

ರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆ

ನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 16 

|| ಇತಿ ದ್ವಿತಿಯ ಕೀರ್ತನೆ ||

***

missing keertane part 3 ?

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಚತುರ್ಥ ಕೀರ್ತನೆ

ಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿ

ಸತತ ಶರಣಾದೆ ನಾಹಿತದಿ ಪಾಲಿಪರು

ಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನ

ವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪ


ಸತ್ಯಬೋಧಾರ್ಯರು ಭಾಗೀರಥಿ ಕುರಿತು

ಯಾತ್ರೆ ಮಾಡಲು ಮನದಿ ಯೋಚಿಸುತಲಿದ್ದಾಗ

ಇದ್ದ ಕಡೆಯಲ್ಲೆ ಗಂಗಾ ಬಂದು ಒದಗುವಳು

ಎಂದು ಸ್ವಪ್ನವು ಆಯಿತು ಅಂದು ರಾತ್ರಿಯಲಿ 1

ಶ್ರೀ ಮಠಕ್ಕೆ ಅರ್ಧಗಾವುದ ದೂರ ಇರುವಂಥ

ಭೂಮಿಯಲಿ ಕೃಷಿಕೂಪ ಬಹು ದೊಡ್ಡದಲ್ಲಿ

ಸಮೀಪಸ್ತ ಔದುಂಬರ ತರು ಮೂಲದಿಂ

ಅಮರ ತಟನೀ ಬರುವ ವೇಳೆಯು ತಿಳಿಯಿತು 2

ಶ್ರೀಗುರು ನವಾಬನಿಗೂ ಖಂಡೇರಾಯನಿಗು

ನಗರ ಜನರಿಗು ತಿಳಿಸಿ ಆ ಸ್ಥಳಕ್ಕೆ ಪೋಗೆ

ಗಂಗಾವತರಣವು ಆಯಿತು ಸೂಚಿತವೇಳೆ

ಕಂಗೊಳಿಸುವ ಬಾಗೀರಥೀ ಧಾರಾಸುರಿದು 3

ತ್ರಿವಿಕ್ರಮ ಸುಪಾದಜಾ ತ್ರಿಜಗತ್ ಪಾವನಿಗಂಗಾ

ತ್ರಿದಶೇಶ್ವರಿ ನಳಿನಿ ಸೀತಾನಮಸ್ತೆ

ತ್ರಾಹಿ ಜಾಹ್ನವಿ ಭಾಗೀರಥೀ ನಮೋ ಭೋಗವತಿ

ತ್ರಿಪಥ್‍ಗಾಮಿನಿ ಪಾಹಿ ಮಾಲತಿ ನಂದಿನಿ 4

ನವಾಬನು ಮಂತ್ರಿಯು ನೆರೆದಿದ್ದ ಜನರೆಲ್ಲ

ದೇವ ತಟಿನಿ ಧಾರಾ ಸುರಿದದ್ದು ನೋಡಿ

ದೈವೀಕ ಈ ಮಹಿಮೆ ಕೊಂಡಾಡಿ ಸ್ನಾನಜಪ

ಸೇವೆದಾನಾದಿಗಳ ಮಾಡಿದರು ಮುದದಿ 5

ವಿಷ್ಣುತೀರ್ಥ ಎಂಬ ನಾಮ ಈ ತೀರ್ಥಕ್ಕೆ

ವಿಷ್ಣು ಭಕ್ತಾಗ್ರಣಿ ಸದಾಶಿವನ ಲಿಂಗ

ವಿಷ್ಣು ತೀರ್ಥದ ದಡದಿ ಇಹುದು ಶರಣೆಂಬೆ

ವಿಷ್ಣು ್ವಂಘ್ರಿ ಜಾತೆಗೂ ಉಮೇಶನಿಗೂ ಶ್ರೀಶಗೂ 6

ಶ್ರೀ ಸತ್ಯಬೋಧರು ಗಂಗೆಯ ತರಿಸಿದ್ದು

ಶ್ರೀ ಸತ್ಯಬೋಧರ ಬಹು ಇಂಥ ಮಹಿಮೆ

ವಸುಮತಿಯಲಿ ಹರಡಿ ದೇಶ ದೇಶಗಳಿಂದ

ಭೂಸುರರು ಸಜ್ಜನರು ಬಂದು ಸೇವಿಪರು 7

ಪಟ್ಟಣದ ಮಧ್ಯದಿ ನವಾಬ ಕೊಡಿಸಿದ ಸ್ಥಳದಿ

ಕಟ್ಟಡವು ಶ್ರೀಮಠ ವಿಸ್ತಾರವಾದ್ದು

ಮಠದಲ್ಲೇ ಉಂಟೊಂದು ಸೋಪಾನ ಭಾವಿಯು

ಕಟ್ಟೆಯಲಿ ಶಿವಲಿಂಗ ಭಾವಿಯಲಿ ಗಂಗಾ 8

ಭೃಗು ಅಂಶ ವಿಜಯದಾಸಾರ್ಯರ ಪ್ರಭಾವವು

ಏಕದಂತಾಂಶ ಗೋಪಾಲ ದಾಸಾರ್ಯರ ಪ್ರಭಾವ

ಭಾಗಣ್ಣಾನುಜರು ಈರ್ವರು ಪ್ರಭಾವವ

ಶ್ರೀ ಗುರುಗಳು ಮೆಚ್ಚಿ ಮಾನ್ಯ ಮಾಡಿದರು 9

ವಿದ್ವತ್ಸ್‍ಭೆಯಲಿ ಗೋಪಾಲದಾಸಾರ್ಯರು

ಆ ದಾಸವರ್ಯರ ಅನುಜರು ಈರ್ವರು

ದೇವತಾಂಶದವರು ಅಪರೋಕ್ಷ ಪ್ರಚುರರು

ಎಂದು ಜನರಿಗೆ ನಿದರ್ಶನ ತೋರಿಸಿದರು 10

ವಿಠ್ಠಲ ನೃಹರಿವ್ಯಾಸ ಶ್ರೀಸಹ ವೇಂಕಟರಾಮ

ಘೋಟಕಾಸ್ಯ ಮಧ್ವೇಶನ್ನರಾಧಿಪಂತ

ಮಠದಲ್ಲಿ ಜಗನ್ನಾಥ ದಾಸಾರ್ಯರ ಸೇವೆ

ಕೊಂಡು ಬಹು ಪ್ರೀತಿಯಲಿ ಅನುಗ್ರಹ ಮಾಡಿಹರು 11

ಅಮಲ ವೈದಿಕ ತತ್ವ ಮಧ್ವಸಿದ್ಧಾಂತವ

ಭೂಮಿ ದೇವರಿಗೆ ಬೋಧಿಸಿ ಸರ್ವಜನರ್ಗು

ಕ್ಷೇಮ ಒದಗಿಸಿ ರಮಾಕಾಂತನ್ನ ಸ್ಮರಿಸುತ

ಈ ಮಹಿಯೋಳ್ ಸರ್ವಜನ ಪ್ರಿಯತಮರಾಗಿಹರು 12

ಒಳ್ಳೆರೀತಿಯಲಿ ಚತ್ವಾರಿ ವತ್ಸರ ಮಠ

ಆಳಿ ಶಾಲಿಶಕ ಹದಿನೇಳ್ ನೂರೈದು

ಫಾಲ್ಗುಣ ಕೃಷ್ಣ ಪ್ರತಿಪದ ದಿನ ಹರಿಧ್ಯಾನ

ದಲ್ಲಿ ಕುಳಿತರು ಲೋಕ ಚಟುವಟಿಕೆ ತೊರೆದು 13

ಸತ್ಯಬೋಧರ ವೃಂದಾವನದಿ ಅವರೊಳಿಹನು

ಸತ್ಯಬೋಧಾಹ್ವಯನು ಶ್ರೀಸಹಹಯಾಸ್ಯ

ವಾತಸೇವಿತ ರಾಮಕೃಷ್ಣನೃಹರಿ ವ್ಯಾಸ

ಭೃತ್ಯವತ್ಸಲ ವಾಮದೇವನುತನಾಗಿ 14

ದರ್ಶನ ಪ್ರದಕ್ಷಿಣೆ ನಮನ ಪಾದೋದಕ

ಸಂಸ್ಕøತಿ ಸುಚರಿತ್ರೆ ಪಾರಾಯಣ

ಸಚ್ಛಾಸ್ತ್ರ ಪ್ರವಚನ ಜಪತಪದಾನಾದಿಗಳು

ವಾಂಛಿತಪ್ರದ ಸರ್ವ ಪೀಡಹರವು 15

ಪುತ್ರಧನ ಆರೋಗ್ಯ ಆಯುಷ್ಯ ಮಾಂಗಲ್ಯ

ತಾಪತ್ರಯ ಪರಿಹಾರ ರೋಗ ನಿವೃತ್ತಿ

ಕ್ಷಿಪ್ರಲಭಿಸುವುವು ಹರಿಗುರುಗಳ ದಯದಿಂದ

ಸುಶ್ರವಣ ಪಠನ ಈ ಗ್ರಂಥಮಾಳ್ಪರಿಗೆ 16

ಸತ್ಯಸಂಧಾರ್ಯರು ಮಹಾಮಹಿಮ ಶಿಷ್ಯರು

ಸತ್ಯಬೋಧರ ಆರಾಧನ ಭಕ್ತಿ

ಉತ್ಸಾಹದಿ ಮಾಡಿದರು ಅದ್ಯಾಪಿ ಸಹಸ್ರಾರು

ಭಕ್ತರು ಸೇವಿಸುತಿಹರು ಪ್ರೇಮದಲಿ 17

ಹೇಮಗರ್ಭನ ತಾತ ಶ್ರಿಪತಿ ಜಗನ್ನಾಥ

ಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸ

ರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆ

ನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 18 

|| ಇತಿ ಶ್ರೀ ಸತ್ಯಬೋಧ ಚರಿತ್ರೆ ಸಂಪೂರ್ಣಂ ||

***