Showing posts with label ಗುರುಭಕುತಿ ಪ್ರಧಾನ vijaya vittala suladi ಗುರುಮಹಾತ್ಮೆ ಸುಳಾದಿ GURU BHAKUTI PRADHANA GURU MAHATME SULADI. Show all posts
Showing posts with label ಗುರುಭಕುತಿ ಪ್ರಧಾನ vijaya vittala suladi ಗುರುಮಹಾತ್ಮೆ ಸುಳಾದಿ GURU BHAKUTI PRADHANA GURU MAHATME SULADI. Show all posts

Saturday, 24 July 2021

ಗುರುಭಕುತಿ ಪ್ರಧಾನ vijaya vittala ankita suladi ಗುರುಮಹಾತ್ಮೆ ಸುಳಾದಿ GURU BHAKUTI PRADHANA GURU MAHATME SULADI

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ 


 ಗುರುಮಹಾತ್ಮೆ ಸುಳಾದಿ 


 ರಾಗ ಪೂರ್ವಿಕಲ್ಯಾಣಿ 


 ಧ್ರುವತಾಳ 


ಗುರು ಭಕುತಿ ಪ್ರಧಾನ ಸಾಧನಾ

ಗುರು ಶುಶ್ರೂಷವೆ ಮಹಾ ಕರ್ಮನಾಶನಾ

ಗುರು ಉಪದೇಶವೆ ಜ್ಞಾನಮಾರ್ಗ

ಗುರು ಪ್ರಸಾದ ಲಿಂಗಭಂಗಕ್ಕೆ ಕಾರಣ ಭಕುತಿ

ಗುರು ಪರಮಾನುಗ್ರಹ ಮಾಡಿದಡಂ

ನಿರುತ ಪಾರವಾರ ತತ್ವ ಪ್ರಮೇಯ

ಕರತಳದೊಳಗಿದ್ದ ತೆರದಿಂ

ಅರುಹುವಾಗುವದು ಮಾನವಂಗೆ

ಸ್ವರೂಪ ಯೋಗ್ಯತಾದನಿತು ಗುರುಭಕುತಿ

ಗುರುಬಲ ವಂದೇ ಇದ್ದಡಂ

ಧರೆ ಎಲ್ಲ ಗೆಲ್ಲವಕ್ಕು ಆವಾಗಂ

ಗುರು ಕರುಣ ಪಡದಡಂ ಧನ್ಯನೊ

ಗುರುಧ್ಯಾನ ಮಾಳ್ಪದು ಜನರು

ಗುರು ಚರಣಾಬ್ಜ ಭೃಂಗನಾಗೋ

ಗುರುಗಳಿಗೆ ಸರಿಗಾಣೆನೊ

ಗುರು ವೊಲಿದಡೆ ಸರ್ವ ವಿದ್ಯಾ ಪ್ರಾಪ್ತಿ

ಗುರು ಮಂತ್ರ ಗುರೋರ್ಜಪ ಗುರುನಾಮ ಸ್ಮರಣೆ

ಹಿರಿದಾಗಿ ಕೈಕೊಂಡು ಸುಖಿಸುವದು ಜನರು

ಗುರು ಭವಾಂಬುಧಿ ದಾಟಿಪನು 

ಸಿರಿ  ವಿಜಯವಿಟ್ಠಲರೇಯನು 

ಗುರುವಿಲ್ಲದವನಿಗೆ ವಲಿಯನು ॥ 1 ॥ 


 ಮಟ್ಟತಾಳ 


ದುರುಳ ಏಕಲವ್ಯನು ಏಕಾಂತದಲೊಂದು

ಗುರು ಪ್ರತಿಮೆಯನ್ನು ನಿರ್ಮಾಣವ ಮಾಡಿ

ನಿರುತ ಭಕುತಿಯಿಂದ ಶಸ್ತ್ರಾಸ್ತ್ರವಿದ್ಯ

ಹರುಷೋನ್ನತದಿಂದ ಸಂಪಾದಿಸಿಕೊಂಡಾ

ಗುರು ಭಕುತಿಯಿಂದ ಮನುಜಗಾವಲ್ಲ್ಯಾಗೆ

ಸ್ಮರಿಸಿಬೇಡಿದ ವಿದ್ಯಾ ಪಾಲಿಸುವದೊ ಸತ್ಯ 

ಮರುಳು ದುರುಳನಾದರು ಕೇಳು ಮಾಡಿದ ವಿಶ್ವಾಸ

ಬರಿದೆಯಾಗದು ಕಾಣೊ ಮುಕ್ತಿವಂತರಿಗಿದೆ

ವರ ಮೂರುತಿ ನಮ್ಮ ವಿಜಯವಿಟ್ಠಲರೇಯಾ 

ಗುರುದ್ವಾರದಿಂದ ಪೊಳೆವಾ ಪಾಪವ ಕಳೆವಾ ॥ 2 ॥ 


 ತ್ರಿವಿಡಿತಾಳ 


ಗುರುಗಳು ವರ ಶಾಪ ಕೊಟ್ಟರಾದಡೆ ಅವನು

ಸುರ ನರೋರುಗ ಲೋಕ ತಿರುಗಿದರೆ ತೊಲಗುವದೆ

ಸರಸರನೆ ಒಂದೆ ಜನುಮದಲ್ಲಿ ತಿಳಿವದಲ್ಲಾ

ಎರಡೊಂದು ಜನುಮಾಂತರದಲ್ಲಿ ಅನುಭವಾ

ಗುರು ಕರುಣವ ಮಾಡಿದಂತೆ ನಾನಾ ಭೋಗಾ

ಶರೀರವೆ ತೆತ್ತು ಉಣಬೇಕು ದ್ವಿವಿಧಾ

ಗುರುಪ್ರಸಾದದಿಂದ ಮರುತ ಮತವೆ ಪೊಂದಿ

ಚರಿಸುತಿಪ್ಪ ನರನ ನೋಡಿ ಜನರು

ಧರಿಸಲಾರದೆ ಮನುಜ ನುಡಿದರೇನಾಹದೊ

ಕರಣ ಶುದ್ಧವಿಲ್ಲದೆ ಕೆಟ್ಟು ಪೋಪಾ

ಗುರು ಕರುಣ ಬಂದು ಪಾವನ ಮಾಡಿದ ಮೇಲೆ

ದುರಿತದ ಭಯ ದೂಷಣೆ ಭಯವಿಲ್ಲಾ

ಅರರೆ ಅವರ ಆಂತಃಕರಣ ಆವಾವಾ

ಪರಿಯಲ್ಲಿಪ್ಪದೋ ದೂಷಿಸಬಾರದು

ವರ ಸತ್ಯವತಿಸೂನು ನಾನೂರು ಕೋಟಿ ಮೇ -

ಲೆರಡೊಂದು ಹತ್ತು ಕೋಟಿ ಗ್ರಂಥವ ಮಾಡಿರೆ

ಹಿರಿಯರು ಪೇಳಿದ ಮಾತಿಗೆ ಮನತೆಗೆದು

ಸರಿಬಾರದೆಂದಾಡುವನೇ ಮೂರ್ಖ

ಉರುಗಶಯನ ನಮ್ಮ ವಿಜಯವಿಟ್ಠಲರೇಯನ 

ಪುರವೆ ಬೇಕಾದರೆ ಉತ್ತಮ ಗುರುಬೇಕು ॥ 3 ॥ 


 ಅಟ್ಟತಾಳ 


ನದಿಯೊಳಗೊಂದು ಅಸ್ಥಿಯ ಹಾಕಿ ತನ್ನಯ

ಬದಿಯಲ್ಲಿದ್ದವರಿಗೆ ಮುಟ್ಟಬಾರದು ಬಂ -

ತಿದಕೆ ದೋಷವೆಂದು ಪೇಳಿದರಾ ಮಾತು

ಬುಧರು ಮೆಚ್ಚುವರೇನೊ ಕೇಳಿದಾಕ್ಷಣದಲ್ಲಿ

ಮುದದಿಂದಲಿ ತಮ್ಮ ಗುರುಗಳ ಪದಧ್ಯಾನ

ಹೃದಯದಲ್ಲಿಟ್ಟು ಪೇಳಿದ ಕಾಮ್ಯಕೆ ಲೇಸಾ

ತುದಿ ಮೊದಲಾದರು ಸಂಶಯ ಬರುವದೆ

ಉದಧಿಯಂತೆ ತುಂಬಿದೆ ನೋಡು ಸತ್ಕೀರ್ತಿ

ಪದೋಪದಿಗೆ ಭಗವಂತನ ಸಂಗಡ

ವಿಧಿ ತಪ್ಪದಲೆ ಆಡಿದ ಮಹಾತ್ಮರು

ನಿದರುಶನ ಇಲ್ಲದಲೆ ಹೇಳರು ಕಾಣೊ

ಎದೆಗುದ್ದಿಕೊಂಡು ಕಸವಿಸಿ ಬಟ್ಟರೆ

ಅದರಿಂದೇನಾಹೋದೊ ಮಿಥ್ಯಾವಾದವ್ಯಾಕೆ

ಸದನದೊಳಗೆ ತಾನು ಕಾಣದಿರೆ ಕುರುಡಾ

ಪದುಮಜಾಂಡ ಓರ್ವರು ಕಾಣರೆಂಬಂತೆ

ಮದಡ ಮಾನವನ ಅಟ್ಟಹಾಸವೇನೆಂಬೆ

ನದಿಗೆ ಚಾಂಡಾಲ ಯವನ ಕೋಟಿ ಸಮುದಾಯ

ಅಧಮರು ಬಂದು ನಿಂದಿಸಿ ಬೈದು ಕಾಲಿಲಿ

ವದೆದು ಉಗಳಿದರೆ ದೋಷ ನದಿಗೆ ಉಂಟೆ

ನದಿ ಸದೃಶವಾದ ಜ್ಞಾನಿಗೆ ಅಣಕವಾ -

ಡಿದರೆ ಅವಗಿನ್ನು ಕ್ಷುಣಿತಾ ಬರಲಿಲ್ಲಾ

ಮಧುವೈರಿ  ವಿಜಯವಿಟ್ಠಲನ ಪಾದಾಂಬುಜ

ಸದಮಲವಾಗಿ ಭಜಿಸುವರು ಗುರುವೆನ್ನೀ ॥ 4 ॥ 


 ಆದಿತಾಳ 


ವ್ಯಾಸಮುನಿಯ ಭಾವಗರ್ಭ

ಶ್ರೀಮದಾಚಾರ್ಯರು ಬಲ್ಲರಯ್ಯಾ

ವ್ಯಾಸಶಿಷ್ಯರ ಭಾವಗರ್ಭ 

ಜಯಮುನಿರಾಯ ಬಲ್ಲನಯ್ಯಾ

ಲೇಸು ಜಯಾರ್ಯರ ಭಾವಗರ್ಭ

ಮುನಿ ವ್ಯಾಸರಾಯ ಬಲ್ಲರಯ್ಯಾ

ವ್ಯಾಸರಾಯರ ಭಾವಗರ್ಭ 

ವಿಜಯೀಂದ್ರ ವಾದಿರಾಜರು ಬಲ್ಲರಯ್ಯಾ

ಈಸುಜನ ಬಲ್ಲದ್ದು ಕಾಣೊ ಎಣಿಸು

ಪುರಂದರದಾಸರ ಇವರೊಳು

ದೇಶದೊಳಗೆ ದಾಸರ ನಿಜ ಭಾವಗರ್ಭ

ಲೇಶಬಲ್ಲರು ಅವರ ಅನುಸಾರಿಗಳು 

ಶ್ರೀಶ ವಿಜಯವಿಟ್ಠಲರೇಯಾ 

ಕಾಶಿಯೊಳಗಿನ ಮಹಿಮೆ ಬಲ್ಲಾ ॥ 5 ॥ 


 ಜತೆ 


ನಮ್ಮ ಗುರುಗಳ ಕವನ ಮಿಥ್ಯಾಮತವೆಂದವನು

ಬೊಮ್ಮ ರಕ್ಕಸ ಕಾಣೊ ವಿಜಯವಿಟ್ಠಲ ಬಲ್ಲಾ ॥

****