ಆನೆ ಬಂದಿದೆ ಮುದ್ದಾನೆ ಗೋಪಿದೇವಿಯ l
ಗೃಹದೊಳಾಡುವ ಮರಿಯಾನೆ ll ಪ ll
ದೇವಕಿಯೊಳು ಪುಟ್ಟಿದಾನೆ ವಸು l
ದೇವನ ಬಳಿಯೊಳು ನಲಿದಾಡುತಾನೆ l
ಶ್ರೀ ವಾಸುದೇವನೆಂಬಾನೆ l
ಭಾವಿ ಬ್ರಹ್ಮಾದ್ಯಮರರು ಪೂಜಿಪ ಪಟ್ಟದಾನೆ ll 1 ll
ಪೂತನಿ ಅಸು ಹೀರಿದಾನೆ ಕಡು l
ಘಾತಕ ಶಕಟನ ಕಾಲಿಲೊದ್ದಾನೆ l
ವತ್ಸಾಸುರನ ಕೊಂದಾನೆ ಕೃಷ್ಣ l
ತೆತ್ತಿಸ ಗೋಪೇರ ವಡನಾಡಿದಾನೆ ll 2 ll
ಕಾಡಕಿಚ್ಚನು ನುಂಗಿದಾನೆ ಕೃಷ್ಣ l
ಕಡಹದ ಮರವನೇರಿ ಮಡುವು ಧುಮುಕಿದಾನೆ l
ಜೋಡಿಯಿಲ್ಲದೆ ಹೆಚ್ಚಿದಾನೆ ರಂಗ l
ಪೊಡವಿ ಗೋವಳರನ್ನು ಕಾಪಾಡಿದಾನೆ ll 3 ll
ಅಕ್ರೂರನೊಡನೆ ಬಂದಾನೆ ಮದ l
ಸೊಕ್ಕಿ ಬರುವ ಜಟ್ಟಿಯ ಮುರಿದಾನೆ l
ಡೊಂಕು ಕುಬ್ಜೆಗೆ ತಿದ್ದಿದಾನೆ ಮಾವ l
ಕಂಸನ ಕೊಂದು ತಾತನ ಪೊರೆದಾನೆ ll 4 ll
ತರುಳೆ ರುಕ್ಮಿಣಿಯ ತಂದಾನೆ ಬಹು l
ಕರುಣದಿ ಪಾಂಡವರನ್ನು ಕಾಯ್ದಾನೆ l
ವರವೇಲಾಪುರದಲಿಪ್ಪಾನೆ ರಂಗ l
ವರದಾದಿಕೇಶವನೆಂಬುವ ತಾನೆ ll 5 ll
***