ಶ್ರೀವಿಜಯದಾಸಾರ್ಯ ವಿರಚಿತ
ಶ್ರೀಕೃಷ್ಣ ಮಹಿಮಾ ಸುಳಾದಿ
ರಾಗ ಹಿಂದೋಳ
ಧ್ರುವತಾಳ
ದೇವಾ ನಿನ್ನ ಮಹಿಮೆಯನ್ಯಾವನರಿವನು
ಆವನ ಚರಣಕ್ಕೆ ಶರಣು ಎಂಬೆ
ಪಾವನಾಮೃತ ಸಂಜೀವನ ಈ ಶರೀರ
ಪಾವಿನ ತುಳಿದ ಪರಮ ಪುರುಷಾ
ಗೋವರ್ಧನಗಿರಿ ಪೂವಿನೋಪಾದಿಯಲ್ಲಿ
ಆ ವರುಷ ಗರಿಯಲು ಬೆರಳಲೆತ್ತಿ
ಗೋವಳರಾವುಗಳ ಪಾಲಿಸಿ ಗೀರ್ವಾಣ
ದೇವನ ಗರ್ವಾದ್ರಿ ಭಂಗಿಸಿದೆ
ಸೇವಕ ಜನರಿಗೆ ಆವಾಗ ಪಂಚಪ್ರಾಣ -
ವಾವನೋ ನಿನ್ನ ರಹಿತ ಈ ವಸುಧೆಯೊಳು
ಗೋವಿಂದ ಅಚ್ಯುತ ಕೇಶವ ಎಂತೆಂದು ನೆನಿಯದವನು
ಕೀವು ಮೊದಲಾದ ನರಕದಲ್ಲಿ ಬಿದ್ದು
ಸಾವು ಪುಟ್ಟಿಲ್ಲದೇ ಮಿಡುಕುವನು
ನಿವರ್ತಾತ್ಮ ನಾಮ ವಿಜಯವಿಟ್ಠಲ ನಿನ್ನ
ಕಾವ ಸೋಜಿಗವು ಸರ್ವರಿಗಸಾಧ್ಯ ॥ 1 ॥
ಮಟ್ಟತಾಳ
ಏನು ಪೇಳಲಿ ಇಂದು ನೀನು ಪಾಲಿಪ ಲೀಲೆ
ಮಾನವ ಮುನಿ ನಿರ್ಜರ ನಿಕರ ಬಲ್ಲದೆ
ನಾನು ನಾನು ಎಂದು ನಾನಾಕ ಜನ್ಮದಲ್ಲಿ
ಕೇಣಿಗೊಂಬುವ ಹೀನ ಕಾಣಲಾಪೆನೆ ನಿನ್ನ
ಶ್ವಾನಗೆ ಶ್ಯಾವಿಗೆ ಏನು ಉಣಿಸಿದರೇ
ತಾನುಂಡು ಸಂತೋಷವನು ಬಡಬಲ್ಲದೇ
ದೀನ ಜನೋದ್ಧಾರ ದೀನ ಜನಾಧಾರ
ದೀನವತ್ಸಲ ಧರ್ಮ ವಿಜಯವಿಟ್ಠಲರೇಯಾ
ನೀನು ಮಾಡುವ ಕರುಣ ನಾನೇನು ಬಲ್ಲೆನೊ ॥ 2 ॥
ತ್ರಿವಿಡಿತಾಳ
ನಿನ್ನ ಪ್ರಸನ್ನೀಕರಿಸಿಕೊಳ್ಳದ ನರನ -
ಜನ್ಮವೆ ಸುಡು ಸುಡು ಇನ್ನ್ಯಾತಕೆ ದೇಹ
ಎನ್ನ ಪೋಲುವ ಪಾಪಿಯನ್ನು ಅರಿಸಿದರೆ
ಅನಂತಾವಾನಂತದಲ್ಲಿ ಇಲ್ಲಾ
ಕಣ್ಣಿದ್ದು ಕುರುಡನಾಗಿ ದಾರಿ ನಡೆದ ಮೂ -
ರ್ಖನಂತೆ ಬದುಕಿದೆ ಘನ್ನ ಗರ್ವದಲ್ಲಿ
ಖಿನ್ನ ಸಂಸಾರದ ಮಣ್ಣಿನೊಳಗೆ ಹೊರಳಿ
ಭಿನ್ನ ಜ್ಞಾನದಲಿ ಸುಖಿಸುವೆನೋ
ಪೊನ್ನಾಂಬರನಯ್ಯಾ ವಿಜಯವಿಟ್ಠಲರೇಯಾ
ಬಣ್ಣಿಸಲಾಪೆನೆ ನಿನ್ನ ಪರಮ ಶಕ್ತಿ ॥ 3 ॥
ಅಟ್ಟತಾಳ
ವೀಂದ್ರವಾಹನ ರಾಮಚಂದ್ರನೆ ಗೋಕುಲ -
ಚಂದ್ರನೆ ಅಖಿಳ ಕಮಲಜಾಂಡವ ಸೂಜಿ -
ರಂಧ್ರದೊಳಗೆ ಪೊಗಿಸಿ ತೆಗೆವ ಮಾಯಾ
ಇಂದ್ರ ಸುರಾದ್ಯರು ಬಲ್ಲರೇನು ಉ -
ಪೇಂದ್ರ ನಿನ್ನಯ ತವ ಘಟಿತವು
ನಿಂದ್ರಲಾಪವೆ ವೇದಾ ಸ್ತುತಿಸಿ ಸಹಜವೆಂದು
ಇಂದ್ರಿಗಗೋಚರ ಚಂದ್ರಾರ್ಕನುತ ಸೈ -
ಳೇಂದ್ರಿಯ ಕಾಯ್ದಾ ಕಪಟನಾಟಕ ದೇವಾ -
ತೀಂದ್ರಿಯ ನಾಮ ಶ್ರಿವಿಜಯವಿಟ್ಠಲ ಸ -
ರ್ವೇಂದ್ರಿ ವ್ಯಾಪಾರಕ್ಕೆ ಮೀರಿದ ದೈವವೇ ॥ 4 ॥
ಆದಿತಾಳ
ಶ್ರೀಲಕುಮಿಗೆ ಪೇಳದೆ ಗಜೇಂದ್ರ ಕೇಳುವನಿತರೊಳು
ಆಲಸವಿಲ್ಲದ ಗಮನಾ ಆಳುಗಳು ಕೂಗಲು ನೀ
ಪಾಲಿಸುವ ಚತುರತನವೊ ಪೇಳಲೇನು ಬರುವ ಭಾರವ
ಬಾಲಲೋಲ ವಿನೋದನೆ ಕಾಲಕಾಲಕ್ಕೆ ನೆರೆನಂಬಿ -
ದಾಳುಗಳ ಭಾರಕರ್ತಾ ಮೂಲೋಕದೊಳಗೆ ನಿನ್ನ
ಆಳುತನ ಮಾಯಾಶಕ್ತಿ ಮೇಲೆ ಗಮನ ವ್ಯಾಪಾರದಿ
ಸ್ಥೂಲ ಸೂಕ್ಷ್ಮವೆಲ್ಲಾ ಭೇದ ಶ್ರೀಲೋಲ ನಿನ್ನ ಮಹಿಮೆ
ಹೇಳಿ ಕೇಳುವರ ಕರ್ನಕ್ಕೆ ಆಲಯದ ಮಧುರ ಪಾನಾ
ಮೇಲಗಿರಿ ತಿಮ್ಮಾ ಬ್ರಹ್ಮಾ ವಿಜಯವಿಟ್ಠಲ ದೇವಾ
ಸೋಲದವರೇ ನಿನಗಿಲ್ಲಾ ಕಾಲದೇಶ ಪಾತ್ರಪೂರ್ಣಾ ॥ 5 ॥
ಜತೆ
ಆವ ಧ್ಯಾನವೊ ನಿನ್ನದಾವ ಕ್ರೀಡಿಯೋ ತಿಳಿಯದು
ಆವ ನೂತನವು ಮಹಭೋಗಾ ವಿಜಯವಿಟ್ಠಲಾ ॥
***