Audio by Mrs. Nandini Sripad
ಶ್ರೀಗೋಪಾಲದಾಸಾರ್ಯ ವಿರಚಿತ ಸಾಧನ ಸುಳಾದಿ
(ದೇಹದಂಡನೆ ವ್ಯರ್ಥ. ದೇಹದಲ್ಲಿರುವ ಕ್ಷೇತ್ರಜ್ಞನನ್ನು ತಿಳಿ. ಜ್ಞಾನದಿಂದ ಗುರುಗತನಾದ ಬಿಂಬನ ಉಪಾಸನಾ ಮಾಡು. ಅಧ್ಯಾತ್ಮ ಅಧಿಷ್ಠಾನ ವಿವರ.)
ರಾಗ ನಾದನಾಮಕ್ರಿಯಾ
ಧ್ರುವತಾಳ
ಮೃತ್ತಿಕೆ ದೇಹವಿನ್ನು ವ್ಯರ್ಥ ಯಾತಕೆ ದಣಿಪೆ
ಅರ್ತುಕೊ ಇದೆ ವ್ಯಾಳ್ಯ ಗುರ್ತಕೊಡದೆ
ತೀರ್ಥಪಾದನ ಪಾದ ಕೀರ್ತನೆ ಮಾಡು ಮನದಿ
ಸ್ಪೂರ್ತಿಯ ಮಾಡುವನು ಸಾರ್ಥಕಾಗಿ
ರಾತ್ರಿಹಗಲು ನೀ ತ್ರಿಮೂರ್ತಿಯ ಮರಿಯದೆ
ಗಾತ್ರ ಉಪಯೋಗದ ಚಿಂತೆ ತೊರೆದು
ಅರ್ಥ ನಿನಗೆ ಮುಖ್ಯ ಅರ್ತುಕೊ ಆವದೆಂದು
ವಾರ್ತಿಯ ಬಿಡು ವೊಲಿಸ ಬೇಡ ಅನ್ಯ
ಶ್ರೋತ್ರ ಜಿಹ್ವೆ ನಾಶಿಕ ಮಾತ್ರದಿ ವಿಷಯದಲ್ಲಿ
ಆರ್ತು ಸ್ವಾದಿಸು ಎಲ್ಲ ಶ್ರೀಹರಿಯೆ ಮರೆತರೆ ಮರಿಯದೆ
ಆರ್ತರೆ ಅರಿದರೆಂಬೊ ಸ್ಪೂರ್ತಿ ಬರುತಿರಲೊ
ಆರ್ತನಾಗಿ ಶಾಸ್ತ್ರ ಪ್ರತಿಪಾದ್ಯವೆ ಮೂರುತಿ ತಿಳಿದು ಮನದಿ
ಸ್ತೋತ್ರವ ಮಾಡು ನೀ ಸತ್ಪಾತ್ರದಿಂದ
ಯಾತ್ರಿಯು ತೀರ್ಥಗಳು ಎಲ್ಲ ಇದರೊಳುಂಟು
ಮರ್ತು ಬಿಡಬೇಡವೊ ಶ್ರೀಹರಿಯ
ಕ್ಷೇತ್ರಜ್ಞ ನಮ್ಮ ಸಿರಿ ಗೋಪಾಲವಿಟ್ಠಲ
ಮೂರ್ತಿಮಂತನಾಗಿಪ್ಪನೊ ಎಲ್ಲ ಸ್ಥಳದಿ ॥ 1 ॥
ಮಟ್ಟತಾಳ
ಧನವು ಧನವು ಎನ್ನು ಧನದೊಳಗಿಪ್ಪನ್ನ
ನೆನೆದು ತೆಗೆದುಕೋ ಶೋಧನವು ಮಾಡಿ ನೋಡಿ
ತನುವಿಗೆ ಕೆಲಸವೀಡು ತನುಬಂಧಿಗಳ ನೋಡು
ಎಣಿಕೆ ತಟ್ಟು ಭಾಗವನು ಮಾಡು ನಾಲ್ಕು
ಎಣಿಸುತ ಅಲ್ಲಲ್ಲಿ ಇರು ಎಲ್ಲ ಸ್ಥಳದಿ
ಗುಣ ಹರಿಯದೆಂದು ಗುಪ್ತನಾಗಿ ಯಿನ್ನು
ಅಣು ಘನ ಪರಿಪೂರ್ಣ ಗೋಪಾಲವಿಟ್ಠಲ
ಅನಿಮಿತ್ತ ಬಂಧೆಂಬೋ ಗುಣವುಳ್ಳವನಾಗೊ ॥ 2 ॥
ರೂಪಕತಾಳ
ಒಂದು ಅರ್ಥವು ನಿನಗೆ ದೊರಕಿದರಾಯಿತೆ
ಚಂದಾದಿ ಚಿಂತಿಸು ಅನಂತ ಪರಿಯಲ್ಲಿ
ಒಂದು ಭಾಗ ದೇವಸಮುದಾಯಕ್ಕೆ ಕೊಡು
ಒಂದು ಭಾಗ ಪಿತರುಗಳಿಗೆ ಇನ್ನು ಮಾಡು
ಒಂದು ಭಾಗ ಪರಿವಾರ ಬಂಧುಗಳಿಗೆ
ಚಂದಾದಿ ಕೊಟ್ಟು ಆನಂದವ ವುಣು ಕಂಡ್ಯಾ
ನಂದಗೋಪಿಯ ಕಂದ ಗೋಪಾಲವಿಟ್ಠಲನ್ನ
ಚಂದಾದಿ ನಿನ್ನ ಮನ ಮಂದಿರದೊಳು ತಿಳಿ ॥ 3 ॥
ಝಂಪೆತಾಳ
ಜ್ಞಾನವೆ ಮುಖ್ಯಸಾಧನ ನಿನಗೆ ನೋಡು
ಏನು ಧನದಿಂದಾಗೆ ಕರ್ಮ ಆದರೊಳಗುಂಟು
ಪ್ರಾಣಹಿಂಸ ರಹಿತ ಕರ್ಮ ಮಾಡು ನಿತ್ಯ
ಶ್ರೀನಿವಾಸ ಅದಕೆ ಮೆಚ್ಚುವನು
ಜ್ಞಾನಮಯಕಾಯ ಗೋಪಾಲವಿಟ್ಠಲರೇಯ
ಕಾಮಿಸುವ ನಿನಗೆ ಕರುಣವು ಮಾಡಿ ನಿರುತಾ ॥ 4 ॥
ತ್ರಿವಿಡಿತಾಳ
ತನುವು ಮಂಟಪ ಮಾಡು ಮನವೇ ಪೀಠವ ಯಿಡು
ನೆನೆದು ಕುಳ್ಳಿಸು ನಿನ್ನ ವೊಳಗಿದ್ದ ಮೂರ್ತಿಯಾ
ಧ್ಯಾನ ಆವಾಹನಾದಿಗಳ ನೆನೆದು ಅಲ್ಲೆಯಿಪ್ಪ
ಅಣು ಮಹಾ ಮೂರ್ತಿಗೆ ಅಬಿಷೇಕವ ಮಾಡಿಸು
ಗುಣ ಮೂರರೊಳಗಿದ್ದಾ ಯೆನಿತಾವಾಹಿಸಿ ನೆನೆದು
ಜಿನಸು ವಸನಾಭರಣಾ ಧೂಪ ದೀಪವು ಮಾಡು
ನೆನಸು ಗಂಧಪುಷ್ಫವನು ಮಿಕ್ಕಾದದ್ದೆಲ್ಲ
ಗುಣ ಮೂರರಿಂದಾಗ ಪದಾರ್ಥಗಳನ್ನೆಲ್ಲ
ನಿನಗೆ ಒಂದು ಉದಕ ಮಾತ್ರ ದೊರಕಿದರೆ
ಇನಿತು ಪರಿಯು ಎಲ್ಲ ಅದರಿಂದ ಚಿಂತಿಸೋ
ಧನದ ಪೂಜೆಗೆ ಅತ್ಯಾಯಾಸ ಮಾಡಲಿ ಬೇಡ
ಘನದೈವಾ ನಮ್ಮ ಗೋಪಾಲವಿಟ್ಠಲರೇಯ
ನಿನಗೆಷ್ಟು ಪರಿಯಲ್ಲಿ ಪೊರೆವ ಅವನ ತಿಳಿ ॥ 5 ॥
ಅಟ್ಟತಾಳ
ಒಳಗೆ ಬಂದರೆ ನಿನ್ನ ವೊಳಗೆ ಇರುತಲಿಪ್ಪ
ಸುಳುವುತಿಪ್ಪ ನಿನ್ನ ಸುತ್ತು ಬಿಡದೆ ಇನ್ನು
ಹಲವು ಪರಿ ಕರ್ಮ ನಿನಗಾಗಿ ಮಾಡುತ
ಚಲುವ ನಿರ್ಲಿಪ್ತನ ತಿಳಿಯದೆ ಕೆಡುವಿ ಯಾಕೆ
ಸುಲಭವಾಗಿ ಕರತಳದೊಳಗಿದ್ದಂಥ
ಫಲವ ನೀ ಕಾಣದೆ ಬಲು ದಣಿವದೇನೊ
ಗೆಳೆಯನಾಗಿ ಪಾರ್ಥಗೊಲಿದ ನಮ್ಮ ಸ್ವಾಮಿ
ಚಲುವ ಗೋಪಾಲವಿಟ್ಠಲರೇಯನ ನೀನು
ಘಳಿಗೆ ಮರಿಯ ಬೇಡ ಬಲುಪ್ರೀಯಾ ಬಲುಪ್ರೀಯಾ ॥ 6 ॥
ಆದಿತಾಳ
ಈವಾಗ ಆವಾಗ ಎಂಬೋದು ಬೇಡವೊ
ದೇವನ ಸ್ಮರಣೆಯು ಭಾವದೆ ಕಾಲವು
ಪಾವನ ಜಲದಲ್ಲಿ ಆ ವಾಯು ವಿಪ್ರರು
ಆವಾ ಸೂರ್ಯ ಅಧಿಷ್ಠಾನದಲಿದ್ದು
ದೇವನ ಸ್ಮರಣೆಯು ಬರುತ ಇರಲಿ ಕಂಡ್ಯಾ
ಕಾವನು ಬಿಡದಿನ್ನು ಗೋಪಾಲವಿಟ್ಠಲಾ ॥ 7 ॥
ಜತೆ
ಗ್ರಹಮೇಧಿ ಮಾಡಿ ನಿನ್ನ ಗೃಹದೊಳು ಯಿಪ್ಪಂಥ
ಶ್ರೀಹರಿ ಗೋಪಾಲವಿಟ್ಠಲನ್ನ ನೆನಿ ಕಂಡ್ಯಾ ॥
****