ಸಾಧನಾ ಸುಳಾದಿ sadhnaa suladi
ಧೃವತಾಳ
ಸಾಧನೆವೆಂಬೋದಿದೆ ಜನ್ಮದಲ್ಲಿಯಲ್ಲದೆ
ನಿಧಾನದಿಂದಲಿ ತಿಳಿಯೆಲೊ ಮನವೆ
ಆದಾನಾದಿಕರ್ತ ನಾರಾಯಣನ ದಿವ್ಯಪಾದನಖದಲ್ಲಿದ್ದ
ಗುಣವೆ ಕೇಳಿ, ಆರಾಧನೆ
ಮಾಳ್ಪ ಉಪಾಯವೆಲ್ಲ
ನಿದಾನ ಮೊದಲಾದ ಕಾಯ ಬಂದಾಗ ಸಂಪಾದನೆ
ಪುಣ್ಯ ಉಂಟೆ ಇನಿತಾದರೂ ಓದನಗೋಸುಗ ವಿಚಿತ್ರ ತತ್ತ್ವಂಗಳು
ಕ್ರೋಧನರರ ಬಳಿಗೆ ಪೋಗಿ ಕೊಂಡಾಡಿ ದುರಾ
ರಾಧನೆಯಿಂದ ತಂದು ಕಾಲವನ್ನು ಕಳೆವೆ ಇದನಾದರು
ಕೇಳು ಸಿದ್ಧವಿಚಾರ ಪೂರ್ಣಬೋಧರ
ಮತವ ಸಾರಿ ಭಕುತಿಯಿಂದ
ಭೂ ಧನ ಹೇಮ ರಜತ ಉಂಟಾಗಿದ್ದರೆ ಭೂಮಿ
ಬುಧರ ನೋದಿ ಸಂತೋಷ ಪಡಿಸು
ನೀ ಧನವಿರಹಿತನಾದರೆ ಇಲ್ಲವೆಂದು
ರೋಧ ಹಚ್ಚಿಕೊಂಡು ಕೆಡಲಿಬೇಡ
ಬಾ ಧನವೆಂದರೆ ಮುಂದೆ ಬೀಳೋದೆ ಅಪರಾಧ
ನಡತಿಯಿಂದ ಭಾಗ್ಯನಾದಿದ್ದ ಸುಯೋಧನ
ಸರ್ವರಾಜ್ಯವಾಳಿದ್ದನ್ನ ನೋಡು
ಆದ ನರಕಕ್ಕೆ ತೆರೆವಿಲ್ಲವೆಂದೆಂದಿಗೂ
ವೇದನಾನಾಪುರಾಣಇತಿಹಾಸವಚನ ಪ್ರಸಾರನಾಗೆಂದು
ಪೇಳುತಿವಕೊ ಕೇಳೊ
ಭೂದಾನ ಬೇಡಿದ ವಿಜಯವಿಟ್ಠಲ ಮಧುಸೂಧನನಿರುತಿರೆ
ಅನ್ಯ ಹಂಬಲವೆ || ೧ ||
ಮಟ್ಟತಾಳ
ಕಲಿಯುಗದೊಳು ಕರ್ಮಂಗಳು ಬಲುಪರಿಯುಂಟು
ತಿಳಿದು ಮಾಡವನ್ಯಾರು ನೆಲೆಯ ಬಲ್ಲೆನೆಂದು
ಹಲವು ಬಗೆಯಿಂದ ಘಳಿಗೆ ಬಿಡದೆ ಕರ್ಮಾ
ವಳಿಗಳು ಮಾಡಲದರೊಳಗೆ ದುರಿತವಕ್ಕು
ಕಲಿಕಾಲಾವೆಗ್ಗಳಿಯರಿಗೆ ದೂರಜಲನಿಧಿಯೊಳು ಪೊಕ್ಕು
ನೆಲೆಯ ತಂದವರುಂಟೆ ಬಳಲದಿರು ವ್ಯರ್ಥ
ಕಲಿತಾಪಪರಿಹರ ವಿಜಯವಿಟ್ಠಲರೇಯನ
ಒಲಿಸಿ ಭಜಿಪುದಕ್ಕೆ ಸುಲಭಮಾರ್ಗ ಉಂಟು || ೨ ||
ತ್ರಿವಿದಿತಾಳ
ಬಲುಸುಲಭ ಬಲುಸುಲಭವಾಗಿದೆ ನೋಳ್ಪರಿಗೆ
ಛಳಿಗಾಳಿಮಳೆಸಿಡಿಲು ಬಂದರೆ ಬಿಡುವುದಿಲ್ಲ
ಹಳೆಯದಾಯಿತೆಂದು ಉದಾಸೀನಮಾಡಿ
ಕಳೆವುದಲ್ಲ ತಿರುಗಿಕೂಡುವುದಲ್ಲ
ಬೆಲೆಗೆ ತರುವುದಲ್ಲ ಭಯಕೆ ಹುಳುವುದಲ್ಲ
ಬಲವಂತರಿಗೆ ಕೊಟ್ಟು ಮಾರಿಬರುವುದಲ್ಲ
ಕೆಲವು ದಿವಸ ಇದ್ದು ಓಡಿಹೋಗುವುದಲ್ಲ
ಬಳಲಿಕೆಯಾಗಿ ಸಾಕೆಂಬೊದಲ್ಲ
ಫಲವಾದರೂ ವೆಗ್ಗಳವಾಗಿ ಬರುತಿದೆ
ಹಲವು ಜನ್ಮದ ಪಾಪಪರ್ವತಕೆ
ಕುಳಿಶವಾಗಿಪ್ಪದು ನಂಬಿದ ಭಕುತರ
ಕುಲಕೋಟಿ ಉದ್ಧಾರ ಎಲೊ ಮನವೆ
ಸಲೆ ನಂಬು ವಿಜಯವಿಟ್ಠಲರೇಯನ ನಾಮ
ಘಳಿಗೆ ನೆನೆಯೆ ತನ್ನ ಬಳಿಯಲ್ಲೆ ವೈಕುಂಠ || ೩ ||
ಅಟ್ಟತಾಳ
ಶತಕೋಟಿ ಜನ್ಮವು ಸತತ ಮಜ್ಜನಾದಿ
ವ್ರತಗಳು ಮಾಡಲು ಗತಿಗೆ ಸಾಧನವಲ್ಲ
ಹಿತವಾಗಿ ಇಪ್ಪದು ಅಮೃತ ಕುಡಿದಂತೆ ಶೃ
ಪತಿಯ ಮಂಗಳನಾಮ ಮತಿಯಲ್ಲಿ ಸ್ಮರಿಸಿ ಶಾ
ಶ್ವತವೆಸಗಿದ ಪಾಪ ಪತನವಾಗುವುದು ಸಂತತಿಸಹಿತಕೆ ಬೇಗ
ಶತಪತ್ರನೇತ್ರ ಶ್ರೀವಿಜಯವಿಠಲ ಸಾರಥಿಯಾಗುವನು
ತರಿತದಲ್ಲಿ ಬಂದು || ೪ ||
ಆದಿತಾಳ
ಹರಿನಾಮದ ಮಹಿಮೆಯ ಅರಿದವನಾರು ಮನವೆ
ಮರಳೆ ಸಂಸಾರವೆಂಬೊ ತರುವಿನ ಬೇರುಸರ್ವ
ಧರೆ ಗಗನ ಪಾತಾಳ ಸುತ್ತಲು ಭೇದಿಸಿದರೆ
ಮರದೊಮ್ಮೆ ನೆನೆದರೆ ಎಲ್ಲಿದ್ದರೂ ಬಂದು
ಭರದಿಂದ ಕಿತ್ತಿ ಭವನ ತರುವಿನ ಪೆಸರನ್ನು
ಇರಗೊಡದಂತೆ ಮಾಡಿ ಮುಂದೆ ಸಾಕುತಿಪ್ಪದು
ಹರಿನಾಮ ಹರಿನಾಮ ದುರಿತರಾಶಿಗೆ ಭೀಮ
ಹರಿನಾಮ ಒಂದಕ್ಕೆ ಅನಂತಬಗೆಕರ್ಮಸರಿಬಾರವು
ಕಾಣೊ ಇದಕೆ ಸಂಶಯವ್ಯಾಕೆ
ಹರಿನಾಮವೆ ತೊರೆದು ಕರ್ಮ ಮಾಡಲು ದೋಷಕರಗದು
ಕರಗದು ಹಿಮ್ಮೆಟ್ಟಿ ಪೋಗದು
ಹರಿನಾಮದಲಿ ಪ್ರೀತಿ ಇಟ್ಟು ಕರ್ಮವ
ತೊರೆದರೆ ಪಾಪಲೇಶವಿಲ್ಲ ಫಲವಕ್ಕು
ಸುರಗುರುವಿಜಯವಿಟ್ಠಲರೇಯನ ನಾಮ
ಸ್ಮರಿಸಿದ ಮನುಜಂಗೆ ಸ್ಥಿರವೆನ್ನು ಜ್ಞಾನ ಭಕ್ತಿ || ೫ ||
ಜತೆ
ಮನವೆ ಈ ಜನುಮ ತಪ್ಪಿದಮೇಲೆ ಆವ ಸಾಧನವು
ನಿಶ್ಚಯವಿಲ್ಲ ವಿಜಯವಿಟ್ಠಲನ ಕಾಣೋ || ೬ ||
********