Showing posts with label ಯೋಗಾನಂದ ನರಹರಿ ರಾಮಪ್ರಿಯತಮರು prasannashreenivasa. Show all posts
Showing posts with label ಯೋಗಾನಂದ ನರಹರಿ ರಾಮಪ್ರಿಯತಮರು prasannashreenivasa. Show all posts

Thursday, 5 August 2021

ಯೋಗಾನಂದ ನರಹರಿ ರಾಮಪ್ರಿಯತಮರು ankita prasannashreenivasa

..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ನರಹರಿ ತೀರ್ಥ ವಿಜಯ - ಪ್ರಥಮ ಕೀರ್ತನೆ


ಯೋಗಾನಂದ ನರಹರಿ ರಾಮಪ್ರಿಯತಮರು

ಯೋಗಿವರ ನರಹರಿತೀರ್ಥರ ಪಾದ

ಯುಗ್ಮ ವನರುಹದಿ ನಾ ಶರಣಾದೆ ಸಂತತ

ಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪ


ಅಶೇಷ ಗುಣಗಣಾಧಾರ ವಿಭು ಶ್ರೀ ರಮಣ

ಹಂಸ ನಾಮಕ ಪರಮಾತ್ಮನಿಗೆ ನಮಿಪೆ

ಹಂಸ ಬೋಧಿತ ವಿಧಿಗೆ ತತ್ ಶಿಷ್ಯ ಸನಕಾದಿ

ವಂಶಜ ಗುರುಗಳು ಸರ್ವರಿಗು ನಮಿಪೆ 1

ಅಚ್ಯುತ ಪ್ರೇಕ್ಷಾಖ್ಯ ಪುರುಷೋತ್ತಮಾರ್ಯ ಕರ

ತೋಯಜೋತ್ಪನ್ನ ಆನಂದ ತೀರ್ಥರಿಗೆ

ಕಾಯ ವಾಙ್ಞನದಿಂದ ಶರಣಾದೆ ಸಂತತ

ತೋಯಜ ಭವಾಂಡದ ಸಜ್ಜನೋದ್ಧಾರ 2

ಶ್ರೀವರ ವೇದವ್ಯಾಸನವತಾರಕನುಸರಿಸಿ

ಭಾವಿ ಬ್ರಹ್ಮನು ಮುಖ್ಯ ವಾಯುದೇವ

ದೇವೀ ಜಯಾ ಸಂಕರ್ಷಣಾತ್ಮಜನು ಈ

ಭುವಿಯಲ್ಲಿ ತೋರಿಹ ಆನಂದ ತೀರ್ಥ 3

ಮಾಲೋಲ ಶ್ರೀ ರಾಮಕೃಷ್ಣ ಪ್ರೀತಿಗಾಗಿಯೇ

ಬಲ ಕಾರ್ಯ ಮಾಡಿದ ಹನುಮಂತ ಭೀಮ

ಕಲಿಯುಗದಿ ಈ ಭೀಮ ಅವತಾರ ಮಾಡಿಹನು

ಕಲಿ ಮಲಾಪಹ ಜಗದ್ಗುರು ಮಧ್ವನಾಗಿ 4

ಶ್ರೀ ಮಧ್ವ ಅನಂತ ತೀರ್ಥಕರ ಅಬ್ಜಜರು

ಪದ್ಮನಾಭ ನೃಹರಿ ಮಾಧವಾಕ್ಷೋಭ್ಯ

ಈ ಮಹಾ ಗುರುಗಳು ಸರ್ವರಿಗು ಆ ನಮಿಪೆ

ಸುಮನಸ ಶ್ರೇಷ್ಠರು ಮಹಿಯಲ್ಲಿ ಪುಟ್ಟಿಹರು 5

ಶ್ರೀ ಮಹಾ ಪುರುಷೋತ್ತಮದಾಸರೆಂದೆನಿಪ

ಶ್ರೀ ಮಧ್ವ ಮುನಿಗಳ ಶಿಷ್ಯ ಸಂತತಿಗೂ

ಸುಮಹಿಮ ಹರಿದಾಸವರ್ಯರು ಸರ್ವರಿಗು

ಸನ್ಮನದಿ ಆ ನಮಿಪೆ ಸಂತೈಪರೆಮ್ಮ 6

ಆ ಸೇತು ಹಿಮಗಿರಿ ಬದರಿಕಾಶ್ರಮಕ್ಷೇತ್ರ

ವಸುಧೆಯ ಸಮಸ್ತಕಡೆ ಪೋಗಿ ಅಲ್ಲಲ್ಲಿ

ದುಸ್ತರ್ಕ ದುರ್ಮತ ಅಟವಿಗಳ ಛೇದಿಸಿ

ದಶಪ್ರಮತಿ ಮಧ್ವಮುನಿ ಒಲಿದರು ಸುಜನರ್ಗೆ 7

ಈ ರೀತಿ ದಿಗ್ವಿಜಯ ಮಾರ್ಗದಲಿ ಮಧ್ವ

ರಾಯರ ಸಂಗಡ ವಾದಕ್ಕೆ ನಿಂತು |

ಭಾರಿ ಪಂಡಿತ ರತ್ನಶೋಭನ ಭಟ್ಟನು

ಶರಣಾಗಿ ಮಧ್ವರಾಯರ ಶಿಷ್ಯನಾದ 8

ಶೋಭನ ಭಟ್ಟಾಖ್ಯ ಈಗುಣಗ್ರಾಹಿಯು

ಶುಭಪ್ರದೆ ಲೋಕ ಪಾವನಿ ವೃದ್ಧ ಗಂಗೆ

ಎಂಬುವ ಗೋದಾವರೀ ತೀರದಲಿ ಮಧ್ವ

ಅಬ್ಜಹಸ್ತದಿಕೊಂಡ ತುರ್ಯಾಶ್ರಮ 9

ಸತ್ತತ್ವವಾದದ ಸೊಬಗನ್ನ ಮಧ್ವ

ವದನಾಂಬುಜದಿಂದ ಕೇಳಿ ಸುಪವಿತ್ರ

ಪದ್ಮನಾಭ ತೀರ್ಥಾಖ್ಯ ನಾಮವ ಹೊಂದಿದ

ಮುದದಿಂದ ಈ ಮಹಾತ್ಮನು ಶೋಭನನು 10

ಕಳಿಂಗ ರಾಜನ ಮಂತ್ರಿಯ ಕುಮಾರನು

ಶೀಲತಮ ಹರಿಭಕ್ತಸ್ವಾಮಿ ಶಾಸ್ತ್ರಿ

ಬಾಲ ವಯಸ್ಸಲ್ಲೇವೆ ಸಿರಿತನದಾಮೋಹಾದಿ

ಲೀಲಾವಿನೋದ ಚಟುವಟಿಕೆ ತೊರೆದವನು 11

ವಿಧಿಯುಕ್ತ ಉಪನಯನ ಶಾಸ್ತ್ರಾಭ್ಯಾಸವ

ವೇದ ವೇದಾಂತ ವಿದ್ಯೆ ಸರ್ವ ಹೊಂದಿ

ಗೋದಾವರಿ ಕ್ಷೇತ್ರ ಎಲ್ಲೆಲ್ಲೂ ಈತನು

ವಿದ್ವಚ್ಛಿರೋಮಣಿ ಎಂದೆನಿಸಿಕೊಂಡ 12

ರಾಮ ಮಹೇಂದ್ರ ಪುರ ಪ್ರಾಂತ್ಯಸ್ಥವಾದಿ

ಗಜ ಸಿಂಹ ಶೋಭನ ಭಟ್ಟನು ಈಗ

ತ್ರಿಜಗದ್ಗುರು ಮಧ್ವರಿಂ ಅನುಗ್ರಹವಕೊಂಡದ್ದು

ನಿಜ ಹರುಷದಿ ಕೇಳಿದ ಶ್ಯಾಮ ಶಾಸ್ತ್ರಿ 13

ಹಿತಕರ ಈಸುದ್ದಿ ಕೇಳಲಿಕ್ಕೇವೆ

ಕಾದಿದ್ದ ಶ್ರೀಮಂತ ಈ ಶ್ಯಾಮ ಶಾಸ್ತ್ರಿ

ಬಂದು ಶ್ರೀಮಧ್ವರಲಿ ಕರಮುಗಿದು ಸನ್ನಮಿಸಿ

ಒದಗಿ ಪಾಲಿಸಿ ಸೇವೆ ಕೊಳ್ಳಬೇಕೆಂದ 14

ಉತ್ತಮ ದೇವಾಂಶನು ನಿಜ ಸಹಜ ಭಕ್ತಿಮಾನ್

ಸುದೃಢ ಜ್ಞಾನಿಯು ಋಜುಮಾರ್ಗ ಚರಿಪ

ಕ್ಷಿತಿಯಲ್ಲಿ ಜನಿಸಿಹ ವೈರಾಗ್ಯನಿಧಿ ಇವ

ಹೊಂದಿದ ತುರ್ಯಾಶ್ರಮ ಮಧ್ವ ಮುನಿದಯದಿ 15

ನರಹರಿ ತೀರ್ಥಾಖ್ಯ ಶುಭತಮನಾಮವ

ಶಾಸ್ತ್ರಿಗೆ ಇತ್ತರು ಆನಂದ ಮುನಿಯು

ಹರಿಸೇವಾ ಕಾರ್ಯಸಿದ್ಯರ್ಥ ಆದೇಶದಲೆ

ಇರುವುದು ಎಂದರು ಸರ್ವಜ್ಞ ಮುನಿಯು 16

ಸಾಮ್ರಾಜ್ಯ ಅಧಿಪತ್ಯ ಕಳಿಂಗ ದೇಶದಲಿ

ಚರಿಸುವ ಕಾಲವು ಬರಲಿಕ್ಕೆ ಇದೆಯು

ಶ್ರೀರಾಮ ಸೀತಾ ಮೂರ್ತಿಗಳ ಅಲ್ಲಿಂದ

ತರಲಿಕ್ಕೆ ಇರಬೇಕು ಅಲ್ಲಿಯೇ ಎಂದರು 17

ಗಜಪತಿ ರಾಜನ ಅರಮನೆಯಲ್ಲಿ

ರಾಜೀವೇಕ್ಷಣ ಮೂಲರಾಮನು ಸೀತಾ

ರಾಜಭಂಡಾರದಲ್ಲಿ ಮಂಜೂಷದಲಿ

ರಾಜಿಸುತ ಇಹರು ಮೂರ್ತಿ ರೂಪದಲಿ 18

ಕಳಿಂಗದೇಶಾಧಿಪ ಗಜಪತಿಯ ವಂಶದಲಿ

ಬಾಲರಾಜನು ಅವನ ಪ್ರತಿನಿಧಿಯಾಗಿ

ಆಳುವುದು ರಾಜ್ಯವ ಎಂದು ಆಚಾರ್ಯರು

ಪೇಳಿದರು ನರಹರಿ ತೀರ್ಥ ಆರ್ಯರಿಗೆ 19

ಬಾಲರಾಜನು ಯುವಕನಾಗಿ ರಾಜ್ಯವನ್ನು

ಆಳುವ ಯೋಗ್ಯತೆ ಹೊಂದಿದ ಮೇಲೆ

ಅಲ್ಲಿಂದ ರಾಮ ಸೀತಾ ಮೂರ್ತಿರಾಜನ್ನ

ಕೇಳಿತರಬೇಕು ಎಂದರು ಲೋಕ ಗುರುವು 20

ಗೋದಾವರಿ ಕ್ಷೇತ್ರದೇಶ ಸುತ್ತು ಮುತ್ತು

ಸಾಧುಜನ ಉದ್ಧಾರ ಬೋಧಕ್ಕೆ

ಪದ್ಮನಾಭ ತೀರ್ಥರ ತತ್ಕಾಲ ನಿಲ್ಲಿರಿಸಿ

ಬಂದರು ಉಡುಪಿಗೆ ಪೂರ್ಣ ಪ್ರಮತಿಗಳು 21

ಶ್ರೀ ಮಧ್ವಾಚಾರ್ಯರು ಅರುಹಿದ ಪ್ರಕಾರದಲೇ

ಸಮಯ ಒದಗಿತು ರಾಣಿ ಬಿನ್ನೈಸಿದಳು

ಸ್ವಾಮಿ ತಾವೇ ರಾಜ್ಯ ಆಳಬೇಕೆಂದಳು

ಸಮ್ಮತಿಸಿದರು ಶ್ರೀ ನರಹರಿ ಮುನಿಯು 22

ಮಂತ್ರಿ ಪದವಿ ಪರಂಪರೆ ಪ್ರಾಪ್ತವಾಗಿ

ತಂದೆ ವಹಿಸಿದ್ದರು ಅವರ ಮುಖದಿಂದ

ಹಿಂದೆ ಪೂರ್ವಾಶ್ರಮದಿ ರಾಜ್ಯ ಆಡಳಿತದ

ರೀತಿಯ ಅರಿತವರು ಈ ಹೊಸಯತಿಯು 23

ನರಹರಿ ತೀರ್ಥರ ರಾಜ್ಯ ಆಡಳಿತದಲಿ

ಪರಿಪರಿ ರಾಜತಂತ್ರಗಳ ಕೌಶಲ್ಯ

ಸರಿಯಾದ ಧಾರ್ಮಿಕ ರಾಜನೀತಿಯ ದುಷ್ಟ

ಶತ್ರು ನಿಗ್ರಹ ಶಿಷ್ಟ ಪಾಲನ ಏನೆಂಬೆ 24

ದಂಡೆತ್ತಿ ಆಗಾಗ ಬರುತಿದ್ದ ಶಬರಾದಿ

ತುಂಟ ಶತ್ರುಗಳನ್ನ ಜಯಿಸಿ ರಾಜ್ಯವನ್ನ

ಕಂಟಕ ದುರ್ಮತಿಗಳಿಂದ ಕಾಪಾಡಿದರು

ಎಂಟು ದಿಕ್ಕಲು ಹಬ್ಬಿತಿವರ ಕೀರ್ತಿ 25

ಆಶ್ರಮೋಚಿತ ನಿತ್ಯ ಜಪಪೂಜ ಕಾರ್ಯಗಳು

ಶಿಷ್ಯ ಸಜ್ಜನರಿಗೆ ಉಪದೇಶಾನುಗ್ರಹ

ಲೇಶವೂ ಕೊರತೆ ಇಲ್ಲದೆ ಮುದದಿ

ಈಶನ ಪ್ರೀತಿಗೆ ರಾಜಕಾರ್ಯಗಳ ಮಾಡಿದರು 26

ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸ

ಯೋಗಾನಂದ ನರಹರಿ ಮೂಲ ರಾಮ

ನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿ

ಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 27


- ಇತಿ ಶ್ರೀ ಪ್ರಸನ್ನ ನರಹರಿತೀರ್ಥ ವಿಜಯ ಪ್ರಥಮೋದ್ಯಾಯಃ -

ದ್ವಿತೀಯ ಕೀರ್ತನೆ

ಯೋಗಾನಂದ ನರಹರಿ ರಾಮಪ್ರಿಯತಮರು

ಯೋಗಿವರ ನರಹರಿತೀರ್ಥರ ಪಾದ

ಯುಗ್ಮ ವನರುಹದಿ ನಾ ಶರಣಾದೆ ಸಂತತ

ಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪ

ಶ್ರೀ ಕೂರ್ಮ ಕ್ಷೇತ್ರದಲಿ ಕೂರ್ಮೇಶ್ವರಾಲಯದಿ

ಯೋಗಾನಂದ ನರಸಿಂಹಗೆ ಗುಡಿಯ

ಯೋಗಿವರ ನರಹರಿತೀರ್ಥರು ಕಟ್ಟಿಸಿ

ಯೋಗಾನಂದ ನರಸಿಂಹನ ಸ್ಥಾಪಿಸಿದರು 1

ಯುಕ್ತ ಕಾಲದಿ ರಾಜನಿಗೆ ರಾಜ್ಯ ಒಪ್ಪಿಸಲು

ಕೃತಜ್ಞ ಮನದಿಂದ ಆ ಯುವಕರಾಜ

ಇತ್ತನು ಸನ್ನಮಿಸಿ ನರಹರಿತೀರ್ಥರಿಗೆ

ಸೀತಾರಾಮ ವಿಗ್ರಹದ ಮಂಜೂಷ 2

ನರಹರಿತೀರ್ಥರು ಶ್ರೀಮದಾಚಾರ್ಯರಲಿ

ನೇರವಾಗಿ ಪೋಗಿ ಸಮರ್ಪಿಸಲು ಆಗ

ಶ್ರೀರಾಮ ಸೀತಾದೇವಿಯ ಮಧ್ವಮುನಿ

ಕ್ಷೀರಾದಿ ಪಂಚಾಮೃತದಿ ಪೂಜಿಸಿದರು 3

ಶ್ರೀರಾಮಸೀತಾ ಪ್ರತಿಮೆಗಳೊಳು ಹರಿರಮಾ

ಆರಾಧನಾರ್ಚನೆ ಮೂರು ತಿಂಗಳು ಹದಿ -

ನಾರುದಿನ ತಾಮಾಡಿ ಪದ್ಮನಾಭತೀರ್ಥರು

ತರುವಾಯ ಪೂಜಿಸಲು ಆಜ್ಞೆ ಮಾಡಿದರು 4

ಮೂರನೇಬಾರಿ ಬದರಿಗೆ ಆಚಾರ್ಯರು

ತೆರಳಲು ಪದ್ಮನಾಭರು ತಾವು ಪೂಜೆ

ಚರಿಸಿ ನಿಯಮನದಂತೆ ಆರು ವರ್ಷ ತರುವಾಯ

ನರಹರಿತೀರ್ಥರಿಗೆ ಇತ್ತರು ಮೂರ್ತಿಗಳ 5

ಈ ಮೂರ್ತಿಗಳೊಳ್ ಇರುವ ಸೀತಾರಾಮಾರ್ಚನೆ

ಬ್ರಹ್ಮದೇವರು ಮಾಡಿ ಸೂರ್ಯವಂಶ

ಭೂಮಿಪಾಲಕ ಕೈಯಿಂದ ಪೂಜೆಯ ಕೊಂಡು

ಕ್ರಮದಿ ದಶರಥರಾಜ ಕರಕೆ ಲಭಿಸಿದವು 6

ಶ್ರೀ ರಾಮಚಂದ್ರ ಪ್ರಾದುರ್ಭಾವಕು ಮೊದಲೇ

ದಶರಥ ಆರಾಧಿಸಿದ ತರುವಾಯ

ಶ್ರೀ ರಾಮತಾನೇ ಸ್ವಯಂ ಪೂಜೆ ಮಾಡಿದನು

ಶಿರಿಸೀತ ತಾ ಕೊಂಡಳು ಪೂಜೆಗಾಗಿ 7

ರಾಮಚಂದ್ರನು ಸೇವೆ ಸಾಕ್ಷಾತ್ ಮಾಡುವ

ಸೌಮಿತ್ರಿ ಆ ಮೂರ್ತಿಗಳನ್ನು ತಾನು

ಸಮ್ಮುದದಿ ತನ್ನ ಅರಮನೆಯಲ್ಲಿಟ್ಟುಕೊಂಡು

ನೇಮದಿ ಪೂಜಿಸುತ್ತಿದ್ದನು ಬಹುಕಾಲ 8

ದ್ವಿಜನರ ಶ್ರೇಷ್ಠನು ರಾಮನಲಿ ಬಹುಭಕ್ತಿ

ನಿಜಭಾವದಲಿ ಮಾಳ್ಪ ಅನುದಿನ ಅವನು

ರಾಜೀವೇಕ್ಷಣ ರಾಮನನ್ನು ತಾ ನೋಡದಲೆ

ಭೋಜನ ಮಾಡಲಾರನು ಅಂಥಭಕ್ತ 9

ವಿಪ್ರವರ ಅವಾತ ವೃದ್ಧಾಪ್ಯದಲಿ

ಅರಮನೆ ದರ್ಬಾರ ಮಂಟಪಕೆ ಬಂದ

ಶ್ರೀರಾಮಚಂದ್ರನು ರಾಜಕಾರ್ಯೋದ್ದೇಶ

ಹೊರಗೆ ಹೋಗಿದ್ದನು ಏಳುದಿನ ಹೀಗೆ 10

ಏಳು ದಿನವೂ ಆ ವಿಪ್ರೋತ್ತಮ ಊಟ

ಕೊಳ್ಳದೇ ದೇಹಬಲ ಬಹು ಬಹು

ಕುಗ್ಗಿಮೆಲ್ಲನೆ ಎಂಟನೆ ದಿನ ಬಂದು

ಕುಳಿತಿದ್ದ ಶ್ರೀ ರಾಮಚಂದ್ರ ಸಭೆಯಲ್ಲಿ 11

ಕಣ್ಣಿಗೆ ಏಳುದಿನ ಕಾಣದ ಶ್ರೀರಾಮ

ಆನಂದಮಯ ಶ್ರೀನಿಧಿಯ ಕಂಡಲ್ಲೇ

ಬ್ರಾಹ್ಮಣನು ಆನಂದ್ರೋದೇಕವು ಉಕ್ಕಿ

ಸನ್ನಮಿಸುವಲ್ಲೇಯೇ ಬಿದ್ದನು ಕೆಳಗೆ 12

ಏಳುದಿನ ಉಪವಾಸದಿಂದಲೇ ತನುವಿನ

ಬಲಹೀನತೆ ಹೊಂದಿ ಆ ಬ್ರಾಹ್ಮಣ ಬೀಳೆ ಕೆಳಗೆ

ಕನಕ ಆಸನದಿಂದಲಿ ರಾಮ

ಇಳಿದುಬಂದು ಆಶ್ವಾಸಿಸಿದ ವಿಪ್ರನÀನ್ನ 13

ವಿಪ್ರಶ್ರೇಷ್ಠನ ನಿವ್ರ್ಯಾಜ ಭಕ್ತಿಯ ಮೆಚ್ಚಿ

ಕರುಣಾಬ್ಧಿ ಭಕ್ತವತ್ಸಲ ರಾಮಚಂದ್ರ

ಕ್ಷಿಪ್ರದಲೆ ಲಕ್ಷ್ಮಣನ ಕಡೆಯಿಂದ ಪ್ರತಿಮೆಗಳ

ತರಿಸಿಕೊಟ್ಟನು ಆ ದ್ವಿಜಶ್ರೇಷ್ಠನಿಗೆ 14

ಅನುದಿನ ವೃದ್ಧ ದೆಶೆಯಲ್ಲಿ ಬರಬೇಡವು

ಅನಾಯಾಸದಿ ತನ್ನ ಪ್ರತಿಮೆಯಲ್ಲಿ

ಕಾಣಬಹುದು ಎಂದು ಶ್ರೀರಾಮ ಪೇಳಿದನು

ಆನಂದದಿ ಕೊಂಡ ಬ್ರಾಹ್ಮಣ ಮೂರ್ತಿಗಳ 15

ಪ್ರತಿನಿತ್ಯ ವಿಧಿಪೂರ್ವಕ ಅರ್ಚಿಸಿದ ವಿಪ್ರ

ಯುಕ್ತ ಕಾಲದಿ ತನು ಬಿಡುವ ಸಮಯದಲಿ

ವಾಯುಸುತ ಹನುಮನ ಕೈಯಲ್ಲಿ ಅರ್ಪಿಸಿದ

ಸೀತಾರಾಮ ಪ್ರತಿಮೆಗಳ ಭಕ್ತಿಯಲಿ 16

ಸಮಸ್ತ ಜೀವರುಮಾಳ್ಪ ಭಕ್ತಿಗೆ ಅಧಿಕ

ಸುಮಹಾಭಕ್ತಿಯ ಮಾಳ್ಪ ಹನುಮಂತ

ಈ ಮೂರ್ತಿಗಳ ತಾಕೊಂಡು ಮುದದಲಿ ಕುಣಿದ

ಸಮ್ಮುದದಿ ಅರ್ಚಿಸಿದ ಸೀತಾರಾಮನ್ನ 17

ಸೌಗಂಧಿಕಾಪುಷ್ಪತರಲು ಭೀಮನು ಪೋಗಿ

ಮಾರ್ಗದಲಿ ತನ್ನಯ ಪ್ರಥಮಾವತಾರ

ಸಾಕೇತರಾಮಪ್ರಿಯತಮ ಅಂಜನಾಸುತನ

ಸಂಗಡವಾದಿಸಿದ ಲೋಕರೀತಿಯಲ್ಲಿ 18

ನರಾಧಮರ ಮೋಹಿಸುವ ಸಜ್ಜನರ ಮೋದಿಸುವ

ಚರ್ಯಸಂವಾದ ತೋರಿಸಿ ರೂಪದ್ವಯದಿ

ತರುವಾಯು ಹನುಮನು ಭೀಮನಿಗೆ ಕೊಟ್ಟನು

ಶ್ರೀರಾಮಸೀತಾ ಮೂಲಪ್ರತಿಮೆಗಳ 19

ಭೀಮಸೇನನು ಆನಂದದಿ ಅರ್ಚಿಸಿದ

ಸುಮನೋಹರ ರಾಮಸೀತಾದೇವಿಯನ್ನ

ಈ ಮಹಾಹರಿಭಕ್ತ ಪಾಂಡವರ ವಂಶದಿ

ಕ್ಷೇಮಕ ರಾಜನು ಕಡೆಯಾಗಿ ಬಂದ 20

ಮೂಲರಾಮಸೀತೆಯ ಮುದದಿಂದ ಪೂಜಿಸಿದ

ಶೀಲಭಾ (incomplete)

***