ಕೃಷ್ಣ: ದೂರದಿ ನಿಲ್ಲೆಲೆ ಬಾಲೆ ಎನ್ನ
ಜಾರನು ಎಂದು ತಿಳಿದೆಯೋ
ಗೋಪಿ: ಜಾರೆ ಅಹಲ್ಯೆಯ ನಾರಿ ಮಾಡಿದ ಬ್ರಹ್ಮ-
ಚಾರಿಯೆಂದರಿತೇನೋ ... ಕೃಷ್ಣಾ
ಕೃಷ್ಣ: ಅಂಗಸಂಗ ಯಾಚಿಸಲು ಎನ್ನ ಅ-
ನಂಗನೆಂದು ಭ್ರಮಿಸಿದೆಯಾ.. ಗೋಪೀ
ಗೋಪಿ: ಸಂಗದಿಂದ ಪಾಪ ಭಂಗಮಾಡುವ ಅ-
ನಂಗ ಜನಕನೆಂದರಿತೇನೋ .. ಕೃಷ್ಣಾ..
ಕೃಷ್ಣ: ಪತಿಯನು ಬಿಟ್ಟು ನೀ ಬಂದು ಬಾಲೆ
ಪತಿತಳಾಗದಿರು ಇಂದು ಗೋಪೀ ..
ಗೋಪಿ: ಪತಿತಪಾವನ ಜಗತ್ಪತಿಯು ಎನಗೆ ನೀನು ಪತಿಯೆಂದು ತಿಳಿದು ಬಂದಿರುವೆ .. ಕೃಷ್ಣಾ..
ಕೃಷ್ಣ: ನಿಂದಿಸರೇ ನಿನ್ನ ಜನರು ಬಾಲೆ
ಹಿಂದು ಮುಂದು ನುಡಿಗಳಲಿ.. ಗೋಪೀ..
ಗೋಪಿ: ಮುಕುಂದನ ಪ್ರಿಯಳನು ನಿಂದಿಪ ಜನರೆಲ್ಲಾ
ಮಂದಮತಿಗಳು ಅಲ್ಲವೇನೋ ಕೃಷ್ಣಾ..
ಕೃಷ್ಣ: ನಿನ್ನ ನಡತೆ ತರವಲ್ಲ ಬಾಲೆ
ಚನ್ನಾಗಿ ಯೋಚಿಸು ಎಲ್ಲಾ ಬಾಲೆ....
ಗೋಪಿ: ಇನ್ನು ತಾಳಲಾರೆ ಕನ್ಯೆಯ ಮ್ಯಾಲೆ ಪ್ರ-
ಸನ್ನ ನಾಗೋ ಶ್ರೀಕೃಷ್ಣಾ.... ಕೃಷ್ಣಾ....
********
ಶ್ರೀಕೃಷ್ಣ- ಗೋಪಿಯರ ಸಂವಾದ
ಶ್ರೀಕೃಷ್ಣನು ಮನಸ್ಸಿಗೆ ಚುಚ್ಚುನುಡಿಗಳ ಮುಖಾಂತರ ಎಚ್ಚರಿಕೆಯನ್ನು ನೀಡುತ್ತಾ, ಅಂದರೆ ಎಷ್ಟೇಜನ ಬಾಂಧವರಿದ್ದರೂ ನಿಜವಾದ ಬಂಧು ತಾನೇ ಜೀವರಿಗೆ ಅಂತ ತಿಳಿಸುವ, ತನ್ನ ಪಾದಾರವಿಂದಗಳಲ್ಲಿ ಮನಸ್ಸನ್ನು ನೆಲೆಗೊಳ್ಳಿಸಿಕೊಳ್ಳುವುದೇ ಮೋಕ್ಷ ಎಂದು ಹೇಳುವಂತಹಾ ಶ್ರೀಮದ್ವಿದ್ಯಾಪ್ರಸನ್ನತೀರ್ಥರ ಅದ್ಭುತವಾದ ಕೃತಿ...
***