Showing posts with label ಬಲವದ್ರೂಪವಾದ guruvijaya vittala ankita suladi ಹರಿ ಸ್ವತಂತ್ರ ಸುಳಾದಿ BALAVADROOPAVAADA HARI SWATANTRA SULADI. Show all posts
Showing posts with label ಬಲವದ್ರೂಪವಾದ guruvijaya vittala ankita suladi ಹರಿ ಸ್ವತಂತ್ರ ಸುಳಾದಿ BALAVADROOPAVAADA HARI SWATANTRA SULADI. Show all posts

Wednesday, 19 May 2021

ಬಲವದ್ರೂಪವಾದ guruvijaya vittala ankita suladi ಹರಿ ಸ್ವತಂತ್ರ ಸುಳಾದಿ BALAVADROOPAVAADA HARI SWATANTRA SULADI

Audio by Mrs. Nandini Sripad


 ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ 


 ಶ್ರೀಹರಿ ಸ್ವತಂತ್ರ ಸುಳಾದಿ 


(ಪ್ರಾರಬ್ಧ ಕರ್ಮ ಬಂಧಮೋಚಕನು ಹರಿಯೇ ಸ್ವತಂತ್ರ. ಆತ್ಮಾನುಭವ, ಐತಿಹಾಸಿಕ, ಪೂರ್ವಜನ್ಮದ ವೃತ್ತಾಂತ, ಸುಮನಸರ ಶಾಪ ನಿಮಿತ್ಯ ಕಾರಣ ಪದಚ್ಯುತಿ ಇತ್ಯಾದಿ.) 


 ರಾಗ ಚಕ್ರವಾಕ 


 ಧ್ರುವತಾಳ 


ಬಲವದ್ರೂಪವಾದ ಪ್ರಾರಬ್ಧ ಕರ್ಮವನ್ನು

ನಳಿನ ಸಂಭವ ಮುಖ್ಯ ದಿವಿಜರೆಲ್ಲ

ತಲೆಬಾಗಿ ಉಂಬುವರು ವಲ್ಲೆನೆಂದರೆ ಬಿಡದು

ಬಲವುಳ್ಳ ವಸ್ತು ಮಧ್ಯ ಮಹ ಪ್ರಬಲವಯ್ಯಾ

ಆಲೋಚಿಸಿ ನೋಡಿದರೆ ಜಡರೂಪವೆನಿಸುವದು

ಚಲಿಸುವ ಶಕುತಿ ಇಲ್ಲ ನಿನ್ನ ವ್ಯತಿರಿಕ್ತದಿ

ಬಲವಂತನಾದ ಹರಿ ತಚ್ಛಬ್ದ ವಾಚ್ಯನಾಗಿ 

ಬಲಯುಕ್ತನಾಗಿ ಇದ್ದು ಬ್ರಹ್ಮೇಶನ 

ಬಲವೈರಿ ಮೊದಲಾದ ಸರ್ವ ಜೀವಿಗಳ

ಬಲವೆಲ್ಲ ಹಿಂಗಿಪುದು ಕಾಲ ಕರ್ಮದಂತೆ 

ಲೀಲೆ ಕೈವಲ್ಯ ರೂಪನಾದ ವಿನೋದಿ ನಿನ್ನ

ಲೀಲೆಗೆ ಕಾರಣವೆನಿಪದಯ್ಯಾ

"ಬಲವಾನ್ ಇಂದ್ರಿಯಗ್ರಾವೋ(ಮೊ) ವಿದ್ವಾಂಸಮಪಿಕರ್ಷತಿ"

ಕಾಲರೂಪನಾಗಿ ಇಂದ್ರಿಯ ದ್ವಾರದಿಂದ

ಮೇಲು ಕೀಳುಗಳೀವಿ ಜೀವರಿಗೆ 

ಇಳಿಗೆ ಮೀರಿದ ನಿನ್ನ ನೈಜಾಲಯ ದ್ವಾರ -

ಪಾಲಕರಿಗೆ ತಪ್ಪದಾಯಿತೈಯ್ಯಾ

ಬಲಿಷ್ಠರ ಪಾಲ ಗುರುವಿಜಯವಿಟ್ಠಲ ನಿನ್ನ

ಒಲಿಮೆಯಿಂದಲಿ ತೊಲಗಿ ಪೋಪದಯ್ಯಾ ॥ 1 ॥ 


 ಮಟ್ಟತಾಳ 


ಪ್ರಾರಬ್ಧ ಕರ್ಮದಲಿ ಚತುರ್ಮುಖ ದೇವನು

ಧಾರುಣಿಯಲಿ ಪೂಜೆ ತೊರೆದನು ಋಷಿಯಿಂದ

ಭಾರತಿಪತಿ ನಿನ್ನ ಸಂಕಲ್ಪವನರಿತು

ವಾನರಾದನು ಮತ್ತೆ ಸ್ತ್ರೀಯಾದನು ಕೇಳೊ

ಶ್ರೀರಮಣ ನಿನ್ನ ಪ್ರೀತ್ಯಾಸ್ಪದನಾದ 

ಆರೂಢಕೆ ಯೋಗ್ಯನೆನಿಸುವ ಸೌಪರಣಿ

ಮೀರಿದ ಬಲಯಾಗೆ ಕಾದ್ರುವೆಗಳ ಕೈಯ

ಘೋರ ಬನ್ನ ಬಟ್ಟ ಜನನಿಯ ನಿಮಿತ್ಯ

ವಾರಿಜಾಕ್ಷನ ಯೋಗ ನಿದ್ರಾಸ್ಪದ ನೆನೆಪ

ವಾರುಣಿಪತಿಯಾದ ಬಲರಾಮನು ದುರುಳ

ಕೌರವ ಪತಿ ಪಕ್ಷ ಮೊಹಿಸಿ ಸಜ್ಜನರಿಂದ

ಮಾರು ಮಾತನು ನುಡಿಸಿಕೊಂಡು ಸಭೆಯಲ್ಲಿ

ಮಾರಾರಿ ರೂಪನಾದ ಅಶ್ವತ್ಥಾಮನ

ಸ್ವರೂಪದಿ ದುಷ್ಟನಾದವಗೆ ಒಲಿದು

ಸುರರಾದವರಿಗೆ ಅಹಿತವನೆ ಬಗೆದು

ನೀರಜಾಕ್ಷನೆ ನಿನಗೆ ವಿಮುಖನು ಎಂದೆನಿಸಿ

ಪಾರುಗಾಣದೆಯಿದ್ದ ಶಾಪವು ಸ್ವೀಕರಿಸಿ 

ಶಾರೀರ ದುರ್ಗಂಧ ನಾರುವ ದುಃಖದಲಿ

ಊರು ಸೇರದೆ ಅಡವಿ ಚರಿಸುವ ನಿನ್ನಿಂದ 

ಧೀರರೆಂದೆನಿಸುವ ದಿವಿಜರಿಗಿನಿತಿರಲು 

ಸುರಪತಿ ಮಿಕ್ಕಾದ ಸುರರಿಗೆ ತಪ್ಪುವದೆ

ಸರಿಯಿಲ್ಲ ಸರಿಯಿಲ್ಲ ಈ ಪ್ರತಿಬಂಧಕ್ಕೆ

ಭಾರಕರ್ತನೆನಿಪ ಗುರುವಿಜಯವಿಟ್ಠಲರೇಯ ನೀ

ತೋರದೆ ತೊಲಗುವದೆ ಆವಾವ ಕಾಲದಲಿ ॥ 2 ॥ 


 ತ್ರಿವಿಡಿತಾಳ 


ಅನುಭವ ಪೇಳುವೆನು ಆದರದಲಿ ಕೇಳು

ಘನವಾದ ಪ್ರಾರಬ್ಧ ಮನಿಯ ಮಾಡಿ ಸು - 

ಮನಸರ ಶಾಪವೆಂಬೊ ಸೂಚಕದಿಂದಲ್ಲಿ

ಘನವಾದ ಸ್ಥಾನದಿಂದ ಕಡೆಗೆ ಮಾಡಿ

ಮನುಜ ಲೋಕದಲ್ಲಿ ಪುಟ್ಟಿಸಿ ಘೋರವಾದ

ಬಿನಗು ಸಂಸಾರವೆಂಬ ಪಾಶದಲ್ಲಿ 

ತನುವ ಬಂಧಿಸಿ ಸತತ ಕಾಮ ಕ್ರೋಧವೆಂಬೊ ಗ -

ಹನ ಮಡುವಿನೊಳಗೆ ನೂಕಿದಯ್ಯಾ

ಜ್ಞಾನಾಚ್ಛಾದನ ಮಾಡಿ ಪರಿ ಪರಿ ದುಃಖದಿಂದ

ಅನುದಿನ ಬಳಲಿಸಿದಿ ಅನ್ಯಾಯದಿ 

ಅಣು ಮಹ ವ್ಯಾಪ್ತ ಗುರುವಿಜಯವಿಟ್ಠಲ ನಿನ್ನ

ಅನುಗ್ರಹ ತಪ್ಪುವದೆ ಆಪದವೋ ॥ 3 ॥ 


 ಅಟ್ಟತಾಳ 


ಪ್ರಕಟ ಸಂಪದದಿಂದ ಸಿದ್ಧನಾದವನಾಗಿ

ರಿಕತನೆಂದೆನಿಸಿದಿ ಅಧಿಕಧಿಕವಾಗಿ

ಪ್ರಖ್ಯಾತವಾಗಿ ಮಾನ್ಯನೆನಿಸಿ ಕುಂಭಿಣಿಯಲ್ಲಿ ಕು -

ಹಕ ಜನರ ಮಧ್ಯ ನಿಂದ್ಯ ವೈದದೆ ಬಲು

ಉಕುತಿಯಿಂದಲಿ ದುಷ್ಟ ಮತಗಳ ಛೇದಿಸಿ 

ಲಕುಮಿ ಪತಿಯೆ ಪರನೆಂದು ಬೀರಿದ ಜಿಹ್ವೆ

ಶಕುತಿಯಿಂದಲಿ ಒಮ್ಮೆ ಹರಿಯೆ ಉಚ್ಚರಿಸದು

ವಿಖನಸಾಂಡಾಧಿಪ ಗುರುವಿಜಯವಿಟ್ಠಲಂಗೆ 

ಭಕುತನೆನಿಸಿ ಈಗ ಬಲು ದೂರ ನಾನಾದೆ ॥ 4 ॥ 


 ಆದಿತಾಳ 


ಹರಿ ನಿನ್ನ ಸಂಕಲ್ಪ ಮೀರುವರಿಲ್ಲ ಜಗದಿ

ಪರಿ ಪರಿ ವಿಧದಿಂದ ಪರಿ ಅವಲೋಕಿಸಿ

ಪರಮೇಷ್ಠಿ ಮೊದಲಾದ ಸುರರೆಲ್ಲ ತಲೆಬಾಗಿ

ಕರವ ಮುಗಿದು ನಿನಗೆ ನಮೊ ನಮೊ ನಮೊ ಎಂದು

ಪರಿತೋಷ ಬಡುವರು ಕಡೆ ಮೊದಲರಿಯದೆ

ನಿರುಪಮ ಗುಣಪೂರ್ಣ ಗುರುವಿಜಯವಿಟ್ಠಲರೇಯ 

ಭಾರ ನಿನ್ನದಯ್ಯಾ ಮನಬಂದ ತೆರ ಮಾಡೋ ॥ 5 ॥ 


 ಜತೆ 


ಪ್ರಾರಬ್ಧ ಕರ್ಮವನ್ನು ಮೀರುವವರಿಲ್ಲ ಜಗದಿ

ನೀರಜಾಕ್ಷನೆ ಗುರುವಿಜಯವಿಟ್ಠಲರೇಯಾ ॥

******