Showing posts with label ಮಖವನ್ನೇ ಮಾಡುವದು guruvijaya vittala ankita suladi ಮಖ ಸುಳಾದಿ MAKHAVANNE MAADUVUDU MAKHA SULADI. Show all posts
Showing posts with label ಮಖವನ್ನೇ ಮಾಡುವದು guruvijaya vittala ankita suladi ಮಖ ಸುಳಾದಿ MAKHAVANNE MAADUVUDU MAKHA SULADI. Show all posts

Saturday 3 April 2021

ಮಖವನ್ನೇ ಮಾಡುವದು guruvijaya vittala ankita suladi ಮಖ ಸುಳಾದಿ MAKHAVANNE MAADUVUDU MAKHA SULADI

Audio by Mrs. Nandini Sripad


 ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ 

 (ಗುರುವಿಜಯವಿಟ್ಠಲ ಅಂಕಿತ) 


 ಮಖ ಸುಳಾದಿ 


 (ಜ್ಞಾನಯಜ್ಞ ಸುಳಾದಿ - ಆಧ್ಯಾತ್ಮ ಉಪಾಸನೆ) 


 ರಾಗ ಕಲ್ಯಾಣಿ 


 ಧ್ರುವತಾಳ 


ಮಖವನ್ನೇ ಮಾಡುವದು ಮರ್ಮವ ನೀನರಿತು

ವಿಖನಸಾರ್ಚಿತಪಾದ ಮನದಿ ನಿಲಿಸಿ

ಕಕುಲಾತಿಯನ್ನೆ ಬಿಟ್ಟು ದುರುಳರಿಗರುಹದಲೆ

ಭಕುತಿಯಿಂದಲಿ ಯಜಿಸು ಸ್ನೇಹದಿಂದ

ನಖಶಿಖ ಪರಿಪೂರ್ಣ ಹರಿ ತಾನು ವಿಧಿಶಿವಾದಿ

ಕೃಕವಾಕ ಮೊದಲಾದ ಅಶೀತಿ ನಾಲ್ಕುಲಕ್ಷ

ಸಕಲ ಜೀವಿಗಳಲ್ಲಿ ತನ್ನಾಮ ತದ್ರೂಪ

ಸಖನಾಗಿ ಧರಿಸಿ ತತ್ತಚ್ಚೇಷ್ಟೆಗಳ 

ಯುಕುತಿಯಿಂದಲಿ ಮಾಳ್ಪ ಅಂಬಸಪದ್ಮಮಿವ ಆ -

ಸಕುತಿಯಿಂದಲಿ ಗ್ರಹಿಸೊ ಮುಖ್ಯವಾಗಿ

ತ್ವಕು ಮೊದಲಾದ ಧಾತು ಕರಣಾ ದೇಹದಲ್ಲಿ ಅ -

ನೇಕ ರೂಪಗಳಿಂದ ವ್ಯಾಪ್ತನಾಗಿ

ಪ್ರಕೃತಿ ಕಾಲ ಕರ್ಮ ಜೀವ ಲಕ್ಷಣದಂತೆ

ಸಖನಾಗಿ ಮಾಡಿ ತಜ್ಜನಿತವಾದ

ಸುಖ ದುಃಖ ಫಲ " ಅನಶ್ನನ್ " ಎಂಬೊ ಶೃತಿಯಂತೆ

ಏಕಮೇವನು ಉಣದೆ ಜೀವರಿಗೆ

ಹಾಕುವ ತೆರ ಆತ್ಮೋಪಮ್ಯೇನ ಸರ್ವತ್ರ

ಲೋಕ ಲೋಕಾದಿ ತಿಳಿಯೋ ಇನಿತು ನೀನು

" ಯೋಂತಶ್ಚರತಿ ಭೂತಾತ್ಮಾ ಯಸ್ತಪತ್ಯಂಡ ಮಧ್ಯಗಃ "

ಶುಕಮುನಿ ವಾಕ್ಯದಂತೆ ದೃಢದಿ ನಂಬೊ

ಶಕತನಾದ ಹರಿ ನಿಂದು ಮಾಡಿಸದಿರೆ

ಲಕುಮಿ ವಿರಂಚಿ ಭವ ಶಕ್ರಾದ್ಯರು ಅ -

ಶಕ್ತರಯ್ಯಾ ಶ್ವಾಸ ಬಿಡಲು ಯೋಗ್ಯರಲ್ಲ

ಪ್ರಕಟವಾಗಿದೆ ಶ್ರುತಿ ಶಾಸ್ತ್ರದಲ್ಲಿ

ಮುಕುತಿಗೆ ದ್ವಾರವಿದು ಇನಿತು ತಿಳಿವ ನರ

ರಿಕತನಲ್ಲವೊ ಬಲು ಭಾಗ್ಯಾಧಿಕನು

ಭಕುತಿಯಿಂದಲಿ ಅಲ್ಪ ಜಲವ ಕೊಡುವನ್ಯಾಕೆ

ವಿಖನಸಾಂಡ ದಾನವಿತ್ತ ಫಲಕ್ಕೆ ಅ -

ಧಿಕಾರಿಯಾಗುವನು ಸಂಸಾರ ಮುಕ್ತನಾಗಿ

ಶಕಟಭಂಜನ ಕರವ ಪಿಡಿವ ಬೇಗ

ಕೃಕಳಂತರ್ಯಾಮಿ ಗುರುವಿಜಯವಿಟ್ಠಲರೇಯ 

ಮಖಶಬ್ದವಾಚ್ಯನು ಮಖಭೋಕ್ತನು ॥ 1 ॥ 


 ಮಟ್ಟತಾಳ 


ವಾಜಪೇಯ ಪೌಂಡರೀಕ ಮೊದಲಾದ

ರಾಜಸ ಯಜ್ಞಗಳು ಬಲು ವಿಧವಾದಂಥ

ವ್ಯಾಜಗಳಲ್ಲದಲೆ ಸರ್ವರಿಗೊಶವಲ್ಲ ಸ -

ಹಾಜವಾಗಿದ್ದ ರಜೋಗುಣ ಕರ್ಮಗಳು

ರಾಜಿಸುವ ಸತ್ವಗುಣ ಮಿಶ್ರವಿಲ್ಲದಲೆ

ಭೋಜಕುಲೋತ್ತಮನ ಪ್ರೀತಿಯಾಗದು ಕೇಳಿ ವೈ -

ರಾಜವಾದ ಜ್ಞಾನದ ವ್ಯತಿರಿಕ್ತ

ರಾಜೀವ ಪೀಠ ಮಿಕ್ಕಾದವರೆಲ್ಲ

ನೈಜವಾದ ಗತಿ ಐದರು ಎಂದಿಗೂ

ರಾಜೀವ ಮಿತ್ರ ಗಗನದಿ ಉದಯಿಸದೆ ಆ -

ರಾಜಿತವಾದ ತಮ ಓಡದು ಎಂದಿಗೂ

ಬೀಜಮಾತಿದು ಕೇಳಿ " ನಹಿ ಜ್ಞಾನೇನ ಸದೃಶಂ "

ಸುಜನರು ಇದನ್ನು ನಿರ್ವ್ಯಾಜದಿ ತಿಳಿದು

ಮೂರ್ಜಗದೊಡೆಯನ್ನ ಪೂಜಿಸು ಜ್ಞಾನದಲಿ

ವಾಜಿವದನ ಗುರುವಿಜಯವಿಟ್ಠಲರೇಯನ 

ಆಜನ್ಮವ ಭಜಿಸೆ ಅವಗಾವದು ಸಮ ॥ 2 ॥ 


 ರೂಪಕತಾಳ 


ಸ್ನಾನವಿಲ್ಲದ ಕರ್ಮ ಎಣಿಕೆಯಿಲ್ಲದ ಜಪ

ಪಾನಯಿಲ್ಲದ ಅನ್ನದಾನದಂತೆ

ಜ್ಞಾನವಿಲ್ಲದ ಕರ್ಮ ಏನೇನು ಮಾಡಲು

ಮಾಣದೆ ಗಜಭುಕ್ತ ಕಪಿತ್ಥವತು " ಕ - 

 ರ್ಮಣಾ ಜ್ಞಾನಮಾಪ್ನೋತಿ ಜ್ಞಾನೇನ ಅಮೃತೀ ಭವತಿ "

ಈ ನುಡಿ ಪ್ರಮಾಣದಂತೆ ಜನರು ಕೇಳಿ

ಜ್ಞಾನ ಮಾರ್ಗದಿಂದ ಹರಿಯ ಯಜಿಸೋ

ಗೌಣಾವಧಿಕವಾದ ಅಧಿಷ್ಠಾನಗಳ ಗ್ರಹಿಸು

ಆನಂದತೀರ್ಥರ ವಾಕ್ಯದಂತೆ 

ಸಾನುರಾಗದಿ ಶ್ರುತಿಗೆ ಅಪ್ರಾಮಾಣ್ಯ ಬರಲೀಯದೆ

ಧೇನಿಸು ಹರಿವ್ಯಾಪ್ತಿ ಜಡ ಚೇತನದಿ ಅ -

ಜ್ಞಾನಿ ಜನರೊಳು ಬೆರೆದಿದ್ದ ಕಾಲಕ್ಕು

ಮನಸಿನಲ್ಲಿ ವ್ಯಾಪ್ತಿ ಮರಿಯದಿರು

ಏನೇನು ಕರ್ಮಗಳು ಲಕುಮಿನಾರೇಯಣರು

ಪ್ರಾಣದೇವರ ದ್ವಾರ ಮಾಳ್ಪರೆನ್ನು

ಪ್ರಾಣನಾಥನು ಖಗ ಅಹಿಪೇಶ ಮೊದಲಾದ

ಸುಮನಸರಿಂದಲಿ ಮಾಳ್ಪನೆನ್ನು

ಗೌಣರಿಗಧಿಕರು ಪ್ರೇರಕರಾಗಿಹರು

ಕಾಣಿಸದಿಪ್ಪರು ಮಂದರಿಗೆ

ಜ್ಞಾನ ಪ್ರಾಪುತವಾಗೆ ಪ್ರತ್ಯಕ್ಷವಾಹರು

ದಾನವಾಂತಕಗಿವರು ಅಧಿಷ್ಠಾನರು

ಸ್ಥಾಣು ಚೇತನ ಮಿಕ್ಕ ಆವಾವ ಸ್ಥಳದಲ್ಲಿ

ಮಾಣದೆ ತಿಳಿ ಇನಿತು ಲಕ್ಷಣದಿ

ಜ್ಞಾನಿಗಳರಸ ಗುರುವಿಜಯವಿಟ್ಠಲರೇಯ 

ಪ್ರಾಣಿಗಳಲ್ಲಿ ವ್ಯಾಪ್ತನಾಗಿಹನು ॥ 3 ॥ 


 ಝಂಪೆತಾಳ 


ಸಾಧನದೊಳಧಿಕ ಸಾಧನಾವೆನಿಸುವದು

ಸಾದರದಿ ಕೇಳುವದು ವಿಬುಧರೆಲ್ಲ

ಮೇದಿನಿಯೊಳಗಿದ್ದ ಖಳರು ಅಹಂಕಾರದಲಿ

ಗೋ ಧನ ಮೊದಲಾದ ಮಹದಾನವ

ಕ್ರೋಧಾದಿ ಗುಣದಿಂದ ಇತ್ತರಾದಡೆ ಅವಗೆ

ಮೋದವಾಹದೆಂತೊ ಇಹಪರದಿ

ಸಾಧುಗಳು ಇದು ತಿಳಿದು ಜ್ಞಾನಾಖ್ಯ ಸುಧಿಯನ್ನು ಆ -

ಸ್ವಾದಿಪರು ಕ್ರೋಧಾದಿ ಗುಣವ ಮರೆದು

ಶ್ರೀಧರನು ತನ್ನ ನಿಜ ಸಂಕಲ್ಪದಿಂದಲ್ಲಿ ಅ -

ನಾದಿ ಕರ್ಮ ಪ್ರಕೃತಿ ಕಾಲ ಜೀವ

ಅಧಿಕಾರವನರಿತು ಕೊಟ್ಟದಕೆ ಮತ್ತಧಿಕ ಬೇ -

ಡದಲಿರು ಶ್ರೀಶನಾಜ್ಞವೆಂದು

ಯದ್ರಿಚ್ಛ ಲಾಭದಿಂ ಸಂತುಷ್ಟನಾಗಿ ನೀನು

ಮೋದ ವೈದು ಇದ್ದ ವಿಭವದೊಳು

ಅಧಿಕಾಧಿಕವಾದ ಜ್ಞಾನವಾಪೇಕ್ಷಿಸುತ

ಬೋಧಕರ ಸಂಗದಲಿ ಬೆರೆದು ನೀನು

ಮೇದಿನಿ ಸುರರನ್ನು ಕರೆದು ಮನ್ನಿಸಿ ಪರಮ

ಆದರದಿ ಅನ್ನೋದಕವ ಕೊಡಲು

ಮೋದಮಯ ತಾನುಂಡು ಕೋಟ್ಯಾಧಿಕವಾದ

ಸಾಧು ಯಜ್ಞದ ಫಲವು ತಂದು ಉಣಿಪ

ಮಾಧವನ ಅರ್ಚನೆಗೆ ಭೂಸುರೋತ್ತಮ ತಾನು

ಅಧಿಷ್ಠಾನವೆಂದು ಗ್ರಹಿಸೋ ನೀನು

ಮೇದಿನಿ ಮೇಲಿದ್ದ ಕ್ಷೇತ್ರ ಮೂರುತಿ ಬಿಟ್ಟು

ಸಾದರದಿ ಕ್ಷೇತ್ರವನ್ನು ಭಜಿಸಿದವಗೆ

ಖೇದವಲ್ಲದೆ ಅವಗೆ ಮೋದವಾಹದೇನೋ

ಮೇದಿನಿ ಸುರರಲ್ಲಿ ವ್ಯಾಪ್ತನಾದ

ಆದಿದೇವನ ತುತಿಸಿ ಷೋಡಶೋಪಚಾರ

ಈ ದ್ವಾರದಲಿ ಮಾಡುವದು ಜ್ಞಾನದಿಂದ

ವೈದರ್ಭಿರಮಣ ಗುರುವಿಜಯವಿಟ್ಠಲರೇಯನ 

ಸಾಧಿಸೀಪರಿಯಿಂದ ತಿಳಿದು ನೀನು ॥ 4 ॥ 


 ತ್ರಿವಿಡಿತಾಳ 


ಮೇಲಭಾಗದಲ್ಲಿ ಶಿರಸ್ಸಿನಲ್ಲಿಗೆ ದ್ವಿದಶಾಂ -

ಗುಲಿ ಮೇಲೆ ದ್ವಿದಶ ದಳಯುಕ್ತ

ಕೀಲಾಲಜ ಉಂಟು ಚಂದ್ರಪ್ರಕಾಶದಂತೆ

ಮೂಲರೂಪನಾದ ವಾಸುದೇವಾ

ಆಲಯವೆನಿಪದು ಮುಕ್ತಾಮುಕ್ತರಿಂದ

ವಾಲಗಗೊಳುತಿಪ್ಪ ಸರ್ವಸಾಕ್ಷಿಯಾಗಿ

ಬಾಲಮತಿಯ ಬಿಟ್ಟು ಗುರುಮುಖದಿಂದ ತಿಳಿದು

ಕಾಲಕಾಲಕೆ ತಿಳಿ ಸ್ವ ಪರದೇಹದಲ್ಲಿ

ಖೂಳ ಜನರಿಗೆ ಕುರುಹು ಕಾಣಿಸದಲೆ

ವ್ಯಾಳೆ ವ್ಯಾಳೆಗೆ ಪರಮ ಭಕುತಿಯಿಂದ

ಶೀಲಮೂರುತಿಯ ಧೇನಿಸಿ ನೀನಿತ್ತ

ಸ್ಥೂಲರಸವನ್ನು ಸ್ವೀಕರಿಸು ಎಂದು

ಲೋಲ ಮನಸ್ಸಿನಿಂದ ಬೇಡಿಕೊಳ್ಳಲು ಹರಿ

ವಾಲಗ ಸಹವಾಗಿ ಪ್ರೀತನಾಗಿ

ಆಲಸವಿಲ್ಲದಲೆ ತೃಣ ಮೇರು ಮಾಡಿ ತನ್ನ

ಆಲಯದಲಿ ವಾಸ ಮಾಡಿಸುವನು

ಹೇಳನ ಬುದ್ಧಿಯಿಂದ ಇದನು ತಿಳಿಯದಲೆ

ಸಾಲು ಕೋಟಿಗೆ ಅನ್ನವಿತ್ತೆನೆಂದು

ಬಾಲಮತಿಗಾನು ಬರಿದೆ ಅಹಂಕಾರದಿಂದ

ಪ್ರಲಾಪಿಸಿದರೆ ಹರಿ ತುಷ್ಟನಾಹನೆ

ವ್ಯಾಳವ್ಯಾಘ್ರನಾಮ ಗುರುವಿಜಯವಿಟ್ಠಲರೇಯನ 

ಲೀಲೆ ಇನಿತೆಂದು ಸ್ಮರಿಸಿ ಬದುಕೋ ॥ 5 ॥ 


 ಅಟ್ಟತಾಳ 


ಸತ್ಯಲೋಕವು ಶೀರ್ಷದಲ್ಲೆ ಇಪ್ಪದು ಕೇಳಿ

ಸತ್ಯಲೋಕಾಧಿಪನು ಸಹಸ್ರರೂಪನ್ನ

ಭಕ್ತಿಯಿಂದಲಿ ಭಜಿಪ ಸಾಸಿರ ಕೇಸರ

ಯುಕ್ತವಾದ ಕಮಲ ಮಧ್ಯದಿ ಪೊಳೆವನ್ನ

ಕೃತ್ತಿವಾಸನು ಮೊದಲಾದ ಗೀರ್ವಾಣರು

ಭೃತ್ಯರಾಗಿ ಸೇವೆ ಮಾಳ್ಪರು ಕ್ರಮದಿಂದ

ಉತ್ತಮೋತ್ತಮ ದೇವಾ ಪರಿವಾರ ಸಮೇತ

ತುತ್ತಿಸಿಕೊಳ್ಳುತ್ತ ವ್ಯಕ್ತವಾಗಿಹನು ಧಾ -

ರಿತ್ರಿಯೊಳಗೆ ಇದು ತಿಳಿದ ಮನುಜನು

ಮೃತ್ಯು ರೂಪವಾದ ಸಂಸಾರ ದೂರನು

ಪಾರತ್ರಿಕವಾದ ಸುಖದಿ ನಿತ್ಯನು ಕಾಣೊ

ಈ ತೆರದಿಂದಲಿ ತಿಳಿದು ಈ ಬಗೆಯಿಂದ

ತೃಪ್ತರಾಗೆಂದೆನ್ನೆ ಭಕ್ತಿಗೆ ವಶನಾಗಿ

ಉಕ್ತಿ ಲಾಲಿಪದೈಯ್ಯಾ ಉದಾಸೀನ ಮಾಡದೆ

ಕರ್ತೃನೆನಿಪ ಗುರುವಿಜಯವಿಟ್ಠಲರೇಯ 

ಸತ್ಯವಾದ ಪದ ಐದಿಪ ಶೀಘ್ರದಿ ॥ 6 ॥ 


 ಆದಿತಾಳ 


ದ್ವಿದಳಯುಕ್ತವಾದ ಕಿಂಜಲ್ಕ ಫಾಲಭಾಗ

ಮಧ್ಯದಲಿ ಇಪ್ಪದು ಇದನೇವೆ ತಪೊಲೋಕ

ಯದುಕುಲಶ್ರೇಷ್ಠ ತಾನು ಲೋಕಾಧಿಪತಿ ಮಿಕ್ಕ

ಆದಿತ್ಯರಿಂದ ಸೇವೆಗೊಂಬುವ ನಿತ್ಯದಲ್ಲಿ

ಆದರದಲಿ ತಿಳಿ ಸ್ವಪರ ದೇಹದಲ್ಲಿ

ಭೂದೇವತಿಗಳ ಪ್ರಿಯ ಗುರುವಿಜಯವಿಟ್ಠಲರೇಯನ್ನ 

ಪದಗಳ ಧೇನಿಸು ಈ ಬಗೆಯಿಂದ ತಿಳಿದು ॥ 7 ॥ 


 ಧ್ರುವತಾಳ 


ಇಂದ್ರಯೋನಿಯಲ್ಲಿ ಷೋಡಶದಳ ಅರ -

ವಿಂದ ಶೋಭಿಸುವದು ಧವಳ ವರ್ಣ -

ದಿಂದ ಪೊಳೆವದು ಇದನೇವೆ ಜನೋಲೋಕ -

ವೆಂದು ಕರೆವರು ವಿಬುಧರೆಲ್ಲ

ಹೊಂದಿಕೊಂಡಿಪ್ಪನು ಲಕುಮಿ ನಾರಾಯಣ

ವೃಂದಾರಕ ಶ್ರೇಷ್ಠ ಅಹಿಪದೇವ -

ರಿಂದ ಪೂಜೆಯಗೊಂಬ ನವವಿಧ ಭಕುತಿಯಿಂದ

ಕಂದುಕಂಧರ ಮಿಕ್ಕ ದಿವಿಜರೆಲ್ಲ

ವಂದಿಸಿಕೊಳುತಲಿ ಆನಂದದಲಿಹರು

ತಂದು ಈವರು ಫಲವ ತಿಳಿದವರ್ಗೆ

ಚಂದ್ರಕಲಾಭಿಮಾನಿ ದಿವಿಜರ ಸಂತತಿ

ಮಂದಿರವೆನಿಪದು ಆವಕಾಲಾ

ಕುಂದು ಜನರ ಮನಕೆ ಎಂದಿಗೂ ತೋರನಯ್ಯ ನಿ -

ಸ್ಸಂದೇಹದಲ್ಲಿ ನಂಬಿದವಗೆ

ಮುಂದೊಲಿದು ಪೊಳೆವನು ವೇದೈಕವೇದ್ಯನು

ಒಂದಿಷ್ಟು ಅಹಂಕಾರ ಬಂದೊದಗೆ

ಇಂದ್ರಗಾದರು ಶಿಕ್ಷೆ ಮಾಡದೆ ಬಿಡನಯ್ಯ

"ಚಂದ್ರ ಶತಾನನ ಕುಂದ ಸುಹಾಸ

ವಂದಿತ ದೈವತ ಆನಂದ ಸಂಪೂರ್ಣ"

ಎಂದೆಂದು ಬಿಡದೆ ಎಮ್ಮ ಸಲಹುತಿಪ್ಪ -

ನೆಂದು ಕೊಂಡಾಡಿ ಪರಮ ಭಕುತಿಯಿಂದಲಿ ನಮಿಸಿ 

ಎನ್ನಿಂದಲಿ ಪ್ರೀತನಾಗು ಎಂದು ಬೇಡೆ

ಇಂದಿರಾಪತಿ ತನ್ನ ಪರಿವಾರ ಸಹಿತ

ನಿಂದು ತೃಪ್ತನಾಹ ಭಕುತಿ ಪಾಶ -

ದಿಂದ ಕಟ್ಟಿಸಿಕೊಂಬ ಸ್ವತಂತ್ರ ಪುರುಷನಾಗೆ

ಮಂದತನವ ಬಿಟ್ಟು ಇದನೇ ಗ್ರಹಿಸು

ಕಂದರ್ಪ ಕೋಟಿರೂಪ ಗುರುವಿಜಯವಿಟ್ಠಲರೇಯ 

ಬಂಧುನೆನಿಪ ಭಕುತ ನಿಕರಕೆಲ್ಲ ॥ 8 ॥ 


 ಮಟ್ಟತಾಳ 


ಉರದಲ್ಲಿ ದ್ವಾದಶ ದಳ ಪದುಮ ಉಂಟು

ಕರೆಸುವದು ಇದನೆ ಮಹರ್ಲೋಕವು ಯೆಂದು

ಹರಿನಾಮಕ ಮಿಕ್ಕಾ ಭಗವದ್ರೂಪಗಳು

ಮಿರುಗುತಿವೆ ನೋಡು ಭೇದಗಳಿಲ್ಲದಲೆ

ಪುರವೈರಿ ತನ್ನ ನಿಜಸತಿ ಸಹಿತದಲಿ

ಪರಮ ಭಕುತಿಯಿಂದ ವಾಲ್ಗೈಸುತಲಿಹನು

ಸುರಪತಿ ಮಿಕ್ಕಾದ ದಿವಿಜರ ಸಂಘವನ್ನು

ಪರಿತೋಷದಲಿಂದ ಪೂಜೆಯ ಮಾಡುವರು

ನರನೆ ಈ ಪರಿ ತಿಳಿದು ಕರವ ಮುಗಿದು ನಮಿಸಿ

ಪರಿತೃಪ್ತಿಯನೈದು ನೀನಿತ್ತ ರಸದಿಂದ

ಪರಿಪೂರ್ಣನಾದರೂ ಭಕ್ತರ ವಶನಾಗಿ

ಸ್ವೀಕರಿಸುವನು ಬಿಡದೆ ನಿತ್ಯತೃಪ್ತನಾಗೆ

ಪರಿಪೂರ್ಣಮೂರುತಿ ಗುರುವಿಜಯವಿಟ್ಠಲರೇಯ 

ಸಾರಹೃದಯ ನೋಡಿ ಸ್ವೀಕೃತನಾಗುವ ॥ 9 ॥ 


 ತ್ರಿವಿಡಿತಾಳ 


ಹೃದಯದಲಿ ಅಷ್ಟದಳದ ಪದುಮ ಉಂಟು

ಉದಯಾದಿತ್ಯ ವರ್ನದಂತಿಪ್ಪದೋ

ಇದನೇವೆ ಸ್ವರ್ಲೋಕವೆಂಬುವರು ಜ್ಞಾನಿಗಳು

ತ್ರಿದಶಾಧಿಪತಿಯಾದ ಇಂದ್ರ ಮಿಕ್ಕ

ಆದಿತೇಯರಿಂದ ಪೂಜೆಯ ಗೊಂಬುವನು

ಮೋದಸಾಂದ್ರನು ಲಕುಮಿ ನಾರಾಯಣ

ಆದಿಮೂರುತಿ ಕೇಶವಾದಿ ಚತುರ ದ್ವಿದಶ ಮ -

ತ್ಸ್ಯಾದಿ ರೂಪವು ಮಿಕ್ಕಾ ವರ್ಣಾ ಪ್ರತಿ -

ಪಾದನ ರೂಪ ಸ್ವಮೂರ್ತಿಗಣ ಮಧ್ಯಗನಾಗಿ

ಆ ದಿಕ್ಪಾಲಕರಿಂದ ಪೂಜಿಗೊಳುತ

ಪದೋಪದಿಗೆ ಬಂದು ಪ್ರಹರಿಯಾ ತಿರುಗುತ್ತ

ಸದಾಕಾಲದಲ್ಲಿ ವಿಹಿತಾವಿಹಿತ ಮಾಳ್ಪ

ಇದು ಮೀರಲೊಶವಲ್ಲ ವಿಧಿ ಭವ ನಿರ್ಜರರು

ಇದೇ ಮಾರ್ಗದಿಂದ ಸಂಚರಿಸುವರು

ಇದೇ ಮೂಲಪತಿ ಪದಕೆ ಅಭಿಮುಖನಾಗಿ ಪ್ರಾಣ

ಪಾದವ ಆಶ್ರೈಸಿ ಇಪ್ಪ ಜೀವ ತಾನು

ಐದು ದ್ವಾರದಲಿ ಪಂಚರೂಪನಾದ

ಬೋಧ ಮೂರುತಿ ಪ್ರಾಣರುಂಟು ಕೇಳಿ

ಮೊದಲ ದ್ವಾರದಲ್ಲಿ ಪ್ರಾಣನಾಶ್ರಯದಿ ಪುಷ್ಕ -

ರಾದ್ಯರು ಅನಿರುದ್ಧನ ನೋಳ್ಪರಯ್ಯಾ

ಸುದಕ್ಷಿಣ ದ್ವಾರದಲಿ ಅಪಾನಾಂತರ್ಗತ

ಪ್ರದ್ಯುಮ್ನನ ನೋಳ್ಪರು ಋಷಿಗಳೆಲ್ಲ

ಆದರದಲಿ ಕೇಳೊ ಮೂರನೆ ದ್ವಾರದಲಿ

ಅರಿದಲ್ಲಣ ವ್ಯಾನಾಂತರ್ಗತ ಸಂಕರುಷಣನ್ನ

ವಿಧಿಯಿಂದ ನೋಳ್ಪರು ಪಿತೃದೇವತೆಗಳು

ಮುದದಿಂದ ತಿಳಿವದು ನಾಲ್ಕನೆ ದ್ವಾರದಲ್ಲಿ ಜ -

ಗದ ಸೂತ್ರನೆನಿಪ ಸಮಾನಂತರ್ಗತನಾದ ವಾ -

ಸುದೇವನ ತುತಿಪರು ಗಂಧರ್ವ ಗಣರು

ಐದನೆ ದ್ವಾರ ಊರ್ಧ್ವ ಭಾಗದಲ್ಲಿಪ್ಪದು

ಉದಾನಾಂತರ್ಗತ ಲಕ್ಷೀನಾರಾಯಣನಾ

ಮದನವೈರಿ ಮಿಕ್ಕ ಸುರರೆಲ್ಲ ವಂದಿಪರು

ಮೊದಲು ಪೇಳಿದ ನಾಲ್ಕು ದ್ವಾರದಲ್ಲಿ

ನಂದ ಸುನಂದನ ಮೊದಲಾದ ಅಷ್ಟ ಜನ

ಆದಿದೇವನ ಪ್ರಥಮ ದ್ವಾರದಲ್ಲಿ

ಇದರ ಮೇಲೆ ಮೂರು ಮಂಡಲ ವುಂಟು ಕೇಳು ಮ -

ತ್ತಿದರ ಮೇಲೆ ವಿಶಾಲ ದೇಶವುಂಟು ಆ

ಪ್ರದೇಶದಲ್ಲಿ ನೂರು ಖಂಬದ ತೇರು

ಉದಯಾರ್ಕನಂತಾದಂತೆ ಪೊಳೆವುವದೊ ಚಿ -

ನ್ನದ ದಾಮದಿಂದ ವಿರಾಜಿಸುವ ಘಂಟಾ 

ನಾದದಿಂದೆಸೆವುತಿದೆ ಮುತ್ತಿನ ಗೊಂಚಲ -

ದಿಂದ ಬೆಳಗುತಿದೆ ಚಂದ್ರಪ್ರಕಾಶದಂತೆ 

ಮುದದಿ ಶೋಭಿತವಾದ ರಥದ ಮಧ್ಯ

ಅದುಭೂತವಾದ ಮಹಿಮ ಪ್ರಾಜ್ಞನಾಮಕ ತಾನು

ವಿಧಿಭವಾದಿಗಳಿಂದ ಪೂಜೆಗೊಳುತ

ಒದಗಿ ತುತಿಪ ಜನಕೆ ಅಭಯ ಕೊಡುವನಾಗಿ ಈ ತೆ -

ರದಿ ನಿಂದಿಹ್ಯ ಕರುಣಾವನಧಿ ಹರಿ

ಪ್ರಾದೇಶ ಪರಿಮಿತ ಹರಿ ತಾನು ನಿಂದು

ಈ ದೇಹ ರಕ್ಷಿಪನು ನಾಳದಲಿ ನಿಂತು

ವಿಧಿಭವ ಸುರರಿಂದ ವಂದಿತನಾಗಿ ಹರಿ

ಹೃದಯದೊಳಗೆ ಇರಲು ತಿಳಿಯದಲೆ

ಉದಯಾಸ್ತಮಾನ ಬರಿದೆ ಸಾಧನ ಮಾಡುವನ್ನ

ಹದುಳತನಕೆ ನಾನೇನೆಂಬೆನೋ

ಉದಯಾರ್ಕ ಪ್ರಭಾ ಗುರುವಿಜಯವಿಟ್ಠಲನ್ನ 

ಒದಗಿ ಬೇಡಿಕೊ ತೃಪ್ತನಾಗು ಎಂದು ॥ 10 ॥ 


 ಅಟ್ಟತಾಳ 


ನಾಭಿ ಸ್ಥಾನದಲ್ಲಿ ಆರುದಳದ ಪದ್ಮ

ಶೋಭಿಸುತಿಪ್ಪದು ಭುವರ್ಲೋಕ ನಾಮದಿಂದ ನೀ -

ಲಾಭ ಮೊದಲಾದ ಚತುರ ರೂಪಂಗಳು

ನಾಭಿಜಾತನ್ನ ಸಮನಾದ ದೇವನೊಳು

ಶೋಭಿಸುತಿಪ್ಪನು ಪ್ರದ್ಯುಮ್ನ ದೇವನು

ಸುಭಕುತಿಯಿಂದ ಗಣಪತಿ ಸೇವಿಪ

ನಾಭಿಸಂಭವ ಮೊದಲಾದ ದೇವತೆಗಳು

ವೈಭವದಿಂದಲಿ ವಂದಿಪರು ಪದುಮ -

ನಾಭನ ಸತಿಯರು ಆರು ಜನರು ಉಂಟು

ಸೌಭಾಗ್ಯವಂತನು ಇದು ತಿಳಿದವ, ಮುಖ್ಯ 

ನಿರ್ಭಾಗ್ಯನೆ ಸರಿ ಈ ಸೊಬಗು ತಿಳಿಯದವ

ತ್ರಿಭುವನದೊಡಿಯ ಗುರುವಿಜಯವಿಟ್ಠಲರೇಯ 

ಸಾಭಿಮಾನದಿಂದ ಪೊರೆವನೋ ತಿಳಿದರೆ ॥ 11 ॥ 


 ರೂಪಕತಾಳ 


ಮೂಲಸ್ಥಾನದಲ್ಲಿ ಚತುರದಳ ಕಮಲ ಪ್ರ -

ವಾಳ ಮಾಣಿಕ ವರ್ನದಂತಿಪ್ಪದು

ಭೂರ್ಲೋಕವಿದು ಯೆಂದು ಕರೆವರು ವಿಬುಧರು

ನೀಲೋತ್ಪಲ ಶ್ಯಾಮನಾಳುಗಳು

ನಾಲ್ಕು ನಾಡಿಗಳಲ್ಲಿ ನಾಲ್ಕು ರೂಪದಿ ಹರಿ

ನಾಲ್ಕು ವೇದಗಳಿಂದ ತುತಿಸಿಕೊಳುತ

ಮೇಲೆನಿಪ ಸುಷುಮ್ನದಲಿ ನಾರಾಯಣ ಲಕುಮಿ

ಕೀಲಾಲಜ ಮಿಕ್ಕ ಸುರರಿಂದಲಿ

ವಾಲಗ ಕೊಳುತಿಪ್ಪ ಆನಂದ ಪೂರ್ಣನು

ಶೀಲ ಭಕುತಿಯಿಂದ ಮನು ಶ್ರೇಷ್ಠನು

ನೀಲಾಭನನಿರುದ್ಧನರ್ಚಿಪ ನಿರುತ ಸ -

ಲೀಲಜಕೆ ಅಭಿಮಾನಿ ಎನಿಸಿ

ಕಾಲಚಕ್ರದ ತೆರದಿ ಜಡವಾಯು ತಾನಿಂದು

ಮೇಲಧೋ ಭಾಗದಲಿ ತಿರುಗುವದು

ಮೂರ್ಲೋಕನಾಥನು ಇನಿತು ವ್ಯಾಪಕನಾಗಿ ವಿ -

ಶಾಲ ಕರುಣದಿಂದ ಸಲಹುತಿರೆ

ಬಾಲಮತಿಗರಾಗಿ ಗ್ರಹಿಸದಿರುವ ಮನುಜ

ವ್ಯಾಳ ವ್ಯಾಘ್ರನೆ ಸರಿ ನರನಾದರೂ

ಹೂಳುವ ನಿರಯ ನಿತ್ಯದಲ್ಲಿ ಯಮ ತಾನು

ಬಾಳುವನೆಂತೋ ಮುಕ್ತಿ ಪಥದಿಂದಲಿ

ಕೀಲು ಕೀಲಿಗೆ ನಿಂದು ವ್ಯಾಪಾರ ಮಾಳ್ಪನ್ನ

ಆಲೋಚಿಸಿ ತಿಳಿಯದೆ ವ್ಯರ್ಥವಾಗಿ

ಸಾಲು ಕರ್ಮವ ಮಾಡೆ ಅವನ ಸಾಹಸವನ್ನು

ಸೂಳಿಗಿಕ್ಕಿದ ಧನದಂತೆ ನೋಡೊ

ಪಾಲಸಾಗರ ಶಾಯಿ ಗುರುವಿಜಯವಿಟ್ಠಲನ್ನ 

ಲೀಲೆ ತಿಳಿದು ತೃಪ್ತನಾಗು ಇನ್ನು ॥ 12 ॥ 


 ಝಂಪೆತಾಳ 


ಊರು ದ್ವಯಗಳಲ್ಲಿ ಅತಳ ವಿತಳ ಲೋಕ

ಚಾರು ಜಾನುಗಳಲ್ಲಿ ಸುತಳ ಲೋಕ

ಸಾರ ಜಂಘದಿ ತಳಾತಳವು ಇಪ್ಪದು ನೋಡಿ

ಥೋರ ಗುಲ್ಫದಿ ಮಹಾತಳವು ಕೇಳಿ

ಸಾರುತಿದೆ ಪ್ರಪದದಲಿ ರಸಾತಳ ಲೋಕವೆಂದು

ಮೀರದಲೆ ಕೇಳೊ ಪಾತಾಳಲೋಕ

ತೋರುತಿದೆ ಪಾದಮೂಲದಲಿ ಸುಜನರುಗಳಿಗೆ

ಬರಿದೆ ಮಾತುಗಳಲ್ಲ ಶ್ರುತಿಸಿದ್ಧವೋ

ಮೂರುವರೆ ಕೋಟಿ ತೀರ್ಥಂಗಳುಂಟು ಅಂಗುಟದಿ

ಧಾರುಣಿಯ ಕೆಳಗಿಪ್ಪ ಜಲ ಸಂಜ್ಞದಿ

ನಾರಾಯಣನು ಕೂರ್ಮನಾಗಿ ಪೊತ್ತಿಹನಲ್ಲಿ

ಸಾರಸುಂದರ ಮೂರ್ತಿ ತೀರ್ಥಪಾದ

ನಾರಾಯಣನು ನಿಂದು ದೇಹ ದೇಹಂಗಳ

ಭಾರ ಪೊತ್ತಿಹ ಸಿರಿ ವಾಯು ಸಹಿತ

ಈ ರೀತಿ ಹರಿ ತನ್ನ ಪರಿವಾರ ಸಹಿತದಲಿ

ಶಾರೀರ ವ್ಯಾಪಾರ ಮಾಡುತಿರಲು

ಕ್ರೂರರಿದು ತಿಳಿಯದಲೆ ನಾನೇ ಸ್ವಾತಂತ್ರನೆಂದು

ಸಾರಿಸಾರಿಗೆ ನುಡಿವ ದುರುಳ ಜನರ

ಪೌರುಷಕೆ ಏನೆಂಬೆ ಸ್ವಾತಂತ್ರ ತಾನಾಗೆ

ಶಾರೀರಕೆ ವ್ಯಾಧಿ ಬರುವದ್ಯಾಕೋ

ಸರ್ವಕಾಲದಿ ಸುಖಾಪೇಕ್ಷ ಮಾಡುವ ನರಗೆ

ಮೀರಿ ತ್ರಯತಾಪದಲಿ ಬಳಲಿ ನರಕ

ಸೇರುವ ಬಗೆ ಯಾಕೆ ತೋರುತಿದೆ ಆಶ್ಚರ್ಯ

ಶಾರೀರ ಮೊದಲಾದ ಕರ್ಣಗಳು

ವಾರ ವಾರಕೆ ದೃಢವನಾಪೇಕ್ಷಿಯಾದವಗೆ

ಭರದಿ ಮಧ್ಯದಿ ನಾಶ ಬರುವದೇನೋ

ದೂರ ದೇಶಗಳೆಲ್ಲ ತಿರುಗಿ ಬರುವೆನೆಂದು

ಸಾರೆದಲಿ ಮೃತ್ಯು ವಶವಾಹದೇನೋ

ಸಾರೆ ದೂರುವ ಕಾಣದಿಪ್ಪ ಮೂಢನು ತಾನು ಅ -

ಪಾರ ಮಹಿಮೆಗೆ ಸಮಾನನೆನಿಸುವನೇ

ವರ ವಾದ ಪ್ರತ್ಯಕ್ಷ ಶಬ್ದನುಮಾನ ಅ -

ಪೌರುಷೇಯವಾದ ನಿಗಮಗಳಿಗೆ 

ದೂರವಾಗಿಹ ಮಾತು ಸಜ್ಜನರ ಕಂಗಳಿಗೆ

ತೋರದಯ್ಯಾ ನಿಜವು ಎಂದೆಂದಿಗೆ ವೈ -

ಕಾರವಾಗಿದ್ದ ಚಿತ್ತ ವಿಭ್ರಮದಿಂದ

ಶಾರೀರ ಸ್ಮರಣೆಯನ್ನು ಇಲ್ಲದಿಪ್ಪ

ನರಾಧಮನು ತಾನು ನಾನಾ ವಾಕ್ಯವ ನುಡಿಯೆ

ಧೀರರಿಗೆ ಪ್ರಾಮಾಣ್ಯ ವೆನಿಸುವದೇ

ಕರವ ಚಲಿಸುವ ಶಕ್ತನಾಹದಿದ್ದವನಾಗಿ

ಮೇರು ಎತ್ತುವೆನೆಂಬ ಮೃಷವಾದಿ ತೆರದಿ

ವರಲಿ ಕೊಂಡದಕವನ ಮರಳಿ ನೋಡುವರಿಗೆ

ಸ್ವಾರಸ್ಯ ಎನಿಸುವದೆ ಎಂದಿಗನ್ನ

ಶ್ರೀರಮಣ ಸರ್ವೇಶ ಗುರುವಿಜಯವಿಟ್ಠಲರೇಯ 

ಸಾರಿಗಾಣದೆಯಿದ್ದ ಸ್ವಾತಂತ್ರನೋ ॥ 13 ॥ 


 ಧ್ರುವತಾಳ 


ಪೆಟ್ಟಿಗೆಯೊಳಗಿಪ್ಪ ಮೂರ್ತಿಯ ಭಕುತಿಲಿ

ನಿಷ್ಠೆಯಿಂದಲಿ ಪೂಜೆ ಮಾಡಿಕೊಳುತ

ಇಷ್ಟ ಬೇಡುವದು ಸಹಜವೆ ಸರಿ ಬರಿದೆ

ಪೆಟ್ಟಿಗೆ ಪೂಜೆಯನ್ನು ಮಾಡಿ ತನ್ನ

ಇಷ್ಟ ವೈದುವೆನೆಂಬ ಸಾಹಸದಿಂದ ನೋಡಿ

ವಿಷ್ಣು ಸಕಲವಾದ ವಸ್ತುಗಳಲ್ಲಿ

ಧಿಟ್ಟನಾಗಿ ವ್ಯಾಪ್ತನಾಗಿ ಇರಲು ತಿಳಿಯದೆ ಅ -

ಶ್ರೇಷ್ಠವಾದ ಜೀವ ಸಂಘಗಳನು

ಮುಟ್ಟಿ ಭಜಿಸಿದರೆ ಶ್ರೇಷ್ಠರಾಗುವದೆಂತೊ

ಹೃಷ್ಟರಾಗರಯ್ಯಾ ಇಹಪರದಿ

ಧಿಟ್ಟಮೂರುತಿ ವ್ಯತಿರಿಕ್ತವಾಗಿ ಪರ -

ಮೇಷ್ಠಿ ಸುರರ ಪೂಜೆ ಸ್ವತಂತ್ರದಿ

ಶ್ರೇಷ್ಠವಾಗದಯ್ಯಾ ಶ್ರುತಿ ಸ್ಮೃತಿ ಸಮ್ಮತ ಶ್ರೀ -

ಕೃಷ್ಣನ ವಾಕ್ಯವುಂಟು " ಯೇಪ್ಪ್ಯೆನ್ನ ದೇವತಾ 

 ಭಕ್ತ್ಯಾಯಜಂತೆ ಶ್ರದ್ಧಯಾನ್ವಿತಾಃ 

 ತೇಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಂ " 

ಸೃಷ್ಟಿಯೊಳಗೆ ಬ್ರಹ್ಮ ರುದ್ರಾದಿ ಸುರರ ಪೂಜಾ

ಪುಷ್ಟ ಷಾಡ್ಗುಣ್ಯ ತಾನೇ ಸ್ವೀಕರಿಸಿದರು

ಶಿಷ್ಟವಾದ ವಿಧಿ ಯೆನಿಸದು ಎಂದೆಂದಿಗೆ 

ಹೃಷ್ಟ ಮನಸಿನಿಂದ ಗ್ರಹಿಸುವದು

ಶಿಷ್ಟರಾದವರನ್ನ ಭಜಿಸಿದ ಕಾಲಕ್ಕು ಅವರ ಹೃದ -

ಯಷ್ಟದಳದಲಿಪ್ಪ ದೇವನಲ್ಲಿ

ದೃಷ್ಟಿಯುಳ್ಳವನಾಗಿ ಮಾಡಿದ ಉಪಚಾರ

ಶ್ರೇಷ್ಠನಾದ ಹರಿಗೆ ಸಮರ್ಪಿಸು ಉ -

ತ್ಕೃಷ್ಟ ಮಹಿಮ ಗುರುವಿಜಯವಿಟ್ಠಲನ್ನ 

ಬಿಟ್ಟು ಮಾಡಿದುದು ಅವಿಧಿಯು ॥ 14 ॥ 


 ಮಟ್ಟತಾಳ 


ಈ ವಿಧದಲಿ ತಿಳಿದು ಭಕುತಿಯಿಂದಲಿ ನೀನು

ದೇವದೇವನ ಯಜಿಸು ಜ್ಞಾನಪೂರ್ವಕದಿಂದ

ಆವ ಷಡ್ರಸದಿಂದ ಪೂರ್ಣನಾದ ಹರಿಗೆ

ಆವಾವ ಕಾಲದಲಿ ಆಪೇಕ್ಷೆಗಳಿಲ್ಲ

ಜೀವದ ನಿಮಿತ್ಯ ಸ್ಥೂಲಾನ್ನವ ಕೊಂಬ ಸ್ವ -

ಭಾವದಿಂದಲಿ ಹರಿ ಪರಿಪೂರ್ಣ ತಾನಾಗಿ

ಭುವನತ್ರಯವನ್ನು ನಿರ್ಮಾಣವ ಮಾಡಿ

ಪಾವಮಾನ ವಿಧಿ ಭವ ಇಂದ್ರಾದ್ಯರಿಗೆ

ಅವರವರ ಯೋಗ್ಯ ಪದವಿಯ ಕಲ್ಪಿಸಿ

ಆ ವಿಧಿ ಸ್ತಂಭ ಪರಿಯಂತವಾಗಿ

ಸುವಿಹಿತಾವಿಹಿತ ತೃಪ್ತಿಯ ನೀವಂಗೆ

ನಾವಿತ್ತನ್ನದಲಿ ಅಪೇಕ್ಷೆಗಳುಂಟೆ ?

ಸಾವಿರ ಕೋಟ್ಯಾಧಿಕ ಸಂಪನ್ನನು ಎನಿಸಿ

ಜೀವ ಕೋಟಿಗಳಿಗೆ ಅನ್ನವ ನೀವಂಗೆ

ಕೇವಲ ದಾರಿದ್ರನ ಅನ್ನಾಪೇಕ್ಷೆ ಮಾಡುವನೆ

ಸುವಿಮಲವಾದ ನವನವ ಭಕುತಿಯಲಿ

ಭಾವ ಭರಿತನಾಗಿ ಪ್ರಾರ್ಥಿಸೆ ಕರುಣಿಸಿ

ಆವ ರಸದ ದ್ವಾರ ಭಕುತಿಯ ಸ್ವೀಕರಿಪ

ಭಾವದಲಿ ಭಕುತಿ ಇಲ್ಲದಿದ್ದರೆ ನೋಡಾ

ದೇವ ದೃಷ್ಟಿಲಿ ನೋಡ ಕಾಲತ್ರಯದಲ್ಲಿ

ಶ್ರಾವ್ಯವೆ ಸರಿ ಧಾರ್ತರಾಷ್ಟ್ರನ ಧಿಕ್ಕರಿಸಿ

ಆ ವಿದುರನ ಮನೆಯ ಪಾಲುಂಡನು ಕೃಷ್ಣ

ಭೂವಿಬುಧರ ಪ್ರಿಯ ಗುರುವಿಜಯವಿಟ್ಠಲರೇಯ 

ಸಾವಿರ ಮಾತಿಗ್ಯೂ ಭಕುತಿಯಿಂದಲಿ ವಶನೋ ॥ 15 ॥ 


 ತ್ರಿವಿಡಿತಾಳ 


ಒದಗಿ ಕೇಳುವದು ಭಕುತಿಯಿಂದಲಿ ಮನವೆ

ಇದನು ಗ್ರಹಿಸಿದವ ಜೀವನ್ಮುಕ್ತಾ

ಇದನು ಗ್ರಹಿಸಿದವಗೆ ಪುನರಪಿ ಜನ್ಮವಿಲ್ಲ

ಇದನು ಗ್ರಹಿಸೆ ಹರಿ ವಶನಾಗುವ

ಇದನು ಗ್ರಹಿಸಿದವನ ಸುರರೆಲ್ಲ ಮನ್ನಿಪರು

ಇದನು ಗ್ರಹಿಸಿದವ ಮಾನ್ಯನಾಹ

ಇದನು ಗ್ರಹಿಸಿದವ ಕುಲಕೋಟಿ ಸಹವಾಗಿ

ಮಧುವೈರಿ ಪುರವನ್ನೆ ಸೂರೆಗೊಂಬ

ಇದನು ಗ್ರಹಿಸಿದವಗೆ ನರಕದ ಭಯವಿಲ್ಲ

ಇದನು ಗ್ರಹಿಸೆ ನಿತ್ಯ ಸುಖಿಯಾಹನೋ

ಮೊದಲು ಪೇಳಿದಂತೆ ಗುಣಿಸು ಅಂತರದಲ್ಲಿ

ಅದುಭೂತ ಮಹಿಮನ್ನ ಸ್ವಪರ ದೇಹದಲ್ಲಿ

ಸದಮಲ ಮೂರ್ತಿಗಳು ಅಸಂಖ್ಯವಾಗಿ ವುಂಟು

ವಿಧಿ ಭವ ಮುಖರಿಂದ ಎಣಿಸಲೊಶವೆ

ಯಾದವ ಕುಲಮಣಿ ಕೃಷ್ಣನ ವಾಕ್ಯ ಉಂಟು

" ಅವಿಭಕ್ತಂಚ ಭೂತೇಷು ವಿಭಕ್ತಮಿವಚಸ್ಥಿತಂ "

ಆದರದಲಿ ತಿಳಿ ಐದು ಮೂರು ಮತ್ತೆ ಕೃದ್ಧೋಲ್ಕಾದಿ

ವಿಧಿ ಶಿವ ಪ್ರವರ್ತಕ ಕೇಶವಾದಿ ಚತುರ್ವಿಂಶತಿ

ವಿದ್ಯ ಮತ್ಯಾದಿ ಮೂರುತಿ ದ್ವಾದಶವು

ಕುಧರಾದಿ ದಶರೂಪ ಹಿಂಕಾರ ಪ್ರಸ್ಥಾವ

ಉದ್ಗೀಥ ಮೊದಲಾದ ನಾನಾರೂಪ ಅ -

ಜಾದಿ ಐವತ್ತೊಂದು ನಾರಾಯಣಾದಿ ನೂರು ವಿ -

ಶ್ವಾದಿ ಸಹಸ್ರ ಪಂಚಕೋಶದಿಪ್ಪ

ಐದು ಲಕ್ಷದ ಎಂಭತ್ತೈದು ಸಾಸಿರ ನಾಲ್ಕು ನೂರು

ಮೋದಸಾಂದ್ರನು ಎಪ್ಪತ್ತೆರಡು ಸಹಸ್ರ ನಾಡಿಗಳಲ್ಲಿ

ಇದೇ ಕ್ಲಿಪ್ತದಿಂದಲಿ ಸ್ತ್ರೀ ಪುರುಷರೂಪ ಉಂಟು ಅಜಿ -

ತಾದಿ ಅನಂತನಂತವಾದ ರೂಪ ಧರಿಸಿ

ಆದಿಮೂರುತಿ ಪರಾದಿ ಅನಂತಾನಂತ

ಸದಮಲ ರೂಪದಿಂದ ವ್ಯಾಪ್ತನೆನಿಸಿ

ಈ ದೇಹದಲ್ಲಿದ್ದು ರಕ್ಷಿಪ ಬಗೆಯನರಿದೆ

ಅಧಮ ನರನು ನಾನೇ ಸ್ವಾತಂತ್ರನೆನ್ನೆ

ಬುಧರಿಗೆ ಪ್ರಿಯನಾದ ವೀರನ ಗದೆಯಿಂದ

ವೇದನವಾಗದಲೆ ಮೀರುವನೇ

ಇದನು ಗ್ರಹಿಸದವ ಮುಕ್ತಿಯೋಗ್ಯನಾಗೆ

ಬಾಧಿ ತಪ್ಪಿಸಿಕೊಳನು ನರಕದಲ್ಲಿ

ಇದನು ಇರಲಿ ಮತ್ತೆ ಮುಂದೆ ಕೇಳುವದು

ಮೇದಿನಿಯಲ್ಲಿದ್ದ ಸಕಲ ಲಕ್ಷಣವ

ಇದನು ಅಂಶಿಯೆಂದು ತಿಳಿವರು ಜ್ಞಾನಿಗಳು

ಹೃದಯದಲ್ಲಿಪ್ಪದು ಅಂಶವೆನ್ನು

ಇದನು ಕೇಳು ಪರಮ ವಿಸ್ತಾರವಾದ ಮಹಿಮೆ

ಆದಿಪುರುಷ ವೈಕುಂಠವಾಸಿ

ವದನ ಸಾಸಿರನ್ನ ನೆನೆದು ಅವರವರ

ಹೃದಯದಿಪ್ಪವಂಗೆ ಏಕೀಕರಣ ಮಾಡು

ಉದಯಾರ್ಕ ಕೋಟಿ ಪ್ರಭಾ ಅನಂತಾಸನದಿಪ್ಪ

ಪದುಮನಾಭ ಮತ್ತೆ ಕ್ಷೀರಾಬ್ಧಿಶಾಯಿ

ವದನ ಸಾಸಿರ ತಲ್ಪನಾದ ನಾರಾಯಣ

ಬದರಿ ನಿವಾಸಿಯಾದ ವೇದವ್ಯಾಸ ಮ -

ಹಿದಾಸ ಶಿಂಶುಮಾರ ಹಯಶೀರ್ಷ ವಡಭಾ ಕಲ್ಕಿ

ಸುಧನ್ವಂತ್ರಿ ಹಂಸವಕ್ತ್ರಾ ಕಪಿಲ ಋಷಭ

ಮೋದ ಸಾಂದ್ರನಾದ ಪುರುಷರೂಪ ತ್ರಯ

ಆದ್ಯಂತ ರಹಿತನಾದ ದತ್ತಾತ್ರಯ

ಆದಿ ಮೂರುತಿ ಅವತಾರಗಳೆಲ್ಲ ಸ್ಮರಿಸಿ

ಅದ್ವೈತ ತ್ರಯಂಗಳ ಅನ್ವಯಿಸೋ

ಪ್ರಾದೇಶ ಮೂರ್ತಿ ತಾನೆ ಯಜ್ಞನಾಮಕನೆಂದು

ಪದೋಪದಿಗೆ ತಿಳಿದು ಸಕಲ ರೂಪ

ಹೃದಯ ಸಂಸ್ಥಿತನಲ್ಲಿ ಐಕ್ಯ ಚಿಂತನೆ ಮಾಡೊ

ಭೇದವಿಲ್ಲ ನೋಡೊ ಎಳ್ಳಿನಿತು

ಬೋಧ ಮೂರುತಿ ಗುರುವಿಜಯವಿಟ್ಠಲರೇಯ 

ಇದನು ತಿಳಿದವನ್ನ ಕ್ಷಣವಗಲನೋ ॥ 16 ॥ 


 ರೂಪಕತಾಳ 


ಬದರಿ ದ್ವಾರಕಾ ಲೋಹಕ್ಷೇತ್ರ ಕಾಶಿ ಪ್ರಯಾಗ ಶ್ರೀ -

ಪದವೀವ ಗಯಾಕ್ಷೇತ್ರ ಅಯೋಧ್ಯ

ಯದುಗಿರಿ ತೋತಾದ್ರಿ ಶ್ರೀಮುಷ್ಣ ಮನ್ನಾರಿ

ಪದುಮನಾಭಾನಂತ ವೈಕುಂಠಾಚಲಾ

ನಿಧಿ ಮೊದಲಾದ ಸುಕ್ಷೇತ್ರದಲ್ಲಿಪ್ಪ

ವಿಧಿಭವ ಮುಖರಿಂದ ಪೂಜೆಗೊಂಬ

ಸದಮಲ ಮೂರ್ತಿಗಳು ಇರುವ ಕ್ರಮದಿಂದ ದಶ

ವಿಧದಿಂದ ಇರುತಿಪ್ಪ ಬಗೆಯನರಿತು

ಹೃದಯ ಸಂಸ್ಥಿತನಲ್ಲಿ ತಂದು ಕೂಡಿಸು ಮರಳೆ

ಇದೇ ಲೋಕವಿಡಿದು ಮತ್ತೆ ಪಾತಾಳದಿ 

ಐದೆರಡು ಲೋಕಾದಿ ಇರುತಿಪ್ಪ ಮೂರ್ತಿಗಳು

ಒದಗಿ ಚಿಂತಿಸಿ ಐಕ್ಯ ತಿಳಿಯೊ ನೀನು ಈ

ವಿಧದಿಂದ ಸಂಸ್ತುತಿಸಿ ಪರಮ ಭಕುತಿಯಿಂದ

ಉದಕ ಕೊಡುವನ್ಯಾಕೆ ಅಮೃತೋಪಮವೋ

ಪದುಮನಾಭನಿಗಿದೆ ಪೂಜೆಯೆನಿಸುವದಯ್ಯಾ

ಇದೇ ಬಗೆಯನೆ ತಿಳಿಯದೆ ವ್ಯರ್ಥವಾಗಿ

ಬುಧರು ನಾವೆಂತೆಂದು ಬರಿದೆ ಹಿಗ್ಗುವ ನರನ

ಮದಗರ್ವಕ್ಕೇನೆಂಬೆ ಮಹಿಯೊಳಗೆ

ಸುಧಿಯಾಬ್ಧಿ ಪ್ರಯತ್ನವಿಲ್ಲದೆ ಜಗದೊಳು

ಉದುಭವಿಸಿರೆ ಬಿಟ್ಟು ಯತ್ನದಿಂದ

ಆದರದಿ ವಿಷವನ್ನು ಪಾನ ಮಾಡುವರೆಲ್ಲ

ವಿಧಿಲಿಖಿತವನು ಮೀರಲಾಪರಾರು

ಪದುಮ ಸಂಭವನುತ ಗುರುವಿಜಯವಿಟ್ಠಲನ್ನ 

ಪದಗಳ ಬಿಗಿದಪ್ಪಿ ಸುಖಿಸೊ ಸತತ ॥ 17 ॥ 


 ಝಂಪೆತಾಳ 


ಸತ್ಯವಿದು ಗ್ರಹಿಸುವದು ಶ್ರುತಿ ಸ್ಮೃತಿಯಲಿರುತಿಪ್ಪ

ಅರ್ಥಗಳಿವು ಕೇಳು ಭಕುತಿಯಿಂದ

ಮಿಥ್ಯವೆಂದಿಗು ಅಲ್ಲ ಅದೃಷ್ಟಹೀನನಾಗಿ

ಅತಥ್ಯವೆಂದರೆ ಅದಕೆ ಮಾಳ್ಪದೇನು

ವ್ಯರ್ಥವಾಗಿ ಭವದಿ ದುಃಖಗಳುಣಲೇಕೆ ಉ -

ಧೃತ್ಯ ನಾಗುವೆನೆಂಬ ಮನಸಿನಿಂದ

ಕೀರ್ತಿಸು ಹರಿಯನ್ನು ಪೂರ್ವೋಕ್ತದಂತೆ ತಿಳಿದು

ಭಕ್ತಿಯಿಂದಲಿ ಯಜಿಸೋ ವಿಧಿಪೂರ್ವಕ

ಸತ್ಯಲೋಕಾಧಿಪನ ಸತಿಸಹಿತ ಮಿಕ್ಕಾದ ಲೋ -

ಕಸ್ಥರೆಲ್ಲರ ಸ್ಮರಿಸು ತಪೋ ಜನೋಲೋಕವ

ಮತ್ತೆ ಮಹರ್ಲೋಕ ಸ್ವರ್ಲೋಕ ಭುವರ್ಲೋಕ

ಮರ್ತ್ಯಲೋಕವು ಮತ್ತೆ ಅಧೋಲೋಕಂಗಳ

ಸಪ್ತವನ ಚಿಂತಿಸು ಮರೆಯದಲೆ ಲೋಕಾಧಿ -

ಪತ್ಯರನು ಭೃತ್ಯರನು ಸತಿಯರಿಂದ

ಯುಕ್ತರಾದವರೆಲ್ಲ ಅಂಶಿಯೆನಿಸುವರಯ್ಯಾ

ಹೃತ್ಪುಂಢ್ರದಲಿ ನಿಲಿಸಿ ಹರಿ ಅಂಶವೆನ್ನು

ಉಕ್ತಿಯನು ಲಾಲಿಪುದು ಅಂಶಾಂಶ ಭಾಗಗಳು ಏ -

ಕತ್ರ ಚಿಂತಿಸು ಬಿಡದೆ ದೇಹದಲ್ಲಿ ಆ -

ಸಕ್ತಿಯಿಂದಲಿ ಮನದಿ ಪ್ರಾರ್ಥಿಸಿ ಅವರವರ

ಹೃತ್ಕಮಲದಲ್ಲಿದ್ದ ಮೂರ್ತಿಗಳನು

ಮತ್ತೆ ಕೂಡಿಸು ಮರಳೆ ಸಕಲ ರೂಪಗಳಲ್ಲಿ

ಅತ್ಯಂತ ಅಭೇದವೆಂದು ತಿಳಿಯೊ ಅ -

ಸತ್ಯವೆನ್ನಲಿ ಸಲ್ಲ ಅರ್ಜುನಗೆ ಶ್ರೀಕೃಷ್ಣ

ಮಿತ್ರನಾಗಿ ಪೇಳ್ದ ವಾಕ್ಯವುಂಟು

" ವಿದ್ಯಾ ವಿನಯ ಸಂಪನ್ನೆ ಬ್ರಾಹ್ಮಣೆ ಗವಿಹಸ್ತಿನಿ 

 ಶುನಿಚೈವ ಶ್ವಪಾಕೇಚ ಪಂಡಿತಾಃ ಸಮದರ್ಶಿನಃ "

ಈ ತೆರದಲಿ ತಿಳಿದು ಸಂದೇಹ ಮಾಡದೆ

ಸರ್ವಮೂರ್ತಿಗಳ ಕೂಡಿಪದು ಬಿಂಬನಲ್ಲಿ

ಮರ್ತ್ಯರಾರಂಭಿಸಿ ಸಕಳ ಜಡಚೇತನ ಎಂ -

ಭತ್ತು ನಾಲ್ಕು ಲಕ್ಷ ಜಾತಿಗಳನು 

ಉತ್ತಮೋತ್ತಮ ಬಗೆಯನರಿತು ಅವರಂತೆ

ಸ್ತುತ್ಯ ಹರಿಮೂರ್ತಿಗಳು ಐಕ್ಯ ತಿಳಿಯೋ

ತತ್ವವಿದು ತಿಳಿಯದಲೆ ಕೋಟ್ಯಾಧಿಕ ಜೀವರಿಗೆ

ವಿತ್ತನ್ನ ಮೊದಲಾದ ದಾನಗಳನು

ಇತ್ತರೇನು ಫಲವು ಅಲ್ಪ ಪುಣ್ಯಗಳಿಂದ

ಮತ್ತೆ ಮತ್ತೆ ಬರುವ ಭೂಮಿಯಲ್ಲಿ

ಮೃತ್ಯುವಿಗೆ ಸಮನಾದ ದುಃಖಗಳು ಮೀರುವನೆ

ಎತ್ತಲಿದ್ದರೇನು ಹರಿ ವಿಮುಖನೋ

ನಿತ್ಯ ತೃಪ್ತನಾದ ಗುರುವಿಜಯವಿಟ್ಠಲರೇಯ 

ಎತ್ತಿ ನೋಡನು ಮುಖವು ಎಂದಿಗನ್ನ ॥ 18 ॥ 


 ಆದಿತಾಳ 


ಇದು ಪರಮ ಗೌಪ್ಯವಯ್ಯಾ ಗುಹ್ಯಾದ್ಗುಹ್ಯೋತ್ತಮ

ಆದಿತೇಯ ವಿದ್ಯವಿದು , ಅಧಮರಿಗೆ ಯೋಗ್ಯವಲ್ಲ

ಮೋದತೀರ್ಥ ಮತಾನುಗರಾಗಿದ್ದ ಸುಜನರ 

ಪಾದಕ್ಕೆರಗಿ ಬೇಡಿಕೊಂಬೆ ದುರುಳರಿಗೆ ಪೇಳಸಲ್ಲ

ಸದಮಲ ಯಜ್ಞ ಶೇಷ ಶುನಕಗೆ ಯೋಗ್ಯವಲ್ಲ

ಇದರಂತೆ ತಿಳಿವದು ಮನ್ನಿಸಿ ಕರುಣದಿ

ಆದರದಲಿ ಹರಿಪದಗಳ ಭಜಿಸುವ

ಬುಧರಿದು ಭಕುತಿಲಿ ಸ್ವೀಕಾರ ಮಾಡುವದು

ಇದೆ ಬಗೆ ತಿಳಿವರ್ಗೆ ಪುನರಪಿ ಜನ್ಮವಿಲ್ಲ

ಇದು ಎನ್ನ ಮಾತಲ್ಲ ಶ್ರೀಹರಿ ವಾಕ್ಯವುಂಟು

" ಸರ್ಗೋಪಿನೋಪ ಜಾಯಂತೆ ಪ್ರಳಯೇನವ್ಯಥಂತಿಚ "

ಎಂದು ಇದು ಗ್ರಹಿಸಿ ಸುರರೆಲ್ಲ ಸುಖಬಡುವರು ನಿತ್ಯ

ಇದು ತಿಳಿದ ಮಾನವರು ನರರಲ್ಲ ಸುರರೇ ಸರಿ

ವಿಧುಃ ಶ್ರೀವತ್ಸಲಾಂಛನ ಗುರುವಿಜಯವಿಟ್ಠಲರೇಯ 

ಬದಿಯಲ್ಲಿ ಇರುತಿಪ್ಪ ಇದು ಗ್ರಹಿಸಿದವರಿಗೆ ॥ 19 ॥ 


 ಜತೆ 


ಹರಿಯ ಯಜಿಸು ಇನಿತು ಜನುಮದೊಳಗೆ ಒಮ್ಮೆ

ಮರಳೆಬಾರದು ದೇಹ ಗುರುವಿಜಯವಿಟ್ಠಲ ಬಲ್ಲ ॥

*******