..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ನೆನಸದಿರು ಎಲೆ ಮನವೆ ಅನುದಿನ
ವಿಷಯ ಸುಖವು ಎಂದು
ಕನಸಿಲಾದರು ಸ್ಮರಿಸಲಾಗದು ಮನವೆ ಪ
ಘನ ಸಂತೋಷವಿಲ್ಲವಿದು ನಿತ್ಯಾನಿತ್ಯ ಸುಖ ಬಯಸಿ
ಮನದಲ್ಲಿ ನೀ ಸ್ಮರಿಸೆ ಹರಿಯೆ | ತೊರೆಯ ಅ.ಪ
ಅಶನ ವಸನ ಪಶುವ್ರಾತ ವಶವಿರುವಾಭರಣ
ಹಸನಾದ ರಥ ಪದಾತಿಗಳು
ಸ್ವಸ್ವರೂಪವಲ್ಲ ಭಿನ್ನ ತಿಳಿಯೊ | ಮಮತೆ ಅಳಿಯೊ 1
ಬುದ್ಧಿ ವಿದ್ಯಾಕುಶಲ ಗತಿ ಅಧ್ವರ್ಯ ಪ್ರಭು ಮನ್ನಣೆ
ಶುದ್ಧ ರೂಪ ಲಾವಣ್ಯ ಯೌವನ
ತಿದ್ದಿದ ಮತಿಯೆ ಸಿರಿ ಶೌರ್ಯ ಪರಾಕ್ರಮ
ವದ್ಯವಾಗಿ ಪೋಪುದು ಸ್ಥಿರವಲ್ಲ | ಸುಳ್ಳಲ್ಲ 2
ಇಚ್ಛೆಯಿಲ್ಲದೆ ನೀನು ಜನರ ಮೆಚ್ಚಿಗಾಗಿ ಮಾಡಿದ ದಾನ
ವೆಚ್ಚವಾಗಿ ಪೋಪವೊ ಧನವಲ್ಲದೆ
ನಿಚ್ಚಳ ಪುಣ್ಯಬಾರದು ಮನವೆ ಹೆಚ್ಚಿನ ಸ್ತೋತ್ರಕೆ ಮರುಳಾಗಿ
ನೆಚ್ಚದಿರು ವಿಹಿತೋಕ್ತಿಯ | ಬಿಡದಿರು ಸನ್ಮತಿಯ 3
ಆರ್ತನಾಗದಲೆ ನೀನು ಕೀರ್ತಿಗೋಸುಗ ಕಥಾಶ್ರವಣ
ಕರ್ತಭಾವದಿ ಸತತ ಮಾಡೆ
ವರ್ತಿಸುವ ಪುಣ್ಯಪ್ರಾಪ್ತಿ ವೈಷಿಕ ಸುಖವಲ್ಲದೆ
ಶಾಸ್ತ್ರಮರ್ಮ ತಿಳಿಯದೊ | ಅಹಂ ಮಮವಳಿಯದೊ 4
ಮಾನಿತನು ನಾನೆಂದು ನಾನಾ ಮತವಾಶ್ರಯಿಸಿ
ಜ್ಞಾನಿಗಳಿಗೆ ಶಿರಬಾಗಲೊಲ್ಲಿ
ಏನು ಇದರಿಂದೆಂಬ ತ್ರಿಕರಣ ಶುದ್ಧಿಕಾರಣ
ದ್ಯುನದಿ ಸ್ನಾನವಾಹವಲ್ಲಾ | ಇದು ಬಿಡಸಲ್ಲಾ 5
ಜ್ಞಾನ ಭಕ್ತಿ ವೈರಾಗ್ಯವನು ಅನುವಾಗಿ
ಕೈಗೊಳುವುದೇ ಮಾನ
ಅನ್ಯಾಧೀನವೆನ್ನದೆಂಬುದೇ ಲಜ್ಜಾ
ಅನುಭವ ಜ್ಞಾನಿಗಳ ಸಹವಾಸ ಸ್ನಾನ ಸಚ್ಛಾಸ್ತ್ರಾಲಾಪ
ನಾನು ನನ್ನದು ಬಿಡುವುದೇ ತ್ಯಾಗ | ಇದೇ ಯೋಗ 6
ಕರಣ ವಿಷಯಗಳಲ್ಲಿ ಹರಿಯ ಚಿಂತಿಸುತ ನಿತ್ಯ
ವರ ಯೋಗ ಭೋಗದಲ್ಲಿ
ವರ ರಾಮಚಂದ್ರವಿಠಲರಾಯನು ನಿನ್ನ
ದುರಿತ ಕಳೆದು ಪಾಲಿಸುವ7
***