Audio by Mrs. Nandini Sripad
ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ
ಶ್ರೀರಾಘವೇಂದ್ರ ಸ್ವಾಮಿಗಳ ಸ್ತೋತ್ರ ಸುಳಾದಿ
[ ಅವರರಾದರೂ (ಅವತಾರಾದಿಗಳಲ್ಲಿ ಜ್ಞಾನಿಗಳೇ ಶ್ರೇಷ್ಠರೆಂಬ ಪ್ರಮೇಯ) ಶ್ರೀರಾಘವೇಂದ್ರ ಸ್ವಾಮಿಗಳು ಸಕಲ ಮುನಿಗಳಿಂದ ಸ್ವಪ್ನದಲ್ಲಿ ಬಂದು ದರ್ಶನವಿತ್ತು ಅನುಗ್ರಹಿಸಿದ್ದು , ಹೇ ಮಧ್ವಮತೋದ್ಧಾರಕ ಗ್ರಂಥಕರ್ತರೇ, ಜ್ಞಾನಿಗಳೇ , ಈ ತುಂಗಾನದಿ ತೀರದಿ ನಿಂದು ಹರಿವಾಯುಗಳ ಅನುಗ್ರಹದಿ ಸಜ್ಜನರನ್ನು ಸಲಹುವಿ ಇತ್ಯಾದಿ ಸ್ತೋತ್ರ. ನೀನು ಸೂಚಿಸಿದಂತೆ ಎನ್ನನುದ್ಧರಿಸು. ನೀನು ಸುಜ್ಞಾನಿಯು. ಅಶುಚಿಯಾಗಿ ನೀಚ ದೇಹ ತೆತ್ತವ ನಾನು. ಹರಿವಾಯುಗಳು ನಿಮ್ಮ ದ್ವಾರಾ ಬಂಧಮೋಚಕರು. ಕಾರಣ ಹಿಂದೆ ಸುರರಿತ್ತ ಶಾಪವನ್ನು ಪರಿಹರಿಸಿ ಹೃದಯದಲ್ಲಿ ಹರಿ ಪೊಳೆವಂತೆ ಮಾಡೆಂದು ಪ್ರಾರ್ಥನಾ. ]
ರಾಗ ಕಾಪಿ
ಧ್ರುವತಾಳ
ಘನದಯಾನಿಧಿಯಾದ ಗುರು ರಾಘವೇಂದ್ರ ನಿಮ್ಮ
ವನಜಪಾದಯುಗಕೆ ನಮೊ ನಮೊ
ಜನುಮಾರಭ್ಯವಾಗಿ ಅಭಿನಮಿಸದಲಿಪ್ಪ
ಮನುಜನ ಅಪರಾಧವೆಣಿಸದಲೆ
ವನಧಿ ಪೋಲುವ ಕರುಣಿ ಗೋವತ್ಸ ನ್ಯಾಯದಿಂದ
ನಿನಗೆ ನೀನೆ ಬಂದು ಸ್ವಪ್ನದಲ್ಲಿ
ಸನಕಾದಿ ಮುನಿಗಳ ಮನನಕ್ಕೆ ನಿಲುಕದ
ಇನಕೋಟಿ ಭಾಸ ವೇದೇಶ ಪ್ರಮೋದತೀರ್ಥ
ಮುನಿಗಳಿಂದಲಿ ಕೂಡಿ ಸಂದರುಶನವಿತ್ತು
ವಿನಯೋಕ್ತಿಗಳ ನುಡಿದ ಕೃತ್ಯದಿಂದ
ಆನಂದವಾಯಿತು ಅಘದೂರನಾದೆನಿಂದು
ದನುಜಾರಿ ಭಕತರ ಮಣಿಯೆ ಗುಣಿಯೇ
ಎಣೆಗಾಣೆ ನಿಮ್ಮ ಕರುಣಕಟಾಕ್ಷ ವೀಕ್ಷಣಕ್ಕೆ
ಅನುಪಮ ಮಹಿಮನೆ ಅನಿಳಪ್ರೀಯಾ
ಗುಣಗಣ ಪರಿಪೂರ್ಣ ಗುರುವಿಜಯವಿಟ್ಠಲ ನಿಮ್ಮ
ಘನವಾದ ಬಲದಿ ಎನಗೆ ಸುಳಿದನೆಂದು ॥ 1 ॥
ಮಟ್ಟತಾಳ
ಸುಖತೀರ್ಥರ ಮತವೆಂದೆಂಬ ಧ್ವಜವನ್ನು
ವಿಖನಸಾಂಡದ ಮಧ್ಯ ಪ್ರತಿಯಿಲ್ಲದೆ ಮೆರೆಯೆ
ಪಖ ರಹಿತವಾದ ಪಕ್ಷಿಯು ತನ್ನಯ
ಪಖ ಚಿನ್ಹಿಯ ಜನಿತ ಮಾರುತನಿಂದಲಿ ಧ್ವಜವ
ಪ್ರಕಟದಿ ಚರಿಸುವ ಯತ್ನದಂದದಿ ದುರುಳ
ಸಕುಟಿಲರಾದ ಆ ವಿದ್ಯಾರಣ್ಯ
ಮುಖ ಮಖರೆಲ್ಲ ಬರಲು ಅಮಸ್ಥಿತ ನಿಶ್ಚಯದಿ
ಮಖ ಶತಜ ನೆನಿಪ ಜಯರಾಯಾಚಾರ್ಯ
ಪ್ರಕಟ ಗ್ರಂಥಗಳೆಂಬ ಪಾಶಗಳಿಂದಲ್ಲಿ
ಯುಕುತಿಯಿಂದಲಿ ಬಿಗಿದು ವೀರಧ್ವನಿಯ ಗೈಯೆ
ಉಕುತಿಗೆ ನಿಲ್ಲದಲೆ ಮೊಲದಂತೆ ಜರಿದು
ದಿಕ್ಕು ದಿಕ್ಕಿನಲ್ಲಿ ಪಲಾಯನರಾಗೆ
ತ್ಯೆಕತ ಲಜ್ಜೆಯಲಿಂದ ಹತವಾಶೇಷ್ಯ
ಸಾಕುಂಠಿತವಾದ ಬಲವೀರ್ಯನು ಮೇರು
ಶಿಖರವೆತ್ತುವೆನೆಂಬೊ ಸಹಸದಂದದಲಿ
ವಿಕಟಮತಿಯುಕ್ತ ದುರುಳರು ರೋಷದಲಿ ಕು -
ಯುಕುತಿಗಳಿಂದಲಿ ಸಂಚರಿಸುತ ಬರಲು
ಲಕುಮಿ ಪತಿಯ ನೇಮ ತಿಳಿದ ಪ್ರೌಢ ನೀನು
ಈ ಖಂಡದಿ ಬಂದು ದ್ವಿ ಜನ್ಮವ ಧರಿಸಿ
ಪ್ರಖ್ಯಾತವಾದ ನ್ಯಾಯಾಮೃತವನ್ನು
ತರ್ಕತಾಂಡವ ಚಂದ್ರಿಕ ಪರಿಮಳ ಮೊದಲಾದ
ಮಿಕ್ಕಾದ ಗ್ರಂಥವೆಂತೆಂಬ ವಜ್ರದಲಿ ದು -
ರುಕುತಿಗಳೆಂಬಂಥ ಗಿರಿಗಳ ಛೇದಿಸಿ
ಈ ಕುಂಭಿಣಿ ಮಧ್ಯ ಪ್ರತಿಯಿಲ್ಲದೆ ಮೆರದೆ
ಭಕುತರಾಗ್ರೇಸರನೆ ಭೂವಿಭುದರ ಪ್ರೀಯ್ಯಾ
ನಖಶಿಖ ಪರಿಪೂರ್ಣ ಗುರುವಿಜಯವಿಟ್ಠಲ ನಿಮ್ಮ
ಭಕುತಿಗೆ ವಶನಾಗಿ ಇತ್ತಿಹ ಕೀರ್ತಿಯನು ॥ 2 ॥
ತ್ರಿವಿಡಿತಾಳ
ಕಲಿಯುಗದಿ ಜನರು ಕಲ್ಮಷದಲಿಂದ
ಬಲವಂತವಾದ ತ್ರಿವಿಧ ತಾಪಗಳನು
ವಿಲಯಗೈಸುವ ಉಪಾಯವನರಿಯದೆ
ಮಲಯುಕ್ತವಾದ ಭವ ಶರಧಿಯಲ್ಲಿ
ನೆಲೆಯಾಗಿ ಮಗ್ನರಾಗಿ ನಿವೃತ್ತಿ ವರ್ತ್ಮಾವನ್ನು
ತಿಳಿಯದಲೆ ದುಃಖ ಬಡುವ ಸುಜನ
ಒಳಗೆ ತಾರಕನಾಗಿ ಈ ನದಿಯ ತೀರದಲ್ಲಿ
ನಿಲಯವಲ್ಲದೆ ನಿನಗೆ ಅನ್ಯ ಕೃತ್ಯಗಳಿಲ್ಲ
ನಳಿನಸಂಭವ ಜನಕ ಗುರುವಿಜಯವಿಟ್ಠಲ ನಿನಗೆ
ಒಲಿದಿಪ್ಪಾಧಿಕಧಿಕವಾಗಿ ಬಿಡದೆ ॥ 3 ॥
ಅಟ್ಟತಾಳ
ಸೂಚನೆ ಮಾಡಿದ ಸೊಬಗಿನ ತೆರದಂತೆ
ಯೋಚನೆ ಯಾತಕ್ಕೆನ್ನನು ಉದ್ಧರಿಪದಕ್ಕೆ
ಊಚ ಜ್ಞಾನಾನಂದ ಬಲವೀರ್ಯನು ನೀನು
ನೀಚವಾದ ದೇಹ ಧಾರಣವನು ಮಾಡಿ ಅ -
ನೂಚಿತವಾಗಿದ್ದ ಕಾಮ ಕ್ರೋಧಂಗಳು
ಆಚರಣೆಯ ಮಾಳ್ಪ ಅಧಮನಾದವ ನಾನು
ಸೂಚರಿತ್ರವಾದ ಶುಚಿಯಾದ ಮನುಜಂಗೆ
ನೀಚ ಅಶುಚಿಯಾದ ನರನು ಅಧಿಕನೆಂದು
ಭೂಚಕ್ರದಲಿ ಅವರ ದೇಹ ತೆತ್ತವನಾಗಿ
ಆಚರಿಸಿದೆ ಬಲು ಹೀನ ಕೃತ್ಯಂಗಳು
ಸೂಚನೆ ಮಾಡಿದ್ದು ಸೊಬಗು ನೋಡದಲೆ
ಯೋಚನೆ ಮಾಡಿದ್ದು ಸಾರ್ಥಕ ಮಾಳ್ಪದು
ಮೋಚನೆ ಮಾಡುವದು ಭವ ಬಂಧದಲಿಂದ
ಶ್ರೀಚಕ್ರಪಾಣಿ ಗುರುವಿಜಯವಿಟ್ಠಲರೇಯನ
ಯೋಚನೆ ಮಾಡುವ ಯೋಗವೆ ಬೋಧಿಸು ॥ 4 ॥
ಆದಿತಾಳ
ಪರಿಶುದ್ಧವಾದ ನಿನ್ನ ಭಕುತಿಗೆ ವಶನಾಗಿ
ಹರಿ ತನ್ನ ಪರಿವಾರ ಸಮೇತನಾಗಿ ನಿಂದು
ಮೊರೆ ಹೊಕ್ಕ ಜನರಿಗೆ ಪರಿಪೂರ್ಣ ಸುಖವಿತ್ತು
ಪರಿ ಪರಿ ಕೀರ್ತಿಗಳು ತಂದೀವ ನಿಮಗೆಂದು
ಪರಮಾಪ್ತನಾಗಿ ತವಪಾದ ಸಾರಿದೆನು
ದೂರ ನೋಡದಲೆ ಕರುಣ ಮಾಡಿ ವೇಗ
ಸುರರಿತ್ತ ಶಾಪದಿಂದ ಕಡಿಗೆ ಮಾಡಿ ಎನ್ನ ಹೃ -
ತ್ಸರಸಿಜದಲ್ಲಿ ಹರಿ ಪೊಳೆವಂತೆ ಮಾಡುವದು
ಪರಿಪೂರ್ಣ ಕೃಪಾನಿಧೆ ಗುರುವಿಜಯವಿಟ್ಠಲನ್ನ
ಶರಣರ ಅಭಿಮಾನಿ ಔದಾರ್ಯ ಗುಣಮಣಿ ॥ 5 ॥
ಜತೆ
ಗುರುಕುಲತಿಲಕನೆ ಗುರು ರಾಘವೇಂದ್ರಾಖ್ಯ
ಸುರಕಲ್ಪತರು ಗುರುವಿಜಯವಿಟ್ಠಲ ಪ್ರೀಯ್ಯಾ ॥
ಲಘುಟಿಪ್ಪಣಿ :
ಶ್ರೀಗೊರಾಬಾಳ ಹನುಮಂತರಾಯರು
ವಿಖನಸಾಂಡ = ಬ್ರಹ್ಮಾಂಡ ;
ಅಮಸ್ಥಿತ = ವಿಘ್ನ ಬಂದರೂ ಶಿಥಿಲವಾಗದೇ ಇದ್ದ ಧೃಡವಾದ ನಿಶ್ಚಯ ;
ಮುಖ ಮಖರೆಲ್ಲ ಬರಲು = ಮುಖ್ಯ ಜನರು ಬರಲು ;
ವಿಲಯಗೈಸುವ = ನಾಶಗೈಸುವ ;
ನಿವೃತ್ತಿ ವರ್ತ್ಮಾವನ್ನು = ಕಡೆ ಹಾಯುವ , ಬಿಡುಗಡೆಯ ಮಾರ್ಗವನ್ನು ;
🙏 ಶ್ರೀಕೃಷ್ಣಾರ್ಪಣಮಸ್ತು 🙏
*****
ಘನದಯಾನಿಧಿಯಾದ ಗುರುರಾಘವೇಂದ್ರ ನಿಮ್ಮ
ಗುರುವಾರದ ಸುಳಾದಿ
Ghanadayaanidhiyaada guru raghavendra
for sahitya please click
*********