ಕಾಖಂಡಕಿ ಶ್ರೀ ಕೃಷ್ಣದಾಸರು
ಎಂತು ಎನ್ನ ತಾರಿಸುವಿಯೋ ತಿಳಿಯದಿಂದಿಗೆ ಕಂತುಪಿತನೆ ಮುಕುತಿ ಮಾರ್ಗ ಹೊಂದುವೆನೆಂದಿಗೆ ಪ
ಓದಿತತ್ವ ಶಾಸû್ರಗಳನು ಜನರಿಗ್ಹೇಳುವೆ ನಾನು ಮೇದನಿಯೊಳು ಬಲ್ಲವನೆಂಬ ಗರ್ವ ತಾಳುವೆ ಸಾಧು ಸಂತರ ನಡಿಯ ನುಡಿಯ ಮಹಿಮೆ ಕೇಳುವೆ ಮತ್ತೆ ಹಾದಿತಪ್ಪಿ ಕುಜನ ವೃತ್ತಿಯಲ್ಲಿ ಬಾಳುವೆ 1
ಸ್ವಾದ ಲಂಪಟ ದುರ್ವಿಷಯ ಬಿಡದ ಸಕ್ತನು ಕಪಟ ಕಲುಷ ಚಿತ್ತನು ಸಾಧಕಗುರು ಹಿರಿಯರ ಅನುಸರಿಸಿದ ಭಕ್ತರು ಸಾಧಿಪಕರ್ಮ ವೃತ್ತಗಳಲ್ಲಿ ಡಂಭಯುಕ್ತನು 2
ಒಂದು ಎರಡು ಹೇಳಲೇ ಎನ್ನತಪ್ಪವಾ ಹೃದಯ ಮಂದಿರ ಮೊಳಗಿಲ್ಲವಾಯಿತು ಜ್ಞಾನ ದೀಪವಾ ನೊಂದು ಬೆಂದು ತಾಪತ್ರಯದಿ ಸುಖದ ರೂಪವಾ ಬಗೆವೆ ನಿಂದು ಒಮ್ಮಿಗ್ಯಾರ ವಿಡಿಯೆ ಪಶ್ಚಾತ್ತಾಪವಾ 3
ಪತಿತಪಾವನ ದೀನೋದ್ಧರಣನೆಂಬ ಬಿರುದವಾ ಕ್ಷಿತಿಯೊಳಿನ್ನು ತಾಳಿದುದರ ಕೇಳು ಮಾಧವಾ ಮತಿವಿವೇಕದಿಂದೆ ಹಚ್ಚಿ ಭಕುತಿ ಸ್ವಾದವಾ ಗತಿಯ ಕೊಟ್ಟ ಕರಿಯೆ ನಾನು ನಿನ್ನ ಮರೆದವಾ 4
ನಿನ್ನ ಭಕ್ತರ ಮನಿಯ ನಾಯಿ ಯಂದು ಎನ್ನನು ಮುನ್ನಿನವರು ಉಂಡ ವೆಂಜಲ ಶೇಷವನ್ನನು ಇನ್ನು ಇಕ್ಕಿಸಿ ಸಲಹಬೇಕು ಮೂಢ ಚಿನ್ನನು ಘನ್ನ ಗುರು ಮಹಿಪತಿಸ್ವಾಮಿದಯ ಸಂಪನ್ನನು 5
***