..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ತಮ್ಮ ಕೇಳಿದ್ಯಾ ಪರಬೊಮ್ಮ ನೀನಂತೊ
ಸುಮ್ಮನೆ ಪುಸಿ ಸುದ್ದ್ಯಾರಮ್ಮ ಪೇಳಿದರೆ ಪ
ನಿತ್ಯ ತೃಪಿತನು ನೀನಂತಲ್ಲೊ ಕೃಷ್ಣಯ್ಯ
ಸುತ್ತಿ ಬಂದೆನೆ ನಾಲಿಗಾರಿದೆ ಅಮ್ಮ
ಹತ್ತು ಸಾವಿರ ಭಾನುಪ್ರಭೆಯುಳ್ಳವನಂತೊ
ಕತ್ತಲೆಮನೆ ಪೋಗಲೊಬ್ಬನಂಜುವೆನೆ 1
ಪುರಾಣಪುರುಷ ನೀನಂತಲ್ಲೊ ಕೃಷ್ಣಯ್ಯ
ಆರು ತಿಂಗಳು ಪೋದಾವಂದೆಲ್ಲ ಎನಗೆ
ನಿರತಿಶಯ ಮಹಾ ಮಹಿಮೆ ಉಳ್ಳವನಂತೊ
ಪೂರತಿ ಮನೆಯೊಳು ನಡೆಯಲಾರೆ 2
ಅಣ್ಣಾ ನೀ ಸರ್ವಜ್ಞನೆಂಬೋರೊ ಜಗವೆಲ್ಲ
ಬೆಣ್ಣೆಯು ಸಿಗದಲ್ಲೆ ಪುಡುಕಿದರೆ
ಸಣ್ಣವ ನೀನಲ್ಲವೆಂಬರೊ ಪಿರಿಯಾರು
ಮಣ್ಣು ನಾ ಮೆದ್ದಾರೆ ಟೊಣದೆಲ್ಲವಮ್ಮ 3
ಜಗದುದರನು ನೀನಂತಲ್ಲೊ ಕೃಷ್ಣಯ್ಯ
ನಗುಚಾಟಲು ಸಣ್ಣ ಪೊಟ್ಟಿ ನೋಡೆ
ನಿಗಮಗಳು ನಿನ್ನ ತುತಿಯಂತೊ ಗೋವಿಂದ
ನಗುವರಲ್ಲವೆ ಗೋಪ ನಾರಿಯರು 4
ಮೂಢ ದೈತ್ಯರಿಗೆಲ್ಲದಲ್ಲಣ ನೀನಂತೊ
ಜಾಡ ಮೈಯನ ನೋಡಿ ಅಂಜುವೆನೆ
ಬೇಡಿದ ಪುರುಷಾರ್ಥ ಕೊಡುವನು ನೀನಂತೊ
ಬೇಡಿದೆ ನಮ್ಮಮ್ಮ ಅಮ್ಮೆ ಕೊಡೆಂದು 5
ಬೆಟ್ಟವ ನೀನೆತ್ತಿದಂತಲ್ಲೊ ಕೃಷ್ಣಯ್ಯ
ಬಟ್ಟು ನಿನ್ನದು ನೋಡೆ ಎತ್ತಲಾರೆ
ಘಟ್ಯಾಗಿ ವಿಪ್ರರು ಪೇಳೋದು ಪುಸಿ ಏನೊ
ಹೊಟ್ಟಿಗೋಸುಗ ಸುಳ್ಳು ಪೇಳುವರೆ 6
ಏಸು ಲಕ್ಷ್ಮಣವಿವೆ ನೋಡಬೇಕೆಂದರೆ
ಪುಸಿದ್ಯಾಕುಸರಾನು ನೋಡೆಂದನು
ವಾಸುದೇವವಿಠಲಾ ಈ ಪರಿ ಗೋಪಿಯ
ಮೋಸಗೊಳಿಪ ಕೃಷ್ಣ ನಮ್ಮ ಸಲಹಲಿ 7
****