ರಾಗ – ಆಸಾವರಿ
ತಾಳ – ಏಕತಾಳ
ಆರತಿ ನರಹರಿರೂಪನಿಗೆ ಪ್ರಹ್ಲಾದನ l
ಪೊರೆದ ಕರುಣನಿಧಿಗೆ ll ಪ ll
ರ್ಹರಿತಾ ಸುರರ ಮೊರೆಯ ಕೇಳ್ದಾ l
ಘೋರ ನರಸಿಂಹ ರೂಪ ತಾಳ್ದಾ l
ದುರುಳನುದರ ನಖದಲ್ಲಿ ಸೀಳ್ದಾ l
ಕೊರಳಲಿ ಕರುಳಮಾಲಿ ತಾಳ್ದಾ ಆ ಮಹ l
ತರುಳನ ಮೊರಿಕೇಳಿ ಶಿರದಲಿ ಕರವನಿಡುತ l
ಹರಸುತ ದಯದಲಿ ವರವನು ನೀಡಿದ l
ಪರಮ ಕೃಪಾಕರ ಸಿರಿಸನ್ನುತ ಚರಣಾ l
ಸ್ಮರಿಸುವ ಶರಣರ ಅಘಹರಣಾ ll 1 ll
ಪೂರ್ವದಿ ಮೀನರೂಪನಾದಾ ಜಲದಲಿ l
ದಾನವನನು ತರಿದಾ ಕೂರ್ಮನು l
ತಾನೆನಿಸಿದನಮೃತಾ ಸುರರಿಗೆ l
ಪಾನಗೈಸಿದ ಮಹಿತಾ ಹಿರಣ್ಯಕ l
ದಾನವನನು ವರಹಾ ರೂಪದಿ l
ಹಾನಿ ಗೈಯ್ಯಿಸಿದ ಶ್ರೀ ನರಸಿಂಹನೆ l
ದಾನವ ಬೇಡಿದ ಮಾನಿನಿ ತರಿದನೆ l
ಜಾನಕೀಪತಿ ಕೃಷ್ಣರೂಪನೆ ಮಾನಿ ಬುದ್ಧ ಕಲ್ಕಿ ll 2 ll
ವಿಶ್ವವ ಪೋಷಿಸುವ ಧೊರೆಗೆ ಅಂತ್ಯದಿ l
ನಾಶಗೈವ ಹರಿಗೆ ಮುರಹರ l
ವಾಸುದೇವ ಪರಗೆ ಖಳದನು l
ಜಾಸುರ ಸಂಹರಗೆ ಶ್ರೀವರ l
ದೇಶವಿಟ್ಠಲ ನಿನಗೆ ವಂದಿಪೆ l
ಆಷಾಪಾಶಗಳ ನಾಶಗೈಸಿ ನಿ l
ರ್ದೋಷನೆನಿಸಿ ಬಹು ಮೀಸಲ ಮನವಿತ್ತು l
ದಾಸಜನರ ಸಂಗ ಪಾಲಿಸು ಭಾಸುರ ನರಸಿಂಗಾ ll 3 ll
***