Showing posts with label ನಮೋ ನಮೋ ನಾರಾಯಣ ನಮೋ ಶ್ರುತಿ ಪಾರಾಯಣ ankita neleyadikeshava ಮುಂಡಿಗೆ mundige. Show all posts
Showing posts with label ನಮೋ ನಮೋ ನಾರಾಯಣ ನಮೋ ಶ್ರುತಿ ಪಾರಾಯಣ ankita neleyadikeshava ಮುಂಡಿಗೆ mundige. Show all posts

Friday 4 June 2021

ನಮೋ ನಮೋ ನಾರಾಯಣ ನಮೋ ಶ್ರುತಿ ಪಾರಾಯಣ ankita neleyadikeshava ಮುಂಡಿಗೆ mundige

ನಮೋ ನಮೋ ನಾರಾಯಣ

ನಮೋ ಶ್ರುತಿ ಪಾರಾಯಣ

ನಮೋ ಬಾದರಾಯಣ | ನರನ ಪ್ರಾಣ | ಪ |


ಶಿವನ ಮೋದದಲಿ ಪಡೆದೆ

ಶಿವರೂಪದಲಿ ನಿಂದೆ ಶಿವನೊಳಗಿ ಏರಿದೆ

ಶಿವನಿಗೊಲಿದೆ ಶಿವಗೆ ನೀ ಮಗನಾದೆ

ಶಿವನ ಮಗನಾ ಪಡೆದೆ ಶಿವನ ಕಾಯ್ದೆ | ೧ |


ಶಿವಗೆ ಸಹಾಯಕನಾದೆ

ಶಿವನ ಕಂಗೆಡಿಸಿದೆ | ಶಿವನ ಧನುವನು ಮುರಿದೆ

ಶಿವನೊಲಿಸಿದೆ ಶಿವನ ಜಡಮಾಡಿದೆ

ಶಿವನ ಒದ್ದ ಮುನಿಗೆ ಉಣಿಸಿದೆ ಕೇಶವನೆನಿಸಿದೆ | ೨ |


ಶಿವನ ಜಡೆಯೊಳ್ ಧರಿಸಿದೆ

ಶಿವಗಂಗೆಯ ಪೆತ್ತೆ | ಶಿವನ ಕೂಡಿ ಕಾದಿದವನ ಭಾವ

ಶಿವನ ಭಕ್ತನ ನಿನ್ನವನಿಂದ ಕೊಲಿಸಿದೆ

ಶಿವನ ಶೈಲವನು ಎತ್ತಿದವನ ವೈರಿ | ೩ |


ಶಿವನ ನುಂಗಿದ ನುಂಗಿದವನ ವಡನಾಡುವಾ

ಶಿವ ಪರಾಶಿವ ನಿನ್ನ ಶಿವ ಬಲ್ಲನೆ |

ಶಿವ ಕೂಟದವನ ಉದ್ಭವ ಮಾಡುವೆನೆಂದು

ಎವೆ ಇಡುವನಿತರೊಳಗೆ ಧವಳಹಾಸ | ೪ |


ಶಿವನ ಮೇಲಿದ್ದ ಸಹಭವೆ ರಮಣ ಸರ್ವಥಾ

ಶಿವನೊಳಗಿಳಿದ ಶಿಷ್ಯ ನಿವಹರಾತೀ

ಶಿವಭೂಷಣಕಲ್ಪ ಶಿವಸಮಾನಿಕರೂಢ

ಶಿವನಮನೆ ದೀರೇ ತೊಲಗಿಸುವ ಶಿವ ಬಾಂಧವ | ೫ |


ಶಿವನ ಧೊರೆಯ ಜ್ಞಾನ ಶಿವ ಹಚ್ಚುವುದೇ

ಶಿವಮಣಿ ಎನಿಸುವ ಸ್ತವಪ್ರಿಯನೇ

ಶಿವನ ವಾಹನ ವೈರಿಯ ಶಿರವ ತರಿದೇ ದೇವ

ಶಿವನ ಪ್ರತಿಷ್ಟಿಸಿದೆ ಶಿವಗೆ ಕಾಣಿಸದಿಪ್ಪೆ | ೬ |


ಶಿವನ ಕುದುರೆಯ ಹೆರೆವ ಅಮ್ಮನ ಕಾಯ್ದದೇವ

ಶಿವನವತಾರ ಶಸ್ತ್ರವನು ಹಳಿದೆ

ಶಿವನರ್ಥವಾಗಿ ದಾನವನ ಕೊಂದ

ಮಹಿಮಾಶಿವರುಷಿ ಪೇಳಿಉದ

ಯುವತಿರಮಣಾ ಆದಿಕೇಶವ ಸಲಹೋ | ೭|

***


Explanation

ಶಿವನ ಮೋದದಲಿ ಪಡೆದೆ – ವೇದವ್ಯಾಸಾವತಾರದಲ್ಲಿ ಶಿವನವತಾರರಾದ ಶುಕಾಚಾರ್ಯರನ್ನು ಮಗನಾಗಿ ಪಡೆದ.

ಶಿವನ ರೂಪದಲಿ ನಿಂದೆ – ಶಿವ ಅಂದರೆ ಮಂಗಳರೂಪದಲ್ಲಿರುವ ವ್ಯಾಸನು.

ಶಿವನೊಳಗೆ ಏರಿದೆ – ಶಿವನ ಅಂತರ್ಯಾಮಿಯಾಗಿದ್ದು ನಾಶ ಮಾಡುವ ( ಲಯವನ್ನು ಶಿವ ರೂಪದಿ ಮಾಡುವ)

ಶಿವಗೆ ನೀ ಮಗನಾದೆ – ಶಿವ = ಯಮ. ಯಮಧರ್ಮಗೆ ನಾರಾಯಣನೆಂಬ ಮಗನಾಗಿ ಹುಟ್ಟಿದೆ.

ಶಿವನ ಮಗನಾ ಪಡೆದೆ – ಶಿವನ ಮಗನಾದ ಗಣಪತಿಯನ್ನು ಕೃಷ್ಣಾವತಾರಕಾಲದಲ್ಲಿ ಚಾರುದೇಷ್ಣನನ್ನಾಗಿ, ಸ್ಕಂಧನನ್ನು ಪ್ರದ್ಯುಮ್ನನಾಗಿ ಪಡೆದೆ

ಶಿವನ ಕಾಯ್ದೆ – ಯೋಗಿನಿಯರಿಂದ, ವೃಕಾಸುರಾ, ಭಸ್ಮಾಸುರ, ಮುಂತಾದ ರಾಕ್ಷಸರಿಂದ ರಕ್ಷಿಸಿದೆ

ಶಿವಗೆ ಸಹಾಯಕನಾದೆ – ತ್ರಿಪುರಸುರರ ಕೊಲ್ಲಲು ಶಿವಗೆ ಸಹಾಯ ಮಾಡಿದೆ

ಶಿವನ ಧನುವನು ಮುರಿದೆ – ಶಿವಧನಸ್ಸನ್ನು ರಾಮನಾಗಿ ಸೀತಾ ಸ್ವಯಂವರದಲ್ಲಿ ಮುರಿದೆ

ಶಿವನೊಲಿಸಿದೆ – ಪ್ರದ್ಯುಮ್ನನನ್ನು ಶಿವನ ತಪಸ್ಸು ಮಾಡಿ ಪಡೆದೆ. ತನಗೆ ಯಾವುದೇ ತಪ ಬೇಕಿಲ್ಲದಿದ್ದರೂ ಲೋಕಶಿಕ್ಷಣಾರ್ಥವಾಗಿ ಶಿವನ ತಪಸ್ಸನ್ನು ಮಾಡಿದೆ.

ಶಿವನ ಜಡ ಮಾಡಿದೆ – ವಿಷ್ಣುವಿಗೂ ಶಿವನಿಗೂ ಯುದ್ಧವಾದಾಗ, ಶಿವನನ್ನು ಜಡೀಭೂತನಾಗಿ ಮಾಡಿದ

ಶಿವ ಮುನಿಗೆ ಉಣಿಸಿದೆ – ರಾಮಾವತಾರದಲ್ಲಿ ಶಿವಾವತಾರಿ ದೂರ್ವಾಸರಿಗೆ ನಾನಾವಿಧ ಭಕ್ಷ್ಯಗಳನ್ನು ಕ್ಷಣದಲ್ಲಿ ನೀಡಿದೆ

ಕೇಶವನೆನಿಸಿದೆ – ಕ-ಬ್ರಹ್ಮ, ಈಶ-ರುದ್ರ ಇವರಿಬ್ಬರಿಗೂ ಒಡೆಯ

ಶಿವನ ಜಡೆಯೊಳ್ ಧರಿಸಿದೆ – ಶಿವ ಅಂದರೆ ಸಮಸ್ತ ವೇದಗಳನ್ನೂ ತನ್ನಿಂದ ಅಭಿನ್ನವಾದ ಕೂದಲುಗಳಲ್ಲಿ ಭಗವಂತ ಧರಿಸಿದ್ದಾನೆ

ಶಿವಗಂಗೆಯ ಪೆತ್ತೆ – ಅತಿ ಪವಿತ್ರವಾದ ಗಂಗೆಯನ್ನು ತನ್ನ ಪಾದದಿಂದ ಸೃಷ್ಟಿಸಿದ

ಶಿವನ ಕೂಡಿ ಕಾದಿದವನ ಭಾವ – ಶಿವನಿಂದ ಪಾಶುಪತಾಸ್ತ್ರಕ್ಕಾಗಿ ಹೋರಾಡಿದ ಅರ್ಜುನನ ಭಾವ

ಶಿವನ ಭಕ್ತನ ನಿನ್ನವನಿಂದ ಕೊಲ್ಲಿಸಿದೆ – ಶಿವ ಭಕ್ತ ಜರಾಸಂಧನನ್ನು ಭೀಮಸೇನದೇವರಿಂದ ಕೊಲ್ಲಿಸಿದೆ

ಶಿವನ ಶೈಲವನ್ನು ಎತ್ತಿದವನ ವೈರಿ – ಶಿವನ ಕೈಲಾಸವನ್ನು ಎತ್ತಿದ ರಾವಣ ವೈರಿ – ರಾಮ

ಶಿವ ಪರಾಶಿವ ನಿನ್ನ ಶಿವ ಬಲ್ಲನೆ – ಶಿವನಿಗೂ ಪರಶಿವನಾದ್ದರಿಂದ ನಿನ್ನ ಮಹಿಮೆಯನ್ನು ಶಿವನೂ ತಿಳಿಯ

ಶಿವಕೂಟದವರ ಉದ್ಭವ ಮಾಡುವೆನೆಂದು – ವ್ಯಾಸನಾಗಿ ಶಿವನ ಪಾರಮ್ಯ ಸಾರುವ ಸ್ಕಂಧ ಪುರಾಣಾದಿಗಳನ್ನು ರಚಿಸಿ ಜಗತ್ತಿನಲ್ಲಿ ಶಿವನನ್ನು ಸರ್ವೋತ್ತಮನೆಂದು ಸಾರುವ ಪಂಗಡವನ್ನು ಉದ್ಭವಿಸಿದೆ.

ಶಿವನ ಮೇಲಿದ್ದ ಸಹ ಭವೆ ರಮಣ – ಶಿವನ ಶಿರದಲ್ಲಿರುವ ಚಂದ್ರನ ಸಹಭವೆಯಾದ ಲಕ್ಷ್ಮಿಗೆ ರಮಣ. ಚಂದ್ರ ಮತ್ತು ಲಕ್ಷ್ಮಿ ಇಬ್ಬರೂ ಸಮುದ್ರಮಥನ ಕಾಲದಲ್ಲಿ ಅವತರಿಸಿದುದರಿಂದ ಅವಳ ಸಹೋದರ.

ಶಿವನೊಳಗಿಳಿದ ನಿಷ್ಯನಾಹಾರಾತೀ – ಶಿವನ ದೇಹ ಪ್ರವೇಶ ಮಾಡಿದ ಶುಕ್ರಾಚಾರ್ಯರ ಶಿಷ್ಯರಾದ ದೈತ್ಯರ ಶತ್ರುವು ಭಗವಂತ. (ಶಿವನು ಶುಕ್ರಾಚಾರ್ಯರನ್ನು ನುಂಗಿ ತನ್ನ ರೇತಸ್ಸಿನ ಮೂಲಕ ಹೊರಗೆ ಬಿಟ್ಟಿರುತ್ತಾನೆ. ಆದ್ದರಿಂದಲೇ ಶುಕ್ರನೆಂದು ದೈತ್ಯರ ಗುರು ಶುಕ್ರಾಚಾರ್ಯರಿಗೆ ಹೆಸರು. )

ಶಿವಭೂಷಣ ತಲ್ಪ – ಶಿವನ ಭೂಷಣವಾದ ಸರ್ಪಗಳ ಶಯನನಾದವನು

ಶಿವಸಮಾನಿಕಾರೂಡ – ಶಿವನ ಸಮಾನ ಕಕ್ಷ್ಯದಲ್ಲಿರುವ ಗರುಡನ ಮೇಲೇರಿ ಬರುವನು ಶ್ರೀಹರಿ – ಗರುಡವಾಹನ, ಗರುಡಗಮನ.

ಶಿವನ ಮನೆಯ ದೊರದೊಲಗಿಸುವ – ಶಿವನ ಮನೆ ಎಂದರೆ ಸ್ಮಶಾನ. ಅರ್ಥಾತ್ – ಸ್ಮಶಾನಕ್ಕೆ ಹೋಗುವುದು, ಸಾಯುವುದು, ಜನನ, ಮರಣಗಳನ್ನು ತಪ್ಪಿಸಿ ಮುಕ್ತಿಪ್ರದನು ಭಗವಂತ

ಶಿರಬಾಂಧವ – ಶಿವ ಎಂದರೆ ಸರ್ಪ. ಸರ್ಪಶ್ರೇಷ್ಟನಾದ ಶೇಷನಿಗೆ ಬಂಧುವು

ಶಿವ ಹಚ್ಚುವುದೇ ಕೊಡು – ಮಂಗಳಕರವಾದ ಊರ್ಧ್ವಪುಂಡ್ರ ಹಚ್ಚುವುದನ್ನು ಕೊಡು. – ಅರ್ಥಾತ್ ವೈಷ್ಣವನಾಗುವ ಭಾಗ್ಯ ನೀಡು

ಶಿವವಾಣಿ ಎನಿಸುವ ಸ್ತವ ಪ್ರಿಯನೆ – ಮಂಗಳಕರವಾದ ಸ್ತೋತ್ರವಾದ ಸಾಮಗಾನ ಪ್ರಿಯ

ಶಿವನ ವಾಹನ ವೈರಿಯ ಶಿರವ ಕತ್ತರಿಸಿದೆ – ಶಿವನ ವಾಹನ ಎತ್ತು. ವೃಷಭ. ಶತ್ರುವಾದ ವೃಷಭಾಸುರನ ಶಿರವನ್ನು ಸಂಹರಿಸಿದ.

ಶಿವನ ಪ್ರತಿಷ್ಟಿಸಿದೆ – ಶಿವಲಿಂಗವನ್ನು ರಾಮೇಶ್ವರದಲ್ಲಿ ಲೋಕ ಮೋಹನಾರ್ಥ ಪ್ರತಿಷ್ಟಾಪಿಸಿದೆ.

ಶಿವಗೆ ಕಾಣಿಸದಿಪ್ಪೆ – ಶಿವನ ಒಳಗಿದ್ದರೂ ರಾಮನು ಕಾಣಿಸನು. ಅರ್ಥಾತ್ ಪರಮ ವೈಷ್ಣವಾನಾದರೂ ಪೂರ್ಣನಾಗಿ ಶಿವ ಪರಮಾತ್ಮನನ್ನು ಅರಿಯಲಿಲ್ಲ

ಶಿವನ ಸೋಲಿಸಿದವನ ಜಪಗೆಡಿಸಿದೆ – ಶಿವನ ಸೋಲಿಸಿದವನು ಅರ್ಜುನ. ಅವನು ಸಾಯದಂತೆ ಬೆಂಕಿಯಿಂದ ರಕ್ಷಿಸಿದೆ.

ಶಿವನ ಕುದುರೆಯ ಹೆರುವ ಅಮ್ಮನ ಕಾಯ್ದ ದೇವ – ಶಿವನ ಕುದುರೆಯೆಂದರೆ ಅವನ ವಾಹನ ವೃಷಭ. ಅದನ್ನು ಹೆರುವ ಗೋವುಗಳನ್ನು ರಕ್ಷಿಸಿ ಗೋಬ್ರಾಹ್ಮಣ ಹಿತಾಯಚನಾದ್ದರಿಂದ

ಶಿವನವತಾರ ಶತ್ರವನು ಹಳಿದೆ – ಶಿವನ ಅವತಾರಿಯಾದ ಅಶ್ವತ್ಥಾಮನ ಬ್ರಹ್ಮಾಸ್ತ್ರವನ್ನು ತಡೆದು ಪರೀಕ್ಷಿತನನ್ನು ಸಲಹಿದೆ

ಶಿವನರ್ಥವಾಗಿ ದಾನವನ ಕೊಂದ ಮಹಿಮಾ – ಶಿವನಿಗಾಗಿ ಅವನ ವರದಿಂದ ಶಿವನನ್ನು ಕೊಲ್ಲಲು ಹೊರಟ ವೃಕಾಸುರನನ್ನು ಕೊಂದ ಮಹಿಮಾ. ಶಿವನ ವರವನ್ನು ಪಡೆದ ವೃಕಾಸುರನು ಶಿವನ ತಲೆಯ ಮೇಲೆ ಕೈಯಿಟ್ಟು ಶಿವನನ್ನೇ ಸಂಹರಿಸಿ ಶಿವನ ಪತ್ನಿಯನ್ನು ಅಪಹರಿಸಲು ಇಚ್ಚಿಸಿದನು. ಶಿವನು ಭಗವಂತನಿಗೆ ಶರಣು ಹೋದಾಗ ಭಗವಂತನು ಬ್ರಹ್ಮಚಾರಿ ವೇಷಧರಿಸಿ ತನ್ನ ಮಾತಿನ ಮೋಡಿಯಿಂದ ವೃಕಾಸುರನನ್ನೇ ಕೊಲ್ಲಿಸಿ ಶಿವನನ್ನು ಉಳಿಸಿದ.

ಶಿವಋಷಿ ಪೇಳಿದ ಯುವತಿ ರಮಣಾ – ಶಿವಋಷಿಯೆಂದರೆ ನಾರದರು. ನಾರದರು ಪೇಳಿದ ಯುವತಿ ರುಕ್ಮಿಣಿಯ ವಿವಾಹವಾದವನು.

ಆಧಾರ

ಲೇಖಕರು – ಚತುರ್ವೇದಿ ವೇದವ್ಯಾಸಾಚಾರ್ಯರು

***