Showing posts with label ನಿನಗೆ ಅಂಜುವನಲ್ಲ ನೀರಜಾಕ್ಷ ಮನವಚನ ಕಾಯದಿಂ ನಿನ್ನ vijaya vittala. Show all posts
Showing posts with label ನಿನಗೆ ಅಂಜುವನಲ್ಲ ನೀರಜಾಕ್ಷ ಮನವಚನ ಕಾಯದಿಂ ನಿನ್ನ vijaya vittala. Show all posts

Wednesday, 16 October 2019

ನಿನಗೆ ಅಂಜುವನಲ್ಲ ನೀರಜಾಕ್ಷ ಮನವಚನ ಕಾಯದಿಂ ನಿನ್ನ ankita vijaya vittala

ವಿಜಯದಾಸ
ನಿನಗೆ ಅಂಜುವನಲ್ಲ ನೀರಜಾಕ್ಷ ಪ

ಮನವಚನ ಕಾಯದಿಂ ನಿನ್ನವರಿಗಂಜುವೆನು ಅ

ರಾಗದಿಂದಲಿ ಇಂದ್ರದ್ಯುಮ್ನ ಭೂಪಾಲಕನು
ಯೋಗ ಮಾರ್ಗದಿ ನಿನ್ನ ಭಜಿಸುತಿರಲು
ಯೋಗ ಕುಂಭೋದ್ಭವನು ಬಂದು ಶಾಪವೆ ಕೊಡಲು
ಆಗ ಮೌನದಲವನನೊಪ್ಪಿಸಿದ ಬಗೆ ಬಲ್ಲೆ 1

ಗುಣವಂತರೀರ್ವರು ಜಯವಿಜಯರು ನಿನ್ನ
ಅನುಗಾಲ ಬಾಗಿಲನು ಕಾಯುತಿರಲು
ಸನಕಾದಿಗಳು ಬಂದು ಶಪಿಸಲಾಕ್ಷಣದಲ್ಲಿ
ಸನುಮತದಲವರ ನೀನೊಪ್ಪಿಸಿದ ಬಗೆಬಲ್ಲೆ 2

ನೃಗರಾಯ ಪುಣ್ಯ ಬರಬೇಕೆನುತ ವಿಪ್ರರಿಗೆ
ನಿಗಮೋಕ್ತಿಯಿಂದ ಗೋದಾನ ಕೊಡಲು
ಜಗಳ ಪುಟ್ಟಿತು ನೋಡು ಅನ್ಯೋನ್ಯರೊಡಗೂಡಿ
ಮಿಗೆ ಶಾಪ ಕೊಡಲವನನೊಪ್ಪಿಸಿದ ಬಗೆ ಬಲ್ಲೆ 3

ಉಣಲಿತ್ತರೆ ಉಂಡು ಪೋಗಲೊಲ್ಲದೆ ಒಂದು
ತೃಣದಲ್ಲಿ ಗೋವನ್ನೆ ರಚಿಸಿ ನಿಲಿಸಿ
ಮುನಿಪ ಗೌತಮನಿಗೆ ಗೋಹತ್ಯವನು ಹೊರಿಸಿ
ಕ್ಷಣದೊಳಗೆ ಅವನ ನೀನೊಪ್ಪಿಸಿದ ಬಗೆ ಬಲ್ಲೆ 4

ಅನಪರಾಧಿಗಳಿಗೆ ಇನಿತಾಯಿತೋ ದೇವ
ಎನಗೆ ತನಗೆಂಬುವರಿಗಾವ ಗತಿಯೊ
ಮಣಿದು ಬೇಡಿಕೊಂಬೆ ವಿಜಯವಿಠ್ಠಲರೇಯ
ನಿನಗಿಂತ ಭಕುತಿ ನಿನ್ನವರಲ್ಲಿ ಕೊಡು ಎನಗೆ 5
********