ಶ್ರೀವೇಂಕಟೇಶ ಸುಪ್ರಭಾತ
ರಾಗ ಭೌಳಿ ವಾರ್ಧಿಕ ಷಟ್ಟದಿ
ಭಕ್ತಜನ ಸಂರಕ್ಷಣಾ ॥ ಪ ॥
ಭಕ್ತಜನ ಸಂರಕ್ಷ ಭವದುರಿತ ಸಂಹಾರಿ
ಭಕ್ತರಾ ಸುರಧೇನು ತರುವೆ ಚಿಂತಾಮಣಿಯೆ
ಭಕ್ತರಾಧೀನವೆಂಬೊ ಬಿರದು ಅನುಗಾಲ
ಪೊತ್ತು ಮೆರೆವ ತಿರುಪತಿ ತಿಮ್ಮ ಯೇಳೋ ॥ ಅ.ಪ ॥
ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು
ಇಂಬಿನಲಿ ತಲೆದೋರಿ ಕಿರಣಗಳ ಹರಹಿದನು
ಅಂಬುಜ ವಿರೋಧಿಗಳೆಗುಂದಿದನು ತಾರ ನಿಕ -
ರಂಬುಗಳರುಹ ಮಾಸೆ ॥
ಕುಂಭಿಣಿಯ ಮುಸುಕಿದ ಕತ್ತಲೆ ಪರಿದು ಪೋಗಿ
ಅಂಬುಜದಳಕೆ ಮರಿದುಂಬಿಗಳು ಎರಗಿದವು
ತಾಂಬ್ರಚೂಡವು ಧ್ವನಿಮಾಡಿ ಕೂಗಿತು ಸರಸಿ -
ಜಾಂಬಕನೆ ಮಂಚದಿಂದೇಳೊ ॥ 1 ॥
ಉದಯ ಪರ್ವತಕೆ ರಥ ನೂಕಿದನು ಮಾರ್ತಾಂಡ
ಉದಧಿ ಅಲೆ ತಗ್ಗಿದುವು ಉರಗ ಪೆಡೆಯೆತ್ತಿದನು
ಗದಗದನೆ ನಡುಗಿ ಭಯದಲ್ಲಿ ದಾನವರು ಅಡ -
ಗಿದರು ದಶದಿಕ್ಕಿನೊಳಗೆ ॥
ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ
ದದ್ಧಳ ಸರಿಗಮಪದನಿಸೆಂದೆನುತಲೀ
ವದರುತ್ತ ಕುಸುಮವರುಷ ವುದರಿಸಿ ತುತಿಸಿದರು
ಸದಮಲಾನಂದ ತಿಮ್ಮಾ ॥ 2 ॥
ನಾರಿಯರು ಬಂದು ಅಂಗಳ ಬಳಿದು ಗಂಧದಾ
ಸಾರಣಿಯು ದಳಿದು ಮುತ್ತಿನ ರಂಗವಲ್ಲಿ ವಿ -
ಸ್ತಾರದಲಿ ಪಂಚವಣ್ಣಿಗೆಯಿಟ್ಟು ನಲಿದು ಹೊಸ
ದೋರಣ ಮಕರ ಕನ್ನಡಿ ॥
ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲರು
ಪರಿ ಕಟ್ಟಿಗೆಕಾರರೆಲ್ಲ ವೊಪ್ಪುತಿರೆ ದಾರಕರು
ಸಾರಿದರು ಭಟ್ಟರು ಹೊಗಳಿದರು ಕಂ -
ಸಾರಿ ಕೋನೇರಿವಾಸ ॥ 3 ॥
ನೃತ್ಯದವರು ಬಂದು ತತ್ಥಿಗಿಣಿ ತತ್ಥೈಯಾ
ತಿತ್ತಿರಿ ಮೃದಂಗ ಜತೆ ತಪ್ಪದಂತೆ ತಾಳ
ಬತ್ತೀಸರಾಗದಲಿ ಎತ್ತಿ ಧ್ವನಿ ತೋರುತ್ತ
ನರ್ತನದಿಂದಲಿ ಕುಣಿಯಲೂ ॥
ಮಿತ್ರೆಯರು ಕೆಲಬರು ಮುತ್ತಿನಾರುತಿ ಪಿಡಿದು
ಮಿತ್ರಭಾವದಲಿ ನಿಮ್ಮಡಿಗಳಿಗೆ ಹರಿವಣಾ
ಎತ್ತುವೆವು ಎನುತತಿ ಹಾರೈಸಿ ನಿಂದು ನೋ -
ಡುತ್ತಾರೆ ಸರ್ವೇಶನೇ ॥ 4 ॥
ದಂಡಿಗೆ ತಾಳ ಶಂಖ ತಂಬೂರಿ ಜಾಕಟೆ
ಕೊಂಡು ನಿನ್ನ ಪರಮ ಪ್ರೀತಿಸ್ಥ ದಾಸರು
ಹಿಂಡು ಹಿಂಡಾಗಿ ಸಮ್ಮುಖದಲ್ಲಿ ನಿಂದು ಬೊ -
ಮ್ಮಾಂಡ ಕಟಹ ಬಿಚ್ಚುವಂತೆ ॥
ತಂಡ ತಂಡದ ಗೆಜ್ಜೆಕಟ್ಟಿ ಅಭಿನವ ತಿರುಹಿ
ಕೊಂಡಾಡಿದರು ಶಬ್ದ ಪ್ರತಿಶಬ್ದವಾಗುತಿರೆ ಭೂ -
ಮಂಡಲದೊಳಗೆ ಈ ಸೊಬಗು ಬಲ್ಲವರಾರು
ಕುಂಡಲೀ ಗಿರಿ ತಿರ್ಮಲಾ ॥ 5 ॥
ಕಾದೋದಕ ವಿಮಲ ಕಸ್ತೂರಿ ಕಮ್ಮೆಣ್ಣೆ
ಸಾದು ಜವ್ವಾದಿ ಚಂದನ ಗಂಧ ದ್ರವ್ಯದಿ
ಆದರಿಸಿ ಪಿಡಿದ ದರ್ಪಣ ಹೇಮ ಗದ್ದುಗೆ
ಪಾದುಗೆ ಪಟ್ಟಿ ವಸನಾ ॥
ಈ ಧರೆಯೊಳಗೆ ಯಿದ್ದ ಉಡಿಗೆ ತೊಡಿಗೆ ಕರ್ಪೂ -
ರಾದಿ ತಾಂಬೂಲ ನಿರ್ಮಳ ದಾದಿಯರು ಹಿಡಿದು
ಕಾದು ನಿಂದೈಧಾರೆ ಹೊನ್ನ ಬಾಗಿಲ ಮುಂದೆ
ಆದಿಹರಿ ಪರಮಪುರುಷಾ ॥ 6 ॥
ಗೋತ್ರಾರಿ ಹವಿಧರ್ಮ ಪುಣ್ಯಜನ ವರುಣ ವೀತಿ -
ಹೋತ್ರ ಸಖ ಋಷೇಶ ಕೈಲಾಸಪತಿ ಸೂರ್ಯ
ಮಿತ್ರ ನಂದ ಸಹಿತರಾಗಿ ವಾಹನ ವೈದಿ
ಚಿತ್ರದಲಿ ಮುಖ್ಯರಾದ ॥
ಮೈತ್ರಾವರುಣ ಜಾಮದಗ್ನಿ ಕಶ್ಯಪ ವಿಶ್ವಾ -
ಮಿತ್ರ ಭಾರದ್ವಾಜ ಸನಕಾದಿಗಳು ನಾರದ ಮೊದಲಾಗಿ
ಸ್ತೋತ್ರವನು ಮಾಡುತ್ತ ಸ್ವಾಮಿ ಗತಿಯೆಂದರು
ಧಾತ್ರೀಕಳತ್ರ ದೇವಾ ॥ 7 ॥
ನಿಚ್ಚ ಏಳುವ ಸಮಯ ಮೀರಿತು ಇಂದೀಗ
ಎಚ್ಚರಿಕಿ ಪುಟ್ಟದೊ ಎಲೋ ದೇವಾ ಶ್ರೀದೇವಿ
ಮೆಚ್ಚುಗೊಳಿಸಿ ಬಿಗಿದು ರತಿಕೇಳಿ ಕ್ರೀಡಿಯಲಿ
ಮೆಚ್ಚಿಸಿದ ಮಹ ಸರಸವೊ ॥
ನಿಚ್ಚಟ ಯಿದನು ನಿದ್ರೆ ತಿಳಿಯಲೊಲ್ಲದು
ಕುತ್ಸಿತನ ಸೊಲ್ಲು ಕರ್ನಕೆ ಬೀಳದಾಯಿತೊ
ಹೆಚ್ಚಿನಾ ಪದವಿ ಮತ್ತೇನು ಬಂದದು ಕಾಣೆ
ಸಚ್ಚಿದಾನಂದಾತ್ಮಕಾ ॥ 8 ॥
ನಿದ್ರೆಗೆವೆ ಹಾಕದಿರು ನೀರೊಳಗೆ ನೀ ನಿರು -
ಪದ್ರ ಭೂಮಿಗೆ ಕಳಿ ಕಶ್ಯಪನ ಸುತನಳಿ ಸ -
ಮುದ್ರ ರಾಣಿಯ ಪಡಿ ರಾಯರಾಯರ ಕಡಿ
ಮುದ್ರೆ ಭೂಮಿಜೆಗೆ ಕಳಹೊ ॥
ಅದ್ರಿಯನುದ್ಧರಿಸು ಮುಪ್ಪುರವ ಸಂಹರಿಸು ಕಲಿ -
ಛಿದ್ರವನು ಬಿಡಿಸು ಶ್ರುತಿ ಪೇಳುತಿದೆ
ಭದ್ರಮೂರುತಿ ವೆಂಕಟ ವಿಜಯವಿಟ್ಠಲ
ಕದ್ರುವೇಯನ ಹಾಸಿಕಿಂದೇಳೊ ॥ 9 ॥
***