ಶ್ರೀ ಜಗನ್ನಾಥದಾಸರ ಕೃತಿ
ಬಲು ರಮ್ಯವಾಗಿದೆ ಹರಿಯ ಮಂಚ ॥ ಪ ॥
ಯಲರುಣಿಕುಲ ರಾಜರಾಜೇಶ್ವರ ಮಂಚ ॥ ಅ.ಪ ॥
ಪವನತನಯ ಮಂಚ ಪಾವನತರ ಮಂಚ
ಭುವನತ್ರಯನ ಪೊತ್ತ ಭಾರಿ ಮಂಚ ।
ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ
ಶಿವರೂಪದಲಿ ಹಿಂದೆ ಹರಿಯ ವಲಿಸಿದ ಮಂಚ ॥ 1 ॥
ರಾಮನನುಜಾನಾಗಿ ರಣವ ಜಯ್ಸಿದ ಮಂಚ
ತಾಮಸ ರುದ್ರನ್ನ ಪಡೆದ ಮಂಚ ।
ಭೀಮಾವರಜನೊಳು ಆವೇಶಿಸಿದ ಮಂಚ
ಜೀಮೂತಮಂಡಲವ ತಡೆಗಟ್ಟಿದ ಮಂಚ ॥ 2 ॥
ನೀಲಾಂಬರವನ್ನುಟ್ಟು ನಳನಳಿಸುವಾ ಮಂಚ
ನಾಲಿಗಿ ಎರಡುಳ್ಳ ನೈಜ ಮಂಚ ।
ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ
ತಾಳಾ ಮುಸಲ ಹಲವ ಪಿಡಿದಿಹದೀ ಮಂಚ ॥ 3 ॥
ಜೀವನಾಮಕನಾಗಿ ವ್ಯಾಪ್ತರೂಪ ಸ್ವಾಮಿ
ಸೇವಿಯೊಳಿರುವದು ಸಹಜ ಮಂಚ ।
ಸಾವಿರಾ ಮೊಗದಿಂದ ಶೋಭಿಸುತಿಹ್ಯಾ ಮಂಚ
ರೇವತೀ ಶರೀರವನು ಕಿರಿದು ಮಾಡಿದಾ ಮಂಚ ॥ 4 ॥
ವಾರುಣೀದೇವಿಗೆ ವರನೆನಿಸುವಾ ಮಂಚ
ಸಾರುವ ಭಕುತರ ಸಲಹೋ ಮಂಚ ।
ಕಾರುಣ್ಯನಿಧಿ ಜಗನ್ನಾಥವಿಟ್ಠಲನ ವಿ -
ಹಾರಕ್ಕೆ ಯೋಗ್ಯವಾದ ವಿಮಲ ಶೇಷಮಂಚ ॥ 5 ॥
***
Balu ramyavagide srihariya manca || pa ||
Yalaruni kula raja rajesvarana manca|| a.pa ||
Pavana tanayanenipa pavanatara manca|
Buvanatrayava potta bari manca|
Kivigalillada mancasriniketana manca|
Sivarupadali srihariya olisida manca|| 1 ||
Nilambaravanuttu nalanalisuva manca|
Nalige eradulla naija manca|
Nalvattu kalpadi tapava madida manca|
Tala musala halava pididiha manca|| 2 ||
Ramananujanagi ranava jayisida manca|
Tamasa rudrana padeda manca|
Bimananujanolu avesisida manca|
Jimuta mallaranu kuttida manca|| 3 ||
Jiva namakanagi vyaptanada hariya |
Sevisi sukisuva divya manca|
Savira mukadinda stutisi higguva manca|
Devakiya jatharadali janisida manca|| 4 ||
Varuni devige varanenisida manca|
Saruva Baktara poreva manca|
Karunya nidhi jagannatha viththalana
Viharakke yogyavada seshamanca|| 5 ||
ವ್ಯಾಖ್ಯಾನ :
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.
ಬಲು ರಮ್ಯವಾಗಿದೆ ಹರಿಯ ಮಂಚ ॥ ಪ ॥
ಯಲರುಣಿಕುಲ ರಾಜರಾಜೇಶ್ವರ ಮಂಚ ॥ ಅ.ಪ ॥
ಪವನತನಯ ಮಂಚ ಪಾವನತರ ಮಂಚ ।
ಭುವನತ್ರಯನ ಪೊತ್ತ ಭಾರಿ ಮಂಚ ॥
ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ ।
ಶಿವರೂಪದಲಿ ಹಿಂದೆ ಹರಿಯ ವಲಿಸಿದ ಮಂಚ ॥ 1 ॥
ಬಲು = ಬಹಳ ; ರಮ್ಯ = ಸುಂದರ ; ಮಂಚ = ಮಲಗುವ ಪೀಠ (ಹಾಸಿಗೆ) ; ಯಲರುಣಿಕುಲ = ಸರ್ಪಕುಲ ; ರಾಜರಾಜೇಶ್ವರ = ಸರ್ಪರಾಜಾಧಿರಾಜನೆಂಬ ಮಂಚ .
ಪವನತನಯ = ವಾಯುದೇವನ ಮಗ (ಶೇಷ) ; ಪಾವನತರ = ಅತ್ಯಂತ ಪವಿತ್ರವಾದ ; ಭುವನತ್ರಯನ ಪೊತ್ತ ಭಾರಿಮಂಚ = ಬ್ರಹ್ಮಾಂಡವನ್ನು ಹೊತ್ತಿರುವ ಶೇಷ - (ಪೃಥ್ವಿ , ಕೆಳಗಿನ ಮತ್ತು ಮೇಲಿನ ಲೋಕಗಳೆಂಬ ವಿವಕ್ಷೆಯಿಂದ ಲೋಕತ್ರಯವೆಂದು ಬ್ರಹ್ಮಾಂಡವೇ ವ್ಯವಹರಿಸಲ್ಪಡುತ್ತದೆ ; ಭೂಃ , ಭೂವಃ ಮತ್ತು ಸ್ವಃ ಎಂದರೆ ಭೂಮಿ, ಅಂತರಿಕ್ಷ ಮತ್ತು ಸ್ವರ್ಗಲೋಕಗಳು ಲೋಕತ್ರಯಗಳು. ಈ ಮೂರುಲೋಕಗಳ - ಉಪಲಕ್ಷಣದಿಂದ ಹದಿನಾಲ್ಕು ಲೋಕಾತ್ಮಕಬ್ರಹ್ಮಾಂಡವನ್ನೇ ತಿಳಿಯಬೇಕು;
ಶೇಷದೇವನು ಪಾತಾಳಲೋಕದ ಕೆಳಗೆ ತನ್ನ ೧೦೦೦ ಫಣಗಳ ರೂಪದಿಂದಿದ್ದು , ಒಂದು ಫಣದಲ್ಲಿ ಬ್ರಹ್ಮಾಂಡವನ್ನು ಸಾಸಿವೆಕಾಳಿನಂತೆ ಲೀಲೆಯಿಂದ ಧರಿಸಿರುವನು ;
ಕಿವಿಗಳಿಲ್ಲದ ಮಂಚ = ಕಿವಿಗಳಿಲ್ಲದ ಶೇಷಮಂಚ (ಸರ್ಪಗಳಿಗೆ ಕಿವಿಗಳಿಲ್ಲ - ಕಣ್ಣುಗಳಿಂದಲೇ ಕೇಳುತ್ತವೆಂದೂ ಹೇಳಲಾಗುತ್ತದೆ - ಶ್ರೀಹರಿಯ ಸೃಷ್ಟಿಯು ಆಶ್ಚರ್ಯಕರವು) ; ಶ್ರೀನಿಕೇತನಮಂಚ = ಲಕ್ಷ್ಮೀಪತಿಯು ಮಲಗುವ ಶಯ್ಯೆ; ಶಿವರೂಪದಲಿ ಹಿಂದೆ ಹರಿಯ ವಲಿಸಿದ = ಹಿಂದಿನ ಜನ್ಮದಲ್ಲಿ ಶಿವನಾಗಿದ್ದು , ಶ್ರೀಹರಿಯನ್ನು ಒಲಿಸಿ (ಪ್ರಸನ್ನೀಕರಿಸಿಕೊಂಡು) ಶೇಷಪದವಿಯನ್ನು ಪಡೆದವನು.
ರಾಮನನುಜನಾಗಿ ರಣವ ಜಯ್ಸಿದ ಮಂಚ ।
ತಾಮಸ ರುದ್ರನ್ನ ಪಡೆದ ಮಂಚ ॥
ಭೀಮಾವರಜನೊಳು ಆವೇಶಿಸಿದ ಮಂಚ ।
ಜೀಮೂತ ಮಂಡಲವ ತಡೆಗಟ್ಟಿದ ಮಂಚ ॥ 2 ॥
ರಾಮನನುಜನಾಗಿ = ಲಕ್ಷ್ಮಣನಾಗಿ ಅವತರಿಸಿ ; ರಣವ ಜಯ್ಸಿದ = ರಾಮ - ರಾವಣ ಯುದ್ಧದಲ್ಲಿ ರಾವಣಸಮಬಲನೆನಿಸಿದ ಇಂದ್ರಜಿತನನ್ನು ಕೊಂದು, ಅನೇಕ ರಾಕ್ಷಸರ ಸಮೂಹಗಳನ್ನು ಸಂಹರಿಸಿದ್ದಾನೆ ; ತಾಮಸ ರುದ್ರನ್ನ ಪಡೆದ ಮಂಚ = ತಾಮಸರುದ್ರನನ್ನು ಶೇಷದೇವನು ಪುತ್ರನನ್ನಾಗಿ ಪಡೆದನು (ಸೂಕ್ಷ್ಮ ಸೃಷ್ಟಿಯಲ್ಲಿ) ( ತಾಮಸೋऽನಂತಜಃಶಿವಃ ) ; ಭೀಮಾವರಜನೊಳು = ಅರ್ಜುನನಲ್ಲಿ ; ಆವೇಶಿಸಿದ = ಆವಿಷ್ಟನು ಶೇಷದೇವ (ನರಾವೇಶವಿದೆ ಅರ್ಜುನನಲ್ಲಿ - ನರನು ಶೇಷಾವತಾರಿಯು, ಯಮಪುತ್ರನು - ಯಮನಿಂದ ಜನಿಸಿದ ನರನಾರಾಯಣರಲ್ಲೊಬ್ಬನು) ; ಜೀಮೂತ ಮಂಡಲವ = ಇಂದ್ರಾದಿದೇವಸಮೂಹವನ್ನು (ಜೀಮೂತ - ಮೇಘವಾಹನನಾದ ಇಂದ್ರನ ನಾಮವೂ ಆಗಿದೆ). ತಡೆಗಟ್ಟಿದ ಮಂಚ.
ನೀಲಾಂಬರವನ್ನುಟ್ಟು ನಳನಳಿಸುವ ಮಂಚ ।
ನಾಲಿಗಿ ಎರಡುಳ್ಳ ನೈಜಮಂಚ ॥
ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ ।
ತಾಳಾ ಮುಸಲ ಹಲವ ಪಿಡಿದಿಹದೀ ಮಂಚ ॥ 3 ॥
ನೀಲಾಂಬರ = ನೀಲವಸ್ತ್ರ; ನಳನಳಿಸುವ = ಥಳಥಳಿಸುವ (ಹೊಳೆಯುವ); ನಾಲಿಗಿ ಎರಡುಳ್ಳ = ಸರ್ಪಗಳಿಗೆ ನಾಲಿಗೆಗಳು ಎರಡು ; ನೈಜಮಂಚ = ಸ್ವಭಾವಸಿದ್ಧವಾದ ಶಯ್ಯೆ ; ನಾಲ್ವತ್ತುಕಲ್ಪದಿ ತಪವ ಮಾಡಿದ = ನಲವತ್ತು ಬ್ರಹ್ಮಕಲ್ಪಗಳ ಕಾಲ ಸಾಧನೆ ಮಾಡಿ ಶೇಷಪದವಿಯನ್ನು ಪಡೆದ (ಇಲ್ಲಿ ' ತಪವ ' ಎಂಬುದಕ್ಕೆ ಸಾಧನೆ ಎಂಬರ್ಥವನ್ನು ತಿಳಿಯಬೇಕು. ' ದ್ವಿಶತಕಲ್ಪದಿ ತಪವೆಸಗಿ ಅಸುದೇವ ಪೊಂಬಸಿರ ಪದವ ಪಡೆದ ' ಎಂದು ತತ್ತ್ವಸುವ್ವಾಲಿಯಲ್ಲಿ ' ತಪಶಬ್ದ ' ವನ್ನು ಸಾಧನೆ ಎಂಬರ್ಥದಲ್ಲಿ ಪ್ರಯೋಗಿಸಿರುವಂತೆ - ಉಗ್ರತಪನಾಮಕನಾಗಿ ರುದ್ರದೇವನು ೧೦ ಕಲ್ಪ ತಪಸ್ಸು ಮಾಡಿ, ೩೮ ಕಲ್ಪ ಸಾಧನೆಯ ನಂತರ ೪೯ನೇ ಕಲ್ಪದಲ್ಲಿ ರುದ್ರಪದವಿಯನ್ನು ಹೊಂದಿ, ೫೦ನೇ ಕಲ್ಪದಲ್ಲಿ ಶೇಷಪದವಿಯನ್ನು ಹೊಂದುತ್ತಾನೆ - ಅಂತೂ ಒಟ್ಟು ೫೦ನೇ ಕಲ್ಪಸಾಧನೆಯಿಂದ ಮುಕ್ತಿ, ರುದ್ರದೇವನಿಗೆ ). ತಾಳಾ ಮುಸಲ ಹಲವ ಪಿಡಿದಿಹದೀ = ತಾಳೆಮರದ ಧ್ವಜ , ಒನಕೆ, ನೇಗಿಲುಗಳನ್ನು ಹಿಡಿದಿರುವ ಈ ಮಂಚ.
ಜೀವನಾಮಕನಾಗಿ ವ್ಯಾಪ್ತರೂಪ ಸ್ವಾಮಿ ।
ಸೇವಿಯೊಳಿರುವದು ಸಹಜ ಮಂಚ ॥
ಸಾವಿರಮೊಗದಿಂದ ಶೋಭಿಸುತಿಹ್ಯಾ ಮಂಚ ।
ರೇವತಿ ಶರೀರವನು ಕಿರಿದು ಮಾಡಿದ ಮಂಚ ॥ 4 ॥
ಜೀವನಾಮಕನಾಗಿ = ಸರ್ವ ಸುಜೀವಾಭಿಮಾನಿಯಾದ ಶೇಷನು, ' ಜೀವ 'ನೆಂಬ ನಾಮವುಳ್ಳವನು; ವ್ಯಾಪ್ತರೂಪ = ಎಲ್ಲ ಜೀವರಲ್ಲಿದ್ದು ; ಸ್ವಾಮಿ ಸೇವಿಯೊಳಿರುವದು = ಶ್ರೀಹರಿಯ ಸೇವೆಯಲ್ಲಿ ನಿರತನಾಗಿರುವ ; ಸಾವಿರಮೊಗದಿಂದ ಶೋಭಿಸುತಿಹ್ಯಾ = ಸಹಸ್ರ ಮುಖಗಳಿಂದ ಕಂಗೊಳಿಸುತ್ತಿರುವ ; ರೇವತಿ ಶರೀರವನು ಕಿರಿದು ಮಾಡಿದ = ಬಲರಾಮನಾಗಿ, ಮಂಚ = ಶೇಷದೇವ.
ವಾರುಣೀದೇವಿಗೆ ವರನೆನಿಸುವಾ ಮಂಚ ।
ಸಾರುವ ಭಕುತರ ಸಲಹೋ ಮಂಚ ॥
ಕಾರುಣ್ಯನಿಧಿ ಜಗನ್ನಾಥವಿಟ್ಠಲನ ವಿ - ।
ಹಾರಕ್ಕೆ ಯೋಗ್ಯವಾದ ವಿಮಲ ಶೇಷಮಂಚ ॥ 5 ॥
ವಾರುಣೀದೇವಿಗೆ ವರನೆನಿಸುವಾ = ಪತಿಯೆಂದು ಪ್ರಸಿದ್ಧನಾದ ; ಸಾರುವ = ಸ್ತುತಿಸುವ (ನಿನ್ನ ಬಳಿಗೆ ಬರುವ - ಶರಣುಹೊಂದುವ); ಭಕುತರ ಸಲಹೋ = ಭಕ್ತರನ್ನು ಸಲಹುವ ; ಜಗನ್ನಾಥವಿಟ್ಠಲನ ವಿಹಾರಕ್ಕೆ ಯೋಗ್ಯವಾದ = ಶ್ರೀಹರಿಯ ಶಯನಕ್ರೀಡೆಗೆ (ಸುಖಾಸನಕ್ಕೆ) ಯೋಗ್ಯವಾದ ; ವಿಮಲ ಶೇಷಮಂಚ = ಪವಿತ್ರವಾದ ಶೇಷದೇವನೆಂಬ ಶ್ರೀಹರಿಯ ಶಯ್ಯೆ.
ವ್ಯಾಖ್ಯಾನ :
ಕೀರ್ತಿಶೇಷ ಮಾಧ್ವಭೂಷಣ ದಿ॥ ಶ್ರೀ ಬಿ. ಭೀಮರಾವ್ , ದಾವಣಗೆರೆ.
***
(received in WhatsApp)
ರಾಗ ಕಾಂಬೋಧಿ (ಮಾಲಕಂಸ) ಝಂಪೆತಾಳ
ಬಲು ರಮ್ಯವಾಗಿದೆ ಹರಿಯ ಮಂಚ||ಪ||
ಯಲರುಣಿ ಕುಲರಾಜ ರಾಜೇಶ್ವರನ ಮಂಚ ||ಅ.ಪ||
ಪವನತನಯ ಮಂಚ ಪಾವನತರ ಮಂಚ
ಭುವನತ್ರಯವ ಪೊತ್ತ ಭಾರಿ ಮಂಚ
ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ
ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ ||೧||
ನೀಲಾಂಬರವನುಟ್ಟು ನಳನಳಿಸುವ ಮಂಚ
ನಾಲಿಗೆ ಎರಡುಳ್ಳ ನೈಜಮಂಚ
ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ
ತಾಲ ಮುಸಲ ಹಲವ ಹಿಡಿದಿರುವ ಮಂಚ ||೨||
ರಾಮನನುಜನಾಗಿ ರಣವ ಜಯಿಸಿದ ಮಂಚ
ತಾಮಸರುದ್ರನನು ಪಡೆದ ಮಂಚ
ಭೀಮಾವರಜನೊಳು ಆವೇಶಿಸಿದ ಮಂಚ
ಜೀಮೂತ ಮಂಡಲವ ತಡೆಗಟ್ಟಿದ ಮಂಚ ||೩||
ಜೀವನಾಮಕನೆನಿಸಿ ವ್ಯಾಪ್ತನಾದ ಹರಿಯ
ಸೇವಿಸಿ ಸುಖಿಸುವ ದಿವ್ಯ ಮಂಚ
ಸಾವಿರ ಮುಖದಿಂದ ತುತಿಸಿ ಹಿಗ್ಗುವ ಮಂಚ
ದೇವಕೀಜಠರದಲಿ ಜನಿಸಿದ ಮಂಚ ||೪||
ವಾರುಣೀದೇವಿಗೆ ವರನೆನಿಸಿದ ಮಂಚ
ಸಾರುವ ಭಕುತರ ಪೊರೆವ ಮಂಚ
ಕಾರುಣ್ಯನಿಧಿ ಜಗನ್ನಾಥವಿಠ್ಠಲನ ವಿ-
ಹಾರಕ್ಕೆ ಯೋಗ್ಯವಾದ ಶೇಷ ಮಂಚ ||೫||
***