Showing posts with label ಹ್ಯಾಗಾಗುವದು ನಿನ್ನ ದಯವೆನ್ನೊಳೂ badarayana vittala. Show all posts
Showing posts with label ಹ್ಯಾಗಾಗುವದು ನಿನ್ನ ದಯವೆನ್ನೊಳೂ badarayana vittala. Show all posts

Thursday, 15 April 2021

ಹ್ಯಾಗಾಗುವದು ನಿನ್ನ ದಯವೆನ್ನೊಳೂ ankita badarayana vittala

ಹ್ಯಾಗಾಗುವದು ನಿನ್ನ ದಯವೆನ್ನೊಳೂ l

ಕಾಗಿ ಗೂಗಿಗಳಂತೆ ಕಾಲ ಕಳಿವೆನು ಹರಿಯೆ ll ಪ ll


ನಿದ್ರೆಗೊಳಗಾಗದಲೆ ಅರ್ಧರಾತ್ರಿಯೊಳೆದ್ದು l

ಶುದ್ಧಮತಿಯಲಿ ನಿಮ್ಮ ಮುದ್ದುನಾಮಾ l

ಎದ್ದು ನೆನೆಯುವ ಜನರ ಗದ್ದಲವ ಸಹಿಸದಲೆ l

ಎದ್ದು ದೂರೋಡುವೆನು ನಿದ್ರೆ ಬರದಂತೆಂದು ll 1 ll


ನರಸಿಂಹ ಹರಿಕೃಷ್ಣ ದುರಿತ ಸಂಹಾರ ಸಿರಿ l

ಮರುತನೊಡಿಯನೆ ನಿಮ್ಮ ಸ್ಮರಣೆ ಮಾತ್ರಾ l

ದುರಿತ ಕಶ್ಮಲವನ್ನು ವರಹ ಕೇಸರದಂತೆ l

ಪರಿಹರಿಸುವದೆಂಬದರಿಯದತಿ ಮೂಢನಿಗೆ ll 2 ll


ಹಗಲಿರುಳು ಬಿಡದೆನಗೆ ಮೊಗದ ನಾರಿಯರ ಮೈ l

ಬಗೆಯ ಗುಣಿಸುತ ಮನದಿ ಮರುಗುತಿಹ್ಯನೊ l

ನಿಗಮೇಶ ನಿನ್ನ ವಂದರಘಳಿಗೆ ನೆನಿಯನೊ l

ಜಗದೀಶ ಹರಿದಾಸ ವೇಷ ಧರಿಸದೆ ವ್ಯರ್ಥ ll 3 ll


ಗುಡ್ಡದಂತಿಹ್ಯ ಪಾಪ ಖಡ್ಡಿಯಂದದಿ ಮಾಳ್ಪ l

ದೊಡ್ಡವರ ಪಾದಾಂಬೋಜಗಳಿಗೆ l

ಅಡ್ಡ ಬೀಳದೆ ಪರಮ ದಡ್ಡನಾದೆನೊ ನಾನು l

ಗಡ್ಡ ಪಿಡಿದ್ಹೇಳಿಕೊಂಬೆ ಮುಂದೇನು ಗತಿಯೊ ll 4 ll


ಆದರದಿ ನಿನ್ನ ಪಾದಾರಾಧನಾದಿ ವರ l

ಸಾಧನವ ಮಾಡಿದವನಲ್ಲ ನಾನು l

ಶ್ರೀದ ಶ್ರೀ ಬಾದರಾಯಣವಿಟ್ಠಲ ನೀನಾ l

ಗಿ ದಯಮಾಡಬೇಕೈಯ್ಯ ಕರುಣಾಬ್ಧೆ ll 5 ll

***