ನಿಷ್ಠೆಯಿಂದ ನಿಂತ ಈ ಪುಟ್ಟ ಕಪಿಯ ನೋಡೆ ಪ.
ಎಷ್ಟು ಮೌನ ಧರಿಸಿದಂಥ ಪುಟ್ಟ ಕಪಿಯ ನೋಡೆ ಅ.ಪ.
ವಾರಿಧಿಯ ದಾಟಿದಂಥ ಪುಟ್ಟ ಕಪಿಯ ನೋಡೆ
ಹೀರಿದ ಕುರುಪರ ರಕ್ತ ಪುಟ್ಟ ಕಪಿಯ ನೋಡೆ 1
ತೂರಿದ ಅನ್ಯರ ಮತ ಪುಟ್ಟ ಕಪಿಯ ನೋಡೆ
ಸಾರಿ ಹರಿ ಸರ್ವೋತ್ತಮನೆಂದ ಪುಟ್ಟ ಕಪಿಯ ನೋಡೆ2
ಶೌರ್ಯವೆಲ್ಲ ಉಡುಗಿದಂಥ ಪುಟ್ಟ ಕಪಿಯ ನೋಡೆ
ಹಾರಿ ಯಂತ್ರದಲ್ಲಿ ಶಿಲ್ಕಿದ ಪುಟ್ಟ ಕಪಿಯ ನೋಡೆ 3
ಮಾನ ಉಳಿಸಿಕೊಳ್ಳಲು ಮೌನದ ಪುಟ್ಟ ಕಪಿಯ ನೋಡೆ
ಧ್ಯಾನ ಮುದ್ರಾಂಕಿತದಿ ಶೋಭಿಪ ಪುಟ್ಟ ಕಪಿಯ ನೋಡೆ 4
ಯೋಗಾಸನದಿ ಪದ್ಮಾಸನವು ಪುಟ್ಟ ಕಪಿಯ ನೋಡೆ
ವಾಗೀಶನ ಪದಕ್ಹೋಗುವ ತಪದ ಪುಟ್ಟ ಕಪಿಯ ನೋಡೆ 5
ವ್ಯಾಸರಿಗೊಲಿದ ವೇಷಧಾರಕ ಪುಟ್ಟ ಕಪಿಯ ನೋಡೆ
ಮೋಸವೊ ಧ್ಯಾನವೊ ಅರಿಯೆ ಪುಟ್ಟ ಕಪಿಯ ನೋಡೆ 6
ಕಷ್ಟದ ಭವಕಟ್ಟು ಬಿಡಿಸುವ ಪುಟ್ಟ ಕಪಿಯ ನೋಡೆ
ಕಟ್ಟಿನೊಳ ಸಿಲ್ಕಿ ಗುಟ್ಟು ತಿಳಿಸದ ಪುಟ್ಟ ಕಪಿಯ ನೋಡೆ 7
ಸಿದ್ಧ ಸಾಧನ ಬುದ್ಧಿ ಬಲಿದ ಪುಟ್ಟ ಕಪಿಯ ನೋಡೆ
ಉದ್ಧಾರಕ ಪ್ರಸಿದ್ಧ ಪುರುಷ ಪುಟ್ಟ ಕಪಿಯ ನೋಡೆ 8
ಸ್ವಾಪರೋಕ್ಷಿ ಜಗದ್ವ್ಯಾಪಕನಾದ ಪುಟ್ಟ ಕಪಿಯ ನೋಡೆ
ಗೋಪಾಲಕೃಷ್ಣವಿಠ್ಠಲನ ದಾಸನೀ ಪುಟ್ಟ ಕಪಿಯ ನೋಡೆ 9
****