Showing posts with label ವಿಜಯಗುರು ತವಪಾದರಜವ ಕರುಣಿಸಿ ಎನಗೆ gopalakrishna vittala vijaya dasa stutih. Show all posts
Showing posts with label ವಿಜಯಗುರು ತವಪಾದರಜವ ಕರುಣಿಸಿ ಎನಗೆ gopalakrishna vittala vijaya dasa stutih. Show all posts

Thursday, 26 December 2019

ವಿಜಯಗುರು ತವಪಾದರಜವ ಕರುಣಿಸಿ ಎನಗೆ ankita gopalakrishna vittala vijaya dasa stutih

ಅಂಬಾಬಾಯಿ
ವಿಜಯ ಗುರು ತವಪಾದರಜವ ಕರುಣಿಸಿ ಎನಗೆ
ಭುಜಗಶಯನನ ಧ್ಯಾನ ಭಜನೆ ನೀಡುವುದು ಪ.

ತವ ಶಿಷ್ಯವಂಶ ಸಂಜಾತಳೆನ್ನುತಲಿ ಬಹು
ತವಕದಲಿ ಕರುಣಾರ್ದ ದೃಷ್ಟಿಯಿಂದ
ತವ ಸೇವೆ ಎನಗಿತ್ತು ತವ ಕೀರ್ತನೆಯ ನುಡಿಸಿ
ಮೂರ್ತಿ ತೋರೆನ್ನ ಭವತಾಪ ಹರಿಸಯ್ಯ 1

ನಿನ್ನ ಮಹಿಮೆಯ ಗುಟ್ಟು ವರ್ಣಿಪರು ಯಾರಿನ್ನು
ನಿನ್ನ ಚರ್ಯೆಯ ಚರಿತೆ ಬರೆದವರ್ಯಾರೊ
ನಿನ್ನ ನಿಜ ಸಂಕಲ್ಪ ಇನ್ನು ಅರಿಯುವರುಂಟೆ
ಬನ್ನ ಭವ ಉಂಟೆ 2

ಆ ದೇವಮುನಿ ಆಜ್ಞೆ ಮೋದದಲಿ ಸ್ವೀಕರಿಸಿ
ಪಾದನ್ಯೂನತೆ ಕವನ ಪೂರ್ಣಗೊಳಿಸಿ
ವೇದಶಾಸ್ತ್ರಗಳರ್ಥ ಸುಲಭದಲಿ ತಿಳಿಸುತಲಿ
ಹಾದಿ ತೋರಿದೆ ಶಿಷ್ಯರಾದ ಸುಜನರಿಗೆ 3

ಸತ್ಕರ್ಮ ಫಲಗಳನು ನಿತ್ಯದೊಳಗರ್ಪಿಸಲು
ಉತ್ತಮನು ಆರೆಂಬ ಚಿತ್ತದಳಲ
ಮುಕ್ತಿಯೋಗ್ಯರಿಗೆ ಬಹು ಯುಕ್ತಿಯಿಂದಲಿ ತೋರಿ
ಉತ್ತಮನು ಹರಿಯೆಂದು ಶಕ್ತಿಯಿಂ ಸ್ಥಾಪಿಸಿದ 4

ವೈಕುಂಠಪುರದೊಳಗೆ ಶ್ರೀ ಕರನ ವಕ್ಷಕ್ಕೆ
ಸೋಕಿಸಿದೆ ಚರಣವನು ಜೋಕೆಯಿಂದ
ಈ ಕಾರ್ಯಕಾರಣವ ನಾ ಕೇಳಿ ನುಡಿವಂಥ
ವಾಕು ಲಾಲಿಸುತ ವಿವೇಕ ಮತಿ ಕರುಣಿಪುದು 5

ಆ ಕಮಲನಾಭನಾ ಹೃದಯ ಕರುಣಾಮೃತವು
ಸೋಕಿ ತುಂಬಿಹುದು ತವ ಚರಣ ಕಮಲದಲಿ
ನಾ ಕೇಳ ಬಂದೆನಾ ಕರುಣಾಮೃತದ ಕಣವ
ಯಾಕೆ ಮರೆಮುಚ್ಚಿನ್ನು ನೀ ಕೊಡೈ ತವಕದಲಿ 6

ಪಾದ ರೂಢಿಗೊಡೆಯಗೆ ಲಕುಮಿ
ಓಡಿದಳು ಕರವೀರಪುರಕೆ ಸ್ವಾಮಿ
ಬೇಡಾಗೆ ವೈಕುಂಠ ನೋಡಿ ಆನಂದಾದ್ರಿ
ಮಾಡಿದನು ಮಂದಿರವ ಕೂಡಿ ಪದ್ಮಿನಿಯ 7

ನೋಡಿ ವೈಕುಂಠದೊಳು ನಾಡಿಗೊಡೆಯನ ಚರ್ಯ
ರೂಢಿಯೊಳು ಜನಿಸಿ ಭೂಸುರವಂಶದಿ
ದುರಿತ ಈಡಾಡಿ ಹರಿದಾಸ್ಯವನು
ಬೇಡಿ ಬಯಸುತ ಪೊಂದಿ ನಾಡಿನೊಳು ಮೆರೆದೆ 8

ಪ್ರತಿವರ್ಷ ಬಿಡದೆ ತಿರುಪತಿ ಯಾತ್ರೆ ಭಕ್ತಿಯಲಿ
ಪತಿತಪಾವನನ ಓಲೈಸಿ ಮೆರೆದೆ
ಕ್ಷಿತಿಯಕ್ಷೇತ್ರ ಅಪ್ರತಿಮಹಿಮ ಸಂಚರಿಸಿ
ಕ್ಷಿತಿಗೆ ತೋರಿದೆ ನಿನ್ನ ಮಹಿಮೆ ಜಾಲಗಳ 9

ಅಂಕಿತವದಲ್ಲದೆ ದಾಸತ್ವ ಸಿದ್ಧಿಸದು
ಕಿಂಕರಗೆ ಅಂಕಿತವೆ ಕುರುಹು ಎಂದು
ಅಂಕಿತವ ಪಡೆದು ಚಕ್ರಾಂಕಿತನ ಗುಣ ಮಹಿಮೆ
ಶಂಕಿಸದೆ ಪೇಳ್ದೆ ತವ ಕಿಂಕರೋದ್ಧಾರಕನೆ 10

ನಿನ್ನ ಮಹಿಮಾದಿಗಳ ವರ್ಣಿಸಲು ಎನ್ನಳವೆ
ಚನ್ನ ಗುರು ವಿಜಯವಿಠ್ಠಲನ ಪದಕಮಲ
ಚನ್ನಾಗಿ ಕಂಡು ಹೃನ್ಮಂದಿರದಿ ಸತತದಲಿ
ತನ್ಮಂತ್ರ ಕಿರಣವೆಮ್ಮಲ್ಲಿ ಬೀರಿದ ಕರುಣಿ 11

ವಿಕ್ರಮ ಕಾರ್ತೀಕ ಶುದ್ಧ ದಶವಿೂ ದಿವ್ಯ
ಶುಕ್ರ ನಾಮರು ವಾರ ಶುಭದಿನದಿ ಇಂದು
ಅಕ್ಕರದಿ ಕರಸಿಲ್ಲಿ ಉಕ್ಕಿಸಿದೆ ತವ ಸ್ತೋತ್ರ
ಮಕ್ಕಳಂದದಿ ಪೊರೆವ ಅಕ್ಕರೆಯು ಉಂಟೊ 12

ಮಧ್ವರಾಯರ ಕುಲದಿ ಉದ್ಭವಿಸಿದಂಥ ಈ
ಶುದ್ಧ ವೈಷ್ಣವ ಕುಲದಿ ಜನಿಸಿ ಬಂದೆ
ಶುದ್ಧ ದಾಸತ್ವದ ಮುದ್ರಾಂಕಿತದ ರತ್ನ
ಪಾದ ಕಂಡೆ 13

ಪಾಪಿ ಜನರುದ್ಧರಿಪ ಪಾವನಗಾತ್ರನೆ
ಆ ಪಯೋಜಾಸನರ ತರತಮ್ಯವ
ಸ್ಥಾಪಿಸಿದ ಮಹಿಮನೆ ಸದ್ಗುಣಾಂಬುಧಿ ನಿಲಯ
ಗೋಪಾಲಕೃಷ್ಣವಿಠ್ಠಲನ ಪದಭೃಂಗ 14
********