Showing posts with label ಮುಕುತಿಯಾದವರ ಪ್ರಕರಣವ vijaya vittala ankita suladi ಪ್ರಕರಣ ಸುಳಾದಿ MUKUTIYADAVARA PRAKARANAVA PRAKARANA SULADI. Show all posts
Showing posts with label ಮುಕುತಿಯಾದವರ ಪ್ರಕರಣವ vijaya vittala ankita suladi ಪ್ರಕರಣ ಸುಳಾದಿ MUKUTIYADAVARA PRAKARANAVA PRAKARANA SULADI. Show all posts

Tuesday, 17 August 2021

ಮುಕುತಿಯಾದವರ ಪ್ರಕರಣವ vijaya vittala ankita suladi ಪ್ರಕರಣ ಸುಳಾದಿ MUKUTIYADAVARA PRAKARANAVA PRAKARANA SULADI

   ..

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ  ಮುಕ್ತರ ಪ್ರಕರಣ ಸುಳಾದಿ 


 ರಾಗ ಆನಂದಭೈರವಿ 


 ಧ್ರುವತಾಳ 


ಮುಕುತಿಯಾದವರ ಪ್ರಕರಣವ ತಿಳಿಯಬೇಕು

ಭಕುತಿಯಿಂದಲಿ ಭಾವ ಶುದ್ದನಾಗಿ

ಮುಕುತರೊಳಗೆ ತಾರತಮ್ಯವೇ ವುಂಟು ಆ -

ಸಕುತರಾಗಿಪ್ಪರು ಹರಿ ಪದದಿ

ಕಕುಲಾತಿ ಮೊದಲಾದ ದೋಷ ರೂಪಗಳಿಲ್ಲ

ಅಕಟಕಟ ಯಿವರೀಗ ವಿಲಿಂಗರು

ಸಕಲರೊಳಗೆ ಬ್ರಹ್ಮ ಉತ್ತಮ ದೇವತಿ

ಅಕಳಂಕನಯ್ಯ ಸಂಸಾರದಲ್ಲಿ

ಪ್ರಕಟ ಜ್ಞಾನವೇ ಸರಿ ವ್ಯಕ್ತವಾಗುವದು ಬಾ -

ಧಕವಿಲ್ಲ ಋಜುಗಣಸ್ಥ ಜನರಿಗೆ

ಮುಕುತಿಲಿ ಈಶಾದನ್ಯತ್ರ ಜಗದ್ವಿಷಯ ಜ್ಞಾನ

ಶಕಲಯಿಲ್ಲದೆ ಅನಾಲೋಚನೆಯಲ್ಲಿ

ಲಕುಮಿಗೆ ಸಾಮ್ಯ ಬಂತು ಎನದೀರಿ ಸದಾವಕ್ಕು

ಉಕುತಿಯ ಲಾಲಿಸುವದು ಬೊಮ್ಮಗಿಂದಲಿ ಶ್ರೀ -

ಲಕುಮಿಯ ಜ್ಞಾನ ಈಶ ಸರ್ವ ಪದಾರ್ಥದಲ್ಲ್ಯ -

ಧಿಕವಾಗಿಪ್ಪದು ಈಶಕೋಟಿ ಗಣನೆ

ವಿಕಸಿತವಾದ ಶ್ರೀಹರಿಯ ಜ್ಞಾನಕ್ಕೆ ಎ -

ಣಿಕೆ ವುಂಟೆ ಆವಾವ ಕಾಲಕ್ಕು ಗುಣಿಸಿದರು

ಮುಕುತರು ತಮ್ಮ ತಮ್ಮ ಯೋಗ್ಯತೆ ಉಳ್ಳನಿತು

ಸುಖಸಾಂದ್ರರಾಗಿ ಗರುಡ ಶೇಷಾದ್ಯರು ಗುಣ -

ನಿಕರದಲ್ಲಿ ನಿತ್ಯ ಸರ್ವವು ವಶಕರವು

ರಕ್ಕಸಾರಿಯ ಇಚ್ಛಾವರ್ಕ ಒಂದುಂಟು ಇವರಿಗೆ

ತ್ವಕು ಮೊದಲಾದಿಂದ್ರಿಯಗಳು ಸ್ವರೂಪಭೂತವೆನ್ನಿ

ರುಕುಮಾಭರಣ ವಸನ ದಿವ್ಯ ತೇಜೋಮಯರು

ಅಖಿಲ ಜೀವರು ವೈಕುಂಠ ಆರಂಭಿಸಿ

ತಕತಕ್ಕ ಸ್ಥಾನದಲ್ಲಿ ಇಪ್ಪರು ಮೇರುವಿಡಿದು

ಮುಕುತಾರ್ಥ ಅಂಶರಹಿತವಾದ ಮುಕ್ತರು ತಾ -

ತ್ವಿಕರಾತಾತ್ವಿಕರಂತೆ ಸಮರ್ಥರಲ್ಲ ನಾ -

ಲಕುಮೊಗ ಮಿಗಿಲಾದ ಅಂಶಿ ಅಂಶಗಳೆಲ್ಲ

ಪ್ರಕಟವಾಗುವರು ಅನೇಕ ರೂಪಗಳು ಧಾ -

ರಕರಾಗಿ ನಾನಾ ಕ್ರೀಡೆಯಾಡುವರಿಚ್ಛೆಯಲ್ಲಿ

ಅಕುಟಿಲರಲ್ಲದೆ ಒಬ್ಬರೊಬ್ಬರಿಗೆ ಕು -

ಹಕತನವಿಲ್ಲದೆ ಅಧೀನವಾಗಿಪ್ಪರು

ಮುಕುತಿದಾಯಕ ನಮ್ಮ ವಿಜಯವಿಟ್ಠಲ ನಿಯಾ -

ಮಕ ಕಾಣೊ ಸರ್ವಜನಕೆ ಅನಂತ ಕಲ್ಪಕ್ಕೆ ॥ 1 ॥ 


 ಮಟ್ಟತಾಳ 


ಮೂರೊಂದು ವಿಧದ ಮುಕುತಿಯು ಸಾಲೋಕ್ಯ

ಸಾರೂಪ್ಯ ಸಾಮೀಪ್ಯ ಮಾಣದೆ ಸಾಯುಜ್ಯ

ಸಾರಿಷ್ಣಿಯು ವುಂಟು ಕಡಿಯಣ ಪ್ರಭೇದ

ವಾರಿಜಸಂಭವಗೆ ಹರಿಯ ಸರ್ವಾಂಗದಲಿ ಶ -

ರೀರ ಧರಿಸಿ ಪೊಂದೊದೆ ಸಾರಿಷ್ಣ

ಮಾರಾರಿ ಮುಖ್ಯ ತತ್ವೇಶರಜನ

ದ್ವಾರದಲಿ ತಮ್ಮ ತತ್ತತ್ ಸ್ಥಾನದಲಿ

ಸೇರುವದೆ ಇದು ಸಾಯುಜ್ಯ ವೆನಿಸುವದು

ಬೇರೆ ಬೇರೆಯವರಿಗೆ ಅಂಗ ಸಾಯುಜ್ಯವು

ನಾರಾಯಣರೂಪ ವಾಸುದೇವನೊಳಗೆ 

ಈ ರೀತಿಯುಂಟು ಧಾರುಣಿಪತಿಯಾದಾ ಪರೀಕ್ಷಿತ ವಿಡಿದು

ಸಾರುವೆ ಸಾಮಿಪ್ಯ ವೆಂಬುದು ಸಾಂಶ -

ವಾರಿತ ಪ್ರತೀಕಾಲಂಬರಿಗೆ ಯೆನ್ನು

ಸಾರೂಪ್ಯವೆ ಕೇಳಿ ಅಂಶಗಳಿಲ್ಲದ

ಧೀರರಿಗೆ ಸಿದ್ಧ ಋಷಿ ಪಿತ್ರಾದ್ಯರಿಗೆ

ಮೇರು ಪರ್ವತದಿಂದ ವೈಕುಂಠ ಪರಿಯಂತ

ಚಾರು ಸಾಲೋಕ್ಯಗಳು ಮನುಜೋತ್ತಮರಿಗೆ

ಹಾರವಾಗಿಪ್ಪರು ಇವರಿವರೊಳಗೆ

ತಾರತಮ್ಯವೆ ತಿಳಿ ವೈಷಮ್ಯಗಳಿಲ್ಲ

ಸಾರಭೋಕ್ತ ನಮ್ಮ ವಿಜಯವಿಟ್ಠಲನ್ನ 

ಆರಾಧಿಸುವರು ನಿಷ್ಕಾಮಕರಾಗಿ ॥ 2 ॥ 


 ರೂಪಕತಾಳ 


ತತ್ವೇಶರಿಗೆ ಉಂಟು ಚತುರವಿಧ ಮುಕ್ತಿ

ಮತ್ತೆ ಕ್ರಮದಿಂದಲಿ ಮೂರೆರಡು ಒಂದು ಮನು -

ಜೋತ್ತಮರ ತನಕ ಸಿದ್ದವಾಗಿಪ್ಪುದು

ಪತ್ನಿ ಉಳ್ಳವರುಂಟು ಒಬ್ಬರಿಬ್ಬರು ನೂರು

ಹತ್ತುಸಾವಿರ ಅನೇಕ ಮಂದಿಯ ಕೂಡ

ಪತ್ನಿ ಯಿಲ್ಲದವರು ಇಪ್ಪರು ಇವರೊಳಗೆ

ನಿತ್ಯ ಬ್ರಹ್ಮಚಾರಿ ಸ್ವೇಚ್ಛೆ ಕಾಮುಕರು

ಇತ್ಥಂಡದವರೆನ್ನಿ ಇಚ್ಛೆ ಐಕ್ಯರು ಎಲ್ಲ

ಎತ್ತ ನೋಡಿದರತ್ತ ಆನಂದಭರಿತದಲ್ಲಿ

ಸುತ್ತುವರು ಒಂದೊಂದು ಸ್ಥಾನ ನಿರ್ದೇಶರಲ್ಲಿ

ಉತ್ತಮ ಸಾಂಶ ಜನರು ಸಂಚರಿ -

ಸುತ್ತಲಿಪ್ಪರು ಬಹುರೂಪಂಗಳು ಧರಿಸಿ

ತತ್ಥಳಿಸುವ ಮೂಲ ಸ್ವರೂಪ ದೇಹದಲ್ಲಿ

ತತ್ವೇಶರಿಗೆ ಇವೆ ಆಂಶಗಳುಂಟು

ಪ್ರತ್ಯೇಕವಾಗಿ ಎಲ್ಲರ ತಕ್ಕವೆ ವಲ್ಲ

ಅನಿತ್ಯವೆನಿಸುವವು ಇವರ ಅಂಶರೂಪ

ಸತ್ಯಸಂಕಲ್ಪ ಶ್ರೀವಿಜಯವಿಟ್ಠಲರೇಯನ 

ನಿತ್ಯ ಅಂಶಿ ಅಂಶ ರೂಪಗಳೆನ್ನು ॥ 3 ॥ 


 ಝಂಪಿತಾಳ 


ಮನುಜ ಗಂಧರ್ವ ಮಿಕ್ಕಾದ ನಿರಂಶರಿಗೆ

ಚಿನು ಶರೀರದಿ ಚತುರ ಮುಕ್ತಿಯುಂಟು

ಗುಣವಧಿಕವುಳ್ಳಂಥ ಉತ್ತರೋತ್ತರ ಜನಕೆ

ಘನ ಅಂಶಾಂಶಗಳಿಂದ ವ್ಯಕ್ತವೈಯ್ಯಾ

ವನಜಭವ ಮೊದಲಾದ ಮುಕ್ತರು ನಿಯಾಮಕರು

ಅನುದಿನ ತಮತಮಗಿಂದ ನೀಚರಿಗೆ

ತನುವಿನೊಳಗಲ್ಲದೆ ಬಾಹಿರದಿ ಯೆನ ಸಲ್ಲ

ಅನಿಲನೇ ಮೋಕ್ಷದಲಿ ಬ್ರಹ್ಮದೇವಾ

ತ್ರಿಣಿನೇತ್ರ ಸತಿವಿಡಿದು ಚತುರಾನನ ತನಕ

ಗುಣ ಕ್ಲಿಪ್ತಗಣನೆ ಆಧಿಕಾಧಿಕವಾಗಿ

ಎಣಿಸು ಇದರೊಳಗೆ ವೈಚಿತ್ರ್ಯವುಂಟು ಇದೆ

ಎನಿಸುವದು ಸಜಾತಿನಾಮದಲಿ

ಮಿನಗುವವು ವಿಜಾತಿ ವುಳ್ಳವನಂತವಾಗಿ

ಅನಿಮಿಷನಾಥನಿಂದಿತ್ತ ಬ್ಯಾರೆ

ಎಣಿಕೆ ಮಾಡಲು ಸಲ್ಲ ಇದ್ದ ಪರಿಮಿತವೆನ್ನಿ

ಅನುಕೂಲವಾಗಿ ಸುಖದಲಿ ಇಪ್ಪರು

ಮಣಿಮಯ ನಿಕೇತನ ವಿಜಯವಿಟ್ಠಲನಂಘ್ರಿ 

ನೆನೆಸಿ ಪುಳಕೋತ್ಸವದಲಿ ಪೂರ್ಣಯೋಗ್ಯತ ಭಕ್ತಿ ॥ 4 ॥ 


 ತ್ರಿವಿಡಿತಾಳ 


ಸತ್ವಗುಣದರಾಶಿ ವೈಕುಂಠ ಪುರದಲಿ

ನಿತ್ಯವಾಗಿಪ್ಪದು ಅಮಿಶ್ರತನದಲಿ

ಚಿತ್ರವಾದ ಜನಕೆ ಕಾರಣವಾಗದು

ಸತ್ಯಕಾಮುಕರಿಂದ ಕಾಲ ವ್ಯವಧಾನದಿ

ಸತ್ಯಲೋಕಾಧೀಶ ವುಳಿದ ಮುಕ್ತರಿಗೆಲ್ಲ

ಅತ್ಯಂತವಾಗಿ ಕ್ರೀಡೆಗೆ ಸಾಧನವಯ್ಯಾ

ಮತ್ತಮಾತಂಗ ಸ್ಯಂದನ ವಾಜಿದಳಂದಣ

ಭೃತ್ಯವರ್ಗರು ತಮಗೆ ಬೇಕಾದುದೆ ಮಾಡಿ

ಮತ್ತೆ ತಮ್ಮ ಅಂಶ ಅದರೊಳು ಹೊಗಿಸಿ ನ -

ಗುತ್ತ ಸಂಚರಿಸುವರು ಸ್ವಕ್ರೀಡೆಯಲಿ ನಾನಾ

ಚಿತ್ತದೊಪ್ಪುವಾಭರಣ ಧರಿಸುವರದೆ ಗುಣದಿ

ಸತ್ತಿಗೆ ಚಾಮರಾ ಛತ್ರ ಪರಿಪರಿಯು

ಮತ್ತೆ  ವಾಲಗದಲ್ಲಿಗೆ ಸರ್ವವು ತಾವಾಗಿ

ಸುತ್ತುತಲಿಪ್ಪರು ಬಿಡದೆ ಏಸೇಸು ಆ -

ವರ್ತಿಲಿ ತಮತಮ್ಮ ಮರ್ಯಾದೆ ಮೀರದೆ

ಬಿತ್ತರಿಸಿ ಕೇಳಿ ಇಂಥದಿರವಿನ

ಉತ್ತಮ ಜನಕೆ ಅವರರು ಸೇವೆ ಮಾಳ್ಪರು

ಎತ್ತ ನೋಡಲು ಇವರ ಹೆಂಡರು ತಮತಮ್ಮ

ಭರ್ತರ ಅನುಸರಿಸಿ ಆಡುವರು ಮಕ್ಕಳೊಡನೆ

ಈ ತೆರದಲಿ ನಲಿದು ಗುಣಸತ್ವವನೆ ಬಿಟ್ಟು

ಚಿತ್ತಿನಿಂದಲಿ  ಕ್ರೀಡೆ ಅದರಂತೆ ಆಡುವರು

ಚಿತ್ತಜನಯ್ಯಗೆ ದ್ವಿವಿಧದಲ್ಲಿ ಸೇವಿ -

ಸುತ್ತ ಉತ್ಸಹದಲ್ಲಿ ಇರುತಿಪ್ಪರೈಯ್ಯಾ

ಅತ್ಯಣು ಜೀವಿಗೆ ಯಿಂಥದೆಲ್ಲಿ ಯೆಂಬಿಯಾ

ಉತ್ತುಮ ಶ್ಲೋಕನ್ನ ಶಕ್ತಿಯೆನ್ನಿ

ಸತ್ವದ ಗುಣರಾಶಿ ಅಂಶವುಳ್ಳವರು ತಾ -

ರತ್ತಮ್ಯದಿಂದಲಿ ತೆಗೆದುಕೊಂಡು ಇ -

ರುತಿಪ್ಪರಲ್ಲದೆ ನಿರಂಶ ಮುಕ್ತರಿಗೆ

ಸ್ವತಂತ್ರಯಿಲ್ಲವು ಇವರಿಗಲ್ಲಿ

ಪ್ರತ್ಯೇಕರೂಪದಿ ಆಡತಕ್ಕವರಲ್ಲ

ಎತ್ತಪೋದರು ತಮ್ಮ ಸ್ವಶರೀರ

ಪೊತ್ತು ಪೋಗಾಡುವರು ಪ್ರೇಮದಿಂದಲಿ ಕ್ರಮದಿ

ಪೊತ್ತದ್ದು ಬಿಸಟು ಬ್ಯಾಸರಿಸದಲೆ ಬಂದು

ತತ್ತ ಸ್ಥಾನದಲಿ ಇದ್ದು ಶ್ರೀಹರಿ ಮಹಿಮೆ

ಉತ್ತುಮ ಗುಣರಿಂದ ಲಾಲಿಸುವರು

ಎತ್ತ ನೋಡಿದರತ್ತ ಮುಕ್ತರ ಸಭೆವುಂಟು

ರತ್ನ ಮುತ್ತುಗಳಿಂದ ಶೋಭಿಸುತಿದಕೊ

ಹತ್ತಿಲಿ ವನ ಕೂಪ ವಾಪಿ ಸರೋವರ

ತತ್ಥಳಿಸುವ ದೇವ ಮನಿಗಳೀರೆ

ಕೀರ್ತನೆ ಪೊಗಳಿಕೆ ಕೀರ್ತಿಯು ಪರಾಕು

ನೃತ್ಯಾದಿ ಶಾಸ್ತ್ರ ಪೌರಾಣ ಪುಣ್ಯಕಥೆ

ಶ್ರುತ್ಯರ್ಥ ಪೇಳುವ ಸಂದಣಿಯಿಂದಲಿ

ಸ್ವೋತ್ತುಮರು ವಾಲಗದಲ್ಲಿ ವೊಪ್ಪೆ

ಹತ್ತೈವತ್ತು ನೂರು ಸಾವಿರ ಲಕ್ಷವೆ

ಹತ್ತು ಕೋಟಿಗಳೆ ನಿರ್ಬುದವೆ ಗುಣಿಸಿ

ಉತ್ತರ ಪೇಳ್ವೆನೆಂಬುವನಾರು ಸಭೆಗಳ

ತುತ್ತಿಸಿ ಕಡೆಯಾಗಿ ಅನಂತ ಕಲ್ಪಕ್ಕೆ

ವೃತ್ತಿ ರೂಪದಲ್ಲಿದ್ದ ಸಂಸೃತಿ ಅನುಭವದ

ವೃತ್ತಾಂತ ನೆನೆಸುವರಲ್ಲಿ ಒಂದು ನಿ -

ಮಿತ್ಯಗೋಸುಗವಾಗಿ ಕರ್ಮಗಳೆ ಯಿಲ್ಲವೊ

ಕರ್ತನಾಗಿಯಿದ್ದ ಜೀವರ ಸ್ವಭಾವ

ಆರ್ತರಹಿತರಲ್ಲಿ ಹರಿಯ ಪೂಜಿಸುವರು

ಯತ್ನ ಜ್ಞಾನ ಇಚ್ಛೆ ಅನಾದಿ ಸಿದ್ಧವು

ತತ್ವೇಶ ಮುಂತಾದ ತೃಣ ಜೀವಕೆ

ಹತ್ತವತಾರದ ವಿಜಯವಿಟ್ಠಲರೇಯನ 

ತೆತ್ತಿಗರಾನಂದಕ್ಕೆ ವೃದ್ಧಿ ಹ್ರಾಸಗಳಕ್ಕು ॥ 5 ॥ 


 ಅಟ್ಟತಾಳ 


ಇವರಿಗೆ ಉತ್ಪತ್ತಿ ಸ್ಥಿತಿ ಲಯವೆಂಬೋದು

ಅವಿಕಾರತನದಲ್ಲಿ ಯಿಪ್ಪದು ಸೃಷ್ಟಿಯಾ -

ಗುವಕಾಲದಲಿ ಪರಮಾತ್ಮನಿಂದಲಿ ಉ -

ದ್ಭವಿಪದೆ ಉತ್ಪತ್ತಿ ಮಧ್ಯಕಾಲವೆ ಸ್ಥಿತಿ

ತವಕಲಿಂದಲಿ ಮಹಾ ಪ್ರಳಯಕ್ಕೆ ಪ್ರಾಪ್ತಾನಂ -

ದವೆ ಯಿಲ್ಲದಿಪ್ಪುದು ಲಯ ಮುಕ್ತರಿಗೆ ಕ್ಲಿಪ್ತಾನಂ -

ದವೆ ಉಳ್ಳಾನಂದದಲಿ ಧ್ಯಾನ ಮಾಳ್ಪದೆ ಸುಪ್ತಿ

ಇವರೊಳು ಬಗೆವುಂಟು ಮುಕ್ತಬ್ರಹ್ಮಗೆ ಮಾತ್ರ

ದ್ವಿವಿಧ ಪೇಳೋದಲ್ಲ ಮುಖ್ಯಾನಂದವೆ ಸತ್ಯ

ಶಿವನೆ ಶೇಷನು ಯೆನ್ನು ತತ್ತತ್ತತ್ವದ ಕಾಮಾ

ದಿವಿಜಾದಿಗಳುಂಟು ಯೇನೆಂಬೆನಾಶ್ಚರ್ಯ

ಪ್ರವರ್ತಿ ಮಾರ್ಗಗಳಿಲ್ಲ ಪ್ರಕೃತಿ ಬದ್ಧಗಳಿಲ್ಲ

ಕವಲ ಬುದ್ಧಿಗಳಿಲ್ಲ ಕಠಿಣೋಕ್ತಿಗಳಿಲ್ಲ

ಅವಿಶ್ವಾಸಗಳಿಲ್ಲ ಅವಕ್ರಿಯಗಳು ಯಿಲ್ಲ

ಆಶಾಪಾಶಗಳು ಇಲ್ಲ ಅನ್ಯಾಪೇಕ್ಷಿಗಳು ಇಲ್ಲ

ಅವನಿಯೊಳಗೆ ವುಳ್ಳ ಆವಾವ ಬಗೆಯಿಪ್ಪ

ಅವಗುಣಂಗಳೆ ಯಿಲ್ಲ ಅನ್ಯಾಪೇಕ್ಷಿಗಳು ಯಿಲ್ಲ

ಭವ ದೂರ ವಿಜಯವಿಟ್ಠಲರೇಯನ ಪಾದಾ

ನಿವರ್ತಿ ಮಾರ್ಗದಲಿಂದ ಭಜಿಸಿ ಯೈದಿದರು ಮುಕ್ತಿ ॥ 6 ॥ 


 ಆದಿತಾಳ 


ಜಾತಿ ಭೇದಗಳಕ್ಕು ವರಣ ಭೇದಗಳಕ್ಕು

ಖ್ಯಾತನಾಖ್ಯಾತರು ತುಂಬಿಕೊಂಡಿಪ್ಪರು

ರೇತೋತ್ಸರ್ಜನೆ ಮೂತ್ರ ಮಲದೋಷಗಳಿಲ್ಲ

ನೀತ ಅನೀತರು ಆನಂದೋದ್ರೇಕ ಭಗ -

ವತ್ಪ್ರೀತಿಗೋಸುಗವೆಂದು ಚಿಂತಿಸುವರು ಬಾಗಿ

ಸ್ವತ್ತಮರಿಗೆ ನೀಚ ಮುಕ್ತರ ಸೇವೆ ಬಗೆಯು

ಮಾತಿನಿಂದಲಿ ಯೆಲ್ಲಾ ಅಂಶರೂಪವೆ ವ್ಯಕ್ತಿ

ಶಾತಕುಂಭ ರಜತ ಪಚ್ಚೆ ಪವಳ ರತ್ನ

ಜಾತಿ ಮುತ್ತುಗಳಿಂದ ತೆತ್ತಿಸಿದ ನಾನಾಭರಣ

ಜ್ಯೋತಿ ಪರಿಮಳ ಗಂಧ ಮಿಗಿಲಾದ ಭೋಗದ್ರವ್ಯಾ

ಶ್ವೇತ ಛತ್ತರ ಹಸ್ತಿ ರಥ ವಾಜಿ ಪರಿವಾರ

ಈ ತೆರದಲಿ ಅವರ ಪ್ರೀತಿ ಬಡಿಸಿ ತಮ್ಮ

ಗಾತುರದೊಳು ಬಂದು ಅಂಶಗಳು ಕೂಡೋವು

ಚಾತುರ್ಯವೊಂದು ಕೇಳಿ ಅಂಶಿ ವಿಭಕ್ತವಾಗೆ

ಭೌತಿಕದಂತೆ ಜೀವಕೆ ಛೇದ್ಯ ಭೇದ್ಯಗಳಿಲ್ಲ

ತಾ ತಿರುಗಿ ಅಂಶ ಬಂದು ಕೂಡಿದರೆ ಪೂರ್ಣ

ಚೇತನಕೆ ವುಂಟು ಯಿಲ್ಲದೆ ಅಪೂರ್ಣ

ಯಾತಕ್ಕೆ ಸಂಶಯವೋ ಅನಂತಾನಂತ ಕಲ್ಪದ

ಆತುಮ ಭೂಸುರರು ನಿಬಿಡಿಯಾಗಿಪ್ಪರು

ಯಾತರ ಪೇಳಿಕೆ ಯಿದಕಿಂತ ಒಂದೊಂದು

ಕೌತುಕ ಲೀಲೆ ಉಂಟು ನೂತನ

ನೂತನಾಂಗ ವಿಜಯವಿಟ್ಠಲರೇಯ 

ಭೀತಿಯ ಬಿಡಿಸಿದ ತನ್ನವನೆಂದವಗೆ ॥ 7 ॥ 


 ಜತೆ 


ನಿರ್ದುಃಖದಲಿ ಸಮರು ಸರ್ವಜೀವಿಗಳೆನ್ನು

ದುರ್ಧರುಷ ವಿಜಯವಿಟ್ಠಲ ಗತಿ ಪ್ರದಾತಾ ॥

****