ಪಾನವ ಮಾಡುವೆನು ನಾ ಮನದಣಿಯ
ನಾಮಾಮೃತವ ಪಾನವ ಮಾಡುವೆನು ಪ.
ಶ್ರೀನಿವಾಸನ ನಾಮಸುಧಾರಸ
ಏನುರುಚಿಯೋ ಕಾಣೆ ಜೇನುತುಪ್ಪದಂತೆ1
ಸಕ್ಕರೆ ಬೆರೆಸಿದ ಚೊಕ್ಕಪಾನಕವನ್ನುಮಿಕ್ಕು
ಮೀರುತಲಿದೆ ರಕ್ಕಸಾರಿಯ ಧ್ಯಾನ 2
ಕದಳಿ ಖರ್ಜುರ ದ್ರಾಕ್ಷಿ ಅಡಕೆಯಿಮ್ಮಿಗಿಲಾಗಿ
ಮುದಕೊಡುವುದು ಜಿಹ್ವೆಗೊದಗಿದ ತತ್‍ಕ್ಷಣ 3
ಕಾಸಿದ ಕೆನೆಹಾಲ ದೂಷಿಸುವಂತಿದೆ
ಏಸುರುಚಿಯೋ ಹರಿದಾಸರೆ ಬಲ್ಲರು 4
ಹಯವದನನ ನಿರ್ಭಯದಿಂ ಭಜಿಸಲು
ದಯಮಾಡುವ ಸಾಯುಜ್ಯಪದವನಿತ್ತು5
***