ಶ್ರೀ ಪುರಂದರದಾಸಾರ್ಯ ವಿರಚಿತ ಶ್ರೀ ಹರಿಯ ಜೋಗುಳ ಸ್ತೋತ್ರ ಸುಳಾದಿ
ರಾಗ : ಚಕ್ರವಾಕ
ಧೃವತಾಳ
ಅಂಬುಧಿ ತೊಟ್ಟಲಾಗಿ ಆಲದೆಲೆಯಾಗಿ
ಅನಂತ ಮೃದು ಹಾಸಿಗೆಯಾಗಿ ಅಯ್ಯಾ
ವೇದ ನೇಣುಗಳಾಗಿ ವೇದಾಂತ ದೇವಿಯರು
ಪಾಡಿ ಮುದ್ದಾಡಿ ತೂಗುವರಾಗಿ
ಅಂಬುಧಿ ತೊಟ್ಟಲಾಗಿ
ಆನಂದ ಗೋಪಿಯರು ಇನ್ನೆಂಥ
ಪರಮಾನಂದವನುಂಬರೊ
ಪುರಂದರವಿಠ್ಠಲ ಬಲ್ಲನಯ್ಯಾ ॥೧॥
ಮಟ್ಟತಾಳ
ಜೋ ಜೋ ಜೋ ಎನ್ನ ಸಿರಿಹರಿ ಮೂರುತಿ
ಜೋ ಜೋ ಜೋ ಎನ್ನ ಬೊಮ್ಮದ ಮರಿಯೆ
ಜೋ ಜೋ ಜೋ ಪುರಂದರವಿಠ್ಠಲ
ಜೋ ಜೋ ಜೋ ಎನ್ನ ತಮ್ಮದಮಯ್ಯಾ
ಜೋ ಜೋ ಜೋ ಎನ್ನ ಕಂದ ಗೋವಿಂದ ॥೨॥
ತ್ರಿವಿಡಿತಾಳ
ಅಷ್ಟಮಹಿಷಿಯರು ಇಟ್ಟಗಟ್ಟುಲಿ ಅಯ್ಯಾ
ಸೋಳಸಾಸಿರ ಮಂದಿ ಆಳು ಮಾಡುವರೆನ್ನ
ಸೋಳಸಾಸಿರ ಮಂದಿ ಬೀಳುಮಾಡುವರೆನ್ನ
ಪುರಂದರವಿಠ್ಠಲನ್ನ ಕಂಡಲ್ಲೆ ಬಿಡುವೆನೆ
ಮೇಲೆ ಬಂದದ್ದು ಮತ್ತೆ ನೋಡಿ ಕೊಂಬೆ
ಅಯ್ಯಾ ಅಯ್ಯಾ ಸೋಳಸಾಸಿರ ಮಂದಿ ॥೩॥
ಅಟ್ಟತಾಳ
ಮಂಥನ ಮಾಡಲು ಮಾಧವ, ಮಸರರೆ ಮೀಸಲು
ಇಂಥಾದ್ದುಂಟೆ ಬಿಡು ಬಿಡು ಕರದಲ್ಲಿ ಕಡಗೋಲು
ಎಂಥವನೋ ನೀ ನಂಜದೆ ಎನ್ನಾಳಿದ
ಪುರಂದರವಿಠ್ಠಲ ಇಂಥಾದ್ದುಂಟೇ ಬಿಡು
ಬಿಡು ಕರದಲ್ಲಿ ಕಡಗೋಲು ॥೪॥
ಆದಿತಾಳ
ದೇಹವ ಮಾಡಿದೆ ದೇಹವ ಕೂಡಿದೆ
ದೇಹವು ತಾನೆಂಬ ಭ್ರಮೆಯ ಬಿಡಿಸಿದೆ
ದೇಹಿ ನಾನೆದೆನೊ ದೇವ ನೀನಾದೆಯೊ
ಶ್ರೀವರನಾಥ ಪುರಂದರವಿಠ್ಠಲ
ದೇಹವು ತಾನೆಂಬ ॥೫॥
ಜತೆ
ಅನಂತ ಮೂರುತಿ ಅನಂತ ಕೀರುತಿ
ಅನಂತನಾಭ ಪುರಂದರವಿಠ್ಠಲ
ಅನಂತ ಮೂರುತಿ ಅನಂತ ಕೀರುತಿ ॥೬॥
********