..
ಮಹದೇವ ಮದ್ರೋಗ ಮೂಲವಳಿಯೊ ಪ
ಮಹದಾದಿಗಳ ದೈವ ಹರಿಯಲ್ಲಿ ರತಿ ನಿಲಿಸಿ ಅ.ಪ.
ಸರ್ವಸಿದ್ಧನೆ ವಿಷಯ ಪರ್ವತಕೆ ಮಹಕುಲಿಶ
ಸರ್ವೇಶ ಹರಿಪಾದ ಕಮಲ ಭೃಂಗ
ಮರ್ವೆಂಬ ಮಾರಿಯನು ಅವಳ ನೇತ್ರದಿ ಸುಟ್ಟು
ಸರ್ವಾತ್ಮ ಹರಿಧ್ಯಾನಮಗ್ನ ಮನ ನೀಡೆನಗೆ 1
ತಾಳಲಾರೆನೊ ಸ್ವಾಮಿ ಕಾಳ ವಿಷಯದ ದೋಷ
ಫಾಲಾಕ್ಷ ಬಿಡಿಸೈಯ್ಯ ಭೋಗದಾಸೆ
ಶೀಲ ಮನದಲಿ ಹರಿಯ ಲೀಲೆ ಲಾವಣ್ಯಗಳ
ಮೇಲಾಗಿ ನೋಡುವ ಮಹಕರುಣ ಮಾಡೆನ್ನ 2
ಭಾರತೀಶನ ಪಾದಕಮಲ ಮಧುಪನೆ ನಿನ್ನ
ಕಾರುಣ್ಯವಾದವನೆ ಶೌರಿವಶನೊ
ಮಾರಾರಿ ಮದ್ಭಾರ ವಹಿಸಿ ಪಾಲಿಸು ಎನ್ನ
ಧೀರ ತವ ಚರಣಾಬ್ಜ ವಾರಿಜಕೆ ಮೊರೆ ಹೊಕ್ಕೆ 3
ಎನ್ನ ಹೀನತೆ ನೋಡಿ ಘನ್ನ ಭಯಗೊಂಡಿಹೆನೊ
ಧನ್ಯರ ಮಾಳ್ಪ ದಯ ನಿನ್ನದಯ್ಯಾ
ಪುಣ್ಯತಮ ಮೂರುತಿಯ ಪ್ರತಿಬಿಂಬ ಹರಿಸಖನೆ
ಧನ್ಯನಾ ಮಾಡೆನ್ನ ವಿಷಯ ಜಯ ದಯಮಾಡಿ 4
ಅಮರಗಣವಿನುತ ಅಮಿತ ಮಂಗಳದಾಯಿ
ವಿಮಲ ಪದರಜ ವಿಭವ ವಾಮದೇವ
ಮಮತಾದಿ ಅಭಿಮಾನ ದೋಷವರ್ಜಿತ ಮಹಾ
ಸಾಮ್ರಾಜ್ಯ ಯೋಗಕ್ಕೆ ಅಧಿನಾಥ ಕರುಣಿಪÀುವುದು 5
ಶಂಭು ಶಂಕರ ತವ ಪದಾಂಬುಜದಿ ಶಿರವಿಟ್ಟು
ಹಂಬಲಿಪೆನಿಷ್ಟಪದ ಪಾಲಿಸೆಂದು
ತುಂಬಿತ್ವಕ್ಕರಸನ ಹೃದಂಬುಜದೊಳರಳಿಸಿ
ಬಿಂಬ ಜಯೇಶವಿಠಲ ಮೂರ್ತಿ ದರುಶನ ನೀಡೊ 6
***