ಶ್ರೀ ವಿಜಯದಾಸರ ಕೃತಿ ಸುಳಾದಿ
ರಾಗ : ಚಂದ್ರಕೌನ್ಸ
ಧ್ರುವತಾಳ
ಹರಿದಾಸರೊಡನಾಡು ಹರಿಯಂಘ್ರಿಯುಗ್ಮ ನೋಡು
ಹರಿಯೆಂದು ಕೊಂಡಾಡು ಹರಿನಾಮ ಹಾಡಿ ಪಾಡು
ಹರಿ ಪ್ರಸಾದವೆ ಬೇಡು ಹರಿಸೇವಿಯನ್ನು ಮಾಡು
ಹರಿಗೆ ಕರವನೀಡು ಹರಿಯ ಬಿಡದೆ ಕಾಡು
ಹರಿಯ ಪೊಗಳಿ ಪಾಡು ಹರಿಗೆ ಮನಸು ಕೊಡು
ಹರಿಗೊಪ್ಪಿಸು ಈ ಬೀಡು ಹರಿದ್ವೇಷಿಗಳ ಬಿಡು
ಹರಿ ಧ್ಯಾನದಲ್ಲಿ ಕೂಡು ಹರಿಕರುಣವ ಜೋಡು
ಹರಿಯದಂತೆ ತೊಡು ಹರಿ ನಗರಿಗೆ ಓಡು
ಹರಿಯಲ್ಲಿ ರತಿ ಇಡು ಹರಿಗೆ ಇಲ್ಲವೋ ಈಡು
ಹರಿ ವಿಜಯವಿಠ್ಠಲನ್ನ ಹರಿ ಎಂದರೆ ಈ ನಾಡು
ಹರುಷಬಡುವುದು ನೋಡು ಹರಿದು ಪೋಗದೆ ಕೇಡು ॥1॥
ಮಟ್ಟತಾಳ
ಹರಿಯ ಭಕುತಿ ಹರಿ ಬಲ್ಲವನೆಲ್ಲಿ
ಹರಿ ತಾ ಹತ್ತರೊಳಗೆ ಹರಿ ಹರಿದಾಡುವ
ಹರಿವಂತನು ಕಾಣೊ ಹರಿದಿಕ್ಕುವ ಭವದ
ಹರಿಯೊಳಗಿಂದಲಿ ಹರಿದೆದ್ದು ಬಪ್ಪ
ಹರಿಗಂಡವನೆನ್ನು
ಹರಿವದನ ನಮ್ಮ ವಿಜಯವಿಠ್ಠಲ ನರ -
ಹರಿನಾಮವೆ ಪರಿಹರಿಸುವುದು ನರಕ ॥ 2 ॥
ತ್ರಿವಿಡಿತಾಳ
ಹರಿಯ ನಂಬಿರೊ ಜನರು ವೈರಾಗ್ಯ ಪರರಾಗಿ
ಹರಿದು ಪೋಗದೆ ನಿತ್ಯ ಪರರ ಒಡವಿಗೆ
ಹರಿ ಹನುಮಂತ ಒಂದೇ ಎಂದು ತಿಳಿದೂ
ಹರಿ ಇದ್ದಲ್ಲಿ ಪವಮಾನ ಇಪ್ಪನೆಂದೂ
ಹರಿಯ ಭಜಿಸಿ ಪವಮಾನನ್ನೆ ತೊರೆದರೆ
ಹರಿಪುರವಾಗದು ಶತಕಲ್ಪಕ್ಕೂ
ಹರಿಶರಣರ ಬಳಿ ವಿಡಿದು ಭಕುತಿಯಲ್ಲಿ
ಹರಿಶ್ರವಣವ ಕೇಳು ಶ್ರವಣದಲ್ಲಿ
ಹರಿ ವಂದಿತ ನಮ್ಮ ವಿಜಯವಿಠ್ಠಲರೇಯ
ಹರಿ ಎಂದು ನುಡಿದರೆ ಹರಿದು ಬಪ್ಪನು ಕಾಣೊ ॥ 3 ॥
ಅಟ್ಟತಾಳ
ಹರಿಯ ಭಕುತಿ ಕಂಡವರಿಗೆ ದೊರಕುವದೆ
ಹರಿದೇರಿ ಪರ್ವತಾಗ್ರದಿಂದ ಭೂಮಿಗೆ
ಹರಿಯ ಬಿದ್ದರೆ ಇಲ್ಲ ಸುತ್ತುವ ಸುಳಿಯೊಳು
ಹರಿದು ಮುಣುಗಿ ಎದ್ದು ಬಂದರೆ ಇಲ್ಲ
ಹರಿಯರೊಳಗೆ ನಿತ್ಯ ಹಗಲಿರುಳು ತಲೆ
ಹರಿ ಮಾಡಿಕೊಂಡು ನಭಕೆ ಪಾರಿದರಿಲ್ಲಾ
ಹರಿ ಭಕುತಿ ಕಂಡವರಿಗೆ ಸೂರೆ
ಹರಿ ಭಕುತಿ ಸಂಪಾದನೆ ಗಂಟೆ
ಹರಿಣಾಂಕ ಕುಲಪಾಲ ವಿಜಯವಿಠ್ಠಲ ನಂಘ್ರಿ
ಹರಿಯಬಲ್ಲವನಿಗೆ ಸುಲಭ ಸಾಧ್ಯವೆನ್ನಿ ॥ 4 ॥
ಆದಿತಾಳ
ಹರಿಯೆ ಪರಮಪುರುಷ ಹರಿ ಪರಾತ್ಪರ ದೇವ
ಹರಿ ಚತುರನಾಶರಹಿತ ಹರಿ ಆಚಿಂತ್ಯಾದ್ಭುತ
ಹರಿ ಅಪ್ರಾಕೃತ ಕಾಯಾ ಹರಿ ಪ್ರಳಯ ವಿರಹಿತ
ಹರಿ ಮುಕ್ತಾಶ್ರಯ ಹರಿ ಸರ್ವಾಂತರ್ಯಾಮಿ
ಹರಿ ಜೀವ ಜಡಕೆ ಭೇದ ಹರಿ ಅಣುಮಹಾರೂಪ
ಹರಿ ಕರ್ತ ಜಗತ್ಕಾರಣ ಹರಿ ರಮಾದೇವಿ ಪ್ರೀಯ
ಹರಿ ವೈಕುಂಠರಮಣ ವಿಜಯವಿಠ್ಠಲ ರೇಯ
ಹರಿ ತೋರುವನು ಭಕುತಿ ಕೈಕೊಂಡ ಮನುಜರಿಗೆ ॥5॥
ಜತೆ
ಭಕುತಿಗೆ ಕೇಡಿಲ್ಲ ಅನಂತಕಲ್ಪಕ್ಕೆ
ಭಕುತಿ ಪಡೆಯಿರೋ ವಿಜಯವಿಠ್ಠಲ ನಲ್ಲಿ ॥
**************