Audio by Vidwan Sumukh Moudgalya
ಶ್ರೀ ವಿಜಯದಾಸರ ಕೃತಿ
ರಾಗ : ಭಾಗೇಶ್ರೀ ಖಂಡಛಾಪು
ವೆಂಕಟೇಶ ಮಂತ್ರ ಒಂದೇ
ಸಂಕಟ ಪರಿಹರಿಸಿ ಸಂಪದವಿಯ ಕೊಡುವ॥ಪ॥
ಬಲನ ಭೂಸುರ ಹತ ಪೋಗಾಡಿದ ಮಂತ್ರ
ಬಲಿಯ ಕನಕ ಸ್ತೇಯ ಕಳದ ಮಂತ್ರಾ
ಬಲವಂತ ವೃಷಭನ್ನ ಸಂಹರಿಸಿದ ಮಂತ್ರಾ
ಕಲಿಯುಗದೊಳಗಿದೆ ಸಿದ್ಧ ಮಂತ್ರಾ ॥೧॥
ವೃದ್ಧ ಬ್ರಾಹ್ಮಣಗೆ ಪ್ರಾಯವನು ಕೊಟ್ಟ ಮಂತ್ರಾ
ಶುದ್ಧನ್ನ ಪರಿಶುದ್ದ ಮಾಳ್ಪ ಮಂತ್ರಾ
ಉದ್ಧರಿಸಿ ಕಾವ್ಯನ್ಯೊಂಚಿ ಮಾಡಿದ ಮಂತ್ರಾ
ಶ್ರದ್ಧೆಯನು ಪಾಲಿಸುವ ಸುಲಭ ಮಂತ್ರಾ॥೨॥
ಗುರು ತಲ್ಪಕನ ದೋಷ ನಾಶನ ಮಾಡಿದ ಮಂತ್ರಾ
ಹರನ ಸುತ ಬರಲವನ ಪೊರೆದ ಮಂತ್ರಾ
ಸ್ಮರಿಸಲಾಕ್ಷಣ ಒಮ್ಮೆ ಮುಂದೆ ನಿಲುವ ಮಂತ್ರಾ
ಅರಸರಿಗೆ ವಲಿದಿಪ್ಪ ಆದಿ ಮಂತ್ರಾ ॥೩॥
ಅಜ ಭವಾದಿಗಳಿಗೆ ಪಟ್ಟಗಟ್ಟಿದ ಮಂತ್ರಾ
ಗಜ ಮೊದಲಾದವರ ಕಾಯ್ದ ಮಂತ್ರಾ
ರಜ ದೂರವಾಗಿದ್ದ ರಮ್ಯವಾದ ಮಂತ್ರಾ
ಕುಜನಕುಲವನಕೆ ಕುಠಾರ ಮಂತ್ರಾ ॥೪॥
ಪ್ರಣವ ಪೂರ್ವಕದಿಂದ ಜಪಿಸಲು ವೊಲಿವ ಮಂತ್ರಾ
ಅಣು ಮಹದಲೀ ಪರಿಪೂರ್ಣ ಮಂತ್ರಾ
ಫಣಿಶೈಲ ನಿಲಯ ಸಿರಿ ವಿಜಯವಿಠ್ಠಲನ ಮಂತ್ರಾ
ಕ್ಷಣ ಕ್ಷಣಕೆ ಬಲ್ಲವರಿಗೆ ಪ್ರಾಣ ಮಂತ್ರಾ ॥೫॥
****