ಶ್ರೀಗೋಪಾಲದಾಸಾರ್ಯ ವಿರಚಿತ ಪ್ರಾರ್ಥನಾ ಸುಳಾದಿ
(ಶ್ರೀಹರಿಯ ಅಷ್ಟಕರ್ತೃತ್ವ , ಪ್ರಳಯಾದಿ ಸೃಷ್ಟಿ, ಸ್ಥಿತಿ ಸಂಕ್ಷಿಪ್ತ ವರ್ಣನಾ , ಸೃಷ್ಟಿಗೆ ತಂದ ಮೇಲೆ ಜೀವರಿಗೆ ವಿಷಯಾದಿಗಳಲ್ಲಿ ಸಹ ಶ್ರೀಹರಿಯ ಚಿಂತನಾ ಕೊಡಲು ಪ್ರಾರ್ಥನೆ.)
ರಾಗ ಅಠಾಣ
ಧ್ರುವತಾಳ
ಎಲೊ ಎಲೊ ಸರ್ವಜ್ಞ ಸರ್ವೋತ್ತಮ ಶ್ರೀಹರಿ
ಚಲುವ ಸಾಕಾರ ಸಚ್ಚಿದಾನಂದ ಸಗುಣ ರಹಿತ
ಇಳಿಯನೆಲ್ಲವ ನುಂಗಿ ಇನಿತು ಈಡಾದೆ ನಿನ್ನ
ಬಲು ವುದರದಿ ಎಲ್ಲರನ್ನು ಅಡಗಿಸಿ
ಲಲನೆ ಲಕುಮಿ ತಾನೆ ಮೂರು ಬಗೆಯು ಆಗಿ
ಚಲುವಾ ನಿನ್ನ ಸೇವಿಪಳಾಕಾಲದಿ
ಪ್ರಳಯೋದಕ ಸಿರಿ ವಟದೆಲೆಯು ಭೂರೂಪಳಾಗಿ
ಬೆಳಕು ತೋರದೆ ದುರ್ಗೆ ತಮರೂಪಳಾಗೆ ಇನ್ನು
ಸುಲಭ ರೂಪದಿ ನೀನು ಎಲಿಯ ವಟದ ಮೇಲೆ
ಮಲಗಿ ಬಾಲಕನಾಗಿ ಮತ್ತೆ ಎಲ್ಲವ ಬಿಟ್ಟು
ಕಿಲಿಕಿಲಿ ನಗುತಲಿ ಕಾಲ್ಬೆರಳು ಬಾಯೊಳಗಿಟ್ಟು
ನಲಿದು ಚಪ್ಪರಿಸುವೆ ತಿಳಿದು ತಿಳಿದು ಇನ್ನು
ಕಲಕಾಲವು ಭಕ್ತರು ಮಾಡಿದ ಸತ್ಕರ್ಮಂಗಳು
ಹಲವು ಪರಿ ಭಕ್ತಿಯು ಮಾಡಿ ಅರ್ಪಿಸಿದದೆಲ್ಲ
ಕೊಳುತ ಅವರ ರುಚಿಗಳನು ಎಲ್ಲವು ನೋಡಿ
ನಿಲಿಸುವಿ ಅವರವರ ನಿಜಪದವಿಯಲ್ಲಿ ಸ್ವಾಮಿ
ಭಳಿರೆ ಭಕ್ತವತ್ಸಲ ಗೋಪಾಲವಿಟ್ಠಲ
ನಿಲಿಸಿ ಎನ್ನಲಿ ನಿರುತ ಲೀಲೆ ತೋರಿಸು ಧೊರಿಯೆ ॥ 1 ॥
ಮಟ್ಟತಾಳ
ಏಕಾಂತದಿ ಇಪ್ಪ ಲೋಕನೆಲ್ಲವ ನಿನ್ನ
ಆ ಕುಕ್ಷಿಯೋಳಿಟ್ಟು ಸಾಕುತ್ತ ಸರ್ವರ
ನೀ ಕರುಣಿಸಿ ಮುಖ್ಯಪ್ರಾಣನೊಬ್ಬಗಿನ್ನು
ಬೇಕಾದ ಎಚ್ಚರಿಕೆನಿತ್ತು ಸಕಲ ಜೀವ
ಜೋಕೆ ಮಾಡುವಿ ಇನ್ನು ಸೃಜ್ಜ ಅಸೃಜ್ಜರನು
ಸಾಕಲ್ಯ ಗುಣಪೂರ್ಣ ಗೋಪಾಲವಿಟ್ಠಲ
ನೀ ಕರುಣಿಸುವೆಮ್ಮ ನಿರ್ವ್ಯಾಜದಿ ನಿರುತ ॥ 2 ॥
ರೂಪಕತಾಳ
ಅನಾದಿ ಜೀವ ಲಿಂಗಬದ್ಧರಗಳ ನುಂಗಿ
ತಾನಿಪ್ಪಪಾರ ಸುಪ್ತಾಸಸ್ಥಿಯೋಪಾದಿ
ಜ್ಞಾನ ಅಜ್ಞಾನವು ಎರಡನ್ನು ಅರಿಯದೆ
ಜ್ಞಾನ ಸ್ವರೂಪವೆ ಆಚ್ಛಾದವಾಗಿರೆ
ಪ್ರಾಣಿಗಳನು ನಿನ್ನ ದೃಷ್ಟಿಯಿಂದಲಿ
ನೀ ನೆಚ್ಚಿಸಿನ್ನು ಉದ್ಧಾರ ಮಾಡುವೆನೆಂದು
ನಾನು ನನ್ನದು ಎಂಬೊ ಅಹಂಮತಿಯನೆ ಕೊಟ್ಟು
ನಾನಾ ಯೋನಿಗಳಲಿ ತಂದ್ಹಾಕುವೆ
ಮಾನವ ಜನುಮದಿ ಮಹಾಸಾಧನವು ತೋರಿ
ಪ್ರಾಣಿಯ ನಿನ್ನ ತಿಳಿವಂತೆ ಮಾಳ್ಪೆ
ಜಾಣ ಚನ್ನಿಗರಾಯ ಗೋಪಾಲವಿಟ್ಠಲ
ಕಾಣಿಸದನಕ ಕಾಣರು ನಿನ್ನ ॥ 3 ॥
ಝಂಪಿತಾಳ
ಅನಂತ ಜನುಮದಲ್ಲಿ ಅನಂತ ಕಲ್ಪದಲ್ಲಿ
ಇನ್ನು ಮಾಡಿದೆನಯ್ಯಾ ನಿನ್ನ ಪ್ರೇರಣೆಯಿಂದ
ಕಿನ್ನು ಮಾಡುವನಾಗಿ ಮತ್ತು ಇಪ್ಪವೆನಯ್ಯಾ
ಅನಂತ ಪಾಪಕ್ಕೆ ಅನಂತ ನಿನ್ನ ನಾಮಾ
ಎನ್ನ ಬಳಿಯಲ್ಲಿ ಈಗ ವಾಸವಾಗೆವೊ ಅಯ್ಯಾ
ಎನ್ನ ದೋಷಗಳೆಂಬೊ ಇನ್ನು ಆರಿಸಿ ಆರಿಸಿ
ನಿನ್ನದೊಂದು ಸಾಕು ನಾಮ ಅದರನು ಕೆಡಿಸು
ಇನ್ನು ಅವಕೆ ಅಂಜಿ ಈ ಶಕುತಿ ಎನಗಿರಲಿ
ಘನ್ನ ದಯಾನಿಧೆ ಗೋಪಾಲವಿಟ್ಠಲ
ನಿನ್ನ ಬಿಡೆ ನಿನ್ನ ಬಿಡೆ ನಿತ್ಯತೃಪ್ತಾ ॥ 4 ॥
ತ್ರಿವಿಡಿತಾಳ
ಒಂದು ಶ್ರವಣದಿಂದ ಆವದಾಗುವದೆನಗೆ
ಛಂದದಿ ಪಾಲಿಸು ಆ ಶ್ರವಣವ
ಒಂದೆ ಸ್ನಾನದಲಿಂದ ಆವದುಧರಿಪದು
ಛಂದದಿ ಮಾಡಿಸೊ ಅದೆ ಸ್ನಾನವ
ಒಂದೇ ಮಂತ್ರದಲಿಂದ ಆವ ಸಿದ್ಧಿಯೊ ಎನಗೆ
ಛಂದದಲಿಂದ ಪಾಲಿಸೊ ಅದೆ ಮಂತ್ರವೊ
ಒಂದೇ ಗುರುವಿನಿಂದ ಆವ ಉದ್ಧಾರವೋ
ತಂದು ತೋರಿಸು ಮತ್ತೆ ಅದೆ ಗುರುವಿನ
ಒಂದೆ ನಿನ್ನ ಮೂರುತಿ ಆವದೆನಗೆ ತಿಳಿಯೆ
ತಂದು ತೋರಿಸು ಎನ್ನ ಅನುಭವಕ್ಕೆ
ಒಂದೆ ಅರ್ಚನೆಯಿಂದ ಆವದೊ ನಿನ್ನ ಪೂಜಿ
ಛಂದದಿ ತೋರಿಸೊ ಅದೆ ಬಗಿಯ
ಒಂದೇ ಪರಿಯು ಮನಕೆ ಆವದು ನಿಲ್ಲೋದೆ
ಛಂದದಿ ಪಾಲಿಸು ಅದೆ ಜ್ಞಾನವು
ಸಂದೇಹದ ಕರ್ಮ ಸಾಸಿರ ಕೊಟ್ಟರು
ಮಂದ ಬುದ್ಧಿಯವ ಕಡೆ ಬೀಳೆನೋ
ಒಂದು ಕರ್ಮವು ಮಾಡೆ ಮತ್ತಾನಂತ ಕರ್ಮ
ಬಂದು ಒದಗುತಿವೆ ಸಂದೇಹ ಗೊಳಿಸುತ
ಬಂಧಕವೆ ಮತ್ತೆ ಬಲಿಕೆ ಮಾಡುತಲಿವೆ
ಎಂದಿಗೂ ಕಡೆ ಹಾಯುವದು ಅರಿಯದೆ
ಮಂದರಧರ ನಮ್ಮ ಗೋಪಾಲವಿಟ್ಠಲ
ತಂದೆ ಸಲಹೊ ನಿನ್ನ ಸಂದರುಶನ ಕೊಟ್ಟು ॥ 5 ॥
ಅಟ್ಟತಾಳ
ಎಲ್ಲಿ ತನಕ ವಿಷಯ ವೆಗ್ಗಳಿಸುವಿ ಇನ್ನು
ಅಲ್ಲಿ ತನಕ ಮನ ನಿಲ್ಲದು ನಿನ್ನಲ್ಲಿ
ಜ್ವಲ್ಲಿಸುತ ಇಪ್ಪ ಬಲ್ಲಿದಗ್ನಿಯ ಮೇಲೆ
ಹುಲ್ಲು ಹಾಕುತ ಬರೆ ನಿಲ್ಲುವದೆ ತಾಪ
ಎಲ್ಲ ಕಾಲವು ವಿಷಯದಲ್ಲೆ ಮನಸು ಹೋಗಿ
ಸಲ್ಲಿ ಸಲ್ಲಿಸಿ ಸಾಕು ಎಂಬುವಂಥ
ಅಲಂ ಬುದ್ಧಿಯು ಇನ್ನು ಯಳ್ಳಿನಿತು ಇಲ್ಲಾ
ಕೊಲ್ಲುತದೆ ಕೊಂಡು ವೈದು ವಿಷಯಂಗಳಿ -
ಗೆಲ್ಲಿ ತನಕ ಹೇಗೆ ಎಳೆದರೆ ನಾನಿನ್ನ
ಗೆಲ್ಲುವ ತೆರನೆಂತು ಬಲ್ಲಿದ ಎಲೆ ದೇವ
ನಿಲ್ಲಿಸಿ ಈ ಪಾಪ ಸಂಚಿತ ಕೆಡಿಸಿನ್ನು
ಮೆಲ್ಲನೆ ಬಾಹೊ ಆಗಾಮಿಯಾ ವೊತ್ತಿನ್ನು
ಸಲ್ಲಿಸು ಪ್ರಾರಬ್ಧ ಇಲ್ಲಿಗೆ ಎಂತಂದು
ಎಲ್ಲ ಮನಕೆ ಅದು ಆರವಿಸಿ ಚನ್ನಾಗಿ
ನಿಲ್ಲದೆ ನೀ ಸ್ಮರಣಿಗೆ ಬರುತಲಿದ್ದು
ನಲ್ಲಾ ನೀ ಕಾಯಬೇಕಲ್ಲದೆ ಎನ್ನನು
ಮಲ್ಲಮರ್ದನ ಗೋಪಾಲವಿಟ್ಠಲ
ಕೊಲ್ಲೊ ಕಾಯೊ ಬಿಡೊ ನಿನ್ನ ನಂಬಿದೆನೊ ॥ 6 ॥
ಆದಿತಾಳ
ವಿಷಯ ಬಂಧುಗಳೆನಗೆ ವಿಷಯರು ಆದರೆ
ವಶವಾಗುವಿ ಎಂತೊ ಮುಖ್ಯವಿಷಯ ನೀನು
ಕೆಸರೊಳಗೆ ಬಿದ್ದು ಕೆಸರಿಂದ ತೊಳೆದರೆ
ಹಸನಾಗೊದೆಂತೊ ಅವು ಕುಶಲ ಮೂರ್ತಿ
ಕಸುಗಾಯಿ ಎಂಬುವಂಥ ಬಿಸಿಲಿಲಿ ಬಡಿಸಿಕೊಂಡು
ರಸ ಪಕ್ವವಾಗಿನ್ನು ದ್ರವಿಸುತ ಶ್ರೀಹರಿಯೆ
ವಿಷಯವಾಗೆಲೊ ಮುಖ್ಯ ನಿನಗೆ ನಿರುತ
ವಸುದೇವಸುತ ನಮ್ಮ ಗೋಪಾಲವಿಟ್ಠಲ
ಅಸಮ ದೈವವೆ ನಿನಗೆ ನಮೋ ನಮೋ ನಮೋ ಎಂಬೆ ॥ 7 ॥
ಜತೆ
ಎಲ್ಲಿ ತನಕ ಮನಸು ಎರಗುತಿಪ್ಪದು ಎನಗೆ
ಅಲ್ಲಲ್ಲಿ ವಿಷಯನಾಗೊ ಗೋಪಾಲವಿಟ್ಠಲಾ ॥
****