ಕೃಷ್ಣ ಸತ್ಯಭಾಮೆಯರ ಸಂವಾದ
ನಾಗಶಯನನು ನಿನಗಾಗಿಯೆ ಬಂದಿಹೆ
ಬಾಗಿಲ ತೆಗೆಯೆ ಭಾಮೆ ನೀ
ಬಾಗಿಲ ತೆಗೆಯೆ ಭಾಮೆ ಪ.
ಕೂಗುವ ನೀನ್ಯಾರೊ ಈಗ ಹೊತ್ತಲ್ಲ
ಕೂಗಬೇಡ ಪೋಗೋ ನೀ
ಕೂಗಬೇಡ ಪೋಗೋಅ.ಪ.
ನೀರೊಳು ಮುಳುಗಿ ನಿಗಮ ಚೋರನ ಗೆದ್ದ
ನೀರಜಾಕ್ಷನೆ ಭಾಮೆ ನಾ
ನೀರಜಾಕ್ಷನೆ ಭಾಮೆ
ನಾರುವ ಮೈಯನ್ನು ಎನ್ನಲ್ಲಿ ತೋರದೆ
ಸಾರು ಸಾರು ನೀ ದೂರ ರಂಗ
ಸಾರು ಸಾರು ನೀ ದೂರ 1
ಮಂದರ ಗಿರಿಯನು ಬೆನ್ನಲಿ ಪೊತ್ತ
ಇಂದಿರೆಯರಸನೆ ಭಾಮೆ ನಾ-
ನಿಂದಿರೆಯರಸನೆ ಭಾಮೆ
ಇಂದು ನಿನಗೆ ತಕ್ಕ ಭಾರಗಳಿಲ್ಲವು
ಸಿಂಧುವಿನೊಳು ನೀ ಪೋಗೈ ಕೃಷ್ಣ
ಸಿಂಧುವಿನೊಳು ನೀ ಪೋಗೈ 2
ಧರಣಿಗೆ ಸುಖವನು ತೋರಿದ ಸೂಕರ
ಪರಮಪುರುಷನೆ ಭಾಮೆ ನಾ
ಪರಮ ಪುರುಷನೆ ಭಾಮೆ
ವರಾಹರೂಪದ ನಿನ್ನ ಗುರುಗುರು ಶಬ್ದವ
ಅರಿವಳಲ್ಲವೊ ನೀ ಪೋಗೈ ರಂಗ
ಅರಿವಳಲ್ಲವೊ ನೀ ಪೋಗೈ 3
ಬಾಲನ ತಾಪವ ಕೋಪದಿ ತರಿದ
ನಾರಸಿಂಹನೆ ಭಾಮೆ ನಾ
ನಾರÀಸಿಂಹನೆ ಭಾಮೆ
ಜ್ವಾಲೆಯ ವದನ ಕ್ರೂರ ಕಾರ್ಯಂಗಳ
ಕೇಳಿ ಅಂಜುವಳಲ್ಲ ಪೋಗೈ ರಂಗ
ಕೇಳಿ ಅಂಜುವಳಲ್ಲ ಪೋಗೈ 4
ವಾಸವನನುಜನೆ ವಾಮನರೂಪನೆ
ನಾಶರಹಿತನೆ ಭಾಮೆ ನಾ
ನಾಶರಹಿತನೆ ಭಾಮೆ
ಕೂಸಿನ ರೂಪದಿ ಮೋಸವ ಮಾಡಿದಗೆ
ದಾಸಿ[ಯೊ]ಬ್ಬಳು ಬೇಕೇ ರಂಗ
ದಾಸಿ[ಯೊ]ಬ್ಬಳು ಬೇಕೇ 5
ತಾತನ ಮಾತಿಗೆ ತಾಯಿಯನಳಿದ
ಖ್ಯಾತ ಭಾರ್ಗವನೆ ಭಾಮೆ ನಾ
ಖ್ಯಾತ ಭಾರ್ಗವನೆ ಭಾಮೆ
ಮಾತೆಯನಳಿದ ಘಾತಕ ನಿನಗೆ
ದೂತಿಯೊಬ್ಬಳು ಬೇಕೇ ರಂಗ
ದೂತಿಯೊಬ್ಬಳು ಬೇಕೇ 6
ದಶರಥನಂದನ ದಶಮುಖಭಂಜನ
ಪಶುಪತಿವಂದ್ಯನೆ ಭಾಮೆ ನಾ
ಪಶುಪತಿ ವಂದ್ಯನೆ ಭಾಮೆ
ಹಸನಾದ ಏಕಪತ್ನೀವ್ರತದವಗೆ
ಸುದತಿಯೊಬ್ಬಳು ಬೇಕೇ ರಂಗ
ಸುದತಿಯೊಬ್ಬಳು ಬೇಕೇ 7
ಹದಿನಾರು ಸಾಸಿರ ನೂರೆಂಟು ಸುದತೇರ
ಬದಿಯಲಿಟ್ಟವನೆ ಭಾಮೆ ನಾ
ಬದಿಯಲಿಟ್ಟವನೆ ಭಾಮೆ
ಹದನಕ್ಕೆ ಬಾರದ ಮಾರ್ಗಂಗಳ್ಯಾತಕ್ಕೆ
ವದನ ಮುಚ್ಚಿಕೊಂಡು ಪೋಗೈ ರಂಗ
ವದನ ಮುಚ್ಚಿಕೊಂಡು ಪೋಗೈ 8
ಬೌದ್ಧರಕುಲದಲ್ಲಿ ಹುಟ್ಟಿ ಅವರಂತೆ
ಮುಗ್ಧರ ಮಾಡಿದೆ ಭಾಮೆ ನಾ
ಮುಗ್ಧರ ಮಾಡಿದೆ ಭಾಮೆ
ಶುದ್ಧಗುಣಗಳೆಲ್ಲ ಇದ್ದಲ್ಲಿಗೆಪೇಳೆ
ವೃದ್ಧಳು ನಾನಲ್ಲ ಪೋಗೈ ರಂಗ
ವೃದ್ಧಳು ನಾನಲ್ಲ ಪೋಗೈ 9
ವರ ತುರಗವನೇರಿ ಧರೆಯೆಲ್ಲ
ಚರಿಸಿದ ದೊರೆವರ ನಾನೆ ಭಾಮೆ
ಚರಿಸಿದ ದೊರೆವರ ನಾನೆ
ತÀುರಗದ ಚಾಕರಿಯೊ[ಳಗಿರುವವನಿಗೆ]
ತರುಣಿಯ ಭೋಗವು ಬೇಕೇ ರಂಗ
ತರುಣಿಯ ಭೋಗವು ಬೇಕೇ 10
ಸರುವ ಪ್ರಾಣಿಗಳ ಉದರದೊಳಿಂಬಿಟ್ಟು
ಶರಧಿಯೊಳ್ಮಲಗಿದವ ಭಾಮೆ ನಾ
ಶರಧಿಯೊಳ್ಮಲಗಿದವ ಭಾಮೆ
ದೊರೆ ಹಯವದನ ಚರಣಕ್ಕೆರಗುತ
ತೆರೆದಳು ಬಾಗಿಲ ಭಾಮೆ ಆಗ
ತೆರೆದಳು ಬಾಗಿಲ ಭಾಮೆ 11
***