ವಿಠಲನ ಕಂಡೀರಾ l ವರಾಹ ಹರಿವಿಠಲನ ಕಂಡೀರಾ ll ಪ ll
ಲೋಕದ ಜನರನು ಸೃಜಿಸುವ ವಿಠಲ l
ಲೋಕವನೆಲ್ಲವ ಸಲಹುವ ವಿಠಲ l
ಲೋಕಗಳೆಲ್ಲವ ನುಂಗುವ ವಿಠಲ l
ಲೋಕೈಕನಾಥ ಗುರುಗೋವಿಂದ ವಿಠಲ ll 1 ll
ನೀರಲ್ಲಿ ನಿಗಮವ ತಂದಂಥ ವಿಠಲ l
ನೀರಲ್ಲಿ ನಗವನು ಪೊತ್ತಂಥ ವಿಠಲ l
ನೀರಲ್ಲಿ ಹರಿಯನು ಕೊಂದಂಥ ವಿಠಲ l
ನೀರಲ್ಲಿ ಮಲಗುವ ಬಾಲಕೃಷ್ಣವಿಠಲ ll 2 ll
ಧಡ ಧಡ ಕಂಬದಿ ಬಂದಂಥ ವಿಠಲ l
ದಂಡಕಮಂಡಲು ಪಿಡಿದಂಥ ವಿಠಲ l
ಪಿಡಿಯುತ ಕೊಡಲಿಯ ಗುಡುಗಿದ ವಿಠಲ l
ದಂಡಕವನವನು ಸೇರಿದ ವಿಠಲ ll 3 ll
ಬಾಯಲ್ಲಿ ಬ್ರಹ್ಮಾಂಡ ತೋರಿದ ವಿಠಲ l
ಕೈಯಲ್ಲಿ ಗಿರಿಯನು ಎತ್ತಿದ ವಿಠಲ l
ಮೈಯಲ್ಲಿ ಅಂಗನೆಯಪ್ಪಿದ ವಿಠಲ l
ಕೈಯನ್ನು ಇಟ್ಟು ಹರಸಯ್ಯ ವಿಠಲ ll 4 ll
ತರುಳೆಯನ್ನು ಮೋಹಿಪ ವಿಠಲ l
ತುರಗವನ್ನು ಏರಿದ ವಿಠಲ l
ಕೊರವಂಜಿರೂಪವ ತಾಳಿದ ವಿಠಲ l
ತಿರುಮಲೆವಾಸಿ ವರಾಹ ಹರಿವಿಠಲ ll 5 ll
***