..
ರಾಗ : ಭೈರವಿ ತಾಳ : ತ್ರಿಪುಟ
ಕಂಡೆನಾ ಈ ಕಂಗಳಿಂದಲಿ -
ಸುಜ್ಞಾನೇಂದ್ರರಾಯರಾ ।
ಕಂಡೆ ಸುಜ್ಞಾನೇಂದ್ರರಾಯರಾ ।
ಪುಂಡರೀಕ ಪ್ರಪದಗಳಿಗೆ ।।
ಮಂಡೆ ಬಾಗಿ ನುತಿಸಿ ತುತಿಸುವೆ ।
ಮಂಡಲಕೆ ಉದ್ಧ೦ಡ ಗುರುಗಳ ।। ಪಲ್ಲವಿ ।।
ಅರುಣೋದಯದಿ ಏಳುತಾ । ಚಂ ।
ದಿರ ಪೋಲ್ವ ಮುಖಕೆ ।
ವಾರಿಯು ನೀಡುತಾ -
ಕಪಿಲಾ ಸ್ನಾನಾ ।
ನಿರುತ ಬಿಡದೆ ಮಾಡುತಾ -
ಜಪವನ್ನು ಮಾಡಿ ।।
ಗೌರೀವರನ ನೋಡುತಾ -
ಅಲ್ಲಿಂದ ಬರುತಾ ।
ಕರಿಹರರಥ ಭಟರು -
ಸಾಲುಗಳು ಸುರಟಿ ।
ಭೇರಿನಪೂರಿ ಡಂಕಾ ಮೆರೆವ
ಶ್ವೇತ ಛತ್ರ ಚಾಮರ ।
ಬರಲು ಹಗಲು
ದೀವಟಿಗಳಲಿ ।। ಚರಣ ।।
ಅಂಬರದಲಿ ಸುರರು
ದೇವಾ ಶರ್ವನುತ ।
ಸಂಭ್ರಮಗಳ ನೋಡುತ್ತಾ
ಕರಗಳಿಂದ ।
ಅಂಬುಜಗಳ ನೀಡುತಾ
ಜಯ ಜಯವೆನುತಾ ।
ದುಂದುಭಿಗಳ ಪಾಡುತಾ
ಈ ಪರಿಯಲಿ ಬರುತಾ ।।
ಅಂಬುಜೋದ್ಭವ
ಸಮನ ಮತವನು ।
ಕುಂಭಿಣಿ ಸುರರಿಗೆ ಪೇಳುತಾ ।
ಅಂಬುಜಾ೦ಬಕರಾಮ ಪೂಜೆಯ ।
ತುಂಬಿ ಮನದಲಿ
ಮಾಡುವರನಾ ।। ಚರಣ ।।
ಗುರು ರಾಘವೇಂದ್ರರಾಯ ಕರುಣದಿಂದ ।
ಹರಿಯನು ಕಾಂಬುವರಾ । ಹೃದಯಾ೦ ।
ಬರದಿ ಪರಿವಾರ ಸಹಿತವರಾ । ಅ ।
ಪರೋಕ್ಷೀ ಕರಿಸಿ ವ್ಯತಿರೇಕಾನ್ವಯ ।। ಇ ।।
ವರಾ ಪೂಜೆಯನೆ ಮಾಡಿ ।
ಕರುಣದಿಂದಲಿ ಗುರು -
ತಂದೆ ಗೋಪಾಲವಿಠಲನೆ ।
ಪರನೆಂದು ಜಗಕೆ ಬೀರಿ
ಡಂಗುರ ಹೊಯ್ದ ।
ಧರೆಯೊಳು ಮೆರೆವ
ಸುಜ್ಞಾನೇಂದ್ರರಾಯಾ।। ಚರಣ ।।
****