Audio by Mrs. Nandini Sripad
ಶ್ರೀ ಗೋಪಾಲದಾಸಾರ್ಯ ವಿರಚಿತ ಬಿಂಬೋಪಾಸನೆ ಸುಳಾದಿ
( ಬಿಂಬನಾದ ಶ್ರೀಹರಿಯ ಭಕ್ತವಾತ್ಸಲ್ಯತೆ.
ಸ್ತೋತ್ರಪೂರ್ವಕ ಶ್ರೀಹರಿಯ ಕ್ರಿಯಾರೂಪೋಪಾಸನೆ ವಿವರ )
ರಾಗ ಮುಖಾರಿ ಧ್ರುವತಾಳ
ಸೃಷ್ಟಿಗೊಡೆಯ ಕೇಳೊಂದೆಷ್ಟು ನಾ ತುತಿಸಲು
ದೃಷ್ಟಿಯಿಂದಲಿ ಎನ್ನ ಕಡಿಯ ನೋಡಲಿವಲ್ಲಿ
ಅಷ್ಟ ಸೌಭಾಗ್ಯವೆಂಬೊ ಎಷ್ಟು ಮದವೊ ನಿನಗೆ
ಘಟ್ಟ್ಯಾಗಿ ನೀನಲ್ಲಾದನ್ಯರಿಂದ ವೆಂದರೆ
ಸೊಟ್ಟ ತಿರುವಿ ಮೊಗ ಅಟ್ಟಿ ವೇರುತಲದೆ
ಎಷ್ಟಿಲ್ಲವೆಂದು ಬಿಟ್ಟರಂಜುವನಲ್ಲಾ
ಘಟ್ಟಿ ಭಕುತಿ ಪಾಶದಲಿ ಕಟ್ಟಿ ಎನ್ನುದರದೊ -
ಳಿಟ್ಟು ಕೊಂಬೆನಯ್ಯಾ ಜಿಷ್ಣು ಸಖನೆ ಕೃಷ್ಣ
ಭ್ರಷ್ಟ ಎಂತೆಂದು ದೂರ ದೃಷ್ಟಿಲಿ ನೋಡಿದರೆ
ಬಿಟ್ಟು ಕೊಡೊ ಭಕುತ ವತ್ಸಲನೆಂಬೊ ಬಿರುದು
ಅಷ್ಟ ಸಂಪತ್ತು ಮತ್ತಿಷ್ಟು ಕೊಡೊ ಎಂತೆಂದು
ಕಷ್ಟ ಬಡಿಸಿ ನಿನ್ನ ಕಾಡಿ ಬೇಡುವದಿಲ್ಲಾ
ಕಷ್ಟ ಸಂಸಾರವೆಂಬ ಸುಳಿಯವೊಳಗೆ ಎನ್ನ
ಇಟ್ಟು ನೋಡೋದು ನಿನಗೆಷ್ಟು ಸುಖವೊ ಕಾಣೆ
ಮೆಟ್ಟಿ ತುಳಿಯೊ ಬೆನ್ನಟ್ಟಿ ಬಾಹೋ ದುರಿತ
ಕುಟ್ಟಿ ಬೀಸಾಡು ಬಲು ನಷ್ಟ ಸಂಸಾರ ಬೇರ
ಸೃಷ್ಟ್ಯಾದ್ಯಷ್ಟಕರ್ತಾ ಗೋಪಾಲವಿಠ್ಠಲರೇಯಾ
ಸ್ಪಷ್ಟರೂಪ ತೋರೊ ಮುಟ್ಟಿ ಭಜಿಸಲು ॥ 1 ॥
ಮಠ್ಯತಾಳ
ಭಕುತರಿಗಾಗಿ ನೀ ಜಗವ ಪುಟ್ಟಿಸಿದಯ್ಯಾ
ಭಕುತರಿಗಾಗಿ ನೀ ಅವತಾರ ಮಾಡಿದಯ್ಯಾ
ಭಕುತರು ನಿನ್ನನ್ನು ಭಜಿಸದಿದ್ದರೆ ದೇವಾ
ಸಕಲ ಲೋಕರು ನಿನ್ನರುಹುವರೆಂತೊ
ಮುಕುತಿದಾಯಕ ಮೂಲ ದೈವ ವೆಂಬೋದು
ಸಕಲ ಲೋಕಕ್ಕೆ ಕರಿರಾಜ ತೋರಿಸಿದನು
ಉಕುತಿಗಳಿಂದ ಅರಸಲು ಬಾಹೋದು
ಪ್ರಕಟ ಮಾಡಿದಳಯ್ಯಾ ಶಕತಳು ದ್ರೌಪದಿ
ಸಕಲರಲ್ಲಿ ನೀನು ವ್ಯಾಪಕ ನೆಂಬೋದು
ಭಕುತ ಪ್ರಹ್ಲಾದ ಇರುವು ತೋರಿಸಿದನು
ಭಕುತರಿಂದ ನೀನು ಭಕುತರಾಧೀನ ದೇವಾ
ಭಕುತವತ್ಸಲ ನಮ್ಮ ಲಕುಮಿಯ ರಮಣ
ಉಕುತಿ ಪತಿ ನಾಭ ಗೋಪಾಲವಿಠ್ಠಲರೇಯಾ
ಭಕುತರ ಮುಂದೆ ನಿನ್ನ ಯುಕುತಿ ನಡಿಯದಯ್ಯಾ ॥ 2 ॥
ತ್ರಿಪುಟತಾಳ
ಶೃಂಗಾರ ಗದ್ದುಗೆ ಬಂಗಾರಾ ಭರಣಿಟ್ಟು
ರಂಗ ಒಲಿಯೊ ಎಂದು ಅಂಗೀಕರಿಸಲರಿಯೆ
ಮಂಗಳ ಮೂರುತಿ ಮನವೆ ಕುಳ್ಳಿರ ಪೀಠ
ಗಂಗಾಜನಕನೆಂದೆನಿಸಿ ಕೊಂಬೊದೆ ಸ್ನಾನ
ಅಂಗನೆ ದ್ರೌಪದಿ ಅಭಿಮಾನ ರಕ್ಷಕನೆಂಬ
ಶೃಂಗಾರ ಬಿರಿದೊ ವಸನಂಗಳು ನಿನಗೆ
ಅಂಗವೆ ಕೊರಡು ಶ್ರೀಗಂಧವೆ ತೇದಿಡುವೆನೊ
ಕಂಗಳೆರಡು ದೀಪ ಕರಉಭಯ ಚ್ಯಾಮರ
ಅಂಗದೊಳಿದ್ದಷ್ಟ ಕಮಲವು ಕುಸುಮವೊ
ಹಿಂಗದೆನ್ನ ಕಿಂಚಿತ್ತು ಭಕುತಿಯೆ ನೈವೇದ್ಯ
ರಂಗ ದಿನದಿನದಿ ಮಾಡಿಸಿದ ಕರ್ಮವೆ ಕಪ್ಪವು
ರಂಗ ಮಹಿಮನೆ ಜಠರಾಗ್ನಿಯೆ ಆರುತಿ ತು -
ರಂಗವದನ ಸರ್ವಾಂಗ ಸಮರ್ಪಿಸಿ ಕ -
ರಂಗಳು ಮುಗಿದೆ ಅಂತರಂಗದಿ ನಿಲ್ಲೊ
ಸ್ವಾಯಂಗಾಯನ ನಾಮಾ ಗೋಪಾಲವಿಠ್ಠಲರೇಯಾ
ಸಂಗವಿಡಿಸೊ ನಿನ್ನ ಡಿಂಗರಿಗರೊಡನೆ ॥ 3 ॥
ಅಟ್ಟತಾಳ
ಒಡಿಯ ನಿನಗೆ ಮೊರೆಯಿಡುತಲಿದ್ದರೆ ಎನ್ನ -
ಕಡಿಯ ನೋಡಲುವಲ್ಲಿ ಬಡಿವಾರ ನಿನಗೆಷ್ಟು
ತಡಿಯದೆ ನಾನೊಂದು ನುಡಿಯ ನುಡಿವೆನಯ್ಯಾ
ಕಡು ಕಷ್ಟ ನಾರುತ ಮಡುವಿನೊಳಗೆ ಸೇರು
ಬಿಡದೆ ಬೆಟ್ಟವ ಪೊತ್ತು ಕಡಲೊಳಗಿರು ಇನ್ನು
ಅಡವಿ ಸೂಕರ ಜನ್ಮ ಬರಲಿ ನಿನಗೆ
ಕೆಡಲಿ ನಿನ್ನ ರೂಪ ಕಡು ಘೋರನಾಗೆಲೊ
ಒಡಲಿಗಿಲ್ಲದೆ ನೀನು ತಿರುಕಿಯನೆ ಬೇಡು
ಕೊಡಲಿಯ ಪಿಡಿದಿನ್ನು ಅಡವಿ ಸಂಚಾರನಾಗೊ
ಮಡದಿಯ ಕಳಕೊಂಡು ಜಡಿಯ ಧರಿಸೊ ನೀನು
ತುಡುಗ ದನ ಕಾಯೆಂದು ನುಡಿಯಲಿ ಜನರೆಲ್ಲ
ಉಡುವೊ ವಸ್ತ್ರವಿಲ್ಲದೆ ಬತ್ತಲಾಗಿ ನಿಲ್ಲೊ
ಕಡುವೇಗದಲಿ ನೀ ಕಲ್ಕಿ ರೂಪನಾಗೊ
ತಡಿಯದೆ ವರಗಳ ಕೊಡುವವನೆಂತೆಂದು
ನುಡಿದೆನೊ ನಾ ಇಂಥ ಬಿಡಿ ಮಾತುಗಳ
ಕಡು ದಯಾಸಾಗರ ಗೋಪಾಲವಿಠ್ಠಲ
ಹಿಡಿದು ಬಿಡೆನೊ ದೇವಾ ಬಡವರಾಧಾರಿ ॥ 4 ॥
ಆದಿತಾಳ
ಈ ಪರಿ ನುಡಿದರೆ ಪಾಪವೆಂಬಿಯಾ ಹರಿಯೆ
ಪಾಪವೆಲ್ಲಾದ್ದೊಂದು ನಿನ್ನ ವ್ಯಾಪಾರ ಇಂಥದೊ
ಪಾಪಗರಳಿನ ಕೂಪಾದೊಳಗೆ ಬಿದ್ದು
ತಾ ಪಾರಾಗದೆ ನಿನ್ನ ಕೋಪದಿಂದಲಿ ನುಡಿದೆ
ಪಾಪಿ ಎಂತೆಂದು ಎನ್ನ ಹೋಪಾ ನೂಕಿದರೆ
ನೀ ಪತಿತ ಪಾವನ ನೆಂಬೊ ಬಿರುದುಂಟೊ ದೇವಾ
ಮೋಪನಾಗಿಹೆ ನಾನು ಕಾಮ ಕ್ರೋಧದ ಕೆಳಗೆ
ರಾಪು ಮಾಡದೆ ದೋಷ ಉಪ್ಫೆಂದು ಹಾರಿಸು
ಕುಪಥವ ತಪ್ಪಿಸು ಸುಪಥವ ತೋರಿಸು
ಶ್ರೀಪತಿ ಎನ್ನ ಮೇಲೆ ನೀ ಪ್ರೀತಿಯನೆ ಮಾಡು
ಅಪಾರ ನಾಮಂಗಳು ಲೇಪಿಸೆನ್ನ ಜಿಹ್ವೆಗೆ
ಪಾಪಗಳ ಕಳಿಯೊ ದ್ರೌಪದಿಯ ಮಾನದೊಡಿಯ
ಭಾಪುರೆ ನಮ್ಮ ಗೋಪಾಲವಿಠ್ಠಲರೇಯ
ನೀ ಪರದೈವವೆಂದು ನಾ ಪಾದ ಪಿಡಿವೆನೊ ॥ 5 ॥
ಜತೆ
ಎಂದಿಗಾದರೂ ನಿನ್ನ ಬಳಿಗೆ ಬಾಹೋದೆ ಸತ್ಯಾ
ಇಂದೆ ಮುಂದಕೆ ಕರಿಯೊ ಗೋಪಾಲವಿಠ್ಠಲ ॥
*******