Showing posts with label ಮನವೆ ಲಾಲಿಸಿ ಕೇಳು vijaya vittala ankita suladi ಹರಿದಾಸ ಲಕ್ಷಣ ಸುಳಾದಿ MANAVE LALISI KELU HARIDASA LAKSHANA SULADI. Show all posts
Showing posts with label ಮನವೆ ಲಾಲಿಸಿ ಕೇಳು vijaya vittala ankita suladi ಹರಿದಾಸ ಲಕ್ಷಣ ಸುಳಾದಿ MANAVE LALISI KELU HARIDASA LAKSHANA SULADI. Show all posts

Sunday, 1 August 2021

ಮನವೆ ಲಾಲಿಸಿ ಕೇಳು vijaya vittala ankita suladi ಹರಿದಾಸ ಲಕ್ಷಣ ಸುಳಾದಿ MANAVE LALISI KELU HARIDASA LAKSHANA SULADI

Audio by Mrs. Nandini Sripad

 ಶ್ರೀವಿಜಯದಾಸಾರ್ಯ ವಿರಚಿತ ಹರಿದಾಸ ಲಕ್ಷಣ ಸುಳಾದಿ 


 ರಾಗ ಕಾಂಬೋಧಿ 


 ಧ್ರುವತಾಳ 


ಮನವೆ ಲಾಲಿಸಿ ಕೇಳು ಬಿನ್ನೈಸುವೆನೊ ನಿನಗೆ

ಚಿನುಮಯ ಮೂರ್ತಿಯ ಗುಣನಾಮ ಕೀ -

ರ್ತನೆ ಮಾಳ್ಪ ಬಗೆಯು ನಿನಗೆ ತಿಳಿಪುವೆನೋ

ಘನವಾದ ಸುಸಾಧನವೆಂದು ತಿಳಿದು 

ತ್ರಿಕರ್ಣಪೂರ್ವಕವಾಗಿ ಘನಮಹಿಮ ನಾರಾಯಣನ ಅಚಿಂತ್ಯಾದ್ಭುತ ಶಕ್ತಿ

ಅನುಭವಕೆ ತಂದುಕೊಂಡು ಸುಖಿಸುವದೂ

ಮನವೆ ಮೊದಲಾದ ಸರ್ವ ಇಂದ್ರಿಯಂಗಾಳ -

ವನ ಪಾದದಲ್ಲಿ ಇಟ್ಟು ಕೀರ್ತನೆ ಗೈಯೊ

ನಿನಗಿದೆ ಮುಖ್ಯವಾದ ಗತಿ ಎಂದು ಸಾರಿದೇ

ಅನುಮಾನ ಮಾಡಸಲ್ಲ ಎಂದೆಂದಿಗೇ

ಬಿನಗು ದೈವಂಗಳ ಕಾಲಿಲೊದ್ದು ಮಧ್ವ -

ಮುನಿ ಮತದಲ್ಲಿ ದೀಕ್ಷ ಬದ್ದನಾಗೋ

ಕುನರರ ನೆರಹಿಕೊಂಡು ಕುಚೇಷ್ಟೆ ಕಥೆಯ ಪೇಳಿ

ಘನ ಅಂಧಂತಮಸಿನೊಳು ಬೀಳದಿರೂ

ವನಜ ಭವಾಂಡದೊಳು ಹರಿದಾಸತ್ವ ದೀಕ್ಷ ಬಲುಕಷ್ಟ ಕಾಣೊ

ಮನುಜಾಧಮರಿಗಿದು ಸುಲಭವಲ್ಲಾ

ಇನಿತು ತಿಳಿ ಇದರೊಳು ತ್ರಿವಿಧ ಬಗೆ ಉಂಟು

ಗುಣವಂತನಾಗಿ ಕಾಲಕ್ರಮಣ ಮಾಡು

ಅನುದಿನದಲ್ಲಿ ಹರಿಸೇವಿಗೆ ವಿಮುಖನಾಗದೆ

ಮನಮುಟ್ಟಿ ಒಬ್ಬನೆ ಏಕಾಂತದಲ್ಲಿ ಕುಳಿತು

ತನು ರೋಮಾಂಚನೆ ಉಬ್ಬಿ ಆನಂದಬಾಷ್ಪಗಳಿಂದ

ಗಾನವನ್ನೆ ಮಾಡು ಘನಜ್ಞಾನ ಪುಟ್ಟುವದು

ಅನಿಮಿಷೇಶನ ಪ್ರೀತಿ ದಿನದಿನಕೆ ವೆಗ್ಗಳವಾಗುವದು

ನಿನಗಿದೇ ಸಿದ್ದ ಪೇಳಿದೆ ಶುದ್ದ ಸತ್ವದ ಸ್ವಭಾವವನ್ನು

ಮನಸಿಗೆ ತಂದುಕೊಂಡು ಜ್ಞಾನಿಯಾಗೋ

ಗುಣಗಣಾಂಬುಧಿ ನಮ್ಮ ವಿಜಯವಿಟ್ಠಲನು 

ಅನುಸಾರಿಯಾಗಿ ತಾನು ಹಿಂದೆ ತಿರುಗುತಿಪ್ಪ ॥ 1 ॥ 


 ಮಟ್ಟತಾಳ 


ಉದಯಕಾಲದಲೆದ್ದು ಮುದದಿಂದಲಿ ಹರಿಯ ನಾಮ

ಒದಗಿ ಆರತನಾಗಿ ವದನದಿ ಕೊಂಡಾಡಿ

ವಿಧಿ ಪೂರ್ವಕದಿಂದ ಸ್ನಾನಾದಿ ಕರ್ಮ ಮುಗಿಸಿ

ಬುಧರಲ್ಲಿಗೆ ಪೋಗಿ ಕಥಾಶ್ರವಣವ ಮಾಡಿ

ಅದರ ತರುವಾಯ ಉದರಗೋಸುಗ ಪೋಗಿ

ಸಾಧುಗಳ ಮನೆಯಲ್ಲಿ ಶುಧ್ದ ವೃತ್ತಿಯ ಮಾಡಿ

ಇದ್ದನಿತದರೊಳು ಸಾಕ್ಷಿ ಭೂತದಿಂದ

ಮೆದ್ದು ಸತಿ ಸುತರೊಡನೆ ಮಮತೆ ರಹಿತನಾಗಿ

ಇದ್ದು ಸತ್ಕಾಲವನ್ನು ಕಳೆಯಬೇಕು ಮನುಜ

ಪದ್ದತಿ ತಪ್ಪದಂತೆ ಈ ಧರೆಯೊಳು ಹೀ -

ಗಿದ್ದವನೇ ನಿಜದಾಸ ಕಾಣಿರೊ

ಮುದ್ದು ಮೋಹನರಂಗ ವಿಜಯವಿಟ್ಠಲಗೆ 

ಮುದ್ದಾಗುವನವನೆ ನಿಜದಾಸನು ಕಾಣಿರೋ ॥ 2 ॥ 


 ತ್ರಿವಿಡಿತಾಳ 


ಯಾಮ ರಾತ್ರಿಯೊಳಗೆ ಸತ್ಕರ್ಮದ

ನೇಮವನು ಮುಗಿಸಿ ನಿತ್ಯ ಭಕುತಿಯಿಂದ

ಶ್ರೀ ಮುಕುಂದಗೆ ಅರ್ಪಣೆ ಮಾಡಿ

ವಾಮಭಾಗದಿ ತನ್ನ ಸತಿಯಿಂದ ಒಡಗೂಡಿ

ಶ್ರೀ ಮನೋಹರನ ತುತಿಸಿಕೊಳ್ಳುತ

ಯಾಮ ಎರಡರಲ್ಲಿ ನಿದ್ರೆ ಕಳೆದು ಈ ಪರಿಯಲಿ

ಕಾಮುಕನಾಗಲು ಹರಿ ಒಲಿವಾ

ಕಾಮಿನಿಯಳ ಬಿಟ್ಟು ಪ್ರಥಕ ಶಯ್ಯನಾಗೆ

ಭೂಮಿಯೊಳಗೆ ಅವನೇ ಪಾಮರನೋ

ಯಾಮ ಮೀರಿ ಸತ್ಕರ್ಮ ಮಾಡಿದ ಪುಣ್ಯ

ಆ ಮಹಾದೈತ್ಯರು ಶಳಕೊಂಬೊರು

ಶ್ರೀರಮಣ ದಿನದಲ್ಲಿ ಮಾತ್ರ ಅವರ

ಸ್ವಾಮಿತ್ವ ನಡೆಯುದಿಲ್ಲವು ಕೇಳಿರೋ

ಭೂಮಿಜಪತಿ ತನ್ನ ಚಕ್ರವ ತಿರುಗಿಸುವ

ಕಾಮುಕ ದೈತ್ಯರ ಅಳೆಯುವುದಕ್ಕೆ

ಪಾಮರ ಮನುಜರು ದಾಸ ವೇಷವು ಧರಿಸಿ

ನೇಮ ನಿತ್ಯಗಳೆಲ್ಲ ಪೋಗಾಡಿಸಿ

ಕಾಮಚಾರಿಗಳಾಗಿ ಕಂಡಲ್ಲಿ ತಿರುಗಿ ಹಂಬಲಿಸಿ

ಉಮಾ ಮನೋಹರನ ಲೀಲೆ ಪೇಳಿದರೇನು

ತಾಮಸ ದಾಸನೆಂದು ತಿಳಿಯೊ, ಘೋರ -

ತಮಸ್ಸುವಾಗುವದವಗೆ ಸಂದೇಹವಿಲ್ಲವೊ

ಈ ಮಹಿಯೊಳು ಮೃಷ್ಟಾನ್ನ ಭೋಜನ ವಸನ ಇ -

ರೆ ಮಹಫಲವೆಂದು ಹಿಗ್ಗಿ ಕೊಟ್ಟು ಪೋಗುವನೊ

ಕಾಮಿತಪ್ರದ ದೇವ ಇಂಥದೆ ಅವನಿಗೇ

ನೇಮಿಸಿ ಇಪ್ಪನು ಗಡಾ ಅವನ ಯೋಗ್ಯತೆಯಂತೆ

ಸ್ವಾಮಿ ತನ್ನ ನಿಜದಾಸರೆಂಬವರಿಗೆ

ನಾಮ ಸುಧೆಯನುಣಿಸಿ ಸಲಹುತಿಪ್ಪ

ಈ ಮಹಾಭಾಗ್ಯಕ್ಕೆ ಎಣೆಗಾಣೆ ಎಣೆಗಾಣೆ

ಭ್ರಾಮಕನಾಗಿ ನೀ ಕೆಡಬೇಡವೋ

ಕಾಮಜನಕ ನಮ್ಮ ವಿಜಯವಿಟ್ಠಲನ ಹೃದಯ -

ಧಾಮದೊಳಗೆ ಪೂಜೆ ಮಾಡಿ ನಲಿದಾಡುವದು ॥ 3 ॥ 


 ಅಟ್ಟತಾಳ 


ನಿರುಪಾಧಿಕವಾಗಿ ಹರಿಸೇವೆ ಮಾಳ್ಪದಕೆ ಜ -

ನರನ ನಿರೀಕ್ಷಿಸಿಕೊಂಡು ಕುಳ್ಳಿರುವ ಮಾನವನು

ಹರಿದಾಸನವನಲ್ಲ ನರವಾನರ ಕಾಣೊ

ಪರಮ ಭಕುತಿಯಿಂದ ಭರದಿಂದ ಹರಿಸೇವೆ ಮಾಡುತ

ಸುರಿಯಬೇಕು ಸುಖ ತನ್ನೊಳಗೆ ತಾನೆ

ಪರಮ ಗುಪ್ತನಾಗಿ ಇರಬೇಕು ತನ್ನ 

ಸ್ವರೂಪ ತೋರಗೊಡದಂತೆ ದುರುಳ ಜನಕೆ 

ದುರಾಚಾರಿ ಎಂಬೊ ಹಾಗೆ

ಚರಿಸಬೇಕು ಅವರು ಕೆಟ್ಟು ಪೋಗುವಂತೆ

ನೆರೆ ಜಾಣನಾದವ ಈ ಹರಿದಾಸರ

ಚರಣ ರಜವನ್ನು ಧರಿಸುವ ಶಿರದಲ್ಲಿ

ಪರಮ ಯೋಗ್ಯನಾಗಿ ಮುಕುತಿ ಕೈಕೊಂಬನು

ವರ ಕಲಿಯುಗದಲ್ಲಿ ಇಂಥವರೆ ದುರ್ಲಭರಯ್ಯಾ

ಕರುಣಾಕರ ರಂಗ ವಿಜಯವಿಟ್ಠಲಗೆ 

ಪರಮಪ್ರೀಯರಿವರೆ ಹರಿದಾಸರು ಕಾಣೊ ॥ 4 ॥ 


 ಆದಿತಾಳ 


ಒಂದು ಪದವ ಪಾಡುತಲದನು

ಹಿಂದುಗಳೆದು ಮತ್ತೊಂದು ಪಾಡಲು

ನೊಂದುಕೊಂಬೊರೊ ವರ್ಣಾಭಿಮಾನಿಗಳು

ಸಂದೇಹಜ್ಞಾನ ಉಳ್ಳ ಹರಿದಾಸನಿವನು ಕಾಣೊ

ಒಂದೆರಡು ಸ್ಥಳದಿಂದ ತಿರುಗಿ ತಿರುಗಿ ಪುಟ್ಟುವ

ಬಂದು ಪಡುವನು ನಾನಾ ಸೌಖ್ಯಂಗಳು

ಇಂದಿರೇಶನು ಇವಗೆ ಇದೆ ಕ್ಲಪ್ತಿ ಮಾಡಿಪ್ಪ

ಮಂದಮನವೆ ಕೇಳೊ ಮರುಳಾಗಿ ನೀನು ನಾ -

ನಂದ ಮಾತುಗಳೆಲ್ಲ ಮನಕೆ ತಾರದೆ ನಮ್ಮ

ಕಂದರ್ಪ ಜನಕಗೆ ದೂರನಾದಿ ಕಂಡ್ಯಾ

ವಂದಿಸಿ ನಿನಗೆ ನಾ ಬೇಡಿಕೊಂಬೆನು

ಮಂದರೋಧರ ಶಿರಿ ವಿಜಯವಿಟ್ಠಲನ 

ಪೊಂದಿ ಸಂಸಾರ ಭರದಿಂದ ಮುಕ್ತನಾಗೊ ॥ 5 ॥ 


 ಜತೆ 


ಜ್ಞಾನ ಭಕುತಿ ವೈರಾಗ್ಯ ಭಾಗ್ಯವನು

ನೀನು ಪಡಿಯೊ ಮನವೆ

ಶ್ರೀನಿಧಿ ವಿಜಯವಿಟ್ಠಲನ ದಯದಿಂದ ॥

****