Showing posts with label ಅನ್ನಾಭಿಮಾನಿ ಚಂದ್ರ vijaya vittala ankita suladi ನೈವೇದ್ಯ ಸುಳಾದಿ ANNAABHIMAANI CHANDRA NAIVEDYA SULADI. Show all posts
Showing posts with label ಅನ್ನಾಭಿಮಾನಿ ಚಂದ್ರ vijaya vittala ankita suladi ನೈವೇದ್ಯ ಸುಳಾದಿ ANNAABHIMAANI CHANDRA NAIVEDYA SULADI. Show all posts

Monday 9 December 2019

ಅನ್ನಾಭಿಮಾನಿ ಚಂದ್ರ vijaya vittala ankita suladi ನೈವೇದ್ಯ ಸುಳಾದಿ ANNAABHIMAANI CHANDRA NAIVEDYA SULADI

Audio by Mrs. Nandini Sripad

ಶ್ರೀವಿಜಯದಾಸಾರ್ಯ ವಿರಚಿತ   ನೈವೇದ್ಯ ಸುಳಾದಿ 


 ರಾಗ ಭೈರವಿ 


 ಧ್ರುವತಾಳ 


ಅನ್ನಾಭಿಮಾನಿ ಚಂದ್ರ ಅಲ್ಲಿ ಕೇಶವ ಪರ -

ಮಾನ್ನದೊಳು ಭಾರತೀ ನಾರಾಯಣಾ

ಪೂರ್ಣಭಕ್ಷಗಳಲ್ಲಿ ಸೂರ್ಯ ಮಾಧವ ಘೃತಕೆ

ಕನ್ಯಾ ಲಕುಮಿ ಅಲ್ಲಿ ಗೋವಿಂದನೋ

ಬೆಣ್ಣೆ ಪಾಲಿನಲ್ಲಿ ಸರಸ್ವತಿ ವಿಷ್ಣು ಶಿರೋ -

ರನ್ನ ಮಂಡಿಗೆಯಲ್ಲಿ ವಾಗೀಶ ಮಧುಸೂದನ

ಬೆಣ್ಣೆಯಲ್ಲಿ ವಾಯು ಅಲ್ಲಿ ತ್ರಿವಿಕ್ರಮಾ

ಘನ್ನ ದಧಿಯಲ್ಲಿ ಚಂದ್ರ ವರುಣ ವಾಮನ

ಚನ್ನ ಸೂಪದಲ್ಲಿ ಗರುಡ ಶ್ರೀಧರದೇವ

ಮುನ್ನೆ ಪತ್ರ ಶಾಕದಲ್ಲಿ ಮಿತ್ರನು ಹೃಷಿಕೇಶ

ಇನ್ನು ಫಲಶಾಕಗಳಲ್ಲಿ ಸರ್ಪ ಪದುಮನಾಭ

ಬಣ್ಣಿಪೆ ಆಮ್ಲದಲ್ಲಿ ಪಾರ್ವತಿ ದಾಮೋದರ

ಅನ್ನಾಮ್ಲ ಪತಿ ರುದ್ರ ಅಲ್ಲಿ ಸಂಕರುಷಣ

ಕಣ್ಣಿಗೆ ಇಂಪಾದ ಸಕ್ಕರಿಯಲ್ಲಿ ಸುರ ವ -

ರೇಣ್ಯಾ ಇಂದ್ರನು ತದ್ಗತ ವಾಸುದೇವ

ಪನ್ನಗಶಾಯಿ ನಮ್ಮ ವಿಜಯವಿಟ್ಠಲರೇಯನ ಪಾ -

ವನ್ನ ಮೂರ್ತಿಯ ನೆನಸಿ ಪಾವಿತ್ರ ನೀನಾಗೋ ॥ 1 ॥ 


 ಮಟ್ಟತಾಳ 


ಪರಿಪರಿ ಸೋಪಸ್ಕರದಲ್ಲಿಗೆ ಅಭಿಮಾನಿ

ಪರಮೇಷ್ಠಿ ಎನ್ನಿ ಆತಗೆ ಪ್ರದ್ಯುಮ್ನ

ತರುವಾಯ ಕಟುದ್ರವ್ಯಕೆ ಯಮರಾಯಾ

ಇರುತಿಪ್ಪನು ಅಲ್ಲಿ ಅನಿರುದ್ಧ ಮೂರುತಿ

ಸರಕು ಸಂಭಾರಗಳು ಇಂಗು ಸಾಸಿವಿ ಏಳಾ

ಮರೀಚಿ ಜೀರಿಗೆ ಕರ್ಪುರ ಚಂದನ ಕೇ -

ಸರಿ ಮೊದಲಾದ ಪರಿಪರಿ ವಿಧವಾದ

ಪರಿಮಳ ದ್ರವ್ಯಕ್ಕೆ ಮನುಮಥ ಅಧಿಪತಿ

ಪುರುಷೋತ್ತಮ ದೇವನು ವಾಸವಾಗಿಹನಯ್ಯಾ

ಪರಿಕ್ಷಿಸು ತೈಲ ಪಕ್ವಕೆ ಜಯಂತಾ

ವರ ಅಧೋಕ್ಷಜ ಮೂರುತಿ ಪೊಂದಿಕೊಂಡು ನಿತ್ಯ

ಮರಳಿ ಸಂಡಿಗೆಯಲ್ಲಿ ದಕ್ಷಪ್ರಜೇಶ್ವರಾ

ನರಹರಿ ಅಲ್ಲಿಪ್ಪ ಅದ್ಭುತ ಕಾರ್ಯಾನು

ಅರೆಮರೆ ಇಲ್ಲದೆ ಉದ್ದಿನ ಭಕ್ಷದಲಿ

ಇರುತಿಪ್ಪನು ಮನು ಅಲ್ಲಿ ಅಚ್ಯುತಮೂರ್ತಿ

ಸುರುಚಿ ಲವಣದಲ್ಲಿ ನಿರಋತಿ ಜನಾರ್ದನ

ಸ್ಥಿರವೆನ್ನಿ ಲವಣ ಶಾಕಕ್ಕಭಿಮಾನಿ

ಮರೀಚಿ ಪ್ರಾಣನು ಅಲ್ಲಿ ಉಪೇಂದ್ರ ಭಗವಂತ

ಪರಮ ಶೋಭಿತ ತಾಂಬೂಲಕೆ ಗಂಗಾ

ಹರಿನಾಮಕ ದೇವ ಸ್ವಾದೋದಕದಲ್ಲಿ

ತರಣಿ ಸಮನ ಪುತ್ರ ಶ್ರೀಕೃಷ್ಣನು ಎನ್ನಿ

ಸುರರ ಮಸ್ತಕಮಣಿ  ವಿಜಯವಿಟ್ಠಲರೇಯಾ 

ಸ್ಮರಿಸಿದ ಸುಜನಕೆ ತಿಳುಪುವ ಇದರಂತೆ ॥ 2 ॥ 


 ತ್ರಿವಿಡಿತಾಳ 


ಪಾಕಶುದ್ಧಿಗೆ ಪುಷ್ಕರ ಹಂಸನಾಮಕ ದೇವ

ಬೇಕಾದ ಸ್ವಾದು ರಸಗಳಿಗೆ ರತಿ ವಿಶ್ವಾ

ಕಾಕುಲಾತಿ ಸಲ್ಲ ವಲಿಗೆ ಪಾವಕ ಭೃಗು

ನೀ ಕೇಳು ಶುಷ್ಕ ಗೋಮಯ ಪಿಂಡಕ್ಕೆ ಈರ್ವರಾ

ಓಕುಳಿ ನಾಮಕ ವಸಂತ ಋಷಭನು

ಪಾಕ ಕರ್ತಳು ಶ್ರೀದೇವಿ ವಿಶ್ವಂಭರ ವೇ -

ದಿಕ ಮಂಟಪ ಸಹಾ ಭೂದೇವಿ ಸೂಕರಾ

ಆಕಾಶಭಾಗಕ್ಕೆ ಗಣಪತಿ ಕುಮಾರಾ

ಶ್ರೀಕಾಂತನೀತನೊ ಆವರ್ಣಕ್ಕಭಿಮಾನಿ

ಸಾಕಾರವಾಗಿದ್ದ ವಿಷ್ವಕ್ಸೇನ ಪುರುಷಾ

ಲೋಕ ಪವಿತ್ರ ತುಲಸಿಯಲ್ಲಿ ರಮಾ ಕಪಿಲಾ

ರಾಕೇಂದುವಿನಂತೆ ಪಾಕ ಪಾತ್ರಿಗೆ ಕೇಳು

ಕಾಕೋದರನ ರಾಣಿ ವಾರುಣಿ ಅನಂತಾ

ಲೋಕಾಂಬಕನಂತೆ ಪೊಳೆವ ಭೋಜನ ಪಾತ್ರಿಗೆ

ಲೋಕಜನನಿ ದುರ್ಗಾ ಹರಿರಾಣಿ ಸತ್ಯಾ

ಶೋಕ ಕಳೆವ ನಾನಾ ಮಾಟ ತಿದ್ದಿದ ಮಾ -

ಣಿಕ್ಯಮಯ ಬಟ್ಟಲಿಗೆ ಸೌಪರ್ಣಿ ದತ್ತಾನು

ಶ್ರೀಕಳತ್ರ ನಮ್ಮ ವಿಜಯವಿಟ್ಠಲರೇಯ ವೀ -

ವೇಕವಂತರ ಚಿತ್ತದಲ್ಲಿ ಕೈಕೊಂಬನು ॥ 3 ॥ 


 ಅಟ್ಟತಾಳ 


ಓದನ ಸರಸ್ವತಿ ಪರಮೇಷ್ಠಿ ಮಾಳ್ಪರು

ಶ್ರೀದೇವಿ ಚೆನ್ನಾಗಿ ಸೂಪ ಮಾಳ್ಪಳು ಕೇಳಿ

ಆದಿ ಜಗದ್ಗುರು ಭಕ್ಷಮಾಳ್ಪನು ಸುರುಚಿ -

ಯಾದ ಪರಮಾನ್ನ ಭಾರತಿ ಮಾಳ್ಪಳು

ಸ್ವಾದ ಶಾಕ ಫಲಾದಿಗಳು ಇಂದ್ರಾದಿ ಶ -

ಚ್ಯಾದ್ಯರು ಮಾಡುವರು ಇನಿತು

ಮಾಧವನ ಮುಂದೆ ನೈವೇದ್ಯ ಇಡಬೇ -

ಕಾದ ಲಕ್ಷಣ ತಿಳಿ ತಾರತಮ್ಯ ದಿಕ್ಕು 

ಭೇದಗಳಿಂದಲಿ ಅಗ್ನಿ ಕೋಣಿಗೆ ಭಕ್ಷಾ

ಐದು ಮೌಳಿಯ ದಿಕ್ಕಿನಲ್ಲಿ ಪರಮಾನ್ನಾ

ವಾದವಿಲ್ಲದೆ ನೈರುತ್ಯ ಕೋಣಿಲಿ ಲೇ -

ಹ್ಯಾದಿಗಳಿಡಬೇಕು ಭೂತವಾಯುವಿನಲ್ಲಿ

ಆದರಿಸಿ ವ್ಯಂಜನ ಪದಾರ್ಥಂಗಳು

ಮೋದದಲ್ಲಿ ಇಟ್ಟು ಅದರ ಮಧ್ಯದಲ್ಲಿ

ಓದನ ಪಾತ್ರಿಯ ಇಡಬೇಕು ಪರಮಾನ್ನ

ಓದನ್ನದೆಡೆಯಲ್ಲಿ ಘೃತಪಾತ್ರ ದಧಿ ಮೊದ -

ಲಾದವು ಸ್ಥಾಪಿಸಿ ಬದಿಯಲ್ಲಿ ತಾಂಬೂಲ

ಸ್ವಾದೋದಕವಿಟ್ಟು ದೇವಂಗೆ ಕೈಮುಗಿದು

ವೇದ ಮಂತ್ರಗಳಿಂದ ತುತಿಸಿ ಕೊಂಡಾಡುತ್ತ

ಬೋಧ ಮೂರುತಿ ನಮ್ಮ ವಿಜಯವಿಟ್ಠಲರೇಯ 

ಆದಿ ಪರಬೊಮ್ಮ ಆತ್ಮನೆಂದು ನೆನೆಯೋ ॥ 4 ॥ 


 ಆದಿತಾಳ 


ಭೋಜನ ಪಾತ್ರಿ ಮಂಡಿಸಿ ಮೊದಲು ದಿವ್ಯಾನ್ನ ವಿ -

ರಾಜಿಸುವ ಲವಣ ವ್ಯಂಜನಾದಿ ದ್ವಿತಿಯದಲ್ಲಿ

ಮಾಜದೆ ಸಾರುವೆ ಇದರ ತರುವಾಯಾ

ತೇಜವಾಗಿದ್ದ ಭಕ್ಷ ಸರ್ವವು ಇಡಬೇಕು

ಮೂಜಗತ್ಪತಿ ರಂಗಾ ಇನಿತು ಕೈಕೊಂಬನೆಂದು

ನೈಜಭಾವದಿಂದ ಚಿಂತಿಸಬೇಕು ನೋಡಿ

ಭೋಜ್ಯ ಭೋಜಕ ಭೋಕ್ತಾ ಭೋಗ್ಯನು ಹರಿ ಎಂದು

ಪೂಜ್ಯ ಪೂಜ್ಯಕನೆಂದು ಅಂತರಮುಖನಾಗೋ

ಈ ಜಡ ದ್ರವ್ಯದಿಂದ ತೃಪ್ತಿಯಾಗುವದೆಂತೊ

ರಾಜೀವ ನೇತ್ರ ಕೃಷ್ಣ ಹೊರಗೆ ಒಳಗೆ ಇಪ್ಪ

ವ್ಯಾಜ ರಹಿತನಾಗಿ ಮಾಡೆಲೊ ಮಾಡೆಲೊ

ರಾಜ ಪದವಿ ಉಂಟು ಎಂದಿಗೂ ನಾಶವಿಲ್ಲಾ

ಬೀಜ ಮಾತು ಪೇಳುವೆ ಹಲವು ಹಂಬಲ ಸಲ್ಲಾ

ಮೂಜಗದೊಳಗಿದ್ದ ವರ್ನಂಗಳು ಶುಭ್ರ

ರಾಜಸ ಭಾಗ ಮತ್ತೆ ಪೀತ ಕಪ್ಪು ಪದಾರ್ಥ

ರಾಜಿಸುತಿಪ್ಪ ನಾಲ್ಕು ಬಗೆ ದ್ರವ್ಯಾಭಿಮಾನಿ

ರಾಜೀವಪೀಠ ವಾಯು ಸರಸ್ವತಿ ಭಾರತಿ

ರಾಜಶೇಖರ ಮೊದಲಾದ ತತ್ವದಲಿದ್ದ

ಸುಜನರು ಕೇಳಿ ಶುಭ್ರಾದಿ ವರ್ಣ ಕ್ರಮಕೆ

ಪೂಜಿವಂತರು ಅಲ್ಲಿ ವಾಸುದೇವ ಸಂಕರುಷಣ

ರೈಜನಕ ಪ್ರದ್ಯುಮ್ನ ಅನಿರುದ್ಧ ಮೂರ್ತಿ ವಾಸ

ಆ ಜನ್ಮಾರಭ್ಯವಾಗಿ ಇದೇ ಮಾತ್ರ ತಿಳಿದು ಮಹಾ -

ರಾಜಾಧಿ ಲೋಕದಲ್ಲಿ ವಾಸವಾಗುವದು

ರಾಜ ರಾಜಾಪ್ತ ಪ್ರೀಯ ವಿಜಯವಿಟ್ಠಲ ಪರಮಾ -

ಸೋಜಿಗನು ಕಾಣೋ ಸಾಲಕಾಮಂಧ ಹರಣಾ ॥ 5 ॥ 


 ಜತೆ 


ಚಿಂತನೆ ಪ್ರಕಾರ ವಿನಿಯೋಗ ಮಾಡು ಶ್ರೀ -

ಕಾಂತ ವಿಜಯವಿಟ್ಠಲ ಕೃಷ್ಣಗೆ ಪದಾರ್ಥಗಳಾ ॥

*******