Showing posts with label ಸೋಮಶಿವ ಶರ್ವ ಭವ ಕಾಮಹರ ನಿನ್ನಂಘ್ರಿ gopalakrishna vittala. Show all posts
Showing posts with label ಸೋಮಶಿವ ಶರ್ವ ಭವ ಕಾಮಹರ ನಿನ್ನಂಘ್ರಿ gopalakrishna vittala. Show all posts

Monday 2 August 2021

ಸೋಮಶಿವ ಶರ್ವ ಭವ ಕಾಮಹರ ನಿನ್ನಂಘ್ರಿ ankita gopalakrishna vittala

ಸೋಮ ಶಿವ ಶರ್ವ ಭವ ಕಾಮಹರ ನಿನ್ನಂಘ್ರಿ

ತಾಮರಸಯುಗಳ ಭಜಿಸುವೆ | ಭಜಿಸಿ ಬಿನ್ನೈಸುವೆ

ಶ್ರೀ ಮನೋಹರನ ತೋರಯ್ಯ 1

ಕೃತ್ತಿವಾಸನೆ ಎನ್ನ ಚಿತ್ತದಲಿ ಹರಿಯಪದ

ನಿತ್ಯದಲಿ ಭಜಿಪ ಮತಿ ನೀಡೊ | ಮತಿ ನೀಡೊ ಪಾರ್ವತಿ

ಚಿತ್ತದೊಲ್ಲಭನೆ ನಮಿಸುವೆ 2

ಸುವರ್ಣಮುಖರಿಯ ತೀರದಲಿ ನೆಲಸಿರುವೆ

ಶ್ರೀ ವರಾಹನಂಘ್ರಿ ಭಜಿಸುತ್ತ | ಭಜಿಸುತ್ತ ನೆಲಸಿರುವ

ಪಾವನರೂಪ ಸಲಹಯ್ಯ 3

ಕಾಳಸ್ತಿನಿಲಯನೆ ಪೇಳಲಿನ್ನೇನು ನಾ

ತಾಳಲಾರೆನು ಈ ಭವಬಂಧ | ಭವಬಂಧ ಬಿಡಿಸುವ

ವ್ಯಾಳ ಶಯನನ್ನ ತೋರೈಯ್ಯ 4

ಭಕ್ತರಿಗೊಲಿದು ಅಪಮೃತ್ಯು ಪರಿಹರಿಸಿದೆ

ಸತ್ಯ ಸಂಕಲ್ಪ ನಿನ್ನಂಘ್ರಿ | ನಿನ್ನಂಘ್ರಿ ಕಮಲಗಳ

ಚಿತ್ತದಲಿ ತೋರಿ ಸಂತೈಸು 5

ಮನಕೆ ಗುರು ನೀನಹುದು ಮನವ ಹರಿಯಲಿ ನೆಲಸೊ

ಮನಸಿಜ ವೈರಿ ಮಮತೆಯಿಂ | ಮಮತೆಯಿಂದಲಿ ನಿತ್ಯ

ಮನಶುದ್ಧಿಗೈದು ಕಾಯಯ್ಯ 6

ಶಂಖಚಕ್ರವ ಪಿಡಿದ ಸಂಕರ್ಷಣನ ರೂಪ

ಶಂಕಿಸದೆ ನಿತ್ಯ ಭಜಿಸುವೆ | ಭಜಿಸುವೆ ಕೈಲಾಸ

ಅಂಕದಲಿ ನೆಲಸಿ ಹರುಷದಿ 7

ನರಸಿಂಹ ರೂಪವನು ಸ್ಮರಿಸುತ್ತ ಮೈಮರೆವೆ

ಉರುತರ ಭಾವ ಭಕ್ತಿಯಲಿ | ಭಕ್ತಿಯಲಿ ಭಜಿಪ ನಿನ್ನ

ಸ್ಮರಿಸುವರ ಭಯವ ಹರಿಸುವೆ 8

ಶ್ರೀ ರಾಮನಾಮವನು ಪ್ರೇಮದಿಂದುಮೆಗರುಹಿ

ಆರಾರು ಅರಿಯದಾನಂದ | ಆನಂದವಿತ್ತೆ ಭವ

ತಾರಕವೆಂದು ಕರುಣಾಳೂ 9

ಅಜನ ಭ್ರೂಮಧ್ಯದಲಿ ಜನಿಸಿದೆಯೊ ಜಗದಲ್ಲಿ

ಅಜಸುತನ ಯಾಗ ಭಂಜನ | ಭಂಜನಗೊಳಿಸಿದೆ

ತ್ರಿಜಗದಲಿ ನಿನಗೆ ಸರಿಯುಂಟೆ 10

ಶೇಷ ಪರ್ಯಂಕನಿಗೆ ಹಾಸಿಗೆಯಾಗಲು

ತೋಷದಲಿ ತಪವಾಚರಿಸಿದೆ | ಚರಿಸಿ ಸಾಧಿಸಿದೆ ನೀ

ಶೇಷ ಪದವಿಯನು ತ್ರಿನೇತ್ರ 11

ಸುರರು ಅಸುರರು ಕೂಡಿ ಶರಧಿ ಮಥಿಸಲು

ಗರಳ ಉದ್ಭವಿಸಿ ಭಯವಾಗೆ | ಭಯವಾಗಿ ಪರಿಹರಿಸಿ

ಗರಳವನೆ ಕುಡಿದೆ ಶ್ರೀ ಕಂಠ 12

ಅಸುರರ ವಂಚಿಸಿದ ವಶವಲ್ಲದ ಹೆಣ್ಣು

ವಶವಾಗಲೆಂದು ಹಾರೈಸಿ | ಹಾರೈಸಿ ಬಳಲುತಿರೆ

ಬಿಸಜಾಕ್ಷ ನಿನ್ನ ಸಲಹಿದ 13

ತಾರಕಾಸುರನಿಂದ ಘೋರಪಡುತಿರೆ ಜಗವು

ಮಾರ ಪೂಅಸ್ತ್ರ ಎಸೆಯಲು | ಎಸೆಯಲು ದಹಿಸಿ ಕು-

ಮಾರನನು ಪಡೆದೆ ಗಿರಿಜೇಶ 14

ಸ್ತುತಿಪ್ರಿಯ ನಿನ್ನ ನಾ ಸ್ತುತಿಸಲಾಪೆನೆ ಮಂದ

ಮತಿ ಎಂದು ನೀನೆ ಸಂತೈಸೊ | ಸಂತೈಸಬೇಕಿನ್ನು

ಮತಿಯಿತ್ತು ಹರಿಯ ಪದದಲ್ಲಿ 15

ಶಿರದಲ್ಲಿ ಗಂಗೆ ಚಂದ್ರನ ಮೆರೆಯುವ

ಉರಗ ಭೂಷಣನೆ ಕೇಳಿನ್ನು | ಕೇಳಿನ್ನು ಎನ್ನ ಮನ

ಮರೆಯದೆ ಹರಿಯ ನೆನೆಯಲಿ 16

ವಿಷ್ಣು ಭಕ್ತರೊಳಗೆ ಶ್ರೇಷ್ಠ ನೀನಹುದಯ್ಯ

ಜಿಷ್ಣುವಿಗೆ ಮೆಚ್ಚಿ ಧನುವಿತ್ತೆ | ಧನುವಿತ್ತೆ ಗೋಪಾಲ-

ಕೃಷ್ಣವಿಠ್ಠಲನ ತೋರಯ್ಯ 17

****