Showing posts with label ನಿಲ್ಲು ನಿಲ್ಲಯ್ಯಾ ದೇವಾ gopala vittala ankita suladi ಧ್ಯಾನೋಪಾಸನಾ ಸುಳಾದಿ NILLU NILLAYYA DEVA DHYANOPASANA SULADI. Show all posts
Showing posts with label ನಿಲ್ಲು ನಿಲ್ಲಯ್ಯಾ ದೇವಾ gopala vittala ankita suladi ಧ್ಯಾನೋಪಾಸನಾ ಸುಳಾದಿ NILLU NILLAYYA DEVA DHYANOPASANA SULADI. Show all posts

Monday 9 December 2019

ನಿಲ್ಲು ನಿಲ್ಲಯ್ಯಾ ದೇವಾ gopala vittala ankita suladi ಧ್ಯಾನೋಪಾಸನಾ ಸುಳಾದಿ NILLU NILLAYYA DEVA DHYANOPASANA SULADI

Audio by Vidwan Sumukh Moudgalya

ಶ್ರೀ ಗೋಪಾಲದಾಸಾರ್ಯ ವಿರಚಿತ  ಧ್ಯಾನೋಪಾಸನಾ ಸುಳಾದಿ 

( ಧ್ಯಾನವೇ ಮುಖ್ಯ . ಬಿಂಬಮೂರ್ತಿ ಧ್ಯಾನಕ್ಕೆ ಒಲಿಯೆ , ಪ್ರಾರ್ಥನಾ ಧ್ಯಾನೋಪಾಸನೆ ಮುಖ್ಯ . ಧ್ಯಾನದೊಳಗೆ ಎಲ್ಲವೂ ಅಡಕ . ಸರ್ವಜ್ಞ ಸರ್ವಶಕ್ತಿಪ್ರದ , ಯಾವತ್ತೂ ನಿನ್ನಲ್ಲೇ ಉಂಟು. ನಾನಾ ಸ್ಥಾವರ ಜನುಮಗಳಲ್ಲಿ ಬಂದುದು ನಿನ್ನ ಪೂಜೆ . ಮಾನವ ಜನುಮದಲ್ಲಿಯ ದಶೇಂದ್ರಿಯ ಪ್ರವರ್ತಕನಾದ ಹರಿಯೆ , ಧ್ಯಾನಕ್ಕೆ ನಿಲ್ಲೆಂದು ಪ್ರಾರ್ಥನೆ . )

 ರಾಗ ರೀತಿಗೌಳ 

 ಧ್ರುವತಾಳ 

ನಿಲ್ಲು ನಿಲ್ಲಯ್ಯಾ ದೇವಾ ನೀಲವರ್ನದ ಸ್ವಾಮಿ
ಎಲ್ಲಿ ಪೋಗುತ ಇದ್ದಿ ಎನ್ನ ಠಕ್ಕಿಸಿ ಮುಂದೆ
ಸಲ್ಲದವನೆ ನಾನು ಸಾಕದಿದ್ದರೆ ನೀನು
ಬಲ್ಲಿದನೆ ಬಡವ ಬಡವ ಬಲ್ಲಿದನಯ್ಯಾ
ಎಲ್ಲ ಸಾಧನಗಳು ನಿನ್ನ ಬಳಿಯಲ್ಲುಂಟು
ಇಲ್ಲದ್ದೊಂದಿಲ್ಲ ಎನಗೆ ಇತ್ತ ನೀ ಒಲಿದ ಮೇಲೆ
ಎಲ್ಲ ನಿನ್ನೊಳಗಡಕ ಯೋಚಿಸಲಾಗಿ ಇನ್ನು
ಕಲ್ಲು ಮೃದುವಾಗುವದು ಕಂಡ ಆಗಲಿ ನಿನ್ನ
ಹುಲ್ಲು ಪರ್ವತ ಭಾರ ಹರಿ ನಿನ್ನ ಕಾಣದಾಗ 
ಎಲ್ಲಿ ಕೆಲ್ಲಿಯೊ ಆಗಿ ಎನಗೆ ತೋರುವದಿನ್ನು
ಗಲ್ಲ ಗಲ್ಲವ ಬಡಿದು ಗಂಟಲನೆ ಸೆಳೆದುಕೊಂಡು
ಗುಲ್ಲು ಎಬ್ಬಿಸದೋಡಿ ಪೋದವನಂತೆ ನೀನು
ಮೆಲ್ಲ ಮೆಲ್ಲನೆ ಮನಕೆ ಬಂದು ಸುಳಿದು ಪೋದರೆ
ಎಲ್ಲ ಸಂಪತ್ತು ಪೋಗಲಾಡಿಸಿ ಕೊಂಡವನು 
ಎಲ್ಲಿ ತನಕ ಅವಗೆ ಕ್ಲೇಶವು ಆಗುವದೊ
ಇಲ್ಲಿ ಸಾದೃಶ್ಯ ಸ್ವಲ್ಪ ಆ ವಿಷಯದಲ್ಲಿನ್ನು
ಎಲ್ಲ ಸುರರೊಡೆಯ ಗೋಪಾಲವಿಠ್ಠಲ 
ಬಲ್ಲಿದ ನಿನ್ನ ಧ್ಯಾನ ಬಲ್ಲವಗನುಭೋಗಾ ॥ 1 ॥

 ಮಠ್ಯತಾಳ 

ಧ್ಯಾನ ಮಾಡಿದವ ಸ್ನಾನ ಮಾಡಿದವ
ಧ್ಯಾನ ಮಾಡಿದವ ದಾನ ಮಾಡಿದವ
ಧ್ಯಾನ ಮಾಡಿದವ ಮೌನ ಮಾಡಿದವ
ಧ್ಯಾನ ಮಾಡಿದವ ನಾನಾ ಕರ್ಮಗಳು
ತಾನು ಮಾಡಿದವ ನ್ಯೂನ ಒಂದು ಇಲ್ಲವು
ಧ್ಯಾನಕ್ಕೆ ಹರಿಯೆ ನೀನು ಬಾರದಿರೆ
ನಾನು ಕಂಡ ವಿಷಯವನ್ನು ಧೇನಿಸುವೆ
ಜ್ಞಾನ ಪೂರ್ವಕವಾಗಿ ಧ್ಯಾನ ಮಾಡುವನಿಗೆ
ಕಾಣದೊಂದು ಇಲ್ಲ ಕರ್ಮ ಅದರೊಳಡಕ
ದೀನಜನ ಬಂಧು ಗೋಪಾಲವಿಠ್ಠಲ 
ಧ್ಯಾನಕ್ಕೆ ಎನಗೆ ನೀನು ವಿಷಯನಾಗು ॥ 2 ॥

 ರೂಪಕತಾಳ 

ಆವಾವ ತೀರ್ಥವು ನಿನ್ನ ಬಳಿಯಲುಂಟು
ಆವಾವ ಕ್ಷೇತ್ರವು ನಿನ್ನ ಬಳಿಯಲುಂಟು
ಆವಾವ ತತ್ವವು ನಿನ್ನ ಬಳಿಯಲುಂಟು
ಆವಾವ ಸಜ್ಜನರು ನಿನ್ನ ಬಳಿಯಲುಂಟು
ಯಾವತ್ತು ನಿನ್ನಲ್ಲೆ ಉಂಟು ಯೋಚಿಸಲಾಗಿ
ಈ ವೇಳ್ಯ ಆ ವೇಳ್ಯ ಅನ್ನದೆ ಎಲೋ ದೇವ
ಪಾವನ ಪಾಪವು ಎಲ್ಲ ಶಕ್ತಿಗಳು
ದೇವ ನಿನ್ನಲ್ಲಿನ್ನು ತಾ ವಿಪ್ಪವು ನೋಡಾ
ಈ ವೇಳ್ಯಯಿತ್ತು ನೀ ನೋಡು ಯೋಚಿಸದೆ
ದೇವ ಒಬ್ಬರು ನಿಮಗೆ ಬೇಡವೆಂಬುವರಿಲ್ಲ
ದೇವಕ್ಕಿ ನಂದನ ಗೋಪಾಲವಿಠ್ಠಲ 
ನೀ ಒಲಿಯಲು ಎನಗಿಲ್ಲ ಒಂದಸಾಧ್ಯ ॥ 3 ॥

 ಝಂಪೆತಾಳ 

ಏನು ಬಗೆ ಪೂಜೆಗಳು ನಿನಗೆ ಮಾಡುವೆ ಎಂಬ್ಯಾ
ನೀನಿತ್ತ ಬಂದೆನಗೆ ಒಲಿದ ಮೇಲಕೆ ದೇವಾ
ನಾನಾ ಜಲಗಳಲ್ಲಿ ನಾನಾ ಯೋನಿಗಳೈದಿ
ನಾನು ಇದ್ದದನೆಲ್ಲ ಸ್ನಾನಂಗಳೂ ನಿನಗೆ
ನೀನು ಎನ್ನನು ಎಲ್ಲಿ ನಿಲ್ಲಿಸಿದ ಸ್ಥಳವೆಲ್ಲ
ಶ್ರೀನಿವಾಸನೆ ನಿನಗೆ ಅದೇ ಪೀಠವು
ಧೇನು ಜನ್ಮಂಗಳಲ್ಲಿ ಬಂದ ಕರದ ಪಾಲು
ಶ್ರೀನಾರಾಯಣಾ ನಿನಗೆ ಅಭಿಷೇಕವು
ನಾನಾ ಪರಿ ಪುಷ್ಪ ಸಿರಿತುಲಸಿ ಶಿರಿ ಗಂಧ ಮರ
ನಾನಾ ಜನುಮಗಳಾಗಿ ನಾನು ಬಂದುದು ಯೆಲ್ಲ
ಶ್ರೀನಾಥ ನಿನಗೆ ಇವೆ ಪೂಜಿಗೆ ಆದೆನು
ನಾನಾ ವಸನವು ಜಲರೂಗ್ಮ ಜನ್ಮಗಳಲ್ಲಿ
ನಾನು ಇದ್ದುದೆನೆಲ್ಲ ನಿನಗೆ ಉಡಿಗಾಭರಣ
ಆನಿ ಕುದುರೆ ಅಂಡಜಾದಿ ಯೋನಿಗಳಲ್ಲಿ
ನಾನು ತಿರುಗಿದೆನಲ್ಲ ನಿನಗೆ ವಾಹನವಯ್ಯಾ
ನಾನಾ ಪದಾರ್ಥ ತಂಡುಲ ಮೊದಲಾದವುಗಳು
ಏನು ಐದಿದವನೆಲ್ಲ ನಿನಗೆ ನೈವೇದ್ಯವು
ಭಾನು ಚಂದಿರ ಸಾಕ್ಷಿಯಾಗಿ ಮಾಡಿದ್ದೆ ದೀಪ
ನೀನು ಎನ್ನವನಾಗಿ ಇದ್ದು ಇದರೊಳಗೆಲ್ಲ
ಏನೇನು ಪರಿಪರಿ ಕರ್ಮ ಮಾಡಿಸಿದದ್ದು
ಹೇ ನಾರಸಿಂಹ ಕಪ್ಪವು ನಿನಗೆ ಕಾಣೊ
ನೀನು ಮಂಗಳಮೂರ್ತಿ ಡಿಂಗರಿಗೆ ಬಲುಸಾರ್ಥಿ
ನೀನಾಗಿ ಮಾಡಿಸಿದುದೆಲ್ಲ ನಿನಗೆ ಆರ್ತಿ
ಜ್ಞಾನಮಯಕಾಯ ಗೋಪಾಲವಿಠ್ಠಲರೇಯ 
ನೀನಿತ್ತ ಬಾರೊ ನಿಜ ಭಕ್ತ ಜನರೊಡಿಯಾ ॥ 4 ॥

 ತ್ರಿಪುಟತಾಳ 

ಮಾನವ ಯೋನಿಗಳು ಏನೇನು ಐದಿದವೆಲ್ಲ
ನಾನಾ ಬಗೆಯ ಪೂಜೆ ನಿನಗೆ ಸ್ವಾಮಿ
ನಾನು ನಿನ್ನನು ಬಿಟ್ಟು ಒಂದು ಕಾಲದಲಿನ್ನು
ಏನಿದ್ದೇನೇನೊ ಚೆಲ್ವ ಚಿತ್ರ ಮಹಿಮಾ
ಕಾಣದೆ ಕೆಟ್ಟೆ ನಿನ್ನ ನಾನು ನನ್ನದು ಎಂಬೊ
ಹೀನಬುದ್ಧಿಯ ಮಾಯವು ಎನಗೆ ಪಚ್ಚಿ
ನಾನು ನೀನು ಎಂತೆಂಬೊ ಜ್ಞಾನವ ತಿಳಿಯದೆ
ಮಾನಸ ಪಶುವೊ ನಾ ಏನೆಂಬಿನೊ
ನೀನೇ ಅಲ್ಲವೆ ಎನಗೀ ಮಂದಬುದ್ಧಿ ಇತ್ತವ 
ಏನು ಎನಗೆ ಕೆಟ್ಟದೊಂದು ಇಲ್ಲ
ಏನಾದದ್ದೆಲ್ಲ ಹಿಂದೆ ನಾನಾ ಕರ್ಮಂಗಳೆಲ್ಲ
ಮನಸಾ ವಾಚಾ ಕಾಯಾ ಮಾಡಿದದ್ದು
ಶ್ರೀನಾಥ ನಿನಗೆ ಮತ್ತೀಗ ಒಪ್ಪಿಸುವೆನೊ
ನಾನಲ್ಲ ಇದಕ್ಕೆ ಸ್ವಾತಂತ್ರನೆಂದು
ಏನು ಆದದ್ದು ಎಲ್ಲ ನೀನೆ ತೆಗೆದುಕೊಂಡು
ಹೀನ ನಾ ನೀನು ಸಾರ್ಥಕನ ಮಾಡು
ಭಾನು ಶತತೇಜ ಗೋಪಾಲವಿಠ್ಠಲ 
ಕಾಣಿಸಿಕೊಂಡು ಕರ್ಮಕಾನನ ದಾಟಿಸೆನ್ನ ॥ 5 ॥

 ಅಟ್ಟತಾಳ 

ಎನ್ನ ದಶ ಇಂದ್ರಿಯಗಳು ನಿನ್ನ ವಿಷಯ ಕರಿಸಲಿ
ಎನ್ನ ಮನಸು ಬಂದು ನಿನ್ನಲ್ಲೆ ಎರಗಲಿ
ಅನ್ಯವೆಂದರೆ ಎನಗೆ ವಮನ ಸರಿ ಆಗಲಿ
ನಿನ್ನನೆ ಹುಡುಕುತ ಎನ್ನ ಬುದ್ಧಿಯು ಇರಲಿ
ನಿನ್ನ ನೋಡಿ ನಲಿದಾಡಲೆನ್ನ ಚಿತ್ತ
ನಿನ್ನಲ್ಲದಿಲ್ಲೆಂಬೊ ಅಹಂಕಾರ ಎನಗಿರಲಿ
ಇನ್ನೇನು ಬೇಡುವುದಿಲ್ಲವೊ ಹೇ ಸ್ವಾಮಿ
ನಿನ್ನದೆಲ್ಲ ಎಂಬುವದು ಪಾಲಿಸು
ಘನ್ನ ದಯಾನಿಧೆ ಗೋಪಾಲವಿಠ್ಠಲ 
ನೀನಲ್ಲದರಿಯೆ ನಾ ಇನ್ನೊಂದು ಸುಖವ ॥ 6 ॥

 ಆದಿತಾಳ 

ಮೂರು ದಿನಕೆ ಒಮ್ಮೆ ಆಹಾರವನು ಕೊಂಡು
ನೀರು ಮಾತ್ರವ ಕೊಟ್ಟು ನಿಲ್ಲಿಸಿ ದೇಹವ
ಆರು ಎನಗೆ ಹತ್ತದಂತಲಾದರು ಏನು
ನಾರಿ ಸುತರು ಸೇರದಂತಲಾದರು ಮಾಡು
ಅರಿವೆರಿವರನ್ಯತ್ರರ ಕೂಡಿಸದ್ಹೋಗು
ಊರನೆ ಹೊರಡಿಸಿ ಕಾನನ ಸೇರಿಸು
ನಾರಾಯಣ ನಿನ್ನ ನಾನು ಬಿಟ್ಟವನಲ್ಲ
ಈ ರೀತಿ ಎನಗೆ ನೀ ಮಾಡದರು ಇನ್ನು
ಆರ ಭಾರಕ್ಕೆ ಸರ್ವಕಾರಣ ನೀನೆಂದು
ಶಾರೀರ ಒಪ್ಪಿಸಿ ಕರವ ಮುಗಿದೆ
ಘೋರ ಸಂಸಾರದ ಬೇರು ಕಿತ್ತುವದಕ್ಕೆ
ಬಾರಿಬಾರಿಗೆ ನಿನ್ನ ಸ್ಮರಣೆ ಬಲವಯ್ಯ
ಭಾರತೀಶನೊಡೆಯ ಗೋಪಾಲವಿಠ್ಠಲ 
ದೂರ ನೋಡದೆ ಮನಕೆ ಬಾರೊ ಸರ್ವದ ಸ್ವಾಮಿ ॥ 7 ॥

 ಜತೆ 

ನೀನು ಧ್ಯಾನಕೆ ನಿತ್ಯ ನಿಲಕುತಲಿರು ಎಂದೆ
ನಾನು ಅನ್ಯವನೊಲ್ಲೆ ಗೋಪಾಲವಿಠ್ಠಲ ॥
**********