ವರದ ವೆಂಕಟ ಶ್ರೀನಿವಾಸ ಪ
ಕರುಣದಿ ಪಿಡಿಯೊ ಎನ್ನ ಶೇಷಗಿರೀಶಾಅ.ಪ.
ಘೋರ ಭವದಿ ನೊಂದೆನು ಇಂದು
ಪಾರುಗಾಣೆನೂ ಭಾರ ನಿನ್ನದು ಎಂದು
ಸಾರಿ ಬೇಡಿದೆ ನಿನಗೆ ಭಕ್ತಬಂಧು
ದೂರಮಾಡಲು ಬೇಡ ಕರುಣಾ ಸಿಂಧು
ವಾರಿಜಾಸನ ವಂದ್ಯ ನೀರಜನಯನನೆ
ಶರಣರ ಪೊರೆಯುವ ಸುರ ದ್ರುಮನೆ
ಪರಿಪರಿ ಭವಣೆಯ ತರಿಮಹಿದಾಸನೆ
ಚರಣ ಸೇವಕರ ಸೇವಕನೆನಿಸೊ ಶ್ರೀಶನೆ
ದುರುಳ ಅಸುರನ ಶಿರವ ತರಿದು
ತರಳ ಪ್ರಹ್ಲಾದನ ಪೊರೆದೆ ಎಂದು
ಸುರರು ಪೊಗಳವುದನ್ನು ತಿಳಿದು
ಭರದಿ ಬಂದು ಶಿರವ ನಮಿಸುವೆ ನಿಂದು 1
ಸಿರಿ ಅಜಭವಾದಿ ವಂದಿತ ಚರಣ
ಪರಿಮಿತಿಯಿಲ್ಲದ ಗುಣ ಗಣ ಪೂರ್ಣ
ನೀರಜ ಭವಾಂಡೋದಯಕೆ ಕಾರಣ
ವೀರ ವೈಷ್ಣವರ ದುರಿತ ಹರಣ
ಕ್ರೂರಜನ ಕುಠಾರ ದೇವನೆ
ಗರುಡಗಮನ ಭೀಮರೂಪನೆ
ಅರಗಳೆಣಿಸದೆ ಪೊರೆಯಂ ಬೇಗನೆ
ಕರವ ಮುಗಿದು ಸಾರಿ ಬೇಡುವೆ
ಕರಿಯ ತೊಡರನು ತರಿದು ನಕ್ರನ
ಶಿರವ ಸೀಳಿದ ಕರುಣಿ ಕೃಷ್ಣನೆ
ಸೀರೆ ಪಾಲಿಸಿ ಪೊರೆದ ದಾತನೆ
ಮರಳಿ ಬರುವ ಭವವ ಬಿಡಿನೊ ರಂಗನೆ 2
ನಂಬಿದವರ ಕಲ್ಪವೃಕ್ಷ
ನಂಬದವರ ಕಲುಷಕೆ ಶಿಕ್ಷಾ
ಇಂಬಾಗಿ ಸರ್ವತ್ರ ಸುಜನರ ರಕ್ಷಾ
ತುಂಬಿದ ವೈಭವದಿ ಮೆರೆಯೊ ದಕ್ಷಾ
ಕಂಬುಕಂಠನೆ ನಿನ್ನ ನಂಬಿದೆ
ಅಂಬರದಲಿ ಕಾಣೆಂದು ಬೇಡಿದೆ
ಬಿಂಬನ ನಾಮನುಡಿಸೆಂದು ಕೇಳಿದೆ
ಶಂಬರವೈರಿ ನಿನ್ನ ಚರಣವ ಸಾರಿದೆ
ಶಂಭುವಂದಿತ ತುಂಬುರ ಪ್ರಿಯ
ನಂಬಿ ಭಜಿಸುವೆ ತುಂಬು ಮನದೊಳು
ಅಂಬುಜಾಕ್ಷನೆ ಜಯತೀರ್ಥ ಮುನೀಂದ್ರ
ಬೆಂಬಲವಾಯುಗ ಶ್ರೀ ಕೃಷ್ಣವಿಠಲಾ 3
****