Audio by Mrs. Nandini Sripad
( ಶ್ರೀಹರಿಪಾದ ನೆರೆನಂಬಿ ಬಾಳ್ವದೇ ಮುಖ್ಯ ಸಾಧನೆ )
ರಾಗ ಮಾಂಡ್
ಧ್ರುವತಾಳ
ಹರಿಪಾದ ನೆನೆವಂಗೆ ಅರಿಗಳ ಭಯವಿಲ್ಲ
ಹರಿಪಾದ ನೆನೆವಂಗೆ ದುರಿತ ಭಯವಿಲ್ಲ
ಹರಿಪಾದ ನೆನೆವಂಗೆ ನರಕದ ಭಯವಿಲ್ಲ
ಹರಿಪಾದ ನೆನೆವಂಗೆ ಮಾಯಾದ ಭಯವಿಲ್ಲ
ಹರಿಪಾದ ನೆನೆವಂಗೆ ಭವದ ಭಯವಿಲ್ಲ
ಹರಿಪಾದ ನೆನೆವಂಗೆ ವಿಷಯ ಭಯವಿಲ್ಲ
ಹರಿಪಾದ ನೆನೆವಂಗೆ ಜನನ ಭಯವಿಲ್ಲ
ಹರಿಪಾದ ನೆನೆವಂಗೆ ಮರಣದ ಭಯವಿಲ್ಲ
ಬರಿದೆ ಮಾತೇ ಅಲ್ಲ ಸಿರಿಹಯವದನನ್ನು
ಕರೆದು ಮುಕ್ತಿಯನಿತ್ತು ಅನುಗಾಲ ಸಲಹುವ ॥ 1 ॥
ಮಠ್ಯತಾಳ
ಆವ ಧ್ರುವನ ನೋಡಿ ಸುರಲೋಕದಲಿ
ಭೂ ವಿಭೀಷಣನ ನೋಡಿರಯ್ಯಾ
ಅವನಿ ಕೆಳಗೆ ಬಲಿಯುತ್ಸಹ ನೋಡಿ
ಈ ಹಯವದನನ್ನ ಭಜಕರೆ ಸಾಕ್ಷಿ ॥ 2 ॥
ತ್ರಿಪುಟತಾಳ
ಹತ್ತಾವತಾರದಿ ಭಕುತರ ಭಯವೆಲ್ಲ
ಕಿತ್ತಿ ಭಕುತರ ಕಾಯ್ದ ಕಥೆಯ ಕೇಳಿರಯ್ಯಾ
ಮತ್ತಾರು ತೋರಿರೈ ಭೃತ್ಯರೆಂಬಸುಗಳಿಗೆ
ಹೆತ್ತ ತಾಯಿ ಎಂಬ ವಾರುತಿ ಕೇಳಯ್ಯ
ಕರ್ತೃ ಹಯವದನನು ಭವವೆಂಬ ಕತ್ತಲೆ
ಬತ್ತಿಪ ರವಿಯೆಂದು ಚಿತ್ತದಲೆ ನೆರೆನಂಬೂ ॥ 3 ॥
ಅಟ್ಟತಾಳ
ದ್ರೌಪದಿ ಭಯವ ಪರಿಹರಿಸಿದರಾರೈ
ಆ ಪರೀಕ್ಷಿತನ ರಕ್ಷಿಸಿದವನಾರೈ
ತಾಪಸರೊಡಿಯ ಶ್ರೀಪತಿ ಹಯವದನನು
ತಾಪಂಗಳನು ಕಳೆದು ತರ್ಕೈಸಿಕೊಂಬ ॥ 4 ॥
ಆದಿತಾಳ
ಕರಿಯ ಕಾಯ್ದವನ ಪಾದವ ನಂಬು
ಗಿರಿಯ ಎತ್ತಿದವನ ಪಾದವ ನಂಬು
ಉರಿಯ ನುಂಗಿದವನ ಪಾದವ ನಂಬು
ಪುರಹರ ನುಳುಪಿದನ ನೆರೆನಂಬು ಕರಿ
ಸಿರಿ ಹಯವದನನ್ನ ಶರಣರಿಗೆ ಭಯವಿಲ್ಲ ॥ 5 ॥
ಜತೆ
ಶ್ರೀರಮಣ ಹಯವದನನ್ನ ನಂಬಿದ
ಸಾರಾ ಹೃದಯರ ಚರಣ ಸೇವೆ ಮಾಳ್ಪದೆ ಸಾಕ್ಷಿ ॥
***********