Showing posts with label ಸಾಧನವಾವುದೊ ಸರ್ವ vyasa vittala ankita suladi ಹರಿ ಪ್ರಾರ್ಥನಾ ಸುಳಾದಿ SAADHANAVAAVUDO SARVA HARI PRARTHANA SULADU. Show all posts
Showing posts with label ಸಾಧನವಾವುದೊ ಸರ್ವ vyasa vittala ankita suladi ಹರಿ ಪ್ರಾರ್ಥನಾ ಸುಳಾದಿ SAADHANAVAAVUDO SARVA HARI PRARTHANA SULADU. Show all posts

Friday, 21 May 2021

ಸಾಧನವಾವುದೊ ಸರ್ವ vyasa vittala ankita suladi ಹರಿ ಪ್ರಾರ್ಥನಾ ಸುಳಾದಿ SAADHANAVAAVUDO SARVA HARI PRARTHANA SULADU

Audio by Mrs. Nandini Sripad


ವ್ಯಾಸವಿಟ್ಠಲಾಂಕಿತ ಶ್ರೀಕಲ್ಲೂರು ಸುಬ್ಬಣ್ಣಾಚಾರ್ಯ ದಾಸಾರ್ಯ ವಿರಚಿತ 


 ಶ್ರೀಹರಿಯ ಪ್ರಾರ್ಥನಾ ಸುಳಾದಿ 


(ಶ್ರೀಹರಿಯ ಏನಂಮೋಚಯಾಮಿ ಎಂಬ ಇಚ್ಛಾ ಪ್ರಸಾದವೇ ಮುಖ್ಯ ಸಾಧನ , ಆದ ಕಾರಣ ಸಕಲಾಪರಾಧಗಳನ್ನು ಕ್ಷಮಿಸಿ ವೊಲಿಯಲು ಪ್ರಾರ್ಥನಾ.) 


 ರಾಗ ನಾಟಿಕುರಂಜಿ 


 ಧ್ರುವತಾಳ 


ಸಾಧನವಾವುದೊ ಸರ್ವ ಕಾಲದಲ್ಲಿ

ಭೂದೇವಿ ರಮಣ ಭೂತಿವಂತ ಕೃಷ್ಣ

ಮೇದಿನಿಯೊಳು ಪುಟ್ಟಿ ಮಿತಿಯಿಲ್ಲದ ಪಾಪ

ಹಾದಿಯ ಪಿಡಿದು ಕೆಟ್ಟೆ ಹರಿಯೆ ಕೇಳೊ

ಕ್ರೋಧ ಮೋಹ ಲೇಶ ಕೊರತೆ ಎಂಬುದು ಕಾಣೆ

ಪಾದುಕ ಪೊಟ್ಟಿ ನಡೆದ ಪರಿಯಂತವೊ

ಬಾಧೆ ಬಡುವೆನಯ್ಯ ಭವದೊಳು ಸಿಗಬಿದ್ದು

ಏ ದಯಾನಿಧಿಯೆ ಯದುಕುಲನಂದನ

ಭೂದೇವ ತತಿಗಳಿಗೆ ಭಕುತಿಯಿಂದಲಿ ಅವರ

ಪಾದಕೆ ಎರಗಿ ಪರಿ ಪರಿ ಸ್ತೋತ್ರವ

ಮೋದದಿಂದಲಿ ಮಾಡಿ ಮೋಕ್ಷ ಮಾರ್ಗವ ಬೇಡ -

ದಾದೆ ಬಿಂಕವ ತಾಳಿ ಬಿರಿದಾಂಕನೆ

ಸಾಧಿಸಿಕೊಂಡೆ ನಿರಯದಲ್ಲಿ ಕಷ್ಟಪಡುವ 

ಸಾಧನದ ಬಗೆಯನ್ನು ಸಂತೋಷದಿ

ಆದರದಿಂದಲಿ ಆಪ್ತ ನೀನಾಗಿ ಪೂರ್ಣ -

ಬೋಧರ ಮತದಲ್ಲಿ ಪೊಂದಿಸಿರಲು

ಓದನದ ವಿದ್ಯವನ್ನು ವಲಿಸುತ್ತ ಎನ್ನೊಳಗೆ

ಕಾದುವೆ ಜನರ ಕೂಡ ಕಠಿಣದಲ್ಲಿ

ಸಾಧು ಜನರ ವಚನ ಸರ್ವದಾ ಕೇಳಿ ಅನು -

ಮೋದನ ಮಾಡದಲೆ ಮದದಿಂದಲಿ

ವೇದ ಶಾಸ್ತ್ರವನೋದಿ ವೈಜ್ಯದಿಂದಲಿ

ಗಾದಿ ಮಜ್ಜನ ಗೈದೆ ಗರ್ವದಲ್ಲಿ

ಆದಿಮೂರುತಿ ನಮ್ಮ ವ್ಯಾಸವಿಟ್ಠಲ ಪಂಚ -

ಭೇದ ಮಾರ್ಗವ ಕಾಣದಾದೆ ಕರುಣಿ ॥ 1 ॥ 


 ಮಟ್ಟತಾಳ 


ಶಬ್ದಾದಿ ವಿಷಯ ಅಬ್ಧಿಯೊಳಗೆ ಮಹಾ

ಹಬ್ಬಿದ ಕರಣಗಳು ದೊಬ್ಬಿ ದುಃಖ ಬಡುವ 

ಅಬ್ಬರವೇನೆಂಬೆ ಅನುಪಮ ಚರಿತನೆ

ಹೆಬ್ಬುಲಿ ಎಂತಿಪ್ಪ ಹೆಚ್ಚಿದಹಂಕಾರ

ದುರ್ಭಾಗ್ಯನ ಮಾಡಿ ದುಃಖದೊಳಿಡುವದು

ಕರ್ಬುರರ ಕಾಟ ಕಡಿಮೆಂಬುದೆಯಿಲ್ಲಾ

ಅರ್ಬುದ ಜನ್ಮಕ್ಕೆ ಆರನಾ ಕಾಣದಾ

ಅರ್ಭಕ ನಾನಯ್ಯ ಅನಿಮಿತ್ಯ ಬಂಧು

ಮಬ್ಬು ಕವಿಸದಿರು ಮನಸಿಜನಯ್ಯನೆ

ಶಬ್ದಗೋಚರನೆ ವ್ಯಾಸವಿಟ್ಠಲ ದು -

ಗ್ಧಾಬ್ಧಿಜ ಪತಿಯೆ ಪಾಪಭ್ರಾನಿಲನೆ ॥ 2 ॥ 


 ತ್ರಿವಿಡಿತಾಳ 


ದಾಮೋದರನಂತ ದಶರಥನಂದನ

ರಾಮರಾಜ ತೇಜ ರಾಜೀವ ನಯನ

ಮಾಮನೋಹರ ಮಧುಸೂದನ ನಿಜಭಕ್ತ

ಸ್ತೋಮ ಪಾಲಕ ಪಾರತಂತ್ರ ರಹಿತಾ

ವ್ಯೋಮಕೇಶನೊಡಿಯ ವ್ಯಾಪ್ತಮೂರ್ತಿ ಪೂರ್ಣ -

ಧಾಮ ಧಾರಕ ದೈತ್ಯಕುಲನಾಶನ

ಸಾಮಜವರದ ಸಾಕಾರ ಸಾತ್ವಿಕ ಲ -

ಲಾಮ ಲಕ್ಷಣವಂತ ಲಕ್ಷೀಕಾಂತಾ

ಕಾಮಿತಜನ ಚಿಂತಾಮಣಿ ರಣರಂಗ

ಭೀಮ ಭಯಂಕರ ಭೀತರಹಿತಾ

ಭೂಮಿ ಭಾರಕ ದೈತ್ಯಾ ರಾಮ ಕುಠಾರ 

ಸುಖ ದುಃಖೋದಧಿ ಸೂರ್ಯ ಕೋಟಿ ಪ್ರಕಾಶ

ನೇಮವಿಲ್ಲದೆ ನಿನ್ನ ನಾಮಗಳಂತ

ಈ ಮಹಿಯೊಳಗುಂಟು ಈರನೊಡಿಯ

ಯಾಮ ಯಾಮಕೆ ಎನಗೆ ಎಲ್ಲಿದ್ದ ಕಾಲಕ್ಕು

ಸ್ವಾಮಿ ಪಾಲಿಸಬೇಕು ಜಿಹ್ವಾಗ್ರದಿ

ಈ ಮಹಾ ಕಲಿಯುಗದೊಳಗಿಂಬಾವದು ಪಾಪ

ಸ್ತೋಮ ಬತ್ತಿಸಿ ಮುಂದೆ ಗತಿ ಮಾರ್ಗಕ್ಕೆ

ಶಾಮಸುಂದರ ಕಾಯಾ ವ್ಯಾಸವಿಟ್ಠಲ ಕಾಯೊ

ಪಾಮರ ಮನುಜನ್ನ ಪತಿತ ಪಾವನನೆ ॥ 3 ॥ 


 ಅಟ್ಟತಾಳ 


ಶತಕಲ್ಪವಾದರು ಇತರಾಲೋಚನೆಯಿಲ್ಲಾ

ಮತಿಹೀನ ಜನರಿಗೆ ಯತುನದಿಂದಲಿ ನೋಡೆ

ಕ್ಷಿತಿ ಸುರ ಜನ್ಮ ವಿಹಿತವಾಗಿ ಬಂದರು

ಶ್ರುತಿ ಪುರಾಣಗಳಲ್ಲಿ ಚತುರನಾಗಿದ್ದರು

ಕ್ರತು ಮೊದಲಾದದ್ದು ವ್ರತಗಳಾಚರಿಸಲು

ಮತಿವಂತ ಜನರಿಗೆ ನತನಾಗಿ ಇದ್ದರು

ರತುನಾದಿ ಧನಗಳು ಮಿತಿಯಿಲ್ಲದಿತ್ತರು

ಸ್ವತಯೇವ ನಿತ್ಯ ಸದ್ಗತಿಗೆ ಕಾರಣನಲ್ಲ

ಶತಧೃತಿ ಪಿತ ನಿನ್ನ ಹಿತವಾದ ನಾಮ ಸಂ -

ಗತಿಯಾಗದಲೆ ಸಮ್ಮತವಾಗದೆಂದಿಗು

ಯತಿಗಳಾದರು ಮತಿಗೆ ತೋರುವದಿದೆ

ಚ್ಯುತ ವಿದೂರನೆ ನಮ್ಮ ವ್ಯಾಸವಿಟ್ಠಲ ನಿನ್ನ

ಮತವಿದೆ ಮತವಿದೆ ರತಿಪತಿ ಜನಕಾ ॥ 4 ॥ 


 ಆದಿತಾಳ 


ಎನ್ನ ಯೋಗ್ಯತಾ ಗುರುಗಳಲ್ಲಿ ನೆಲಸಿಪ್ಪ ಸಂ -

ಪನ್ನ ಮೂರುತಿಯೆ ಸರ್ವ ಜಗದಂತರ್ಯಾಮಿ

ನಿನ್ನ ಪಾದವೆ ಗತಿ ನಿಖಿಳ ಬಗೆಯಿಂದ

ಅನ್ಯರೊಬ್ಬರ ಕಾಣೆ ಆವಲ್ಲಿ ನೋಡಿದರು 

ಎನ್ನ ಪಾಲಿಸುವರ ಯದುಕುಲೋತ್ತಮ ಕೃಷ್ಣ

ಅನ್ಯಾಯ ನಡತೆಗಳು ಆಚರಿಸಿದೆನಯ್ಯಾ

ಅನ್ನಂತ ಬಗೆಯಿಂದ ಅತಿ ನಿರ್ಭೀತನಾಗಿ

ಎನ್ನಪರಾಧಗಳು ಎಣಿಸಿದರಾಗೆ ಹರಿಯೆ

ಇನ್ನಾವ ಗತಿ ಕಾಣೆ ಇಹಪರದಲ್ಲಿ ಸಿದ್ಧ

ಬನ್ನ ಬಡುವದೆ ಸರಿ ಬಹುಕಾಲ ನರಕದಲ್ಲಿ 

ಅನ್ನಾಥ ಬಂಧುವೆ ಅತಿ ದಯಾಪರಮೂರ್ತಿ

ಘನ್ನ ಪತಿತ ಪಾವನ್ನ ಘನ್ನ ಭವಾಂಬುಧಿ ನಾವ

ಇನ್ನಿತು ಬಿರಿದು ಉಳ್ಳ ಇಭರಾಜ ವರದನೆ

ನಿನ್ನ ಮೊರೆ ಬಿದ್ದೆ ಎನ್ನ ಮರಿಯದಿರು

ಅನಾಥಬಂಧು ದೇವ ವ್ಯಾಸವಿಟ್ಠಲರೇಯಾ 

ನಿನ್ನ ಜ್ಞಾನವ ಕೊಟ್ಟು ನಿರ್ಭೀತನ ಮಾಡೊ ॥ 5 ॥ 


 ಜತೆ 


ಯೇನಮ್ಮೋಚಯಾಮಿ ಎಂಬೊ ಇಚ್ಛೆಯು ಒಂದೇ

ಕಾಣಿಸುವದು ಸಾಧನ ವ್ಯಾಸವಿಟ್ಠಲ ಎನಗೆ ॥

*****