dheerendra teertha rayara mutt yati 1785 stutih
ತಾಳ : ರೇಗುಪ್ತಿ ತಾಳ : ಆದಿ
ವರದಾ ತೀರದಿ ಶೋಭಿಪ । ಯತಿ ।
ವರನ್ಯಾರೇ ಪೇಳಮ್ಮಯ್ಯಾ ।। ಪಲ್ಲವಿ ।।
ತ್ವರದಿ ಭಕುತರ ದುರಿತವ ತರಿದತಿ ।
ತ್ವರದಿ ಪಾಲಿಪಾ ಧೀರೇಂದ್ರ ಕಾಣಮ್ಮಾ ।। ಅ. ಪ ।।
ಸುಂದರ ತಮ ವೃಂದಾವನ ಶುಭತರ ।
ಮಂದಿರಗತನ್ಯಾರೇ ಪೇಳಮ್ಮಯ್ಯಾ ।
ನಂದದಿ ಮಹಜನ ಸಂದಣಿ ಮಧ್ಯದಿ ।
ಚಂದಿರ ತೆರದಿಹನ್ಯಾರೇ ಪೇಳಮ್ಮಯ್ಯಾ ।।
ಇಂದಿರಪತಿ ಗುಣ ವೃಂದವ ಭಜಿಸುತ ।
ನಂದದಿ ಶೋಭಿಪನ್ಯಾರೇ ಪೇಳಮ್ಮಯ್ಯಾ ।
ಅಂಧ ಬದಿರರ ವೃಂದಗಳಿಗಿಷ್ಟವ ।
ನಿಂದು ನೀಡುವ ವಾದೀಂದ್ರರ ತನುಜ ।। ಚರಣ ।।
ಮೂಢ ಮತಿಯನು ಓಡಿಸಿ ಜನರಿಗೆ ।
ಗಾಢ ಭಕುತಿಯನು ನೋಡಮ್ಮಯ್ಯಾ ।
ಬೇಡುವ ಭಕುತರು ಮಾಡುವ ಸೇವೆಗೆ ।
ನೀಡುವ ವರಗಳನ್ಯಾರೇ ನೋಡಮ್ಮಯ್ಯಾ ।।
ಪಾಡುವ ದಾಸರು ಬೇಡುವ ಇಷ್ಟವ ।
ನೀಡುವದಿನ್ಯಾರೇ ನೋಡಮ್ಮಯ್ಯಾ ।
ರೂಢಿಯೊಳಗೆ ಇಷ್ಟ ನೀಡುವ ವಿಷಯದಿ ।
ಜೋಡುಗಾಣೆನಾ ನೋಡಮ್ಮಯ್ಯಾ ।। ಚರಣ ।।
ಭೂತ ಪೀಡೆ ಮಹ ಪ್ರೇತ ಪಿಶಾಚಿಯ ।
ವ್ರಾತಗಳು ಬಲು ನೋಡಮ್ಮಯ್ಯಾ ।
ಭೀತಿ ಬಡುತ ಮಹ ಆತುರದಲಿ ಈ ।
ಭೂತಳ ಬಿಡುತಿಹವೋ ನೋಡಮ್ಮಯ್ಯಾ ।
ಯಾತುಧಾನಗಣ ಈತನ ನಾಮದ ।।
ಭೀತಿಗೆ ಪೋಗುತಿಹದು ನೋಡಮ್ಮಯ್ಯಾ ।
ತಾತನ ತೆರದಲಿ ಈತನು ನಿಜಪದ ।
ದೂತರ ಪೊರೆವನು ನೋಡಮ್ಮಯ್ಯಾ ।
ದಾತ ಗುರು ಜಗನ್ನಾಥವಿಠ್ಠಲಗೆ ।
ಪ್ರೀತ ಜನರೊಳು ಪ್ರೀತನೀತನಮ್ಮಾ ।। ಚರಣ ।।
****